ರೈಲಿನಲ್ಲಿ ಪ್ರತಿ ದಿನ ಲಕ್ಷಾಂತರ ಮಂದಿ ಪ್ರಯಾಣ ಬೆಳೆಸ್ತಾರೆ. ಆದ್ರೆ ಅನೇಕರಿಗೆ ರೈಲ್ವೆ ಇಲಾಖೆ ನಿಯಮ ತಿಳಿದಿಲ್ಲ. ರೈಲಿನಲ್ಲಿ ಕೆಲ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ನಿತ್ಯ ಬಳಸುವ ಒಂದು ಕಾಯಿ ಕೂಡ ನಿಷಿದ್ಧ
ಭಾರತೀಯ ರೈಲ್ವೆ (Indian Railways), ಪ್ರಯಾಣಿಕರ ಸುರಕ್ಷತೆಗಾಗಿ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬ ಪ್ರಯಾಣಿಕರು ಈ ನಿಯಮಗಳನ್ನು ಪಾಲಿಸ್ಬೇಕು. ರೈಲಿನಲ್ಲಿ ಪ್ರಯಾಣ ಬೆಳೆಸುವಾಗ ಕೆಲ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಅಪಾಯಕಾರಿ ವಸ್ತುಗಳಲ್ಲದೆ ಒಂದು ದಿನಬಳಕೆ ಕಾಯಿ ಕೂಡ ರೈಲಿನಲ್ಲಿ ನಿಷಿದ್ಧ. ನಾವಿಂದು ಯಾವ ಕಾಯಿಯನ್ನು ರೈಲಿನಲ್ಲಿ ತೆಗೆದುಕೊಂಡು ಹೋಗ್ಬಾರದು ಎಂಬ ಮಾಹಿತಿ ನೀಡ್ತೇವೆ.
ರೈಲಿನಲ್ಲಿ ತೆಂಗಿನಕಾಯಿ (coconut) ನಿಷಿದ್ಧ : ರೈಲಿನಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗುವಂತಿಲ್ಲ. ತೆಂಗಿನಕಾಯಿ ಒಣಗಿರಲಿ ಅಥವಾ ನೀರಿರಲಿ, ಸಿಪ್ಪೆ ಸುಲಿದಿರಲಿ ಅಥವಾ ಸಿಪ್ಪೆ ತೆಗೆಯದೇ ಇರಲಿ ಅದನ್ನು ರೈಲಿನಲ್ಲಿ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಇದನ್ನು ಹೊರತುಪಡಿಸಿ ಬೇರೆ ಎಲ್ಲ ರೀತಿಯ ಹಣ್ಣಗಳನ್ನು ನೀವು ರೈಲಿನಲ್ಲಿ ತೆಗೆದುಕೊಂಡು ಹೋಗ್ಬಹುದು.
ತೆಂಗಿನಕಾಯಿಯನ್ನು ಏಕೆ ನಿಷೇಧಿಸಲಾಗಿದೆ? : ಒಣ ತೆಂಗಿನಕಾಯಿಯ ಹೊರಭಾಗದಲ್ಲಿ ನಾರಿರುತ್ತದೆ. ಇದನ್ನು ಸುಡುವ ಪದಾರ್ಥ ಎಂದು ಪರಿಗಣಿಸಲಾಗಿದೆ. ಈ ಭಾಗವು ಬೆಂಕಿಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ತೆಂಗಿನ ಕಾಯಿಯನ್ನು ರೈಲಿನಲ್ಲಿ ಸಾಗಿಸುವುದು ನಿಷಿದ್ಧ.
ರೈಲಿನಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋದ್ರೆ ದಂಡ ಎಷ್ಟು? : ಭಾರತೀಯ ರೈಲ್ವೆ ನಿಯಮದ ಪ್ರಕಾರ, ಪ್ರಯಾಣಿಕನೊಬ್ಬ ರೈಲಿನಲ್ಲಿ ನಿಷೇಧಿತ ವಸ್ತುಗಳೊಂದಿಗೆ ಪ್ರಯಾಣಿಸುತ್ತಿರುವುದು ಕಂಡುಬಂದರೆ, ರೈಲ್ವೆ ಇಲಾಖೆ ಆತನ ವಿರುದ್ಧ ಕ್ರಮ ಕೈಗೊಳ್ಳಬಹುದು. ಪ್ರಯಾಣಿಕನಿಗೆ 1,000 ರೂಪಾಯಿ ದಂಡ ಇಲ್ಲವೆ 3 ವರ್ಷಗಳ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು. ನಿಷೇಧಿತ ವಸ್ತುಗಳಿಂದ ರೈಲ್ವೆ ಆಸ್ತಿಗೆ ಯಾವುದೇ ಹಾನಿ ಸಂಭವಿಸದಿರಲಿ, ಪ್ರಯಾಣಿಕರ ಸಾವು – ನೋವಾಗದಿರಲಿ ಎನ್ನುವ ಕಾರಣಕ್ಕೆ ರೈಲ್ವೆ ಇಲಾಖೆ ಈ ಕ್ರಮ ತೆಗೆದುಕೊಳ್ಳುತ್ತದೆ.
ರೈಲಿನಲ್ಲಿ ಈ ಎಲ್ಲ ವಸ್ತುವೂ ನಿಷೇಧ : ರೈಲಿನಲ್ಲಿ ಪಟಾಕಿಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ದೀಪಾವಳಿಯ ಸಮಯದಲ್ಲಿ, ರೈಲಿನಲ್ಲಿ ಪಟಾಕಿಗಳನ್ನು ಪ್ರಯಾಣಿಕರು ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸ್ತಾರೆ. ಆದ್ರೆ ಸ್ಫೋಟಕ್ಕೆ ಕಾರಣವಾಗುವ ಯಾವುದೇ ವಸ್ತುಗಳನ್ನು ರೈಲಿನಲ್ಲಿ ಸಾಗಿಸಬಾರದು. ಒಂದ್ವೇಳೆ ನೀವು ಪಟಾಕಿ ತೆಗೆದುಕೊಂಡು ಹೋಗ್ತಿದ್ದರೆ ನಿಮಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
ಇಷ್ಟೇ ಅಲ್ಲ ರೈಲಿನಲ್ಲಿ ನೀವು ಸ್ಟೌವ್ ಅಥವಾ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಹೋಗ್ಬಾರದು. ಭಾರತೀಯರಿಗೆ ರೈಲು ಅತ್ಯುತ್ತಮ ಸಾರಿಗೆಯಾಗಿದೆ. ದೂರದ ಪ್ರಯಾಣಕ್ಕೆ ಜನರು ರೈಲನ್ನು ಆಯ್ಕೆ ಮಾಡಿಕೊಳ್ತಾರೆ. ಒಂದ್ಕಡೆಯಿಂದ ಇನ್ನೊಂದು ಕಡೆ ಸಂಸಾರ ಸಾಗಿಸುವ ಅನೇಕ ಕುಟುಂಬಗಳು ತಮ್ಮ ಮನೆಯ ಸಾಮಾನುಗಳನ್ನು ರೈಲಿನಲ್ಲಿ ಸಾಗಿಸೋದಿದೆ. ಆದ್ರೆ ಜನರು ತಮ್ಮೊಂದಿಗೆ ಒಲೆ ಅಥವಾ ಗ್ಯಾಸ್ ಸಿಲಿಂಡರ್ ಕೊಂಡೊಯ್ಯಬಾರದು. ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದರೆ, ಜೈಲು ಶಿಕ್ಷೆಯಾಗಬಹುದು. ರೈಲು ಪ್ರಯಾಣದ ಸಮಯದಲ್ಲಿ ನೀವು ಗ್ಯಾಸ್ ಸಿಲಿಂಡರ್ ಕೊಂಡೊಯ್ಯಲು ಬಯಸಿದರೆ, ನೀವು ಅದನ್ನು ಬ್ರೇಕ್ವಾನ್ನಲ್ಲಿ ಬುಕ್ ಮಾಡಬೇಕಾಗುತ್ತದೆ. ಇದರ ನಂತರವೇ ನೀವು ಖಾಲಿ ಸಿಲಿಂಡರ್ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು.
ಮದ್ಯಪಾನ ನಿಷೇಧ : ಪ್ರಯಾಣಿಕರ ಸುರಕ್ಷತೆಗಾಗಿ ಇಲಾಖೆ ಮತ್ತಷ್ಟು ನಿಯಮ ಜಾರಿಗೆ ತಂದಿದೆ. ಅದ್ರ ಪ್ರಕಾರ, ರೈಲಿನಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ಪ್ರಯಾಣಿಕರು ಮದ್ಯ ಸೇವಿಸಿದ ನಂತರ ಅಥವಾ ಕುಡಿದ ಸ್ಥಿತಿಯಲ್ಲಿ ರೈಲಿನಲ್ಲಿ ಪ್ರಯಾಣಿಸುವಂತಿಲ್ಲ. ಇದಕ್ಕಾಗಿ 1989 ರ ರೈಲ್ವೆ ಕಾಯ್ದೆಯ ಸೆಕ್ಷನ್ 165 ರ ಅಡಿಯಲ್ಲಿ ಕಠಿಣ ಕಾನೂನುಗಳನ್ನು ಮಾಡಲಾಗಿದೆ. ಮದ್ಯಪಾನ ಮಾಡಿದ ವ್ಯಕ್ತಿಯ ಟಿಕೆಟ್ ರದ್ದುಗೊಳಿಸಲಾಗುತ್ತದೆ. 6 ತಿಂಗಳ ಜೈಲು ಶಿಕ್ಷೆ ಮತ್ತು 500 ರೂಪಾಯಿ ದಂಡ ಕೂಡ ವಿಧಿಸಬಹುದು.
