‘ಮಾಲ್ಗುಡಿ ಡೇಸ್’ ಅಭಿಮಾನಿಗಳಿಗೆ ಸಿಹಿಸುದ್ದಿಯ ಸುಳಿವು ಸಿಕ್ಕಿದೆ. 40 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಅವರು ಆಗುಂಬೆಗೆ ಭೇಟಿ ನೀಡಿ, ‘ಮಾಲ್ಗುಡಿಯಿಂದ ಮತ್ತೊಂದು ಕಥೆ ಮತ್ತೆ ಬರುತ್ತಿದೆ’ ಎಂದು ಪೋಸ್ಟ್ ಮಾಡಿದ್ದಾರೆ.
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇಂದಿಗೂ ತನ್ನದೇ ಆದ ಸ್ಥಾನ ಹೊಂದಿರುವ ಧಾರಾವಾಹಿ ಎಂದರೆ ‘ಮಾಲ್ಗುಡಿ ಡೇಸ್’. 80-90ರ ದಶಕದಲ್ಲಿ ದೂರದರ್ಶನದ ಮೂಲಕ ಮನೆಮಾತಾಗಿದ್ದ ಈ ಸರಣಿ, ಹೆಸರಾಂತ ಸಾಹಿತಿ ಆರ್.ಕೆ. ನಾರಾಯಣ್ ಅವರ ಕಥೆಗಳಿಗೆ ಜೀವ ತುಂಬಿತ್ತು. ಅದರಲ್ಲೂ ನಟ, ನಿರ್ದೇಶಕ ಶಂಕರ್ ನಾಗ್ ಅವರ ಅದ್ಭುತ ನಿರೂಪಣೆ ‘ಮಾಲ್ಗುಡಿ ಡೇಸ್’ಗೆ ಇಂದಿಗೂ ವಿಶೇಷ ಮೆರುಗು ನೀಡುತ್ತದೆ.
ಅದರಲ್ಲೂ ‘ಸ್ವಾಮಿ’ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದವರು ಮಾಸ್ಟರ್ ಮಂಜುನಾಥ್. ಇದೀಗ ಇದೇ ‘ಸ್ವಾಮಿ’ ಪಾತ್ರದ ನೆನಪುಗಳೊಂದಿಗೆ ‘ಮಾಲ್ಗುಡಿ’ ಮತ್ತೊಂದು ಕಥೆ ಹೇಳಲು ಸಜ್ಜಾಗುತ್ತಿರುವ ಸುಳಿವು ಸಿಕ್ಕಿದೆ.
ಈ ಕುತೂಹಲಕಾರಿ ಮಾಹಿತಿಯನ್ನು ಮಾಸ್ಟರ್ ಮಂಜುನಾಥ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಮಾಲ್ಗುಡಿ ಡೇಸ್’ ಚಿತ್ರೀಕರಣ ನಡೆದ ಆಗುಂಬೆಗೆ ಬರೋಬ್ಬರಿ 40 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಸೇರಿದಂತೆ ಮೂವರು ಆಪ್ತ ಸ್ನೇಹಿತರು ಮತ್ತೆ ಭೇಟಿ ನೀಡಿದ್ದಾರೆ. ಈ ಭೇಟಿಯ ಫೋಟೋಗಳ ಜೊತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿರುವ ಅವರು, ಹೊಸ ಯೋಜನೆಯೊಂದರ ಮುನ್ಸೂಚನೆಯನ್ನೂ ನೀಡಿದ್ದಾರೆ.
ಘೋಷಣೆ ಶೀಘ್ರದಲ್ಲೇ..
40 ವರ್ಷಗಳ ಪಯಣದ ಬಳಿಕ ಮತ್ತೆ ಅದೇ ಸ್ಥಳಕ್ಕೆ ಮರಳಿದ ಅನುಭವವನ್ನು ಹಂಚಿಕೊಂಡಿರುವ ಮಾಸ್ಟರ್ ಮಂಜುನಾಥ್, ‘40 ವರ್ಷಗಳು. ಮೂವರು ಸ್ನೇಹಿತರು. ಒಂದು ಮರೆಯಲಾಗದ ಸ್ಥಳ.ನಾವು ಮತ್ತೆ ಆಗುಂಬೆಗೆ ಮರಳಿದ್ದೇವೆ. ಹಳೆಯ ನೆನಪುಗಳ ನಡುವೆ ನಡೆದಾಡಿದೆವು, ಒಮ್ಮೆ ನಮ್ಮ ಬದುಕಿನ ಭಾಗವಾಗಿದ್ದ ಸ್ಥಳಗಳನ್ನು ಮತ್ತೆ ನೋಡಿದೆವು.. ಮತ್ತು ಕೆಲವು ನೆನಪುಗಳು ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಅರಿತುಕೊಂಡೆವು. ಮಾಲ್ಗುಡಿಯಿಂದ ಮತ್ತೊಂದು ಕಥೆ ಮತ್ತೆ ಬರುತ್ತಿದೆ. ಈ ಬಾರಿ.. ಈ ಪಯಣದಲ್ಲಿ ನೀವೂ ನಮ್ಮೊಂದಿಗೆ ಇರಬೇಕೆಂದು ನಾವು ಬಯಸುತ್ತೇವೆ. ಘೋಷಣೆ ಶೀಘ್ರದಲ್ಲೇ..’ ಎಂಬ ಅರ್ಥದ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ಅಷ್ಟೇ ಸಾಕು, ‘ಮಾಲ್ಗುಡಿ ಡೇಸ್’ ಅಭಿಮಾನಿಗಳ ಕುತೂಹಲ ಗರಿಗೆದರಿದೆ. ಹಾಗಾದರೆ ಇದು ಹಳೆಯ ‘ಮಾಲ್ಗುಡಿ ಡೇಸ್’ನ ಮುಂದುವರಿದ ಕಥೆಯೇ? ಅಥವಾ ಅದೇ ಲೋಕದಲ್ಲಿ ಹೊಸ ಕಥೆಯೊಂದನ್ನು ಹೇಳಲು ತಂಡ ಸಿದ್ಧವಾಗುತ್ತಿದೆಯೇ? ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ ಎಂಬ ಸುಳಿವು ಮಾತ್ರ ಸಿಕ್ಕಿದೆ.
ಆಗುಂಬೆಯ ಹಸಿರು ಪರಿಸರ, ಅಲ್ಲಿನ ಹಳೆಯ ಮನೆಗಳು, ಬೀದಿಗಳು ಹಾಗೂ ಮುಗ್ಧ ಸ್ವಾಮಿ ಮತ್ತು ಆತನ ಗೆಳೆಯರ ಕಥೆಗಳು ಒಂದು ಕಾಲದ ಪ್ರೇಕ್ಷಕರನ್ನು ಬಾಲ್ಯದ ನೆನಪುಗಳಿಗೆ ಕರೆದೊಯ್ದಿದ್ದವು. ಇದೀಗ ನಾಲ್ಕು ದಶಕಗಳ ಬಳಿಕ ಅದೇ ಮಾಲ್ಗುಡಿ ಮತ್ತೊಂದು ಕಥೆಯೊಂದಿಗೆ ಮರಳುವ ಸೂಚನೆ ಸಿಕ್ಕಿರುವುದು ಸಹಜವಾಗಿಯೇ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ಹಳೆಯ ನೆನಪುಗಳಿಗೆ ಹೊಸ ಸ್ಪರ್ಶ ನೀಡಲು ‘ಮಾಲ್ಗುಡಿ’ ಮತ್ತೊಮ್ಮೆ ಸಿದ್ಧವಾಗುತ್ತಿದೆಯಾ? ಅಧಿಕೃತ ಘೋಷಣೆ ಹೊರಬರುವವರೆಗೂ ಈ ಕುತೂಹಲಕ್ಕೆ ತೆರೆ ಬೀಳುವುದಿಲ್ಲ.


