ಊರಿನ ಸೇತುವೆ ಮುರಿದು ಬಿದ್ದಾಗ, 20 ಕಿ.ಮೀ. ಸುತ್ತಿ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಇದನ್ನು ಮನಗಂಡ ಸ್ಥಳೀಯ ರೈತನೊಬ್ಬ ತನ್ನ ಜಮೀನಿನಲ್ಲೇ ತಾತ್ಕಾಲಿಕ ರಸ್ತೆ ನಿರ್ಮಿಸಿ, ₹30 ಶುಲ್ಕ ಪಡೆದು ವಾಹನ ಸವಾರರ ಸಮಯ ಮತ್ತು ಹಣ ಉಳಿಸುತ್ತಿದ್ದಾನೆ. ಈ ರೈತನ ಉಪಾಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದುಡ್ಡು ಮಾಡಲು ನೂರೆಂಟು ದಾರಿಗಳು. ಆದರೆ ಹಣಕ್ಕಾಗಿ ಕೆಲವರು ಅಡ್ಡದಾರಿ ಹಿಡಿಯುವುದು ಇದೆ. ಕೊಲೆ, ಸುಲಿಗೆ, ದರೋಡೆ, ಮೋಸ, ವಂಚನೆ ಮಾಡುವುದು ಇದೆ. ಆದರೆ, ಸನ್ಮಾರ್ಗವನ್ನೇ ಹಿಡಿದು ಪರರಿಗೆ ಉಪಯೋಗ ಆಗುವಂತೆ ಮಾಡಿ ದುಡ್ಡು ಮಾಡುವವರೂ ಇದ್ದಾರೆ. ಜನರಿಂದ ಹಣ ವಸೂಲಿ ಮಾಡುವುದು ತಪ್ಪೇ ನಿಜ. ಆದರೆ, ಅವರ ದೊಡ್ಡ ಚಿಂತೆಯನ್ನು ಬಗೆಹರಿಸಿ, ಜನರಿಗೆ ಸಹಸ್ರಾರು ರೂಪಾಯಿಗಳ ಹಣವನ್ನು ಉಳಿಸಿ ಕೆಲವೇ ರೂಪಾಯಿಗಳ ಆದಾಯ ಗಳಿಸುವುದು ಯಾವ ದೃಷ್ಟಿಯಿಂದ ನೋಡಿದರೂ ತಪ್ಪಾಗುವುದಿಲ್ಲ. ಅಂಥದ್ದೊಂದು ಅಪರೂಪದ ರೈತನ ಸ್ಟೋರಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಮುರಿದ ಸೇತುವೆ
ಇದು ಎಲ್ಲಿಯ ವಿಡಿಯೋ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಆ ಊರಿನ ಸೇತುವೆಯನ್ನು ಮುರಿದು ಬಿತ್ತು. ಈ ಸೇತುವೆಯ ಮೂಲಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಲು ಜನರಿಗೆ ಐದು ನಿಮಿಷ ಸಾಕಾಗಿತ್ತು. ಆದರೆ ಸೇತುವೆ ಮುರಿದು ಬಿದ್ದ ಹಿನ್ನೆಲೆಯಲ್ಲಿ, ವಾಹನ ಸವಾರರು 20 ಕಿಲೋ ಮೀಟರ್ ಸುತ್ತಿ ಬಳಸಿ ಹೋಗಬೇಕಾಗುತ್ತಿತ್ತು. ಇದು ಪೆಟ್ರೋಲ್, ಡೀಸೆಲ್ ಅನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದುದು ಮಾತ್ರವಲ್ಲದೇ ಗಂಟೆಗಟ್ಟಲೆ ಪ್ರಯಾಣ ಆಗುತ್ತಿತ್ತು.
ರೈತನ ದೊಡ್ಡ ಪ್ಲ್ಯಾನ್
ಇದನ್ನು ಮನಗಂಡ ಸೇತುವೆಯ ಪಕ್ಕದಲ್ಲಿಯೇ ಇರುವ ಜಮೀನಿನ ರೈತನೊಬ್ಬ ದೊಡ್ಡ ಪ್ಲ್ಯಾನ್ ಮಾಡಿದ. ತನ್ನ ಜಮೀನಿನಲ್ಲಿ, ಇತ್ತ ಕಡೆಯಿಂದ ಅತ್ತ ಕಡೆ ಹೋಗುವುದಾಗಿ ತಾನೇ ಒಂದು ದಾರಿ ನಿರ್ಮಿಸಿದ. ಅದಕ್ಕೆ ಮಣ್ಣು ಹಾಕಿ ಸರಿಮಾಡಿದ. ಬಳಿಕ ಅಡ್ಡಲಾಗಿ ಒಂದು ಕೋಲು ಇಟ್ಟ. ಈ ಕೋಲು ಯಾಕೆ ಗೊತ್ತಾ? ವಾಹನ ಸವಾರರು ಇತ್ತ ಕಡೆಯಿಂದ ಅತ್ತ ಕಡೆಗೆ ಹೋಗುವಾಗ ಈ ರೈತನಿಗೆ ಪ್ರತಿಯೊಬ್ಬರೂ 30 ರೂಪಾಯಿ ಕೊಟ್ಟು ಹೋಗಬೇಕು. ಇದೊಂದು ರೀತಿಯಲ್ಲಿ ಟೋಲ್ ಶುಲ್ಕ. 20 ಕಿಲೋಮೀಟರ್ ಸುತ್ತಿ ಬಳಸಿ ಸುಸ್ತಾಗಿದ್ದ ಪ್ರಯಾಣಿಕರಿಗೆ ಈ 30 ರೂಪಾಯಿ ದೊಡ್ಡ ವಿಷ್ಯವೇ ಆಗುತ್ತಿಲ್ಲ. ರಸ್ತೆಯನ್ನು ಕೂಡ ತಕ್ಕಮಟ್ಟಿಗೆ ಚೆನ್ನಾಗಿ ಮಾಡಿದ್ದಾನೆ ರೈತ. ತನ್ನ ಕೃಷಿ ಭೂಮಿಯ ಒಂದು ಭಾಗದ ಮೂಲಕ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ಬಳಸಿ ದಾರಿಯನ್ನು ತೆರವುಗೊಳಿಸಿದ್ದಾನೆ. ವಾಹನ ಚಾಲಕರಿಗೆ ಒಂದು ಶಾರ್ಟ್‌ಕಟ್ ಅನ್ನು ಸೃಷ್ಟಿಸಿದ್ದು, ಇದು ವಾಹನ ಸವಾರರಿಗೆ ಸಿಕ್ಕಾಪಟ್ಟೆ ಅನುಕೂಲ ಆಗಿದೆ. ಇದರಿಂದ ಕಂ ಕಿಂ ಎನ್ನದೇ ಜನರು 30 ರೂಪಾಯಿ ಕೊಟ್ಟು ರೈತನ ಜಮೀನಿಂದ ಹೋಗುತ್ತಿದ್ದಾರೆ.
ಶಾರ್ಟ್‌ಕಟ್ ಪ್ರಯಾಣಿಕರಿಗೆ ಸಾಕಷ್ಟು ಸಮಯ ಮತ್ತು ದೂರವನ್ನು ಉಳಿಸಿದರೆ, ರೈತನಿಗೆ ಹಣ ಗಳಿಸಲು ಒಂದು ವಿಶಿಷ್ಟ ಮಾರ್ಗವನ್ನು ನೀಡಿತು. ಕೆಲವರು ಇದನ್ನು ಸ್ಮಾರ್ಟ್ ಉದ್ಯಮಶೀಲತೆ ಎಂದು ಕರೆಯುತ್ತಿದ್ದಾರೆ. ಕೆಲವರು ಇದು ಅಕ್ರಮ ಎಂದೆಲ್ಲಾ ಹೇಳುತ್ತಿದ್ದರೂ, ರೈತ ಯಾರಿಗೂ ಮೋಸ ಮಾಡುತ್ತಿಲ್ಲ ಎನ್ನುವುದು ಹಲವರ ಅನಿಸಿಕೆಯಾಗಿದೆ.


