Manasa Manohar Son: ಕನ್ನಡ ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಹಾಗೂ ‘ಲಕ್ಷ್ಮೀ ನಿವಾಸ’ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಮಾನಸ ಮನೋಹರ್ ಅವರ ಮನೆಯಲ್ಲಿ ಇದೀಗ ಸಂಭ್ರಮದ ವಾತಾವರಣ.

ಕನ್ನಡ ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಹಾಗೂ ‘ಲಕ್ಷ್ಮೀ ನಿವಾಸ’ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ನಟಿ ಮಾನಸ ಮನೋಹರ್ ಅವರ ಮನೆಯಲ್ಲಿ ಇದೀಗ ಸಂಭ್ರಮದ ವಾತಾವರಣ. ತಮ್ಮ ಮುದ್ದು ಮಗನಿಗೆ ನಟಿ ಅದ್ದೂರಿಯಾಗಿ ನಾಮಕರಣ ಮಾಡಿದ್ದು, ಮಗನಿಗೆ ಇಟ್ಟಿರುವ ವಿಶೇಷ ಹೆಸರನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಮಾನಸ ಮನೋಹರ್ ತಮ್ಮ ಮಗನಿಗೆ ‘ಪ್ರಣಮ್’ ಎಂದು ನಾಮಕರಣ ಮಾಡಿದ್ದಾರೆ. ಹೆಸರಿನ ಜೊತೆಗೆ ಅದರ ಹಿಂದಿರುವ ಭಾವನಾತ್ಮಕ ಕಾರಣವನ್ನೂ ಅವರು ಬಹಿರಂಗಪಡಿಸಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಮುದ್ದು ಮಗನಿಗೆ ‘ಪ್ರಣಮ್’ ಎಂದು ಹೆಸರಿಟ್ಟ ಮಾನಸ!

ನಾಮಕರಣದ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ ಮಾನಸ, ತಮ್ಮ ಮಗನನ್ನು ಪ್ರೀತಿಯಿಂದ ‘ಬಂಬಲ್ ಬೀ’ ಎಂದು ಕರೆಯುವುದಾಗಿಯೂ ತಿಳಿಸಿದ್ದಾರೆ. ‘ಪ್ರಣಮ್’ ಎಂದರೆ ಭಕ್ತಿ ಮತ್ತು ಗೌರವ ಎಂಬ ಅರ್ಥವಿದೆ. ನಮ್ಮಿಬ್ಬರ ಪ್ರೀತಿಗೆ ನಾವು ಸಲ್ಲಿಸುತ್ತಿರುವ ಅತ್ಯುನ್ನತ ಗೌರವದ ಸಂಕೇತವಾಗಿ ಆತ ನಮ್ಮ ಬದುಕಿಗೆ ಬಂದಿದ್ದಾನೆ ಎಂಬ ಭಾವನೆಯನ್ನು ನಟಿ ತಮ್ಮ ಪೋಸ್ಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಗನ ಹೆಸರಿನಲ್ಲೇ ತಮ್ಮ ಪ್ರೀತಿ ಹಾಗೂ ಭಾವನೆಗಳನ್ನು ಅಡಗಿಸಿಟ್ಟಿರುವುದು ವಿಶೇಷ.

‘ಪ್ರಣಮ್’ ಹೆಸರಿನ ಹಿಂದೆ ಇದೆ ಸ್ಪೆಷಲ್ ಕಥೆ!

ಮಗನಿಗೆ ಈ ಹೆಸರು ಇಡುವ ನಿರ್ಧಾರದ ಹಿಂದೆ ಒಂದು ಸುಂದರ ಕಥೆಯಿದೆ ಎಂದು ಮಾನಸ ಮನೋಹರ್ ಹೇಳಿದ್ದಾರೆ. ಮಗು ಹೊಟ್ಟೆಯಲ್ಲಿದ್ದಾಗಿನಿಂದಲೇ ಆತನನ್ನು ಪ್ರೀತಿಯಿಂದ ‘ಪ್ರಾಣ’ ಎಂದು ಕರೆಯುತ್ತಿದ್ದರಂತೆ. ನಂತರ ಮಗುವಿಗೆ ಯಾವ ಹೆಸರು ಇಡಬೇಕು ಎಂಬ ಚರ್ಚೆ ನಡೆದಾಗ, ‘ಪ್ರಣಮ್’ ಎಂಬ ಹೆಸರು ಆಯ್ಕೆಯಾಯಿತು ಎಂದು ನಟಿ ತಿಳಿಸಿದ್ದಾರೆ. ಇದರಲ್ಲೂ ಮತ್ತೊಂದು ವಿಶೇಷತೆ ಇದೆ. ‘ಪ್ರಣಮ್’ ಹೆಸರಿನ ಮೊದಲ ಮೂರು ಅಕ್ಷರಗಳು ಅವರ ಪತಿ ಪ್ರೀತಂ ಅವರ ಹೆಸರಿನಿಂದ ಬಂದಿದ್ದು, ಹೆಸರನ್ನು ಕೊನೆಯಿಂದ ಓದಿದಾಗ ತಮ್ಮ ಹೆಸರಿನೊಂದಿಗೆ ಹೊಂದಿಕೊಳ್ಳುವಂತೆ ರೂಪಿಸಲಾಗಿದೆ ಎಂದು ಮಾನಸ ವಿವರಿಸಿದ್ದಾರೆ. ಹೀಗಾಗಿ ‘ಪ್ರಣಮ್’ ಕೇವಲ ಒಂದು ಹೆಸರು ಮಾತ್ರವಲ್ಲ, ದಂಪತಿಯ ಪ್ರೀತಿ ಹಾಗೂ ಮಗನ ಮೇಲಿನ ಭಾವನೆಗಳನ್ನು ಒಳಗೊಂಡಿರುವ ವಿಶೇಷ ಹೆಸರಾಗಿದೆ.

‘ಬಂಬಲ್ ಬೀ’ ಎಂದು ಕರೆಯುವುದೇಕೆ?

ಮಗನನ್ನು ‘ಬಂಬಲ್ ಬೀ’ ಎಂದು ಕರೆಯುವುದೇಕೆ ಎಂಬ ಪ್ರಶ್ನೆ ಅಭಿಮಾನಿಗಳಿಂದ ಪದೇಪದೆ ಕೇಳಿಬರುತ್ತಿತ್ತಂತೆ. ಇದೀಗ ಅದಕ್ಕೂ ಮಾನಸ ಉತ್ತರ ನೀಡಿದ್ದಾರೆ. ಈ ಮುದ್ದಾದ ಅಡ್ಡಹೆಸರಿನ ಹಿಂದೆ ಒಂದು ಸ್ವಾರಸ್ಯಕರ ಕಥೆಯಿದೆ. ಅದರ ಸಂಪೂರ್ಣ ವಿವರವನ್ನು ತಮ್ಮ ‘Manifest Diaries by Manasa’ ಯೂಟ್ಯೂಬ್ ಚಾನೆಲ್‌ನಲ್ಲಿ ಶೀಘ್ರದಲ್ಲೇ ವಿಡಿಯೋ ಮೂಲಕ ಹಂಚಿಕೊಳ್ಳುವುದಾಗಿ ನಟಿ ತಿಳಿಸಿದ್ದಾರೆ. ಹೀಗಾಗಿ ‘ಬಂಬಲ್ ಬೀ’ ಹಿಂದಿನ ಆ ಕಥೆ ಏನು ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದೆ.

‘ಜೊತೆ ಜೊತೆಯಲಿ’ಯಿಂದ ‘ಲಕ್ಷ್ಮೀ ನಿವಾಸ’ದ ನೀಲೂವರೆಗೆ

ಮಾನಸ ಮನೋಹರ್ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತ ಮುಖ. ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ನಟಿಸಿದ್ದ ಅವರು, ಬಳಿಕ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ನೀಲೂ ಪಾತ್ರದ ಮೂಲಕ ಗಮನ ಸೆಳೆದಿದ್ದರು. ನೀಲೂ ಪಾತ್ರದ ವಿಭಿನ್ನ ಶೇಡ್‌ಗಳ ಮೂಲಕ ವೀಕ್ಷಕರನ್ನು ರಂಜಿಸಿದ್ದ ಮಾನಸ, ಇದೀಗ ನಟನೆಯ ಜೊತೆಗೆ ತಮ್ಮ ಮಗನ ಆರೈಕೆಯಲ್ಲೂ ಬ್ಯುಸಿಯಾಗಿದ್ದಾರೆ. 2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಅವರೊಂದಿಗೆ ವಿವಾಹವಾದ ಮಾನಸ, ಸದ್ಯ ತಮ್ಮ ಮುದ್ದು ಮಗನೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇದೀಗ ಮಗನ ನಾಮಕರಣದ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ ನಟಿಗೆ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

View post on Instagram