ರೈಲಿನಲ್ಲಿ ಉಚಿತ ಪ್ರಯಾಣಕ್ಕಾಗಿ ಯುವಕನೊಬ್ಬ ವಿಶೇಷಚೇತನ ವ್ಯಕ್ತಿಯಂತೆ ನಟಿಸಿ, ರೈಲಿನಿಂದ ಇಳಿದ ನಂತರ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.

ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುವುದಕ್ಕಾಗಿ ಕೆಲವರು ಏನೇನೋ ಟ್ರಿಕ್‌ಗಳನ್ನು ಮಾಡುತ್ತಾರೆ. ರೈಲಿನಲ್ಲಿ ನಡೆಯುವ ಹಲವು ಅವಾಂತರಗಳ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವರು ಬುಕ್ ಆಗಿರುವ ಬೇರೆಯವರ ಸೀಟುಗಳಲ್ಲಿ ಕುಳಿತು ಅವರನ್ನೇ ದಬಾಯಿಸುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸುವುದಕ್ಕಾಗಿ ವಿಶೇಷಚೇತನ ವ್ಯಕ್ತಿಯಂತೆ ವರ್ತಿಸಿದ್ದು, ರೈಲಿನಿಂದ ಇಳಿದ ಕೂಡಲೇ ಸಹಜವಾದ ಸಾಮಾನ್ಯ ವ್ಯಕ್ತಿಯಂತೆ ಆತ ನಡೆದುಕೊಂಡು ಹೋಗುತ್ತಿರುವುದು ವೈರಲ್ ಆಗಿದೆ.

ಭಾರತದಲ್ಲಿ ವಿಶೇಷಚೇತನರು, ದುರ್ಬಲರಿಗೆ ಇರುವ ಸವಲತ್ತುಗಳನ್ನು ಸಶಕ್ತರು ಬಳಸಿಕೊಳ್ಳುವುದು ಹೊಸದೇನಲ್ಲ. ಅದೇ ರೀತಿ ಇಲ್ಲಿ ಈತ ಕೈ ಕಾಲು ನೆಟ್ಟಗೇ ಇದ್ದರೂ ಅಂಗವಿಕಲನಂತೆ ವರ್ತಿಸಿದ್ದಾನೆ. ವಿಶೇಷಚೇತನ ವ್ಯಕ್ತಿಯಂತೆ ಕೈಕಾಲುಗಳನ್ನು ಸೊಟ್ಟಗೆ ಮಾಡಿಕೊಂಡು ರೈಲಿನಿಂದ ಇಳಿಯುವ ಈತ ಪ್ಲಾಟ್‌ಫಾರ್ಮ್‌ಗೆ ಬಂದ ಮೇಲೆ ನೆಟ್ಟಗೆ ಸಾಮಾನ್ಯನಂತೆ ನಡೆದು ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.

ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಯುವಕನ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದ್ದಾರೆ. ಈತನದ್ದು, ಆಸ್ಕರ್ ಪ್ರಶಸ್ತಿ ಗೆಲ್ಲಬಹುದಾದಂತಹ ನಟನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈತನನ್ನು ಹಿಡಿದು ಈತನ ವಿರುದ್ಧ ಭಾರಿ ಮೊತ್ತದ ದಂಡ ವಿಧಿಸುವಂತೆ ಅನೇಕರು ಆಗ್ರಹಿಸಿದ್ದಾರೆ. ಮತ್ತೆ ಕೆಲವರು ಈತನ ನಟನೆಯನ್ನು ಮೆಚ್ಚಿದ್ದು, ಈತನಿಗೆ ಇಂಡಿಯಾ ಗಾಟ್ ಟಾಲೆಂಟ್‌ನಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ಕಾರಣಕ್ಕೆ ಸವಲತ್ತುಗಳು ಸಿಗಬೇಕಾದವರಿಗೆ ಸಿಗುತ್ತಿಲ್ಲ ಎಂದು ಅನೇಕರು ಈತನಿಗೆ ಬೈದಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

View post on Instagram