ದಿ ಗ್ರೇಟ್ ರೈಡ್ ಆಫ್ ಕರ್ನಾಟಕದಲ್ಲಿ ಅದೊಂದು ಚಿತ್ರ ಮನಸ್ಸಲ್ಲಿ ಉಳಿದುಹೋಯಿತು. ರಾಯಲ್ ಎನ್‌ಫೀಲ್ಡ್ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇದೇ ಮೊದಲ ಬಾರಿಗೆ ಜಂಟಿಯಾಗಿ ದಿ ಗ್ರೇಟ್ ರೈಡ್ ಆಫ್ ಕರ್ನಾಟಕ ಆಯೋಜಿಸಿತ್ತು.
ಮುಳ್ಳಯ್ಯನ ಗಿರಿಯಲ್ಲಿ ಸಂಜೆ ಹೊತ್ತು ಮಂಜು ಮುಸುಕಿತ್ತು. ಕತ್ತಲಾವರಿಸಿತ್ತು. ಮಳೆ ಬೀಳುತ್ತಿತ್ತು. ಒಂದೊಂದೇ ಬೈಕುಗಳು ನಿಧಾನಕ್ಕೆ ಲೈಟು ಉರಿಸಿಕೊಂಡು ಕೆಳಗಿಳಿಯುತ್ತಿದ್ದರೆ ಬೆಟ್ಟದಿಂದ ನಕ್ಷತ್ರಗಳು ಇಳಿದಂತೆ ಭಾಸವಾಗುತ್ತಿತ್ತು. ದಿ ಗ್ರೇಟ್ ರೈಡ್ ಆಫ್ ಕರ್ನಾಟಕದಲ್ಲಿ ಅದೊಂದು ಚಿತ್ರ ಮನಸ್ಸಲ್ಲಿ ಉಳಿದುಹೋಯಿತು. ರಾಯಲ್ ಎನ್‌ಫೀಲ್ಡ್ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಇದೇ ಮೊದಲ ಬಾರಿಗೆ ಜಂಟಿಯಾಗಿ ದಿ ಗ್ರೇಟ್ ರೈಡ್ ಆಫ್ ಕರ್ನಾಟಕ ಆಯೋಜಿಸಿತ್ತು. ಒಟ್ಟು 17 ಬೈಕುಗಳು. 17 ಬೈಕರ್‌ಗಳು. ಕೆಲವರ ಬಳಿ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೋರ್ 650. ಹಲವರ ಬಳಿ ರಾಯಲ್ ಎನ್‌ಫೀಲ್ಡ್ ಗೋವನ್ ಕ್ಲಾಸಿಕ್. ಒಂದೋ ಎರಡೋ ಕ್ಲಾಸಿಕ್ 350 ಮತ್ತು ಮಿಟಿಯೋರ್ 350.
ಒಂದನೇ ದಿನ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ. ಬೆಳ್ಳಂಬೆಳಗ್ಗೆ ವಿಧಾನಸೌಧದಿಂದ ಹೊರಟು ತುಮಕೂರು ಹೈವೇಗೆ ಬಿದ್ದರೆ ಅಲ್ಲೋ ಇಲ್ಲೋ ಒಂಚೂರು ಮೋಡಗಳು. ಅದೋ ಎಲ್ಲೋ ಮಳೆಯಾದಂತೆ. ಆಕಾಶದಲ್ಲಿ ಚಿತ್ರ ಚಿತ್ತಾರ. ಚಿತ್ರದುರ್ಗ ತಲುಪುತ್ತಿದ್ದಂತೆ ಧೋ ಎಂದು ಬಿದ್ದ ಮಳೆ. ರಪಕ್ಕನೆ ಪಾಸಾಗಿ ಹಿರಿಯೂರು ದಾಟಿ ಹೊಸಪೇಟೆ ರಸ್ತೆ ಪ್ರವೇಶಿಸಿದರೆ ಆಹಾ ಎಂಥಾ ರಸ್ತೆ. ನೇರ ನುಣುಪು ರಸ್ತೆಯಲ್ಲಿ ಶಕ್ತ್ಯಾನುಸಾರ ವೇಗದ ಪ್ರಯಣ. ರಾಯಲ್ ಎನ್‌ಫೀಲ್ಡ್ ಅಪಾರ ಶಕ್ತಿಯ ಅನಾವರಣ. ಹಂಪಿ ತಲುಪುವಾಗ ಸಂಜೆಯಲ್ಲಿ ಒಂಚೂರು ಕೆಂಪು.
ಬೈಕರ್‌ಗಳೆಲ್ಲಾ ವಿಜಯವಿಠ್ಠಲ, ವಿರೂಪಾಕ್ಷ ದೇಗುಲಕ್ಕೆ ಭೇಟಿ ಕೊಟ್ಟು ಅಲ್ಲಿನ ಕತೆ ಕೇಳಿದರು. ಅಲ್ಲಿಗೆ ಒಂದು ದಿನ ಸಾರ್ಥಕ. ಮರುದಿನ ಚಿಕ್ಕಮಗಳೂರಿನ ದಾರಿ. ಗದ್ದೆ, ತೋಟ ದಾಟಿ ಹೋದರೆ ಮುಳ್ಳಯ್ಯನ ಗಿರಿ. ಅಲ್ಲೋ ಧೋ ಎಂಬ ಮಳೆ. ದಾರಿ ಕಾಣಿಸದಷ್ಟು ಮಂಜು. ಅಲ್ಲೊಂದು ಬಿಸಿ ಬಿಸಿ ಕಾಫಿ. ಗಿರಿ ಇಳಿಯುತ್ತಿದ್ದರೆ ಮೈಯೆಲ್ಲಾ ತಣ್ಣಗೆ. ಅದೇನೋ ಆನಂದ. ಮೊದಲ ದಿನ ನೇರ ರಸ್ತೆ ಇದ್ದರೆ ಎರಡನೇ ದಿನ ತಿರುವು ಮುರುವು ಹಾದಿ. ಮೂರನೇ ದಿನ ಬೇಲೂರು. ಚೆನ್ನಕೇಶವನ ಭೇಟಿ. ಅಲ್ಲಿಂದ ಮರಳಿ ಬೆಂಗಳೂರಿಗೆ.
ರಾಯಲ್ ಎನ್‌ಫೀಲ್ಡ್ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈ ರೈಡ್ ಆಯೋಜಿಸುವ ಮೂಲಕ ಎರಡು ಒಳ್ಳೆಯ ಕೆಲಸ ಮಾಡಿತು. ಒಂದು ಬೈಕರ್‌ಗಳಿಗೆ ಕರ್ನಾಟಕದ ಪರಂಪರೆಯನ್ನು ಪರಿಚಯಿಸಿದ್ದು, ಇನ್ನೊಂದು ಕರ್ನಾಟಕದ ಹಳ್ಳಿಯ ಪುಟಾಣಿ ಮಕ್ಕಳಿಗೆ ಬೈಕಿಂಗ್ ಸಂಸ್ಕೃತಿಯನ್ನು ತಿಳಿಸಿಕೊಟ್ಟಿದ್ದು. ಸಾಲಾಗಿ ಬೈಕುಗಳು ಹೋಗುತ್ತಿದ್ದರೆ ಮಕ್ಕಳೆಲ್ಲಾ ಕೈಬೀಸುತ್ತಿದ್ದರು. ಕೊಂಚ ದೊಡ್ಡವರು ವಿಡಿಯೋ ತೆಗೆಯುತ್ತಿದ್ದರು.
ಈ ರೈಡ್‌ನಲ್ಲಿ ಕರ್ನಾಟಕ, ಕೇರಳಕ್ಕೆ ಸೇರಿದ ಮಾಧ್ಯಮ ಪ್ರತಿನಿಧಿಗಳು ಮತ್ತು ಇನ್‌ಫ್ಲುಯೆನ್ಸರ್‌ಗಳ ತಂಡ ಭಾಗವಹಿಸಿತ್ತು. ಎಲ್ಲರೂ ಬೈಕರ್‌ಗಳು. ಜೊತೆಗೆ ಅತ್ಯಂತ ಸಮರ್ಥ ರಾಯಲ್ ಎನ್‌ಫೀಲ್ಡ್ ತಂತ್ರಜ್ಞರು. ಹಾಗಾಗಿ ದಿ ರೈಡ್ ಆಫ್ ಕರ್ನಾಟಕ ಸಾರ್ಥಕವಾಗಿ, ಆನಂದದಾಯಕವಾಗಿ ಸಂಪನ್ನಗೊಂಡಿತು. ಮೊದಲ ದಿನ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಡಾ. ರಾಜೇಂದ್ರ ಕೆ.ವಿ.ಯವರು ಶುಭ ಹಾರೈಸಿ ಕಳುಹಿಸಿದ್ದರು. ಮೂರನೇ ದಿನ ವಾಪಸ್ ಬಂದು ನೋಡಿದರೆ ಒಂದೊಂದೂ ಬೈಕೂ ಒಂದು ಸಾವಿರ ಕಿಮೀ ಕ್ರಮಿಸಿದ್ದನ್ನು ಮೀಟರ್ ಹೇಳುತ್ತಿತ್ತು.
