ಅಪಶ್ರುತಿಯಲ್ಲಿ ಹಾಡಿ ವೈರಲ್ ಆದ ಮೈಸೂರಿನ ನಿತ್ಯಶ್ರೀ, ಇದೀಗ ಟ್ರೋಲ್‌ಗಳ ನಡುವೆಯೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಅವಕಾಶ ಪಡೆದ ನಂತರ ಟೀಕೆ ಹೆಚ್ಚಾಗಿದ್ದರೂ ಈಗ ಬೆಳ್ಳಿಪರದೆಯ ಮೇಲೆ ಮಿಂಚುವ ಅವಕಾಶ ಪಡೆದುಕೊಂಡಿದ್ದಾರೆ. 

ಗಾಯಕಿ ಶ್ರೇಯಾ ಘೋಷಲ್​ ಅವರ ಹೂವಿನ ಬಾಣದಂತೆ ಹಾಡನ್ನು ಫ್ರೆಂಡ್ಸ್​ಗಾಗಿ ಅಪಶ್ರುತಿಯಲ್ಲಿ ಹಾಡಿ ರಾತ್ರೋ ರಾತ್ರಿ ಫೇಮಸ್​ ಆದವರು ಮೈಸೂರಿನ ವೈರಲ್​ ಹುಡುಗಿ ನಿತ್ಯಶ್ರೀ. ಅವರೇನೂ ವೈರಲ್​ ಆಗಲಿ ಎಂದು ಹಾಡಿದವರಲ್ಲ. ಸುಖಾಸುಮ್ಮನೆ ಅವರ ಪಾಡಿಗೆ ಅವರು ಇದ್ದರು. ಆದರೆ ಕೆಲವೊಮ್ಮೆ ಅದೃಷ್ಟ ಬಂದರೆ, ಯಾರಾದರೇನೂ ಲಾಟರಿ ಹೊಡೆಯುತ್ತದೆ ಎನ್ನುವಂತೆ ನಿತ್ಯಶ್ರೀ ಅವರು ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಆದರು. ಹಲವರು ತಮ್ಮ ಕಾರ್ಯಕ್ರಮಗಳಿಗೆ ಈಕೆಯನ್ನು ಆಹ್ವಾನಿಸಿದರು. ಈಕೆಯನ್ನು ರಾತ್ರೋರಾತ್ರಿ ಸೆಲೆಬ್ರಿಟಿಯನ್ನಾಗಿ ಮಾಡಿದ್ದು ಇದೇ ನೆಟ್ಟಿಗರು ಹಾಗೂ ಜನರೇ. ಇದೀಗ ಅವರು ಸ್ಯಾಂಡಲ್​ವುಡ್​ಗೂ ಎಂಟ್ರಿ ಕೊಡುತ್ತಿದ್ದಾರಂತೆ.

ಸ್ಯಾಂಡಲ್​ವುಡ್​ಗೆ ಎಂಟ್ರಿ

ಈ ಕುರಿತು ಖುದ್ದು ನಿತ್ಯಶ್ರೀ ಮಾತನಾಡಿದ್ದಾರೆ. ಯಾವ ಸಿನಿಮಾ ಎಂದು ರಿವೀಲ್​ ಮಾಡಲು ಅವರು ಒಪ್ಪಲಿಲ್ಲ. ಅದರಲ್ಲಿ ಯಾವ ರೋಲ್​ ಎಂದು ಕೇಳಿದರೂ, ಇನ್ನೂ ಅದರ ಬಗ್ಗೆ ಹೇಳಲಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಸತ್ಯ ನಿತ್ಯಶ್ರೀ ಅವರನ್ನೂ ಸೀಕ್ರೆಟ್​ ಆಗಿ ಇಟ್ಟಿದ್ದಾರೆ. ಒಟ್ಟಿನಲ್ಲಿ ಅವರಿಗೆ ಈಗ ಬೆಳ್ಳಿಪರದೆಯಲ್ಲಿ ಅವಕಾಶ ಸಿಕ್ಕಿರುವುದು ನಿಜ ಎಂದು ಹೇಳಿದ್ದಾರೆ. ಅಷ್ಟಕ್ಕೂ. ಯಾವಾಗ ನಿತ್ಯಶ್ರೀ ಅವರ ಡಿಮಾಂಡ್​ ಹೆಚ್ಚಾಯ್ತೋ ಅದೇ ಜನರು ಇನ್ನಿಲ್ಲದಂತೆ ಟ್ರೋಲ್​ ಮಾಡುತ್ತಿದ್ದಾರೆ. ಕೆಟ್ಟಕೆಟ್ಟದ್ದಾಗಿ ಈಕೆಗೆ ಚುಚ್ಚು ಮಾತುಗಳನ್ನಾಡುತ್ತಿದ್ದಾರೆ. ಆದರೆ, ಇಂಥ ವೈರಲ್​ ಆದವರಿಗೆ ಸಹಜವಾಗಿ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಅವಕಾಶ ಸಿಗುವುದು ಉಂಟು. ಅದರಂತೆಯೇ ಇದೀಗ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಷೋನಲ್ಲಿ ನಿತ್ಯಶ್ರೀ ಅವರಿಗೆ ಅವಕಾಶ ಸಿಕ್ಕಿದ್ದೇ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈಕೆಯನ್ನು ಬಾಯಿಗೆ ಬಂದಂತೆ ನಿಂದಿಸುತ್ತಿದ್ದಾರೆ.

ದೊಡ್ಡ ವೇದಿಕೆಯಲ್ಲಿ ಅವಕಾಶ

ಪ್ರತಿಯೊಬ್ಬ ಕನ್ನಡಿಗರ ಮನಸ್ಸನ್ನು ಗೆದ್ದಿರುವ, ಯಾರೂ ಮಾಡದ ಸಾಧನೆ ಮಾಡುತ್ತಿರುವ, ದೇಶ-ವಿದೇಶಗಳನ್ನು ಸುತ್ತಾಡಿ, ಕೆಲವೊಮ್ಮೆ ಜೀವದ ಹಂಗನ್ನೂ ತೊರೆದು ಕನ್ನಡದಲ್ಲಿಯೇ ಆ ದೇಶಗಳ ಮಾಹಿತಿ ನೀಡಿ ಕನ್ನಡದ ಕಣ್ಮಣಿ ಎನ್ನಿಸಿಕೊಂಡಿರುವ ಡಾ.ಬ್ರೋ ಅರ್ಥಾತ್​ ಗಗನ್​ ಅವರನ್ನು ವಾಹಿನಿಗೆ ಕರೆಸಿ ಎಂದಾಗ, 'ಇವನ್ಯಾರೆಂದು ನಿಮ್ಮ ಅಮ್ಮನಿಗೆ ಗೊತ್ತಾ, ಅಜ್ಜಿಗೆ ಗೊತ್ತಾ' ಎಂದು ಮೂದಲಿಸಿದವರೇ ಇದೀಗ ನಿತ್ಯಶ್ರೀ ಅವರಿಗೆ ಇಂಥ ದೊಡ್ಡ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ ಎಂದು ಜಾಲತಾಣದಲ್ಲಿ ಟ್ರೋಲ್​ ಮಾಡುವುದು ಒಂದೆಡೆಯಾದರೆ, ಯಾವ ತಪ್ಪೂ ಮಾಡದ ನಿತ್ಯಶ್ರೀ ಅವರನ್ನೂ ಇದರ ಜೊತೆಗೆ ಹಂಗಿಸಲಾಗುತ್ತಿದೆ.

ನೊಂದು ವಿಡಿಯೋ

ಇದರಿಂದ ನೊಂದು ನಿತ್ಯಶ್ರೀ ಈಚೆಗೆ ಸೋಷಿಯಲ್​ ಮೀಡಿಯಾದಲ್ಲಿ ಲೈವ್​ ಬಂದು ಕಣ್ಣೀರಿಟ್ಟಿದ್ದರು. ನಾನು ಆ ಹಾಡನ್ನು ಕೆಟ್ಟದ್ದಾಗಿ ಹೇಳಿದ್ದೇನೆ ನಿಜ. ಅದಕ್ಕೆ ಕ್ಷಮೆಯನ್ನೂ ಕೋರಿದ್ದೇನೆ. ನೀನೇನೂ ಕ್ಷಮೆ ಕೋರುವ ಅಗತ್ಯವಿಲ್ಲ ಎಂದು ಅರ್ಜುನ್​ ಜನ್ಯ ಸರ್​ ಅವರೂ ಹೇಳಿದ್ದಾರೆ. ಇದರ ಹೊರತಾಗಿಯೂ ನನ್ನ ವಿರುದ್ಧ ಸಿಕ್ಕಾಪಟ್ಟೆ ನೆಗೆಟಿವ್​ ಕಮೆಂಟ್ಸ್​ ಬರುತ್ತಿವೆ. ಇದೀಗ ಕಾಮಿಡಿ ಕಿಲಾಡಿ ಷೋನಲ್ಲಿ ಛಾನ್ಸ್​ ಸಿಕ್ಕಿರುವುದಕ್ಕೆ ಟ್ರೋಲ್​ ಮಾಡಲಾಗುತ್ತಿದೆ. ಇಂಥ ಛಾನ್ಸ್​ ನಿಮ್ಮ ಅಕ್ಕನಿಗೋ, ತಂಗಿಗೋ ಸಿಕ್ಕಿದ್ದರೆ ಹೀಗೆಯೇ ಮಾಡ್ತಿದ್ರಾ ಎಂದು ನಿತ್ಯಶ್ರೀ ಪ್ರಶ್ನಿಸಿದ್ದರು. ನಿನಗೇನು ಟ್ಯಾಲೆಂಟ್​ ಇದೆ ಎಂದು ಕೇಳುತ್ತೀರಲ್ಲ. ನಾನು ಸುಮ್ಮನೇ ಏನೂ ಸೆಲೆಕ್ಟ್​ ಆಗಲಿಲ್ಲ. ಹಲವು ಜಡ್ಜಸ್​ ಮುಂದೆ ನಾನು ಆಡಿಷನ್​ ಕೊಟ್ಟೆ. ನನಗೆ ನಟನೆ ಗೊತ್ತಿಲ್ಲ, ಇದೇ ಮೊದಲ ಬಾರಿಗೆ ಸ್ಟೇಜ್​ ಹತ್ತಿರುವುದು ನಿಜ. ಆದರೆ, ಆಡಿಷನ್​ನಲ್ಲಿ ನಾನು ಪಾಸಾದ ಬಳಿಕವೇ ನನ್ನನ್ನು ಸೆಲೆಕ್ಟ್​ ಮಾಡಿದ್ರು. ನನ್ನ ಅರ್ಹತೆ ಏನು ಎನ್ನುವುದು ಅವರಿಗೆ ತಿಳಿದೇ ಸೆಲೆಕ್ಟ್​ ಆಗಿದ್ದೇನೆ. ಹೀಗಿರುವಾಗ ಸುಮ್ಮನೇ ಯಾಕೆ ಟ್ರೋಲ್ ಮಾಡಿ ಮನಸ್ಸಿಗೆ ಬೇಸರ ಮಾಡುತ್ತೀರಾ ಎಂದು ನಿತ್ಯಶ್ರೀ ಭಾವುಕರಾಗಿದ್ದರು.