ಬಿಳಿಕೂದಲನ್ನು ಮರೆಮಾಚಲು ಬಳಸುವ ಹೇರ್ ಡೈಗಳು ಕ್ಯಾನ್ಸರ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ವೇಳೆ, ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ವಯಸ್ಸಾದ ಪಾತ್ರಗಳನ್ನು ತೋರಿಸಲು ಕೇವಲ ಒಂದು ಎಳೆ ಬಿಳಿ ಕೂದಲನ್ನು ಬಳಸುವುದು ಹಾಸ್ಯಾಸ್ಪದವೆನಿಸಿದೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿಕೂದಲು ಆಗುವುದು ಮಾಮೂಲು. ಅದಕ್ಕಾಗಿಯೇ ಹೇರ್‌ ಡೈ ಎನ್ನುವುದು ಬಲು ದೊಡ್ಡ ಮಾರುಕಟ್ಟೆಯಾಗಿ ಪರಿಣಮಿಸಿದೆ. ಹೇರ್​ ಕಲರ್​ನಿಂದ ಕ್ಯಾನ್ಸರ್​ ಬರುತ್ತಿವೆ. ಬ್ಲಡ್​ ಕ್ಯಾನ್ಸರ್ ಹೆಚ್ಚುತ್ತಿದೆ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್​, ಗರ್ಭಾಶಯದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್​ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ. ಇವೆಲ್ಲಾ ಕೆಲವರಿಗೆ ಗೊತ್ತಿದ್ದರೂ ವಯಸ್ಸಾಗದಂತೆ ಕಾಣಬೇಕು ಎನ್ನುವ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವ ಅನಿವಾರ್ಯತೆಯೂ ಇದೆ. ಇದಕ್ಕಾಗಿಯೇ, ಸುಲಭದಲ್ಲಿ ತಲೆಗೂದಲನ್ನು ಕಪ್ಪಗಾಗಿಸಿ ಎಂದು ಹಲವಾರು ಯೂಟ್ಯೂಬರ್​ಗಳು ಟಿಪ್ಸ್​ ಕೊಡುತ್ತಿರುವುದು ಹೆಚ್ಚುತ್ತಿದೆ. ಅದನ್ನು ನಂಬಿ ಪ್ರಯೋಗ ಮಾಡಿದರೆ ಅದರಲ್ಲಿ ಹೆಚ್ಚಿನವು ಫೇಕ್​ ಆಗಿರುತ್ತದೆ. ಒಂದಿಷ್ಟು ಲೈಕ್ಸ್​, ವ್ಯೂಸ್​​ಗೋಸ್ಕರ್​ ಇಷ್ಟಬಂದ ರೀತಿಯಲ್ಲಿ ವಿಡಿಯೋ ಮಾಡಲಾಗುತ್ತದೆ. ಅದಕ್ಕೆ ಬರುವ ಕಮೆಂಟ್ಸ್​ಗಳನ್ನು ನೋಡಿದರೆ, ಎಷ್ಟು ಮಂದಿ ಮೋಸ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.

ಬಿಳಿ ಎಂದ್ರೆ ಭಯ!

ಅದೇನೇ ಇದ್ದರೂ, ಬಿಳಿಗೂದಲು ಕಾಣಿಸುವುದು ಬಹುತೇಕ ಯಾರಿಗೂ ಇಷ್ಟವಾಗುವುದಿಲ್ಲ. ಇದು ಸಾಮಾನ್ಯ ಜನರ ಮಾತಾದರೆ, ಇನ್ನು ಸೆಲೆಬ್ರಿಟಿಗಳಿಗೆ ಅಂತೂ ಕಪ್ಪು ಕೂದಲು ಮಸ್ಟ್‌. ಒಂದೇ ಒಂದು ಬಿಳಿ ಕೂದಲು ಕಂಡರೂ, ಅವರ ಘನತೆಗೇ ಕುಂದು ಬರುತ್ತದೆ, ಬಣ್ಣದ ಲೋಕದಲ್ಲಿ ಬೇಡಿಕೆ ಕುಸಿಯುತ್ತದೆ ಎನ್ನುವ ಮಾತಿದೆ. ಇದೇ ಕಾರಣಕ್ಕೆ ಮುಖಕ್ಕೆ ಬಣ್ಣ ಬಳಿದುಕೊಳ್ಳಲು, ಮುಖವನ್ನು ಅಂದಗೊಳಿಸಲು ಹೇಗೆ ಕೆಜಿಗಟ್ಟಲೆ ಮೇಕಪ್‌ ಮೊರೆ ಹೋಗುತ್ತಾರೆಯೋ, ಅದೇ ರೀತಿ ಕೂದಲನ್ನು ಸುಂದರಗೊಳಿಸಲೂ ಅಷ್ಟೇ ಸರ್ಕಸ್‌ ಮಾಡುತ್ತಾರೆ.

ಸಿಂಗಲ್​ ಲೈನ್​ ಟೆಕ್ನಿಕ್​ ಯಾಕೆ?

ಇವೆಲ್ಲಾ ಸರಿ. ಬಿಳಿಗೂದಲು ಕಂಡರೆ ವಯಸ್ಸಾಯ್ತು ಎನ್ನುವಂತೆ ಕಾಣಿಸುವ ಕಾರಣ, ಹೇರ್‌ಡೈನೂ ಓಕೆ. ಆದರೆ ನಿಜವಾಗಿಯೂ ಬಿಳಿಯ ಕೂದಲನ್ನು ಕಪ್ಪು ಮಾಡಿಕೊಂಡು, ಪಾತ್ರಕ್ಕೆ ತಕ್ಕಂತೆ ವಯಸ್ಸಾಗಿದೆ ಎಂದು ತೋರಿಸಲು ಸಿಂಗಲ್‌ ಲೈನ್‌ ಬಿಳಿ ಕೂದಲು ಯಾಕೆ ಎನ್ನುವ ಪ್ರಶ್ನೆ ಈಗ ನೆಟ್ಟಿಗರನ್ನು ಕಾಡುತ್ತಿದೆ. ಅಷ್ಟಕ್ಕೂ ಇದೇನು, ಇತ್ತೀಚಿನ ಸೀರಿಯಲ್‌ಗಳ ಮಾತಲ್ಲ. ಬದಲಿಗೆ ಸೀರಿಯಲ್‌ ಆರಂಭದಿಂದಲೂ, ಕೆಲವು ಸಿನಿಮಾಗಳಲ್ಲಿಯೂ ಇದೇ ರೀತಿ ವಯಸ್ಸಾದ ಮಹಿಳೆಯರನ್ನು ತೋರಿಸಲು ಸಿಂಗಲ್‌ ಲೈನ್‌ ಬಿಳಿಗೂದಲು ತೋರಿಸುವುದು ಮಾಮೂಲಾಗಿದೆ.

ಹಾಸ್ಯಾಸ್ಪದ ಮೇಕ್​ ಓವರ್​

ಇದು ತೀರಾ ಅನಗತ್ಯವಾಗಿರುವ ಕಾರಣ, ಇಂದಿಗೂ ಅದನ್ನೇ ಮುಂದುವರೆಸಿಕೊಂಡು ಬಂದಿರುವುದು ಮಾತ್ರ ಹಾಸ್ಯಾಸ್ಪದ ಎನ್ನಿಸುವುದು ಉಂಟು. ರಿಯಲ್‌ ಕೂದಲನ್ನು ಹಾಗೆಯೇ ಬಿಟ್ಟರೂ ಸಾಕು, ಬಿಳಿಗೂದಲು ಕಾಣಿಸುತ್ತದೆ, ಇಲ್ಲದೇ ಹೋದರೆ, ತಾಯಿ, ಅತ್ತೆ, ಅಜ್ಜಿ ಪಾತ್ರಕ್ಕೆ ವಯಸ್ಸಾದ ನಟಿಯರನ್ನು ತೆಗೆದುಕೊಂಡರೆ ಅವರಿಗೆ ವಯಸ್ಸಾಗಿರುವುದು ಸಹಜವಾಗಿ ಕಾಣಿಸುತ್ತದೆ. ಆದರೂ ಇಂಥ ಹಾಸ್ಯಾಸ್ಪದ ಎನ್ನುವಂಥ ಸಿಂಗಲ್‌ ಲೈನ್‌ ಬಿಳಿಗೂದಲು ಯಾಕೆ ಎನ್ನುವ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಈಗ ಶುರುವಾಗಿದೆ.