ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಗುರುತಿಸಲಾದ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ದೇಶಾದ್ಯಂತ ಕೇವಲ ಶೇ. 19ರಷ್ಟು ಮಾತ್ರ ಪೂರ್ಣಗೊಂಡಿದೆ. ಕರ್ನಾಟಕದಲ್ಲಿ 61 ನಿಲ್ದಾಣಗಳ ಪೈಕಿ 12 ಪೂರ್ಣಗೊಂಡಿದ್ದು, ಬೆಂಗಳೂರಿನ ಪ್ರಮುಖ ನಿಲ್ದಾಣಗಳಲ್ಲಿ ಕಾಮಗಾರಿ ಬಾಕಿ ಇದೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆ (ಎಬಿಎಸ್ ಎಸ್) ಅಡಿಯಲ್ಲಿ ಅಭಿವೃದ್ಧಿಗೆ ಗುರುತಿಸಲಾದ ರೈಲು ನಿಲ್ದಾಣಗಳಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ಕೇವಲ ಶೇ. 19 ರಷ್ಟು ನಿಲ್ದಾಣಗಳ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಸಂಸದ ಮನ್ಸೂರ್ ಆಲಿ ಖಾನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಬಿಎಸ್‌ಎಸ್ ಅಡಿಯಲ್ಲಿ ಅಭಿವೃದ್ಧಿಗೆ ಗುರುತಿಸಲಾದ ರಾಜ್ಯದ 61 ನಿಲ್ದಾಣಗಳ ಪೈಕಿ 12 ಹಾಗೂ ದೇಶಾದ್ಯಂತ 1,340 ನಿಲ್ದಾಣಗಳ ಪೈಕಿ 261 ನಿಲ್ದಾಣಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.
2022 ರ ಡಿಸೆಂಬರ್ ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿದ್ದರೂ ಅನುಷ್ಠಾನ ನಿರೀಕ್ಷಿತ ವೇಗಕ್ಕಿಂತ ಬಹಳ ನಿಧಾನವಾಗಿ ಸಾಗುತ್ತಿದೆ ಎಂಬುದು ಸಚಿವರ ಉತ್ತರದಿಂದ ಬಹಿರಂಗವಾಗಿದೆ ಎಂದು ಮನ್ಸೂರ್ ಆಲಿ ಖಾನ್ ಹೇಳಿದ್ದಾರೆ.
ರಾಜ್ಯದ ಅಳ್ನಾವರ, ಬಾದಾಮಿ, ಬಾಗಲಕೋಟೆ, ಬಂಟ್ವಾಳ, ಧಾರವಾಡ, ಗದಗ, ಗೋಕಾಕ್ ರೋಡ್, ಹೊಸಪೇಟೆ, ಕೊಪ್ಪಳ, ಮುನಿರಾಬಾದ್, ರಾಣಿಬೆನ್ನೂರು ಮತ್ತು ಸುಬ್ರಹ್ಮಣ್ಯ ರೋಡ್ ಪೂರ್ಣಗೊಂಡ ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಸೇರಿವೆ.
ಬೆಂಗಳೂರಿನ ಪ್ರಮುಖ ಎರಡು ನಿಲ್ದಾಣಗಳಾದ ಕ್ಯಾಂಟೋನ್ಮೆಂಟ್ ಮತ್ತು ಯಶವಂತಪುರದಲ್ಲಿ ಹೊಸ ನಿಲ್ದಾಣ ಕಟ್ಟಡಗಳು ಸೇರಿದಂತೆ ಎಬಿಎಸ್‌ಎಸ್ ಅಡಿಯಲ್ಲಿ ಪ್ರಮುಖ ಕಾಮಗಾರಿಗಳು ಇನ್ನೂ ಬಾಕಿ ಇವೆ. ಕೆಎಸ್‌ಆರ್ ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳು ಮರುಅಭಿವೃದ್ಧಿಗೆ ಗುರುತಿಸಲಾದ ಪಟ್ಟಿಯಲ್ಲಿದ್ದರೂ ಸಚಿವರು ಉತ್ತರದಲ್ಲಿ ಈ ನಿಲ್ದಾಣಗಳ ಕಾಮಗಾರಿಯ ಪ್ರಗತಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ ಎಂದು ಮನ್ಸೂರ್ ಆಲಿಖಾನ್ ತಿಳಿಸಿದ್ದಾರೆ.
ಅರಸಾಳು ರೈಲು ನಿಲ್ದಾಣಕ್ಕೆ ಸೌಲಭ್ಯ ಒದಗಿಸಲು ಸೂಚನೆ
ರಿಪ್ಪನ್‍ಪೇಟೆ: ಸಮೀಪದ ಅರಸಾಳು ರೈಲ್ವೆ ನಿಲ್ದಾಣಕ್ಕೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಶನಿವಾರ ಭೇಟಿ ನೀಡಿ ನಿಲ್ದಾಣದ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸುವುದರೊಂದಿಗೆ ನಿಲ್ದಾಣದ ಬಳಿಯಲ್ಲಿರುವ ಮಾಲ್ಗುಡಿ ಮ್ಯೂಸಿಯಂ ವೀಕ್ಷಿಸಿದರು.
ಅರಾಳು ರೈಲ್ವೆ ನಿಲ್ದಾಣದಲ್ಲಿನ ಶುಚಿತ್ವ. ಪ್ರಯಾಣಿಕರಿಗೆ ಕುಡಿಯುವ ನೀರು, ನಿರ್ವಹಣೆ ಹಾಗೂ ಮೂಲಸೌಕರ್ಯಗಳ ಕೊರತೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುದಿತ್ ಮಿತ್ತಲ್ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದ್ದು ಈ ಕುರಿತು ಸಂಬಂಧಪಟ್ಟ ಆಧಿಕಾರಿಗಳಿಗೆ ಕೂಡಲೇ ಪರಿಹರಿಸುವಂತೆ ಅದೇಶಿಸಲಾಗಿದೆ. ಆದಷ್ಟು ಬೇಗ ರೈಲ್ವೆ ಪ್ರಯಾಣಿಕರ ಮೂಲ ಸಮಸ್ಯೆಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಲೆನಾಡಿನ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿರುವ ಆರಸಾಳು ನಿಲ್ದಾಣ ಮತ್ತು ಮಾಲ್ಗುಡಿ ಮ್ಯೂಸಿಯಂನಲ್ಲಿ ಸಮರ್ಪಕ ನಿರ್ವಹಣೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಮ್ಯೂಸಿಯಂ ಅಭಿವೃದ್ದಿಗೆ ರೈಲ್ವೆ ಇಲಾಖೆ ಹೆಚ್ಚಿನ ಅಧ್ಯತೆ ನೀಡದಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮಾಲ್ಗುಡಿ ಮ್ಯೂಸಿಯಂ ಅಭಿವೃದ್ಧಿಗಾಗಿ ಅಗತ್ಯ ಹೆಚ್ಚಿನ ಆನುದಾನದ ಬೇಡಿಕೆಯನ್ನು ಈಗಾಗಲೇ ಸಲ್ಲಿಸಲಾಗಿದೆ.ಅನುದಾನ ಬಿಡುಗಡೆಯಾದ ಬಳಿಕ ಮ್ಯೂಸಿಯಂಯನ್ನು ಅಗತ್ಯ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿದರು.
ರೈಲ್ವೆ ಇಲಾಖೆಯ ಮುಖ್ಯ ಕಾರ್ಯ ರೈಲುಗಳ ಸಂಚಾರವನ್ನು ನಿರ್ವಹಿಸುವುದಾಗಿದೆ.ಸೇರಿದಂತೆ ಇತರೆ ಸ್ಥಳೀಯ ಅಭಿವೃದ್ದಿ ಕಾರ್ಯಗಳ ಬಗ್ಗೆ ರಾಜ್ಯ ಸರ್ಕಾರಗಳು ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಚಿಂತಿಸಿ ಕ್ರಮ ಕೈಗೊಳ್ಳಬೇಕು ಇಲಾಖೆಯು ಸಹಕರಿಸಲಿದೆ ಎಂದು ಆಭಿಪ್ರಾಯಪಟ್ಟರು.
ನಂತರ ಅರಸಾಳು ರೈಲ್ವೆ ನಿಲ್ದಾಣದ ಪರಿಶೀಲಿಸಿದ ಮುದಿತ್ ಮುತ್ತಲ್ ನಿಲ್ದಾಣದಲ್ಲಿರುವ ಮಾಲ್ಗುಡಿ ಚಾಯ್ ಕೇಂದ್ರಕ್ಕೆ ಭೇಟಿ ಚಹಾ ಸವಿದರು.
ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಆರ್.ಪಿ.ಎಫ್, ಉಸ್ತುವಾರಿ ಕೊಂಡರೆಡ್ಡಿ, ಜಗದೀಶ್, ಮೂರ್ತಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


