Why Ears Hurt During Flight: ನೀವು ವಿಮಾನವನ್ನು ಹತ್ತಿದ ತಕ್ಷಣ ಅಥವಾ ವಿಮಾನದ ಲ್ಯಾಂಡಿಂಗ್ ಸಮಯದಲ್ಲಿ ಕಿವಿಗಳು ಬಂದ್ ಆಗುವುದು, ಕಿವಿಯಲ್ಲಿ ಭಾರ ಅಥವಾ ನೋವಿನ ಅನುಭವ ಆಗುವುದು ತುಂಬಾ ಸಾಮಾನ್ಯವಾಗಿದೆ. ಈ ರೀತಿಯಾಗಿ ನಿಮಗೂ ಆಗಿದ್ಯಾ? ವಿಮಾನ ಟೇಕ್ ಆಫ್ ಆಗುವಾಗ ಅಥವಾ ಲ್ಯಾಂಡಿಂಗ್ ವೇಳೆ ಈ ರೀತಿಯಾಗಿ ಕಿವಿ ನೋವು ಆಗೋದು, ಬಂದ್ ಆಗುವುದು ಯಾಕೆ?

ಫ್ಲೈಟ್ ಟೇಕಾಫ್ ಆದ ತಕ್ಷಣ ಕಿವಿ ಯಾಕೆ ಬಂದ್ ಆಗುತ್ತೆ?

ನಮ್ಮಲ್ಲಿ ಹೆಚ್ಚಿನ ಜನರಿಗೆ, ವಿಮಾನದಲ್ಲಿ ಪ್ರಯಾಣಿಸುವಾಗ ಕಿವಿ ಬಂದ್ ಆಗುವುದು, ಭಾರವಾದಂತೆ ಅಥವಾ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ನಮ್ಮ ದೇಹದ ರಚನೆ ಮತ್ತು ಗಾಳಿಯ ಒತ್ತಡದ ಬದಲಾವಣೆಯಿಂದ ಉಂಟಾಗುತ್ತದೆ. ತಜ್ಞ ವೈದ್ಯರ ಪ್ರಕಾರ ನಮ್ಮ ಕಿವಿಯಲ್ಲಿ ಮೂರು ಪ್ರಮುಖ ಭಾಗಗಳಿವೆ. ಮೊದಲನೆಯದು ಹೊರ ಕಿವಿ, ಎರಡನೆಯದು ಮಧ್ಯ ಕಿವಿ ಮತ್ತು ಮೂರನೆಯದು ಒಳ ಕಿವಿ. ಮಧ್ಯ ಕಿವಿ ಗಾಳಿ ತುಂಬಿರುವ ಒಂದು ಖಾಲಿ ಜಾಗ. ಈ ಗಾಳಿಯ ಒತ್ತಡವು ಹೊರಗಿನ ಗಾಳಿಯ ಒತ್ತಡಕ್ಕೆ ಸಮನಾಗಿರುವುದು ಬಹಳ ಮುಖ್ಯ. ಸಮತೋಲನ ಇಲ್ಲದಿದ್ದರೆ ಕಿವಿಯ ಪರದೆ ಸರಿಯಾಗಿ ಚಲಿಸಲ್ಲ ಮತ್ತು ಕೇಳುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರಬಹುದು. ಮಧ್ಯ ಕಿವಿಯನ್ನು ಮೂಗು ಮತ್ತು ಗಂಟಲಿನ ಹಿಂಭಾಗಕ್ಕೆ ಸಂಪರ್ಕಿಸುವ ಒಂದು ತೆಳುವಾದ ನಾಳಿಯಿದೆ. ಇದನ್ನು ಯೂಸ್ಟೇಶಿಯನ್ ಟ್ಯೂಬ್ (Eustachian Tube) ಎಂದು ಕರೆಯಲಾಗುತ್ತದೆ. ಈ ನಾಳಿ ಹೆಚ್ಚಿನ ಸಮಯ ಮುಚ್ಚಿರುತ್ತದೆ. ಆದರೆ ನುಂಗುವಾಗ, ಆಕಳಿಸುವಾಗ ಅಥವಾ ಅಗಿಯುವಾಗ ಅದು ತೆರೆದುಕೊಳ್ಳುತ್ತದೆ. ಆಗ ಕಿವಿಯ ಒಳಗಿನ ಮತ್ತು ಹೊರಗಿನ ಗಾಳಿಯ ಒತ್ತಡ ಸಮವಾಗುತ್ತದೆ.

ಹಾಗಾದರೆ ಫ್ಲೈಟ್‌ನಲ್ಲಿ ಕಿವಿ ಯಾಕೆ ಬಂದ್ ಆಗುತ್ತದೆ?

ವಿಮಾನ ಟೇಕಾಫ್ ಆದಾಗ ವೇಗವಾಗಿ ಹೆಚ್ಚಿನ ಎತ್ತರಕ್ಕೆ ಸಾಗುತ್ತದೆ. ಎತ್ತರ ಹೆಚ್ಚಾದಂತೆ ಹೊರಗಿನ ಗಾಳಿ ತೆಳುವಾಗುತ್ತದೆ ಮತ್ತು ಗಾಳಿಯ ಒತ್ತಡ ಕಡಿಮೆಯಾಗುತ್ತದೆ. ಆದರೆ ಮಧ್ಯ ಕಿವಿಯೊಳಗಿನ ಗಾಳಿಯ ಒತ್ತಡ ತಕ್ಷಣ ಬದಲಾಗುವುದಿಲ್ಲ. ಯೂಸ್ಟೇಶಿಯನ್ ಟ್ಯೂಬ್ ಅಷ್ಟು ವೇಗವಾಗಿ ಕೆಲಸ ಮಾಡಲು ಸಾಧ್ಯವಾಗದ ಕಾರಣ, ಮಧ್ಯ ಕಿವಿಯೊಳಗಿನ ಒತ್ತಡವು ಹೊರಗಿನ ಒತ್ತಡಕ್ಕಿಂತ ಹೆಚ್ಚಾಗುತ್ತದೆ. ಈ ಹೆಚ್ಚಾದ ಒತ್ತಡದಿಂದ ಗಾಳಿಯು ಹೊರಗೆ ಹೋಗಲು ಪ್ರಯತ್ನಿಸುತ್ತದೆ. ಇದರಿಂದ ಕಿವಿಯ ಪರದೆ ಸ್ವಲ್ಪ ಹೊರಭಾಗಕ್ಕೆ ಉಬ್ಬಬಹುದು. ಪರಿಣಾಮವಾಗಿ ಕಿವಿ ಭಾರವಾದಂತೆ, ಬಂದ್ ಆದಂತೆ ಅನಿಸುತ್ತದೆ.

ಹಲವರಿಗೆ ಇಳಿಯುವಾಗಲೇ ಸಮಸ್ಯೆ ಹೆಚ್ಚಾಗುವುದು ಯಾಕೆ?

ಬಹುತೇಕ ಜನರಲ್ಲಿ ಗಾಳಿ ಸುಲಭವಾಗಿ ಹೊರಗೆ ಹೋಗುವುದರಿಂದ ವಿಮಾನ ಟೇಕಾಫ್ ಸಮಯದಲ್ಲಿ ಕಡಿಮೆ, ಆದರೆ ವಿಮಾನ ಇಳಿಯುವಾಗ ಸಮಸ್ಯೆ ಎದುರಾಗುತ್ತದೆ. ವಿಮಾನ ಕೆಳಕ್ಕೆ ಇಳಿಯಲು ಆರಂಭಿಸಿದಾಗ ಹೊರಗಿನ ಗಾಳಿಯ ಒತ್ತಡ ವೇಗವಾಗಿ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಮಧ್ಯ ಕಿವಿಯೊಳಗಿನ ಒತ್ತಡವು ಹೊರಗಿನ ಒತ್ತಡಕ್ಕಿಂತ ಕಡಿಮೆಯಾಗುತ್ತದೆ. ಹೊರಗಿನ ಹೆಚ್ಚಿನ ಒತ್ತಡದ ಗಾಳಿ ಮಧ್ಯ ಕಿವಿಯೊಳಗೆ ಪ್ರವೇಶಿಸಿ ಒತ್ತಡವನ್ನು ಸಮತೋಲನಗೊಳಿಸಬೇಕಾಗುತ್ತದೆ. ಆದರೆ ಯೂಸ್ಟೇಶಿಯನ್ ಟ್ಯೂಬ್‌ನ ರಚನೆಯಿಂದ ಗಾಳಿಯನ್ನು ಒಳಗೆ ಕಳುಹಿಸುವುದು, ಹೊರಗೆ ಕಳುಹಿಸುವುದಕ್ಕಿಂತ ಸ್ವಲ್ಪ ಕಷ್ಟವಾಗುತ್ತದೆ. ಹೀಗಾಗಿ ಈ ನಾಳಿಯನ್ನು ತೆರೆಯಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಇದರಿಂದ ವಿಮಾನ ಇಳಿಯುವಾಗ ಕಿವಿ ಬಂದ್ ಆಗುವುದು, ನೋವು ಮತ್ತು ಚುಚ್ಚಿದಂತಹ ಅನುಭವ ಉಂಟಾಗುವುದು ಸಾಮಾನ್ಯ.

ಯಾರಿಗೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ?

ಪ್ರತಿಯೊಬ್ಬರ ಯೂಸ್ಟೇಶಿಯನ್ ಟ್ಯೂಬ್ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಸೀನು, ಜ್ವರ, ಸೈನಸ್ ಸಮಸ್ಯೆ ಅಥವಾ ಅಲರ್ಜಿಯ ಕಾರಣದಿಂದ ಮೂಗು ಕಟ್ಟಿಕೊಂಡಿರುವವರಿಗೆ ವಿಮಾನ ಪ್ರಯಾಣದ ವೇಳೆ ಕಿವಿಯಲ್ಲಿ ತೀವ್ರ ನೋವು ಉಂಟಾಗಬಹುದು. ಕೆಲವೊಮ್ಮೆ ಕಿವಿಯ ಪರದೆಯ ಮೇಲೆ ಹೆಚ್ಚಿನ ಒತ್ತಡ ಉಂಟಾದರೆ ಸ್ವಲ್ಪ ರಕ್ತಸ್ರಾವವೂ ಆಗಬಹುದು. ವೈದ್ಯರ ಪ್ರಕಾರ, ಈ ಸಮಸ್ಯೆ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಮಕ್ಕಳ ಯೂಸ್ಟೇಶಿಯನ್ ಟ್ಯೂಬ್ ವಯಸ್ಕರಿಗಿಂತ ಹೆಚ್ಚು ನೇರವಾಗಿಯೂ ಮತ್ತು ತೆಳುವಾಗಿಯೂ ಇರುವುದರಿಂದ ಮಕ್ಕಳಿಗೆ ಕಿವಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ.

ಫ್ಲೈಟ್‌ನಲ್ಲಿ ಕಿವಿ ಬಂದ್ ಆಗುವುದನ್ನು ತಪ್ಪಿಸಿಕೊಳ್ಳಲು ಕೆಲವು ಸರಳ ವಿಧಾನ

ಆಕಳಿಸುವಾಗ ಮತ್ತು ನುಂಗುವಾಗ ಯೂಸ್ಟೇಶಿಯನ್ ಟ್ಯೂಬ್ ತೆರೆಯಲು ಸಹಾಯ ಮಾಡುವ ಸ್ನಾಯುಗಳು ಕೆಲಸ ಮಾಡುತ್ತವೆ. ಆದ್ದರಿಂದ ವಿಮಾನ ಪ್ರಯಾಣದ ವೇಳೆ ಚ್ಯೂಯಿಂಗ್ ಗಮ್ ಅಗಿಯುವುದು ಉತ್ತಮ.

ಪ್ರಯಾಣದ ವೇಳೆ ನೀರು ಅಥವಾ ಜ್ಯೂಸ್ ಕುಡಿಯುತ್ತಾ ಇರುವುದರಿಂದ ಪದೇಪದೇ ನುಂಗಲು ಸಾಧ್ಯವಾಗುತ್ತದೆ. ಇದರಿಂದ ಯೂಸ್ಟೇಶಿಯನ್ ಟ್ಯೂಬ್ ತೆರೆಯಲು ಸಹಾಯವಾಗಬಹುದು.

ಇನ್ನೊಂದು ವಿಧಾನ ವಲ್ಸಾಲ್ವಾ (Valsalva Maneuver). ಇದರಲ್ಲಿ ಎರಡೂ ಬೆರಳುಗಳಿಂದ ಮೂಗನ್ನು ಮುಚ್ಚಿಕೊಂಡು, ಬಾಯಿಯನ್ನೂ ಮುಚ್ಚಬೇಕು. ನಂತರ ನಿಧಾನವಾಗಿ ಮೂಗಿನ ಮೂಲಕ ಗಾಳಿಯನ್ನು ಹೊರಗೆ ಬಿಡಲು ಪ್ರಯತ್ನಿಸಬೇಕು. ಇದರಿಂದ ಮೂಗು ಮತ್ತು ಗಂಟಲಿನ ಹಿಂಭಾಗದಲ್ಲಿ ಒತ್ತಡ ಉಂಟಾಗಿ ಯೂಸ್ಟೇಶಿಯನ್ ಟ್ಯೂಬ್ ತೆರೆಯಲು ಮತ್ತು ಗಾಳಿ ಮಧ್ಯ ಕಿವಿಯೊಳಗೆ ಪ್ರವೇಶಿಸಲು ಸಹಾಯವಾಗುತ್ತದೆ. ಇದನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು.