'ಆಪ್‌ ಕೀ ಅದಾಲತ್' ಕಾರ್ಯಕ್ರಮದಲ್ಲಿ, ನಟ ಯಶ್ ತಮ್ಮ 'ಟಾಕ್ಸಿಕ್' ಸಿನಿಮಾದ ಕುರಿತಾದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಚಿತ್ರವು ಅಶ್ಲೀಲತೆ ಅಥವಾ ಗ್ಯಾಂಗ್‌ಸ್ಟಾರ್ ಸಂಸ್ಕೃತಿಯನ್ನು ವೈಭವೀಕರಿಸುವುದಿಲ್ಲ, ಬದಲಿಗೆ ಇಂದಿನ ಜೆನ್-ಜಿ ಪೀಳಿಗೆಯ ಸಮಸ್ಯೆಗಳು ಮತ್ತು ಅವರ ಆಲೋಚನೆಗಳಿಗೆ ಕನ್ನಡಿ ಹಿಡಿಯುವ ಕಲಾತ್ಮಕ ಪ್ರಯತ್ನ ಎಂದು ಅವರು ವಿವರಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಕನ್ನಡ ಚಿತ್ರರಂಗದ ರಾಕಿ ಭಾಯ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ಭಾರಿ ಚರ್ಚೆಗೆ ಹುಟ್ಟುಹಾಕಿದೆ. ಇತ್ತೀಚೆಗೆ ನಡೆದ ಆಪ್‌ ಕೀ ಅದಲಾತ್ ಸಂವಾದ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳು ಕೇಳಿದ ಖಡಕ್ ಪ್ರಶ್ನೆ ಹಾಗೂ ಅದಕ್ಕೆ ಯಶ್ ನೀಡಿದ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಯುವತಿ ಕೇಳಿದ ಪ್ರಶ್ನೆ ಏನು?

ಟಾಕ್ಸಿಕ್ ಸಿನಿಮಾದಲ್ಲಿ ಅಶ್ಲೀಲ್, ಹೊಡೆದಾಟ, ಗ್ಯಾಂಗ್‌ಸ್ಟಾರ್ ಸಂಸ್ಕೃತಿ ಮತ್ತು ಯುದ್ಧದ ವಾತಾವರಣವನ್ನೇ ತೋರಿಸಿದ್ದೀರಾ. ಇಂದಿನ ವಿದ್ಯಾರ್ಥಿಗಳು ಅಥವಾ ಯುವಜನತೆ ಇದನ್ನೆಲ್ಲ ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡರೆ, ಸಮಾಜ ಅವರನ್ನು ಗೌರವಿಸುವುದಿರಲಿ, ತೀವ್ರವಾಗಿ ನಿಂದಿಸುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಯುವತಿ ನೇರವಾಗಿಯೇ ಸವಾಲು ಎಸೆದಿದ್ದಳು.

ಕೂಲ್‌ ಆನ್ಸರ್‌ ಕೊಟ್ಟ ರಾಕಿಭಾಯ್!

ಈ ಪ್ರಶ್ನೆಗೆ ಅತ್ಯಂತ ಸಮಾಧಾನ ಮತ್ತು ಮುಕ್ತ ಮನಸ್ಸಿನಿಂದ ಉತ್ತರಿಸಿದ ಯಶ್, ನಿಮ್ಮ ಮಾತಿನ ಕಾಳಜಿಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಆದರೆ, ಈ ಸಿನಿಮಾದಲ್ಲಿ ಸಮಾಜ ಯಾರನ್ನಾದರೂ ನಿಂದಿಸುವ ಅಥವಾ ತಗ್ಗಿಸುವಂತಹ ವಿಷಯಗಳೇನೂ ಇಲ್ಲ. ಇದು ಇಂದಿನ ಜೆನ್-ಜಿ ಪೀಳಿಗೆ ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಒಂದು ಪ್ರಯತ್ನ. ಇಲ್ಲಿ ಯಾರೂ ಯಾರ ಎದುರು ತಲೆಬಾಗಿಸುವ ಅಗತ್ಯವಿಲ್ಲ ಮತ್ತು ಅದಕ್ಕೆ ನಾವು ಅವಕಾಶವನ್ನೂ ನೀಡುವುದಿಲ್ಲ, ಎಂದು ಸ್ಪಷ್ಟಪಡಿಸಿದರು.

ಕಿಸ್‌ ಸಹ ಮಾಡಿಲ್ಲ!

ಮುಂದುವರಿದು ಮಾತನಾಡಿದ ಅವರು, "ಇಂದಿನ ಯುವಜನತೆಗೆ ತಮ್ಮದೇ ಹಾದಿಯಲ್ಲಿ ಸಾಗಲು, ವ್ಯವಸ್ಥೆಯಲ್ಲಿರುವ ನ್ಯೂನತೆಗಳನ್ನು ಮತ್ತು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಪ್ರಶ್ನಿಸಲು ಸಂಪೂರ್ಣ ಸ್ವಾತಂತ್ರ್ಯದ ಅಗತ್ಯವಿದೆ. ಮುಂಬರುವ ಜೆನ್-ಜಿ ಪೀಳಿಗೆಗೆ ಅವರ ಕೆಲಸ ಮಾಡಲು ಬಿಡೋಣ, ನಾವು ನಮ್ಮ ಕೆಲಸವನ್ನು ಮಾಡೋಣ. ಈ ಸಿನಿಮಾದಲ್ಲಿ ವಲ್ಗರಿಟಿ (ಅಶ್ಲೀಲತೆ) ಇದೆ ಎಂಬುದು ತಪ್ಪು ಕಲ್ಪನೆ. ಟ್ರೇಲರ್‌ನಲ್ಲಿ ನೀವು ನೋಡಿರುವಂತೆ ನಾನು ಕಿಸ್ ಸಹ ಮಾಡಿಲ್ಲ ಎಂದು ನಗುತ್ತಲೇ ಸ್ಪಷ್ಟನೆ ನೀಡಿದರು.

ಎಸ್ಥೆಟಿಕ್ ಶೈಲಿಯಲ್ಲಿ ನಿರ್ಮಾಣ!

ಸಿನಿಮಾದ ಮೇಕಿಂಗ್ ಮತ್ತು ಉದ್ದೇಶದ ಬಗ್ಗೆ ಬೆಳಕು ಚೆಲ್ಲಿದ ಯಶ್, ಈ ಚಿತ್ರವನ್ನು ಅತ್ಯಂತ ಎಸ್ಥೆಟಿಕ್ (ಆಕರ್ಷಕ ಹಾಗೂ ಕಲಾತ್ಮಕ) ಶೈಲಿಯಲ್ಲಿ ನಿರ್ಮಿಸಲಾಗಿದೆ. ಒಮ್ಮೆ ಸಿನಿಮಾ ತೆರೆಗೆ ಬಂದ ಮೇಲೆ ಅದು ಕೇವಲ ಚಿತ್ರವಾಗಿ ಉಳಿಯುವುದಿಲ್ಲ, ಅದು 'ವಾಯ್ಸ್ ಆಫ್ ಕ್ರಿಯೇಟರ್' (ಸೃಷ್ಟಿಕರ್ತನ ಧ್ವನಿ) ಆಗುತ್ತದೆ. ಯಾವುದೇ ಚಿತ್ರವನ್ನು ಒಂದು ಸದುದ್ದೇಶದಿಂದ ನಿರ್ಮಿಸಿದಾಗ, ಅದು ಪ್ರತಿಯೊಬ್ಬರ ಮೇಲೆಯೂ ಧನಾತ್ಮಕ ಪರಿಣಾಮ ಬೀರುತ್ತದೆ. ನಾವು ಈ ಸಿನಿಮಾವನ್ನು ಅತ್ಯಂತ ಒಳ್ಳೆಯ ಉದ್ದೇಶದಿಂದಲೇ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎಂದರು.

ನಿಮ್ಮ ಆಲೋಚನೆಗಳ ಪ್ರೈಮಲ್‌ ಆಸ್ಪೆಕ್ಟ್ ಈ ಟಾಕ್ಸಿಕ್‌!

ಹಿರಿಯರು ಕಟ್ಟಿಕೊಟ್ಟ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದ ಅವರು, ನಮ್ಮ ಸಿನಿಯರ್‌ಗಳ ನಿರ್ಧಾರಗಳು ಹಾಗೂ ಆಲೋಚನೆಗಳು ಸಂಪೂರ್ಣ ಸರಿಯೇ? ಈ ಸಮಾಜ ಮತ್ತು ವ್ಯವಸ್ಥೆ ಯಾವಾಗಲೂ ಅಸಮಾನತೆಯಿಂದಲೇ ಕೂಡಿರಬೇಕೇ? ನಿಮ್ಮಲ್ಲಿರುವ ಇಂತಹ ಹತ್ತಾರು ಆಲೋಚನೆಗಳು ಮತ್ತು ಪ್ರಶ್ನೆಗಳ ಪ್ರೈಮಲ್ ಆಸ್ಪೆಕ್ಟ್ (ಮೂಲ ಸ್ವರೂಪ) ಇಲ್ಲಿದೆ. ನೀವೆಲ್ಲರೂ ಪೂರ್ತಿ ಸಿನಿಮಾ ನೋಡಿ ಅರ್ಥ ಮಾಡಿಕೊಂಡಾಗ, ಹೌದು, ಇದು ಖಂಡಿತವಾಗಿಯೂ ಜೆನ್-ಜಿ ಪೀಳಿಗೆಯ ಸಿನಿಮಾ ಎಂದು ನೀವೇ ಒಪ್ಪಿಕೊಳ್ಳುತ್ತೀರಿ," ಎಂಬ ದೃಢ ನಂಬಿಕೆ ವ್ಯಕ್ತಪಡಿಸಿದ್ದಾರೆ. ಯಶ್ ಅವರ ಈ ಮಾತಿನಿಂದ 'ಟಾಕ್ಸಿಕ್' ಸಿನಿಮಾ ಬರಿ ಮಾಸ್ ಗ್ಯಾಂಗ್‌ಸ್ಟಾರ್ ಕಥೆಯಲ್ಲ, ಬದಲಿಗೆ ಇಂದಿನ ಯುವ ಪೀಳಿಗೆಯ ಬಂಡಾಯ, ಸ್ವಾತಂತ್ರ್ಯ ಮತ್ತು ಆಲೋಚನಾ ಶಕ್ತಿಗೆ ಕನ್ನಡಿ ಹಿಡಿಯುವ ಕಲಾತ್ಮಕ ಪ್ರಯತ್ನ ಎಂಬುದು ಸ್ಪಷ್ಟವಾಗುತ್ತದೆ.