Vande Bharat vs Amrut Bharat: ವಂದೇ ಭಾರತ್ ಅಥವಾ ಅಮೃತ್ ಭಾರತ್? ನಿಮ್ಮ ಮುಂದಿನ ಪ್ರಯಾಣಕ್ಕೆ ಯಾವ ರೈಲು ಬೆಸ್ಟ್? ಇವೆರಡರ ನಡುವಿನ ತಂತ್ರಜ್ಞಾನ, ಸೌಲಭ್ಯ ಮತ್ತು ಬಜೆಟ್ ವ್ಯತ್ಯಾಸಗಳ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ಕೇಂದ್ರ ಸರ್ಕಾರ ವೇಗವಾಗಿ ಹೆಜ್ಜೆ ಹಾಕುತ್ತಿದೆ. ಇದರ ಭಾಗವಾಗಿಯೇ ದೇಶದಲ್ಲಿ ಮೂಲಸೌಕರ್ಯಗಳನ್ನು ಹೈ-ಸ್ಪೀಡ್‌ನಲ್ಲಿ ಅಪ್‌ಗ್ರೇಡ್ ಮಾಡುತ್ತಿದೆ. ವಿಶೇಷವಾಗಿ ದೇಶದ ವಿವಿಧ ರಾಜ್ಯಗಳ ನಡುವೆ ರೈಲ್ವೆ ಸಂಪರ್ಕವನ್ನು ಸುಧಾರಿಸಲು ಕೇಂದ್ರ ಸರ್ಕಾರ ಪ್ರಮುಖ ಬದಲಾವಣೆಗಳನ್ನು ತಂದಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರಿಗೆ ಹೈ-ಸ್ಪೀಡ್ ಪ್ರಯಾಣವನ್ನು ಒದಗಿಸುವ ಉದ್ದೇಶದಿಂದ 'ವಂದೇ ಭಾರತ್' ಮತ್ತು 'ಅಮೃತ್ ಭಾರತ್' ಎಂಬ ಎರಡು ವಿಶೇಷ ರೈಲುಗಳನ್ನು ತರಲಾಗಿದೆ. ಇವೆರಡೂ ಇತ್ತೀಚೆಗೆ ಬಂದ ರೈಲುಗಳೇ ಆಗಿದ್ದರೂ, ಇವುಗಳ ನಡುವಿನ ವ್ಯತ್ಯಾಸವೇನು? ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಮ್ಮ ಪ್ರಯಾಣಕ್ಕೆ ಯಾವ ರೈಲು ಉತ್ತಮ ಎಂಬುದನ್ನು ಇಲ್ಲಿ ತಿಳಿಯೋಣ.

ವಂದೇ ಭಾರತ್

ಹೈ-ಸ್ಪೀಡ್, ಐಷಾರಾಮಿ ಪ್ರಯಾಣ ಬಯಸುವ ಪ್ರಯಾಣಿಕರಿಗಾಗಿ ತಂದ ರೈಲು ಇದು. 'ಮೇಕ್ ಇನ್ ಇಂಡಿಯಾ' ಅಭಿಯಾನದ ಭಾಗವಾಗಿ ಭಾರತದಲ್ಲೇ ತಯಾರಾದ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತ್ಯೇಕ ಇಂಜಿನ್ ಬದಲಿಗೆ 'ಇಂಟಿಗ್ರೇಟೆಡ್ ಸೆಮಿ ಹೈ-ಸ್ಪೀಡ್ ಟ್ರೈನ್‌ಸೆಟ್' ಎಂಬ ತಂತ್ರಜ್ಞಾನದೊಂದಿಗೆ ಚಲಿಸುತ್ತದೆ. ಅಂದರೆ 'ಡಿಸ್ಟ್ರಿಬ್ಯೂಟೆಡ್ ಪವರ್ ಸಿಸ್ಟಮ್' ಈ ರೈಲು ವೇಗವಾಗಿ ಚಲಿಸಲು ಪಿಕಪ್ ನೀಡುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ದೂರ ಪ್ರಯಾಣಿಸಲು ಇಚ್ಛಿಸುವವರಿಗೆ ಈ ರೈಲು ತುಂಬಾ ಅನುಕೂಲಕರವಾಗಿದೆ.

ಈ ವಂದೇ ಭಾರತ್ ರೈಲು ಹೈಟೆಕ್ ಪ್ರಯಾಣ ಸೌಲಭ್ಯಗಳನ್ನು ಹೊಂದಿದೆ. ಈ ರೈಲು ಸಂಪೂರ್ಣವಾಗಿ ಎಸಿ (AC) ಕೋಚ್‌ಗಳನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲದೆ, ಇದರಲ್ಲಿ ಪೂರ್ತಿ ಆಟೋಮ್ಯಾಟಿಕ್ ಪ್ಲಗ್ ಡೋರ್‌ಗಳು, ಆರಾಮದಾಯಕವಾದ ರೊಟೇಟಿಂಗ್ ಸೀಟುಗಳು ಇರುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಯೋ-ವ್ಯಾಕ್ಯೂಮ್ ಟಾಯ್ಲೆಟ್‌ಗಳು ಮತ್ತು ಭದ್ರತೆಗಾಗಿ 'ಕವಚ್' ಸೇಫ್ಟಿ ಸಿಸ್ಟಮ್ ಕೂಡ ಇರುತ್ತದೆ. ಈ ರೈಲು ಪ್ರಯಾಣಿಕರಿಗೆ ಪ್ರೀಮಿಯಂ ಅನುಭವದ ಜೊತೆಗೆ ವೇಗದ ಪ್ರಯಾಣವನ್ನು ಒದಗಿಸುತ್ತದೆ. ವೇಗ ಮತ್ತು ಸೌಕರ್ಯವನ್ನು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಅಮೃತ್ ಭಾರತ್

ಸಾಮಾನ್ಯ ಜನರಿಗೂ ಆರಾಮದಾಯಕ ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ತಂದ ರೈಲೇ ಈ 'ಅಮೃತ್ ಭಾರತ್ ಎಕ್ಸ್‌ಪ್ರೆಸ್'. ಸಾಮಾನ್ಯವಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಏಕೆಂದರೆ ದೂರದ ಪ್ರದೇಶಗಳಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ರೈಲು ಮಾತ್ರ ಸೂಕ್ತ. ಆದರೆ ಸಾಮಾನ್ಯ ಜನರಿಗೂ ಸೂಪರ್ ಫಾಸ್ಟ್ ಪ್ರಯಾಣದ ಅನುಭವ ನೀಡಲು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೂಪಿಸಲಾಗಿದೆ. ಮುಂದೆ ಮತ್ತು ಹಿಂದೆ ಎರಡು ಇಂಜಿನ್‌ಗಳನ್ನು ಹೊಂದಿರುವ 'ಪುಶ್-ಪುಲ್' (Push-Pull) ತಂತ್ರಜ್ಞಾನದೊಂದಿಗೆ ಚಲಿಸುವ ಈ ರೈಲು ಗಂಟೆಗೆ 110-130 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ನಮಗೆ ಎಸಿ ಬೇಡ, ಕಡಿಮೆ ವೆಚ್ಚದಲ್ಲಿ ಸುರಕ್ಷಿತ ಪ್ರಯಾಣ ಬೇಕು ಎನ್ನುವ ಪ್ರಯಾಣಿಕರಿಗೆ ಈ ರೈಲು ಪರ್ಫೆಕ್ಟ್ ಆಗಿರುತ್ತದೆ. ಈ ಅಮೃತ್ ಭಾರತ್ ರೈಲಿನಲ್ಲಿ ಎರಡು ರೀತಿಯ ಕೋಚ್‌ಗಳು ಲಭ್ಯವಿರುತ್ತವೆ. ಒಂದು ಸ್ಲೀಪರ್ ಮತ್ತು ಇನ್ನೊಂದು ಜನರಲ್ ನಾನ್-ಎಸಿ. ಆದಾಗ್ಯೂ ಈ ಕೋಚ್‌ಗಳಲ್ಲಿ ಆಧುನಿಕ ಕುಶನ್ ಸೀಟುಗಳು, ಮೊಬೈಲ್ ಚಾರ್ಜಿಂಗ್ ಪೋರ್ಟ್‌ಗಳು, ಸೀಲ್ಡ್ ಗ್ಯಾಂಗ್‌ವೇಗಳು ಇರುತ್ತವೆ. ಅಷ್ಟೇ ಅಲ್ಲದೆ, ಜರ್ಕ್ (ಧಕ್ಕೆ) ಇಲ್ಲದೆ ಆರಾಮವಾಗಿ ಪ್ರಯಾಣಿಸಲು ಸೆಮಿ-ಆಟೋಮ್ಯಾಟಿಕ್ ಕಪ್ಲರ್‌ಗಳು, ಕ್ರಾಶ್ ಟ್ಯೂಬ್‌ಗಳು ಮತ್ತು ಸಿಸಿಟಿವಿ ಸುರಕ್ಷತೆಯೂ ಈ ರೈಲಿನಲ್ಲಿರುತ್ತದೆ.

ನಿಮ್ಮ ಪ್ರಯಾಣಕ್ಕೆ ಯಾವ ರೈಲು ಬೆಸ್ಟ್? 

ಈ ಎರಡು ರೈಲುಗಳಲ್ಲಿ ಅತ್ಯಾಧುನಿಕ ಫೀಚರ್ಸ್‌ ಮತ್ತು ಸುರಕ್ಷತೆಯ ವಿಷಯದಲ್ಲಿ ದೊಡ್ಡ ವ್ಯತ್ಯಾಸಗಳಿಲ್ಲದಿದ್ದರೂ ಬಜೆಟ್ ಮತ್ತು ವೇಗದಲ್ಲಿ ಮಾತ್ರ ಬದಲಾವಣೆಗಳಿರುತ್ತವೆ. ಒಂದು ವೇಳೆ ನೀವು ಕಡಿಮೆ ಬಜೆಟ್‌ನಲ್ಲಿ ದೂರದ ಪ್ರಯಾಣ ಮಾಡಬೇಕೆಂದಿದ್ದರೆ ಅಮೃತ್ ಭಾರತ್ ಬೆಸ್ಟ್ ಚಾಯ್ಸ್ ಆಗಿರುತ್ತದೆ. ಅದೇ ಸಮಯದಲ್ಲಿ ಪ್ರೀಮಿಯಂ ದರದೊಂದಿಗೆ ಕಡಿಮೆ ಸಮಯದಲ್ಲಿ ವಿಲಾಸಯುತವಾದ ಇಂಟರ್-ಸಿಟಿ ಪ್ರಯಾಣ ಮಾಡಬೇಕೆಂದಿದ್ದರೆ ನಿಮಗೆ ವಂದೇ ಭಾರತ್ ಬೆಸ್ಟ್ ಚಾಯ್ಸ್ ಆಗಿರುತ್ತದೆ.