ಭಾರತೀಯ ರೈಲ್ವೆ ಇಲಾಖೆಯು ಹಳೆಯ ಬೋಗಿಗಳ ಬದಲಾಗಿ ಸುರಕ್ಷಿತ ಮತ್ತು ಆಧುನಿಕ ಎಲ್ ಹೆಚ್ಬಿ (LHB) ಬೋಗಿಗಳನ್ನು ಅಳವಡಿಸುತ್ತಿದೆ. ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಒದಗಿಸಲಿದೆ.
ಬೆಂಗಳೂರು: ಕಳೆದೊಂದು ದಶಕದಿಂದ ರೈಲು ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಅಭೂತಪೂರ್ವ ಬೆಳವಣಿಗೆ ಆಗುತ್ತಿದ್ದು, ಇದಾಗಲೇ ಹಲವಾರು ರೈಲು ಮಾರ್ಗಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ವಂದೇ ಭಾರತ್ನಂಥ ರೈಲುಗಳ ಸಂಚಾರ ಆರಂಭವಾಗಿದೆ. ಅಪಘಾತಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ. ಇವೆಲ್ಲವುಗಳ ನಡುವೆಯೇ ಇದೀಗ ಇನ್ನೊಂದು ಗುಡ್ನ್ಯೂಸ್ ರೈಲ್ವೆ ಪ್ರಯಾಣಿಕರಿಗೆ ಇಲಾಖೆ ನೀಡಿದೆ. ರೈಲ್ವೆ ಇಲಾಖೆಯಿಂದ ಹಳೆಯ ಸಾಂಪ್ರದಾಯಿಕ ರೇಕ್ಗಳಿಗೆ ಬದಲಾಗಿ ಹೊಸ ಎಲ್ ಹೆಚ್ಬಿ ರೇಕ್ಗಳನ್ನು ಅವಳವಡಿಸಲಾಗುತ್ತಿದೆ. ಮೈಸೂರು–ತಾಳಗುಪ್ಪ–ಮೈಸೂರು ಎಕ್ಸ್ಪ್ರೆಸ್ ಸೇರಿದಂತೆ ಕೆಲವು ರೈಲುಗಳಲ್ಲಿ ಈ ಹೊಸ ಬದಲಾವಣೆ ಮಾಡಲಾಗಿದ್ದು, ಬಳಿಕ ಎಲ್ಲಾ ರೈಲುಗಳಲ್ಲಿಯೂ ಇದನ್ನು ಅಳವಡಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಏನಿದು LHB?
ಎಲ್ಎಚ್ಬಿ ಎಂದರೆ ಲಿಂಕ್ ಹಾಫ್ಮನ್ ಬುಷ್ ( Linke Hofmann-Busch) ಎಂದು. ಹೀಗೆ ಹೇಳಿದರೆ ಬಹುಶಃ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಇದರ ವಿವರ ಇಲ್ಲಿ ನೀಡಲಾಗಿದೆ. LHB ಬೋಗಿಗಳು ಜರ್ಮನಿಯಿಂದ ಪರಿಚಯಿಸಲ್ಪಟ್ಟ ಮತ್ತು ಭಾರತೀಯ ರೈಲ್ವೆಯಲ್ಲಿ ಬಳಸಲಾಗುವ ಆಧುನಿಕ ಹಾಗೂ ಸುರಕ್ಷಿತ ರೈಲು ಬೋಗಿಗಳಾಗಿವೆ. ಇವು ಗಂಟೆಗೆ 160 ಕಿ.ಮೀಗಿಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿವೆ. ಅಪಘಾತ ಸಂಭವಿಸಿದಾಗ ಈ ಬೋಗಿಗಳು ಒಂದರ ಮೇಲೆ ಒಂದು ಹತ್ತುವುದಿಲ್ಲ. ಇದರಿಂದ ಪ್ರಾಣಾಪಾಯವು ಕಡಿಮೆಯಾಗುತ್ತದೆ. ಹಳೆಯ ICF ಬೋಗಿಗಳಿಗಿಂತ LHB ಬೋಗಿಗಳು ಉದ್ದವಾಗಿರುತ್ತವೆ. ಉದಾಹರಣೆಗೆ, LHB ಸ್ಲೀಪರ್ ಕೋಚ್‌ನಲ್ಲಿ 80 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಇರುತ್ತದೆ (ICF ಕೋಚ್‌ನಲ್ಲಿ 72 ಇರುತ್ತದೆ). ಇವು ಸ್ಟೇನ್‌ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂ ಮಿಶ್ರಣದಿಂದ ಮಾಡಲ್ಪಟ್ಟಿದ್ದು ಹಗುರವಾಗಿರುತ್ತವೆ. ಜೊತೆಗೆ ಡಿಸ್ಕ್ ಬ್ರೇಕ್ ವ್ಯವಸ್ಥೆ ಇರುವುದರಿಂದ ಬ್ರೇಕ್ ಹಾಕುವಾಗ ಶಬ್ದ ಬರುವುದಿಲ್ಲ ಮತ್ತು ಒಳಭಾಗದಲ್ಲಿ ಶಬ್ದ ನಿರೋಧಕ ವ್ಯವಸ್ಥೆ ಇದೆ. ಇದರಲ್ಲಿ ಅತ್ಯುತ್ತಮವಾದ ಏರ್ ಸಸ್ಪೆನ್ಷನ್ (Air suspension) ಇರುವುದರಿಂದ ಪ್ರಯಾಣವು ತುಂಬಾ ಆರಾಮದಾಯಕವಾಗಿರುತ್ತದೆ
ಯಾವ್ಯಾವ ರೈಲುಗಳಲ್ಲಿ ಇದರ ಅಳವಡಿಕೆ?
ಮೈಸೂರು–ತಾಳಗುಪ್ಪ–ಮೈಸೂರು ಎಕ್ಸ್ಪ್ರೆಸ್ (ರೈಲು ಸಂ. 16227/16228): ಮೈಸೂರಿನಿಂದ ಅಕ್ಟೋಬರ್ 20 ರಿಂದ ಹಾಗೂ ತಾಳಗುಪ್ಪದಿಂದ ಅಕ್ಟೋಬರ್ 21 ರಿಂದ ಎಲ್ ಹೆಚ್ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ತಾಳಗುಪ್ಪ–ಶಿವಮೊಗ್ಗ ಟೌನ್–ತಾಳಗುಪ್ಪ (ರೈಲು ಸಂ. 56217/56218): ಎರಡೂ ಕಡೆಗಳಿಂದ ಅಕ್ಟೋಬರ್ 21 ರಿಂದ ಎಲ್ ಹೆಚ್ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ನಂಜನಗೂಡು ಟೌನ್–ಮೈಸೂರು–ನಂಜನಗೂಡು ಟೌನ್ (ರೈಲು ಸಂ. 56205/56206): ಎರಡೂ ಕಡೆಗಳಿಂದ ಅಕ್ಟೋಬರ್ 22 ರಿಂದ ಎಲ್ ಹೆಚ್ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.
ಚಾಮರಾಜನಗರ–ಮೈಸೂರು–ಚಾಮರಾಜನಗರ (ರೈಲು ಸಂ. 56203/56204): ಮೈಸೂರಿನಿಂದ ಅಕ್ಟೋಬರ್ 22 ರಿಂದ ಹಾಗೂ ಚಾಮರಾಜನಗರದಿಂದ ಅಕ್ಟೋಬರ್ 24 ರಿಂದ ಎಲ್ ಹೆಚ್ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಚಾಮರಾಜನಗರ–ತಿರುಪತಿ–ಚಾಮರಾಜನಗರ (ರೈಲು ಸಂ. 16219/16220): ಚಾಮರಾಜನಗರದಿಂದ ಅಕ್ಟೋಬರ್ 22 ಮತ್ತು ತಿರುಪತಿಯಿಂದ ಅಕ್ಟೋಬರ್ 23 ರಿಂದ ಎಲ್ಎಚ್ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್–ತಿರುಪತಿ–ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ (ರೈಲು ಸಂ. 16203/16204): ಎರಡೂ ಕಡೆಗಳಿಂದ ಅಕ್ಟೋಬರ್ 23, 2026 ರಿಂದ ಎಲ್ಎಚ್ಬಿ ಬೋಗಿಗಳೊಂದಿಗೆ ಸಂಚರಿಸಲಿದೆ.
ಪ್ರಸ್ತುತ ಈ ರೈಲುಗಳು ಒಟ್ಟು 21 ಬೋಗಿಗಳನ್ನು ಹೊಂದಿದ್ದು, ಅವುಗಳಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 10 ಸ್ಲೀಪರ್, 5 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಸೆಕೆಂಡ್ ಕ್ಲಾಸ್-ಕಮ್-ಬ್ರೇಕ್ ವ್ಯಾನ್ ಸೇರಿದ್ದವು. ಈಗ ಹೊಸ ವ್ಯವಸ್ಥೆಯಡಿ ಈ ರೈಲುಗಳು ಒಟ್ಟು 19 ಎಲ್ಹೆಚ್ಬಿ ಬೋಗಿಗಳನ್ನು ಹೊಂದಿರಲಿವೆ. ಇದರಲ್ಲಿ 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 3 ಎಸಿ 3-ಟೈರ್, 7 ಸ್ಲೀಪರ್, 5 ಜನರಲ್ ಸೆಕೆಂಡ್ ಕ್ಲಾಸ್, 01 ದಿವ್ಯಾಂಗ ಸ್ನೇಹಿ ಬೋಗಿ ಹೊಂದಿರುವ ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ 01 ಲಗೇಜ್ ಮತ್ತು ಬ್ರೇಕ್ ವ್ಯಾನ್-ಕಮ್-ಜನರೇಟರ್ ಕಾರ್ ಸೇರಿರಲಿವೆ.
ರೈಲ್ವೆ ಇಲಾಖೆಯಿಂದ ವಿಶೇಷ ಸೂಚನೆ
ರೈಲು ಸಂಖ್ಯೆ 56217/56218, 56205/56206, ಮತ್ತು 56203/56204ರ ಎಸಿ ಬೋಗಿಗಳನ್ನು ಲಾಕ್ ಮಾಡಲಾಗಿರುತ್ತದೆ ಎಂದು ನೈರುತ್ಯ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


