Hemalatha Jayanna Bigg Boss: ಸೋಷಿಯಲ್ ಮೀಡಿಯಾದಲ್ಲಿ ಸಿಂಗರ್ ಆಗಿ ಗುರುತಿಸಿಕೊಂಡಿರುವ ಹೇಮಲತಾ ಜಯಣ್ಣ ಕೂಡ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13 ಶುರುವಾಗುವುದಕ್ಕೂ ಮುನ್ನವೇ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕುತೂಹಲ ಮೂಡಿಸಿದೆ. ಈಗಾಗಲೇ ಕಾರ್ಯಕ್ರಮದ ಪ್ರೊಮೊ ಬಿಡುಗಡೆಯಾಗಿದ್ದು, ಆಗಸ್ಟ್ 16ರಿಂದ ಈ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಇದರ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿ ಸಿಂಗರ್ ಆಗಿ ಗುರುತಿಸಿಕೊಂಡಿರುವ ಹೇಮಲತಾ ಜಯಣ್ಣ ಕೂಡ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.
ಹೇಮಲತಾ ಜಯಣ್ಣ ಬಿಗ್ ಬಾಸ್ ಮನೆಗೆ ಬರ್ತಾರಾ?
ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿದ್ದ ಬಿಗ್ ಬಾಸ್ ಸ್ಪರ್ಧೆಯಲ್ಲಿ ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಇದೇ ಕಾರಣಕ್ಕೆ ಸೀಸನ್ 13ರ ಆಡಿಷನ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಕ್ಷಾಂತರ ಮಂದಿ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ಆದರೆ, ಈ ಪೈಕಿ ಅಸಲಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯುವ ಅವಕಾಶ ಸಿಗುವುದು ಕೆಲವೇ ಮಂದಿಗೆ. ಸುಮಾರು 60 ಮಂದಿಯನ್ನು ಅಗ್ನಿಪರೀಕ್ಷೆ ಹಂತಕ್ಕೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದ್ದು, ಅಂತಿಮವಾಗಿ 16 ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆಯ ಬಾಗಿಲು ತೆರೆಯಲಿದೆ. ಈ 60 ಮಂದಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಡುಗಳ ಮೂಲಕ ಜನಪ್ರಿಯರಾಗಿರುವ ಹೇಮಲತಾ ಜಯಣ್ಣ ಕೂಡ ಇದ್ದಾರೆ ಎನ್ನುವುದು ಸದ್ಯದ ಕುತೂಹಲ.
ವಿಚಿತ್ರ ಟಾಸ್ಕ್‌ಗಳಿಂದ ಶುರುವಾಗಿದೆ ಅಗ್ನಿಪರೀಕ್ಷೆ
ಬಿಗ್ ಬಾಸ್ ಅಗ್ನಿಪರೀಕ್ಷೆಯ ಪ್ರೊಮೊ ಈಗಾಗಲೇ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸ್ಪರ್ಧಿಗಳಿಗೆ ಸಾಮಾನ್ಯ ಟಾಸ್ಕ್‌ಗಳ ಬದಲಾಗಿ ಕೊಂಚ ವಿಚಿತ್ರ ಮತ್ತು ಸವಾಲಿನ ಟಾಸ್ಕ್‌ಗಳನ್ನು ನೀಡಲಾಗಿದೆ. ತಲೆ ಬೋಳಿಸಿಕೊಳ್ಳುವುದು, ಗಿನ್ನಿಸ್ ಪ್ರಮಾಣಪತ್ರ ಹರಿಯುವುದು, ಸಗಣಿ ಹಚ್ಚಿಕೊಳ್ಳುವುದು ಸೇರಿದಂತೆ ಹಲವು ಟಾಸ್ಕ್‌ಗಳು ಪ್ರೊಮೊದಲ್ಲಿ ಕಾಣಿಸಿಕೊಂಡಿವೆ. ಈ ಟಾಸ್ಕ್‌ಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಯೂ ಶುರುವಾಗಿದೆ. ಹೀಗಾಗಿ ಈ ಬಾರಿ ಅಗ್ನಿಪರೀಕ್ಷೆಯಲ್ಲಿ ಯಾರು ಎಷ್ಟರ ಮಟ್ಟಿಗೆ ಸವಾಲು ಎದುರಿಸುತ್ತಾರೆ? ಕೊನೆಯ ಹಂತದವರೆಗೆ ಯಾರು ಉಳಿಯುತ್ತಾರೆ? ಅಂತಿಮವಾಗಿ ಬಿಗ್ ಬಾಸ್ ಮನೆ ಪ್ರವೇಶಿಸುವ 16 ಮಂದಿ ಯಾರು? ಎಂಬ ಪ್ರಶ್ನೆಗಳಿಗೆ ಕಾರ್ಯಕ್ರಮದಲ್ಲೇ ಉತ್ತರ ಸಿಗಬೇಕಿದೆ.
ಯಾರು ಈ ಹೇಮಲತಾ ಜಯಣ್ಣ?
ಸೋಷಿಯಲ್ ಮೀಡಿಯಾದಲ್ಲಿ ಹಾಡುಗಳ ಮೂಲಕವೇ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿರುವ ಹೇಮಲತಾ ಜಯಣ್ಣ, ಮೂಲತಃ ಬೆಂಗಳೂರಿನವರು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಣ್ಣನಪಾಳ್ಯ ಗ್ರಾಮದೊಂದಿಗೆ ಅವರ ಕುಟುಂಬ ಜೀವನದ ನಂಟಿದೆ. ಶಿವಾಜಿನಗರದ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಹೇಮಲತಾ, ಮದುವೆಯ ನಂತರ ಕೃಷಿ ಕುಟುಂಬದ ಜವಾಬ್ದಾರಿಗಳೊಂದಿಗೆ ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು, ಕುಟುಂಬದ ಕೆಲಸಗಳ ನಡುವೆಯೇ ಹಾಡುವ ಹವ್ಯಾಸವನ್ನು ಮುಂದುವರಿಸಿದ್ದಾರೆ. ಆದರೆ, ಅವರ ವಿಶೇಷತೆ ಏನೆಂದರೆ ಸಂಗೀತ ಕಲಿಯಲು ಯಾವುದೇ ಔಪಚಾರಿಕ ತರಬೇತಿ ಪಡೆದಿಲ್ಲ. ನಿತ್ಯದ ಬದುಕಿನ ನಡುವೆ ಹಾಡುತ್ತಾ ಬೆಳೆದಿರುವ ಅವರ ಧ್ವನಿ ಹಾಗೂ ವಿಭಿನ್ನ ಶೈಲಿಯ ಗಾಯನವೇ ಸೋಷಿಯಲ್ ಮೀಡಿಯಾದಲ್ಲಿ ಅವರನ್ನು ಗುರುತಿಸುವಂತೆ ಮಾಡಿದೆ.
‘Believer’ ಹಾಡು ಬದಲಿಸಿದ ಲೈಫ್!
ಹೇಮಲತಾ ಅವರ ಜನಪ್ರಿಯತೆಯ ಹಿಂದೆ ಪ್ರಮುಖ ತಿರುವು ನೀಡಿದ್ದು ‘Believer’ ಹಾಡು. ತಮ್ಮದೇ ಶೈಲಿಯಲ್ಲಿ ಹಾಡನ್ನು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ ಅವರ ವೀಡಿಯೋಗಳು ಹೆಚ್ಚು ಗಮನ ಸೆಳೆಯಲು ಆರಂಭಿಸಿದವು. ಇಂಗ್ಲಿಷ್ ಹಾಡುಗಳನ್ನು ತಮ್ಮದೇ ರೀತಿಯಲ್ಲಿ ಹಾಡುವುದು ಮಾತ್ರವಲ್ಲದೆ, ಮಿಮಿಕ್ರಿಯಲ್ಲೂ ಹೇಮಲತಾ ಪರಿಣತಿ ಹೊಂದಿದ್ದಾರೆ. ಆರಂಭದಲ್ಲಿ ಇನ್‌ಸ್ಟಾಗ್ರಾಮ್ ಬಳಕೆಯೇ ಸರಿಯಾಗಿ ತಿಳಿದಿರದ ಅವರಿಗೆ ಮಕ್ಕಳು ಮತ್ತು ಪತಿ ಸೋಷಿಯಲ್ ಮೀಡಿಯಾ ಬಳಸುವುದನ್ನು ಕಲಿಸಿಕೊಟ್ಟರಂತೆ. ನಂತರ ಹಾಡುಗಳನ್ನು ಹಂಚಿಕೊಳ್ಳುತ್ತಾ ಹೋದಂತೆ ಫಾಲೋವರ್ಸ್ ಸಂಖ್ಯೆಯೂ ಹೆಚ್ಚಾಗಿದೆ.
‘ಅಗ್ನಿಪರೀಕ್ಷೆ’ ಗೆದ್ದು ಬಿಗ್ ಬಾಸ್ ಮನೆ ಸೇರುತ್ತಾರಾ?
ಸದ್ಯ ಎಲ್ಲರ ಕುತೂಹಲ ಇದೇ ಪ್ರಶ್ನೆಯ ಸುತ್ತ ಇದೆ. ಹೇಮಲತಾ ಜಯಣ್ಣ ಅಗ್ನಿಪರೀಕ್ಷೆಯ ಸವಾಲುಗಳನ್ನು ಗೆದ್ದು ಬಿಗ್ ಬಾಸ್ ಸೀಸನ್ 13ರ ಮನೆ ಪ್ರವೇಶಿಸುತ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ. ಒಂದೆಡೆ ಸೋಷಿಯಲ್ ಮೀಡಿಯಾದಿಂದ ಜನಪ್ರಿಯತೆ ಪಡೆದಿರುವ ಹೊಸ ಮುಖಗಳು, ಮತ್ತೊಂದೆಡೆ ವಿಭಿನ್ನ ಟಾಸ್ಕ್‌ಗಳ ಮೂಲಕ ಸ್ಪರ್ಧಿಗಳ ಸಾಮರ್ಥ್ಯ ಪರೀಕ್ಷಿಸುವ ಅಗ್ನಿಪರೀಕ್ಷೆ. ಹೀಗಾಗಿ ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನವೇ ಈ ಶೋ ಪ್ರೇಕ್ಷಕರ ಕುತೂಹಲಕ್ಕೆ ಬೆಂಕಿ ಹಚ್ಚಿದೆ.


