ಒಂದು ಬಸ್ ಟಿಕೆಟ್ ಸಿಗದ ಕಾರಣ ಯುವಕನೊಬ್ಬ ಹುಟ್ಟುಹಾಕಿದ ಸ್ಟಾರ್ಟ್-ಅಪ್ ಇಂದು 800 ಕೋಟಿ ರೂ.ಗಳ ಬೃಹತ್ ಉದ್ಯಮವಾಗಿ ಬೆಳೆದಿದೆ. ರೆಡ್‌ಬಸ್ ಎಂಬ ಆನ್‌ಲೈನ್ ಟಿಕೆಟ್ ಬುಕಿಂಗ್ ವೇದಿಕೆಯ ಯಶೋಗಾಥೆ ಇದು. ವಿದೇಶಗಳಲ್ಲಿಯೂ ಹವಾ ಸೃಷ್ಟಿಸಿರೋ ಈ ಸ್ಟಾರ್ಟ್​ ಅಪ್​ ಎಲ್ಲರಿಗೂ ಮಾದರಿ

ಬೆಂಗಳೂರು: ಬದುಕಿನಲ್ಲಿ ಅದೆಷ್ಟೋ ಅನಿರೀಕ್ಷಿತ ತಿರುವುಗಳಾಗುತ್ತವೆ. ಆಗಿದ್ದೆಲ್ಲಾ ಒಳ್ಳೆಯದ್ದಕ್ಕೆ ಎನ್ನುವ ಮಾತು ಕೆಲವರ ಬದುಕಿನಲ್ಲಿ ಅಕ್ಷರಶಃ ನಿಜವಾಗಿ ಬಿಡುತ್ತದೆ. ಅಂಥವರದಲ್ಲಿ ಒಬ್ಬರು ಭಾರತದ ಅತಿದೊಡ್ಡ ಆನ್‌ಲೈನ್ ಬಸ್ ಟಿಕೆಟ್ ಬುಕಿಂಗ್ ವೇದಿಕೆಯಾದ ರೆಡ್‌ಬಸ್ (redBus) ಹುಟ್ಟಿಗೆ ಕಾರಣರಾದ 25ರ ಯುವಕ! ಅದೇ ಒಂದು ತಪ್ಪಿದ ಟಿಕೆಟ್​ನಿಂದ ಚಿಕ್ಕದಾಗಿ ಒಂದು ಬಿಜಿನೆಸ್​ ಶುರು ಮಾಡಿದ ಇವರು ಈಗ 800 ಕೋಟಿ ರೂಪಾಯಿಗಳ ಉದ್ಯಮ ಕಟ್ಟಿ ಬೆಳೆಸಿದ್ದಾರೆ. ಇದು ಭಾರತದ ಸ್ಟಾರ್ಟ್‌ಅಪ್ ಲೋಕದ ಆರಂಭಿಕ ಅತಿದೊಡ್ಡ ಯಶಸ್ಸಿನ ಕಥೆಗಳಲ್ಲಿ ಒಂದೆನಿಸಿದೆ. ಇವರ ಉದ್ಯಮವೀಗ ಸಿಂಗಪುರ, ಮಲೇಷ್ಯಾ, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿದೆ.

ಇದು ಫಣೀಂದ್ರ ಸಾಮಾ ಅವರ ಯಶೋಗಾಥೆ. ಅದು ಶುರುವುದಾಗುವುದು 2005ರಲ್ಲಿ ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು ಒಂದೂ ಬಸ್​ ಟಿಕೆಟ್​ ಸಿಗದ ಕಾರಣ! 2005ರಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಎಂಜಿನಿಯರ್ ಫಣೀಂದ್ರ ಸಾಮಾ ಅವರು ತಮ್ಮ ಊರಾದ ಹೈದರಾಬಾದ್‌ಗೆ ಹೋಗಲು ಬಯಸಿದ್ದರು. ಹೇಳಿ ಕೇಳಿ ಹಬ್ಬದ ಸೀಸನ್​. ಟಿಕೆಟ್​ ಬೆಲೆ 2 ಸಾವಿರ, 3 ಸಾವಿರ ಮಾಡಿದರೂ ಜನರಂತೂ ಊರಿಗೆ ಹೋಗುವುದನ್ನು ತಪ್ಪಿಸುವುದಿಲ್ಲ. ಕೊನೆಯ ಘಳಿಗೆಯಲ್ಲಿ ಟಿಕೆಟ್​ ಸಿಗದೇ ಪರದಾಡುವವರು ಈಗಲೂ ಇರುವಂತೆ,, ಆಗಲೂ ಫಣೀಂದ್ರ ಅವರಿಗೆ ಆಯಿತು. ಅವರು ಅನೇಕ ಟ್ರಾವೆಲ್ ಏಜೆಂಟ್‌ಗಳ ಬಳಿ ಅಲೆದಾಡಿದರೂ ಬಸ್ ಟಿಕೆಟ್ ಸಿಗಲಿಲ್ಲ. ಅವರ ಸ್ನೇಹಿತರೆಲ್ಲರೂ ಊರಿಗೆ ಹೋದರೆ, ಫಣೀಂದ್ರ ಅವರು ಬೆಂಗಳೂರಿನಲ್ಲೇ ಒಬ್ಬಂಟಿಯಾಗಿ ಹಬ್ಬ ಆಚರಿಸುವ ಸ್ಥಿತಿ ಬಂತು.

ಅಲ್ಲಿಂದಲೇ ಬಂತು ಪ್ಲ್ಯಾನ್​

ಆಗ ಇವರು ಕುಳಿತು ಯೋಚಿಸಿದರು. ಬಸ್ ಟಿಕೆಟ್ ವ್ಯವಸ್ಥೆ ಇಷ್ಟೊಂದು ಅಸಂಘಟಿತವಾಗಿದೆಯಲ್ಲಾ ಎನ್ನಿಸಿತು. ಯಾವ ಬಸ್‌ನಲ್ಲಿ ಎಷ್ಟು ಸೀಟುಗಳು ಖಾಲಿ ಇವೆ ಎಂಬುದನ್ನು ತಿಳಿಯಲು ಯಾವುದೇ ಕೇಂದ್ರೀಕೃತ ವ್ಯವಸ್ಥೆ ಇರಲಿಲ್ಲ. ಈ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಂಡರೆ ಹೇಗೆ ಎನ್ನಿಸಿತು. ಕೊನೆಗೆ ಅಲ್ಲಿಯೇ ಕುಳಿತು ಒಂದಿಷ್ಟು ಯೋಜನೆ ರೂಪಿಸಿದರು. ತಮ್ಮ ಇನ್ನೊಬ್ಬರು ಸ್ನೇಹಿತರ ಸಹಾಯದಿಂದ ತಮ್ಮ ಆಲೋಚನೆಯನ್ನು ಮತ್ತಷ್ಟು ವಿಸ್ತರಿಸಿದರು. ಬಿಟ್ಸ್ ಪಿಲಾನಿ (BITS Pilani) ಕಾಲೇಜಿನ ತಮ್ಮ ಸಹಪಾಠಿಗಳಾದ ಚರಣ್ ಪದ್ಮರಾಜು ಮತ್ತು ಸುಧಾಕರ್ ಪಸುಪುನೂರಿ ಅವರೊಂದಿಗೆ ಕೈಜೋಡಿದರು.

ಅದಾದ ಕೆಲವೇ ತಿಂಗಳಿನಲ್ಲಿ ಅಂದರೆ 2006ರ ಆಗಸ್ಟ್‌ನಲ್ಲಿ ಕೇವಲ 5 ಲಕ್ಷ ಆರಂಭಿಕ ಬಂಡವಾಳದೊಂದಿಗೆ ಬೆಂಗಳೂರಿನಲ್ಲಿ redBus.in ವೆಬ್‌ಸೈಟ್ ಆರಂಭಿಸಿದರು. ಇಂಥ ವೆಬ್​ಸೈಟ್​ ಮಾಡಿದಾಗಲೆಲ್ಲಾ ನಂಬುವವರು ಬೇಕಲ್ಲ. ಇವರಿಗೂ ಹಾಗೆಯೇ ಆಯಿತು. ಮೊದಲಿಗೆ ಬಸ್ ಮಾಲೀಕರನ್ನು (Operators) ಆನ್‌ಲೈನ್ ವ್ಯವಸ್ಥೆಗೆ ಒಪ್ಪಿಸುವುದು ಬಹಳ ಕಷ್ಟವಾಗಿತ್ತು. ಕೇವಲ ಒಬ್ಬ ಬಸ್ ಆಪರೇಟರ್ ಮತ್ತು 5 ಸೀಟುಗಳೊಂದಿಗೆ ಇವರ ಪಯಣ ಶುರುವಾಯಿತು. ಕೊನೆಗೆ ಮಾರುಕಟ್ಟೆಯಲ್ಲಿ ಕ್ರಾಂತಿಯೇ ಉಂಟಾಗಿ ಹೋಯಿತು. ಗ್ರಾಹಕರಿಗೆ ಕುಳಿತಲ್ಲೇ ಸೀಟುಗಳ ಲಭ್ಯತೆಯನ್ನು ನೋಡುವ ಮತ್ತು ಟಿಕೆಟ್ ಬುಕ್ ಮಾಡುವ ಸೌಲಭ್ಯ ಸಿಕ್ಕಿದ್ದರಿಂದ ರೆಡ್‌ಬಸ್ ಅತಿ ಶೀಘ್ರದಲ್ಲೇ ಜನಪ್ರಿಯವಾಯಿತು. ಬಸ್ ಮಾಲೀಕರಿಗೂ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡಿತು.

2013ರ ವೇಳೆಗೆ ರೆಡ್‌ಬಸ್ ದೇಶದ ಅತಿದೊಡ್ಡ ಬಸ್ ಟಿಕೆಟಿಂಗ್ ವೇದಿಕೆಯಾಗಿ ಬೆಳೆಯಿತು. ಅದೇ ವರ್ಷ ಇಬಿಬೊ ಗ್ರೂಪ್ (Ibibo Group) ಸುಮಾರು ₹600 ರಿಂದ ₹800 ಕೋಟಿ ಮೊತ್ತಕ್ಕೆ ರೆಡ್‌ಬಸ್ ಅನ್ನು ಖರೀದಿಸಿತು. ಇದು ಭಾರತದ ಸ್ಟಾರ್ಟ್‌ಅಪ್ ಲೋಕದ ಆರಂಭಿಕ ಅತಿದೊಡ್ಡ ಯಶಸ್ಸಿನ ಕಥೆಗಳಲ್ಲಿ ಒಂದಾಯಿತು. ಇಂದು ರೆಡ್‌ಬಸ್ ಭಾರತ ಮಾತ್ರವಲ್ಲದೆ ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಿದೆ. ಒಂದು ಸಣ್ಣ ವೈಯಕ್ತಿಕ ಸಮಸ್ಯೆಯನ್ನು ಬಗೆಹರಿಸಲು ಹೊರಟ ಯುವಕರ ಪ್ರಯತ್ನ ಇಂದು ಕೋಟ್ಯಂತರ ಪ್ರಯಾಣಿಕರ ಪಯಣವನ್ನು ಸುಗಮಗೊಳಿಸುತ್ತಿದೆ.

ಏನಿವರ ಹಿನ್ನೆಲೆ?

ಬೆಂಗಳೂರಿನಲ್ಲಿ ಚಿಪ್ ಡಿಸೈನರ್

ಪದವಿ ಪಡೆದ ನಂತರ ಸಾಮಾ ಅವರು ಸೆಮಿಕಂಡಕ್ಟರ್ ಉದ್ಯಮದಲ್ಲಿ ಉತ್ತಮ ಸಂಬಳದ ಕೆಲಸದಲ್ಲಿದ್ದರು. ಅವರು STMicroelectronics ನಲ್ಲಿ ಸುಮಾರು ಎರಡು ವರ್ಷಗಳ ಕಾಲ ಮತ್ತು ನಂತರ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್‌ನಲ್ಲಿ ವಿನ್ಯಾಸ ಎಂಜಿನಿಯರ್ ಆಗಿ ಸುಮಾರು ಎರಡೂವರೆ ವರ್ಷಗಳ ಕಾಲ ಕೆಲಸ ಮಾಡಿದರು. ಅವರಿಗೆ ಕೊನೆಗೆ 12 ಲಕ್ಷ ಸಂಬಳ ಬರುತ್ತಿತ್ತು. ಹಿರಿಯ ವಿನ್ಯಾಸಕ ಹುದ್ದೆಗೆ ಬಡ್ತಿ ಪಡೆದಿದ್ದರು. 2006 ರಲ್ಲಿ ಯುವ ಎಂಜಿನಿಯರ್‌ಗೆ ಇದು ಉತ್ತಮ ಸಂಬಳವಾಗಿತ್ತು. ಆ ಸಂದರ್ಭದಲ್ಲಿ ಪದ್ಮರಾಜು ಹನಿವೆಲ್‌ನಲ್ಲಿ ಸುಮಾರು 8 ಲಕ್ಷ ರೂ. ಗಳಿಸುತ್ತಿದ್ದರು ಮತ್ತು ಪಶುಪುನುರಿ IBM ನಲ್ಲಿ ಸುಮಾರು 10 ಲಕ್ಷ ರೂ. ಗಳಿಸುತ್ತಿದ್ದರು. ಇದನ್ನು ಬಿಟ್ಟು ರೆಡ್​ಬಸ್​ ಉದ್ಯಮ ಆರಂಭಿಸಿ ಇಂದು ಸಹಸ್ರಾರು ಕೋಟಿ ಬಿಜಿನೆಸ್​ ಮಾಡುತ್ತಿದ್ದಾರೆ.