ಜೈಪುರದ ಜೈಗಢ ಕೋಟೆಯಲ್ಲಿ ಒಂದು ದೊಡ್ಡ ನಿಧಿ ಹುದುಗಿತ್ತು. ತುರ್ತುಪರಿಸ್ಥಿತಿಯ ವೇಳೆ ಇಡೀ ಮಿಲಿಟರಿ ಬಳಸಿ ಅಲ್ಲಿ ಹುಡುಕಾಟ ನಡೆಸಲಾಯತಂತೆ. ಈ ನಿಧಿಯ ಹಿಂದೆ ಶತಮಾನಗಳ ಹಿಂದಿನ ದಂತಕಥೆಯಿದ್ದು, ಮೊಘಲ್ ಚಕ್ರವರ್ತಿ ಅಕ್ಬರ್ ಕಾಲದವರೆಗೆ ಅದು ಹರಡಿತ್ತು. ನಿಧಿ ಸಿಕ್ಕಿದೆಯೇ ಅಥವಾ ಇಲ್ಲವೇ ಎಂಬುದು ಇಂದಿಗೂ ಒಂದು ರಹಸ್ಯ.
ಜೂನ್ 25, 197 ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಅಥವಾ ಎಮರ್ಜೆನ್ಸಿ ಘೋಷಿಸಿದರು. ನಾಗರಿಕ ಹಕ್ಕುಗಳನ್ನು ಅಮಾನತುಗೊಳಿಸಿದರು. ಮೀಡಿಯಾಗಳ ಬಾಯಿ ಮುಚ್ಚಿಸಲಾಯಿತು. ವಿಪಕ್ಷಗಳ ಸಾವಿರಾರು ನಾಯಕರನ್ನು ಜೈಲಿಗೆ ಹಾಕಲಾಯಿತು. ಅವರಲ್ಲಿ ಜೈಪುರದ ರಾಜಮಾತಾ ಗಾಯತ್ರಿ ದೇವಿ ಕೂಡ ಒಬ್ಬರಾಗಿದ್ದರು. ಈಕೆ ಲೋಕಸಭಾ ಚುನಾವಣೆಗಳಲ್ಲಿ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ ಕಾರಣ ಇಂದಿರಾಗೆ ಆಕೆಯ ಮೇಲೆ ಸಿಟ್ಟಿತ್ತು. ವಿದೇಶಿ ಕರೆನ್ಸಿ ಪ್ರಕರಣದಲ್ಲಿ ಗಾಯತ್ರಿ ದೇವಿಯನ್ನು ಬಂಧಿಸಿದರು. ಸ್ವಲ್ಪ ಸಮಯದ ನಂತರ ಮತ್ತೊಂದು ಕಥೆ ಗೊತ್ತಾಯಿತು. ಗಾಯತ್ರಿ ದೇವಿಯನ್ನು ಇಂದಿರಾ ಬಂಧಿಸಿದ್ದು ಬೇರೊಂದೇ ಕಾರಣಕ್ಕೆ. ಜೈಪುರದ ಜೈಗಢ ಕೋಟೆಯಲ್ಲಿ ಒಂದು ಭಾರಿ ನಿಧಿ ಇದೆ ಎಂದು ಅವರಿಗೆ ಗೊತ್ತಾಗಿತ್ತು. ಇದಕ್ಕಾಗಿ ಗಾಯತ್ರಿ ದೇವಿಯನ್ನು ಜೈಲಿನಲ್ಲಿಟ್ಟು, ಇಂದಿರಾ ಗಾಂಧಿಯವರ ನೇತೃತ್ವದಲ್ಲಿ ಸರ್ಕಾರ ಐದು ತಿಂಗಳ ಕಾಲ ನಿಧಿ ಹುಡುಕಾಟ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಸೈನ್ಯ, ಆದಾಯ ತೆರಿಗೆ ಇಲಾಖೆ, ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ ಮತ್ತು ಪೊಲೀಸರು ಎಲ್ಲರೂ ಭಾಗವಹಿಸಿದ್ದರು.
ಈ ನಿಧಿಯ ಹಿಂದೆ ಶತಮಾನಗಳ ಹಿಂದಿನ ದಂತಕಥೆಯಿತ್ತು. ಮೊಘಲ್ ಚಕ್ರವರ್ತಿ ಅಕ್ಬರ್ ಕಾಲದವರೆಗೆ ಅದು ಹರಡಿತ್ತು. 1581ರಲ್ಲಿ ಅಕ್ಬರ್ ತನ್ನ ವಿಶ್ವಾಸಾರ್ಹ ಕಮಾಂಡರ್ ಜೈಪುರದ ರಾಜಾ ಮಾನ್ ಸಿಂಗ್ I ಅವರನ್ನು ವಾಯುವ್ಯ ಗಡಿಗೆ ದಂಡಯಾತ್ರೆಗೆ ಕಳುಹಿಸಿದ್ದ. ಮಾನ್ ಸಿಂಗ್ ಕಾಬೂಲ್ ದಂಡಯಾತ್ರೆಯಿಂದ ಅಪಾರ ಪ್ರಮಾಣದ ಚಿನ್ನ ಮತ್ತು ನಿಧಿಯೊಂದಿಗೆ ಹಿಂದಿರುಗಿದ್ದ. ಅದನ್ನು ಅವನು ರಾಜಸ್ಥಾನದಲ್ಲಿ ಎಲ್ಲೋ ಹೂತಿದ್ದನಂತೆ. ಜೈಗಢ ಹೊರತುಪಡಿಸಿ ಬೇರೆ ಯಾವುದೇ ಕೋಟೆಯಲ್ಲಿ ಹೀಗೆ ಸಂಪತ್ತನ್ನು ಸಂಗ್ರಹಿಸಲು ಸಾಧ್ಯವಿರಲಿಲ್ಲ. ಮಾನ್ ಸಿಂಗ್, ಅಕ್ಬರ್‌ಗೆ ನಿಷ್ಠನಾಗಿದ್ದರೂ, ಚಕ್ರವರ್ತಿಗೆ ನಿಧಿಯ ಬಗ್ಗೆ ತಿಳಿಸಿರಲಿಲ್ಲ.
ಹೀಗಾಗಿ ಈ ಚಿನ್ನದ ನಿಧಿ ಬಹುಶಃ ಅಂಬರ್ ಮತ್ತು ಜೈಗಢ ಕೋಟೆಗಳ ಒಳಗೆ ಹಾಗೂ ಸುತ್ತಲಿನ ನೀರಿನ ಕೆರೆಗಳ ನಡುವೆ, ಅಥವಾ ಭೂಗತ ಕೋಣೆಗಳಲ್ಲಿ ಎಲ್ಲೋ ಹುಗಿಯಲ್ಪಟ್ಟಿರಬೇಕು. ಬ್ರಿಟಿಷ್ ಪರಿಶೋಧಕರು ಸಹ ನಿಧಿಗಾಗಿ ಹುಡುಕಿ ವಿಫಲರಾದರು. ಆದರೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಸುಮ್ಮನಿರದೆ ಹುಡುಕಿಯೇ ಹುಡುಕಿದರು. ಗಾಯತ್ರಿ ದೇವಿ ಐದು ತಿಂಗಳಿಗೂ ಹೆಚ್ಚು ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾಗ, ಜೈಗಢ ಕೋಟೆಯಲ್ಲಿ ಹೆಲಿಕಾಪ್ಟರ್‌ಗಳು ಹಾರಾಡುತ್ತಿದ್ದವು. ಸೇನಾ ಘಟಕಗಳನ್ನು ನಿಯೋಜಿಸಲಾಗಿತ್ತು ಮತ್ತು ಸುತ್ತಮುತ್ತಲಿನ ರಸ್ತೆಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಈ ನಡುವೆ ಇಂದಿರಾ ಅವರ ಮಗ ಸಂಜಯ್ ಗಾಂಧಿ ಕೂಡ ಜೈಗಢ ಕೋಟೆಗೆ ಭೇಟಿ ನೀಡಿದ. ಜೈಗಢ ಕೋಟೆಯನ್ನು ಅಗೆದು ಅಗೆದು ಬಹುತೇಕ ಹಾನಿಗೆಡವಲಾಯಿತು. ಇದರ ಸುದ್ದಿ ಎಲ್ಲಿಯವರೆಗೆ ಹರಡಿತೆಂದರೆ, ಪಾಕಿಸ್ತಾನ ಕೂಡ ಈ ನಿಧಿಯಲ್ಲಿ ಪಾಲು ಬಯಸಿತು. ಆಗಸ್ಟ್ 1976ರಲ್ಲಿ ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರಿಂದ ಇಂದಿರಾ ಗಾಂಧಿಗೆ ಪತ್ರ ಬಂತು- "ನಿಮ್ಮ ಸರ್ಕಾರದ ಆದೇಶದ ಮೇರೆಗೆ ಜೈಪುರದಲ್ಲಿ ಪತ್ತೆಯಾಗುತ್ತಿರುವ ನಿಧಿಯ ಬಗ್ಗೆ ನಾನು ನಿಮಗೆ ಬರೆಯುತ್ತಿದ್ದೇನೆ. ಪಾಕಿಸ್ತಾನವು ಈ ಸಂಪತ್ತಿನಲ್ಲಿ ತನ್ನ ಪಾಲಿನ ಹಕ್ಕನ್ನು ಹೊಂದಿದೆ ಎಂಬುದನ್ನು ನೀವು ಅರಿತುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ..." ಎಂದು ಅವರು ಬರೆದಿದ್ದರು.
1976ರ ನವೆಂಬರ್‌ನಲ್ಲಿ ನಿಧಿಬೇಟೆ ಮುಗಿದ ಕೆಲವೇ ತಿಂಗಳುಗಳ ನಂತರ ಇಂದಿರಾ ಗಾಂಧಿ ಉತ್ತರಿಸಿದರು- "ಪಾಕಿಸ್ತಾನದ ಪರವಾಗಿ ನೀವು ಮಾಡಿದ ಹೇಳಿಕೆಯನ್ನು ಎಚ್ಚರಿಕೆಯಿಂದ ಪರಿಗಣಿಸಲು ನಾನು ನಮ್ಮ ಕಾನೂನು ತಜ್ಞರನ್ನು ಕೇಳಿದ್ದೆ. ಈ ಹೇಳಿಕೆಗೆ ಯಾವುದೇ ಕಾನೂನು ಆಧಾರವಿಲ್ಲ ಎಂದು ಅವರು ಸ್ಪಷ್ಟ ಅಭಿಪ್ರಾಯ ಹೊಂದಿದ್ದಾರೆ. ಪ್ರಾಸಂಗಿಕವಾಗಿ, 'ನಿಧಿ' ಅಸ್ತಿತ್ವದಲ್ಲಿಲ್ಲ ಎಂದು ತಿಳಿದುಬಂದಿದೆ."
ಜೈಗಢ ಕೋಟೆಯಲ್ಲಿ ಯಾವುದೇ ನಿಧಿ ಕಂಡುಬಂದಿಲ್ಲ ಎಂದು ಇಂದಿರಾ ಗಾಂಧಿಗೆ ಅಧಿಕೃತವಾಗಿ ತಿಳಿಸಲಾಯಿತು. ಕೇವಲ 230 ಕೆಜಿ ಬೆಳ್ಳಿ ಕಂಡುಬಂದಿತ್ತಂತೆ. ಅದು ರಾಜಮನೆತನಕ್ಕೆ ಸೇರಿದ್ದಷ್ಟೆ. ಅಂಥ ಹುಡುಕಾಟವೇ ನಡೆಯಲಿಲ್ಲ ಎನ್ನಲಾಯಿತು. ಆದರೂ ಕೆಲವು ಪ್ರಶ್ನೆಗಳು ಉಳಿದವು- 1726ರಲ್ಲಿ ನಿರ್ಮಿಸಲಾದ ಜೈಗಢ ಕೋಟೆಯನ್ನು ಏಕೆ ಅಗೆದು ಹಾಕಲಾಯಿತು? ದೆಹಲಿ-ಜೈಪುರ ಹೆದ್ದಾರಿಯನ್ನು ಒಂದು ದಿನದ ಮಟ್ಟಿಗೆ ಮುಚ್ಚಿದ್ದಕ್ಕೆ ಕಾರಣವೇನು? ಆ ಸಮಯದಲ್ಲಿ ಜೈಪುರದಿಂದ ದೆಹಲಿಗೆ 50-60 ಟ್ರಕ್‌ಗಳು ಚಲಿಸುತ್ತಿದ್ದುದು ಏಕೆ?
Vaastu Shastra: ಪೊರಕೆ, ಅದು ಲಕ್ಷ್ಮೀದೇವಿಯ ಹರಕೆ! ಇತರರಿಗೆ ಕೈಯಲ್ಲಿ ಕೊಡಬೇಡಿ!
ಒಂದು ವಾದದ ಪ್ರಕಾರ, ನಿಧಿಯನ್ನು ಸೇನಾ ಬೆಂಗಾವಲು ಪಡೆಯ ನೆರವಿನಿಂದ ದೆಹಲಿಗೆ ಸಾಗಿಸಲಾಯಿತು. ಲೂಟಿ ಮಾಡಿದ ಈ ನಿಧಿಯನ್ನು ಕರಗಿಸಿ ಬಹುಶಃ ಸ್ವಿಸ್ ಬ್ಯಾಂಕುಗಳಿಗೆ ಸಾಗಿಸಲಾಗಿದೆ ಅಥವಾ ಸದ್ದಿಲ್ಲದೆ ಬಳಸಲಾಗಿದೆ. ಇದು ಯಾರೋ ಹರಡಿದ ಗಾಸಿಪ್. ಇದರಲ್ಲಿ ಸತ್ಯವೆಷ್ಟಿದೆಯೋ ತಿಳಿಯದು.
ಗಾಯತ್ರಿ ದೇವಿ ಸ್ವತಃ ನಿಧಿಗೆ ಸಂಬಂಧಿಸಿದಂತೆ ಇದ್ದ ಒಂದು ಶಾಪದ ಬಗ್ಗೆ ಸುಳಿವು ನೀಡಿದ್ದಾರೆ. ಸಂದರ್ಶನಗಳಲ್ಲಿ ಅವರು ಸಂಜಯ್ ಗಾಂಧಿ ಮತ್ತು ಇಂದಿರಾ ಗಾಂಧಿಯವರ ಸಾವಿಗೆ ಆ ನಿಧಿ ಕಾರಣ ಇರಬಹುದು ಎಂಬ ಸೂಚನೆ ನೀಡಿದ್ದರು. "ಜೈಗಢ ಕೋಟೆಯ ನಿಧಿಯನ್ನು ಲೂಟಿ ಮಾಡಿದ ಪ್ರಮುಖ ವ್ಯಕ್ತಿಗಳು ವೈಯಕ್ತಿಕ ದುರಂತವನ್ನು ಎದುರಿಸಿದ್ದಾರೆ" ಎಂದು ಅವರು ಹೇಳಿದ್ದರು. ಇದೆಲ್ಲವೂ ಯಾರೂ ಅಧಿಕೃತಗೊಳಿಸಿಲ್ಲದ, ಹಾಗೆ ನಿಜವೆಂದು ಸಾಧಿಸಲೂ ಆಗದ, ಸುಳ್ಳೆಂದು ವಾದಿಸಲೂ ಆಗದ ಸಂಗತಿಗಳು.
Sudarshana Chakra: ಮಹಾವಿಷ್ಣುವಿನ ಕೈಯಲ್ಲಿನ ಸುದರ್ಶನ ಚಕ್ರ ಯಾಕೆ ಸದಾ ತಿರುಗುತ್ತಲೇ ಇರುತ್ತದೆ?
