Travel Tips : ದುಮ್ಮಿಕ್ಕಿ ಹರಿಯುವ ಉಂಚಳ್ಳಿ ಜೋಗಕ್ಕೆ ಒಮ್ಮೆ ಭೇಟಿ ನೀಡಿ
ಮಳೆಗಾಲದಲ್ಲಿ ನೋಡಬಹುದಾದದ ಅನೇಕ ಸುಂದರ ಫಾಲ್ಸ್ ಕರ್ನಾಟಕದಲ್ಲಿವೆ. ಕೆಲವೊಂದು ಫಾಲ್ಸ್, ಅದ್ರ ಸುತ್ತಮುತ್ತಲಿನ ಸೌಂದರ್ಯ ಪ್ರವಾಸಿಗರನ್ನು ಮತ್ತೆ ಮತ್ತೆ ಕರೆಯುತ್ತದೆ. ನೀವೂ ಫಾಲ್ಸ್ ಪ್ರೇಮಿಯಾಗಿದ್ದರೆ ನಾವು ಈಗ ಹೇಳುವ ಪ್ರದೇಶಕ್ಕೆ ತಪ್ಪದೆ ಹೋಗ್ಬನ್ನಿ.
ಬೇಸಿಗೆ ಕಳೆದು ಮಳೆಗಾಲ ಆರಂಭವಾದ್ರೆ ಸಾಕು ಪ್ರಕೃತಿ ಹಸಿರ ಸೀರೆ ಉಟ್ಟು ನಳನಳಿಸುತ್ತಾಳೆ. ಮಳೆರಾಯನ ಆರ್ಭಟದಿಂದ ಎಲ್ಲ ಕಡೆ ನೀರಿನ ಜುಳು ಜುಳು ನಿನಾದ ಕಿವಿಗೆ ಇಂಪು ನೀಡುತ್ತದೆ. ಕೆರೆ, ಕಾಲುವೆ ಜಲಪಾತಗಳು ಧುಮ್ಮಿಕ್ಕಿ ಹರಿದು ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಉತ್ತರಕನ್ನಡ (Uttara Kannada) ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಸಂಖ್ಯೆ ಸಾಕಷ್ಟಿದೆ. ಇಲ್ಲಿನ ಜಲಪಾತಗಳು ಹಾಗೂ ಪ್ರಖ್ಯಾತ ದೇವಾಲಯಗಳನ್ನು ನೋಡಲು ದೂರದ ಊರುಗಳಿಂದ ಪ್ರವಾಸಿಗರು ಬರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಕೆಲವು ಜಲಪಾತಗಳು ಬಹಳ ಪ್ರಸಿದ್ಧಿ ಪಡೆದಿದೆ. ಅವುಗಳ ಪೈಕಿ ಉಂಚಳ್ಳಿ ಜಲಪಾತ (Unchalli Waterfalls) ವೂ ಒಂದು.
ಸೌಂದರ್ಯ ಖನಿ ಈ ಉಂಚಳ್ಳಿ ಜಲಪಾತ : ಶಿರಸಿ (Sirsi) ಯಿಂದ ಹೆಗ್ಗರಣಿ ಮಾರ್ಗವಾಗಿ 35 ಕಿಲೋಮೀಟರ್ ಪ್ರಯಾಣ ಬೆಳೆಸಿದರೆ ಉಂಚಳ್ಳಿ ಜಲಪಾತದ ಸೌಂದರ್ಯವನ್ನು ಸವಿಯಬಹುದಾಗಿದೆ. ಈ ಜಲಪಾತವನ್ನು ಬ್ರಿಟೀಷ್ ಅಧಿಕಾರಿ ಜಾರ್ಜ್ ಲೂಷಿಂಗ್ ಟನ್ ಎಂಬಾತ ಪತ್ತೆ ಹಚ್ಚಿದ. ಹಾಗಾಗಿ ಈ ಜೋಗವನ್ನು ಲೂಷಿಂಗ್ ಟನ್ ಫಾಲ್ಸ್ ಎಂದು ಕೂಡ ಹೇಳುತ್ತಾರೆ. ಅಘನಾಶಿನಿ ನದಿಯ ಭಾಗವಾಗಿರುವ ಈ ಜಲಪಾತ ಸದಾ ಕಾಲ ಕಿವಿ ಕೆಪ್ಪಾಗುವಂತೆ ಭೋರ್ಗರೆಯುತ್ತದೆ ಎನ್ನುವ ಕಾರಣಕ್ಕೆ ಇದನ್ನು ಕೆಪ್ಪ ಜೋಗ ಎಂದು ಕೂಡ ಕರೆಯುತ್ತಾರೆ.
ಆಸ್ಟ್ರೇಲಿಯಾ ಬೀಚ್‌ನಲ್ಲಿ ಚಂದ್ರಯಾನ-3 ಅವಶೇಷಗಳು ಪತ್ತೆ? ನಿಗೂಢ ವಸ್ತು ಬಗ್ಗೆ ನೆಟ್ಟಿಗರ ಚರ್ಚೆ
ಪಶ್ಚಿಮ ಘಟ್ಟದ ತುದಿಯಿಂದ ಕರಾವಳಿಯತ್ತ ಓಡುವ ಅಘನಾಶಿನಿ ಉಂಚಳ್ಳಿಯಲ್ಲಿ 116 ಮೀಟರ್ ಆಳಕ್ಕೆ ಹಾಲಿನಂತೆ ಧುಮುಕುತ್ತಾಳೆ. ಇದು ಒಟ್ಟೂ 380 ಅಡಿ ಎತ್ತರವಿದೆ. ಮಲೆನಾಡ ಮಡಿಲಿನಲ್ಲಿರುವ ಈ ಜಲಪಾತದ ಸುತ್ತ ಇರುವ ಹಸಿರು ಗುಡ್ಡಗಳು, ಬಾನೆತ್ತರಕ್ಕೆ ಚಾಚಿದ ಮರಗಳು ಉಂಚಳ್ಳಿ ಜಲಪಾತದ ಸೊಬಗನ್ನು ಇಮ್ಮಡಿಗೊಳಿಸಿದೆ. ದಟ್ಟವಾದ ಕಾಡಿನ ನಡುವೆ ಧುಮ್ಮಿಕ್ಕುವ ಈ ಜಲಪಾತವನ್ನು ನೋಡಲು ಸಹಸ್ರಾರು ಮಂದಿ ಪ್ರವಾಸಿಗರು ಬರುತ್ತಾರೆ.
ಉಂಚಳ್ಳಿ ಜಲಪಾತಕ್ಕೆ ಹೋಗಲು ಮಳೆಗಾಲ ಸೂಕ್ತ ಸಮಯವಾಗಿದೆ. ಏಕೆಂದರೆ ಮಳೆಗಾಲದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ಸ್ವರ್ಗಕ್ಕೆ ಸರಿಸಾಟಿಯಾಗಿದೆ. ಕೆಲವೊಮ್ಮೆ ಮಳೆಗಾಲದಲ್ಲಿ ಮಂಜು ಮುಸುಕುವುದರಿಂದ ಜಲಪಾತ ಸರಿಯಾಗಿ ಕಾಣಿಸುವುದಿಲ್ಲ. ಮಳೆ ಸ್ವಲ್ಪ ಬಿಡುವು ಕೊಟ್ಟಾಗ ಹಾಲಿನ ಹೊಳೆಯೇ ಹರಿಯುತ್ತಿದೆಯೇನೋ ಎನಿಸುವಷ್ಟು ಸುಂದರವಾಗಿ ಕಾಣಿಸುತ್ತದೆ. ಜಲಪಾತವನ್ನು ವೀಕ್ಷಿಸುವುದಕ್ಕಾಗಿ ಅಲ್ಲಿನ ಗುಡ್ಡದ ಮೇಲೆ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಸುಮಾರು 200ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ನಿರ್ಮಿಸಿ ಜಲಪಾತವನ್ನು ಸಮೀಪದಿಂದ ನೋಡುವ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲಿ ನಿಂತು ನೋಡಿದರೆ ಜಲಪಾತ ನೀರು ನಿಮ್ಮ ಮೈಗೆ ಸೋಕುತ್ತದೆ.
Snakes Garden: ಹೂವಲ್ಲ ಹಾವಿನ ಗಾರ್ಡನ್..! ಕೈ ಹಾಕಿದ್ರೆ ಬುಸ್ ಎನ್ನುತ್ತೆ ನಾಗ
ಉಂಚಳ್ಳಿ ಜಲಪಾತಕ್ಕೆ ಹೀಗೆ ಹೋಗಬಹುದು : ಶಿರಸಿಯಿಂದ ಹೆಗ್ಗರಣಿ ಮಾರ್ಗದಲ್ಲಿ 35 ಕಿ.ಮೀ ಸಂಚರಿಸಿದರೆ ಹೆಗ್ಗರಣಿ ಊರಿಗೆ ತಲುಪಬಹುದು. ಅಲ್ಲಿಂದ 5 ಕಿ.ಮೀ ದಟ್ಟವಾದ ಕಾಡಿನಲ್ಲಿ ಫಾಲ್ಸ್ ಗೆ ಹೋಗಬಹುದು. ಬೆಂಗಳೂರಿನಿಂದ 440 ಕಿ.ಮೀ ಮತ್ತು ಮಂಗಳೂರಿನಿಂದ 260 ದೂರದಲ್ಲಿ ಉಂಚಳ್ಳಿ ಫಾಲ್ಸ್ ಇದೆ. ಹುಬ್ಬಳಿ ವಿಮಾನ ನಿಲ್ದಾಣ ಹಾಗೂ ಸಾಗರ ತಾಳಗುಪ್ಪದಲ್ಲಿರುವ ರೈಲ್ವೆ ನಿಲ್ದಾಣಗಳ ಸಹಾಯದಿಂದಲೂ ಉಂಚಳ್ಳಿ ಜಲಪಾತಕ್ಕೆ ತಲುಪಬಹುದು.
ಪ್ರವಾಸಿಗರು ಜಾಗರೂಕರಾಗಿರಬೇಕು : ಮಳೆಗಾಲದಲ್ಲಿ ಉಂಚಳ್ಳಿ ಜೋಗಕ್ಕೆ ಹೋಗುವವರಿಗೆ ಮೈಯೆಲ್ಲ ಕಣ್ಣಾಗಿರಬೇಕು. ಏಕೆಂದರೆ ಇಲ್ಲಿನ ದಾರಿ ಕಠಿಣವಾಗಿದ್ದು ಕಾಲುಗಳು ಜಾರುವ ಅಪಾಯ ಹೆಚ್ಚಿರುತ್ತದೆ. ಹಾಗೆಯೇ ಪ್ರವಾಸಿಗರು ನೀರಿನಲ್ಲಿ ಧುಮುಕುವ ಸಾಹಸಕ್ಕೂ ಕೈ ಹಾಕಬಾರದು. ಇದರಿಂದ ಪ್ರಾಣಾಪಾಯವಾಗುವ ಸಾಧ್ಯತೆಗಳು ಹೆಚ್ಚಿಗೆ ಇವೆ.
ಈ ಜಲಪಾತಕ್ಕೆ ಭೇಟಿ ನೀಡುವವರು ಜಲಪಾತವನ್ನು ಇಷ್ಟಪಡುತ್ತಾರಾದರೂ ಕೆಲವು ಪ್ರವಾಸಿಗರು ಇಲ್ಲಿನ ಅನಾನುಕೂಲಗಳ ಬಗ್ಗೆ ಹಾಗೂ ಸೌಕರ್ಯದ ಕೊರತೆಯ ಬಗ್ಗೆ ಹೇಳಿದ್ದಾರೆ. ಈ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಏನಾದರೂ ತೊಂದರೆ ಆದಲ್ಲಿ ಇಲ್ಲಿ ತುರ್ತು ಚಿಕಿತ್ಸೆಯಾಗಲೀ ಅಥವಾ ಮಾಹಿತಿ ಕೇಂದ್ರವಾಗಲೀ, ಆಸ್ಪತ್ರೆಯಾಗಲೀ ಯಾವುದೂ ಇಲ್ಲ ಎಂದು ಪ್ರವಾಸಿಗರು ಹೇಳುತ್ತಾರೆ.