ಸೋರುತ್ತಿದೆ ಏರ್ ಇಂಡಿಯಾ ಮಾಳಿಗೆ, ವೈರಲ್ ವೀಡಿಯೋಗೆ ಸಂಸ್ಥೆ ಸ್ಪಷ್ಟನೆ!
ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಮೇಲಿನಿಂದ ನೀರು ಸೋರುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು. ಈಗ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯೇ ಈ ವಿಚಾರ ನಡೆದಿದ್ದು ನಿಜ ಎಂಬ ವಿಚಾರವನ್ನು ಖಚಿತಪಡಿಸಿದೆ.
ವಿಮಾನ ಪ್ರಯಾಣಕ್ಕಾಗಿ ಏರ್‌ಲೈನ್ಸ್‌ಗಳು ಸಾವಿರಾರು ರೂಪಾಯಿಗಳನ್ನು ಪ್ರಯಾಣಿಕರಿಂದ ವಸೂಲಿ ಮಾಡುತ್ತಾರೆ. ಆದರೆ ಹಣಕ್ಕೆ ತಕ್ಕಂತೆ ಸೌಲಭ್ಯ ನೀಡುವುದಿಲ್ಲ ಎಂಬ ಆರೋಪವನ್ನು ವಿಮಾನ ಪ್ರಯಾಣಿಕರು ಆಗಾಗ ಮಾಡುವುದನ್ನು ನೀವು ಕೇಳಿರುತ್ತೀರಿ. ಇದಕ್ಕೆ ಪುರಾವೆ ನೀಡುವಂತೆ ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಮೇಲಿನಿಂದ ನೀರು ಸೋರುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು. ಈ ವೇಳೆ ಇದು ಏರ್ ಇಂಡಿಯಾ ಅಲ್ಲ ಸುಮ್ಮನೇ ಏರ್ ಇಂಡಿಯಾದ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಏರ್ಪಟ್ಟಿತ್ತು. ಈಗ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯೇ ಈ ವಿಚಾರ ನಡೆದಿದ್ದು ನಿಜ ಎಂಬ ವಿಚಾರವನ್ನು ಖಚಿತಪಡಿಸಿದೆ.
ನವೆಂಬರ್ 18 ರಂದು ಈ ಘಟನೆ ನಡೆದಿದೆ. ಲಂಡನ್‌ನ ಗಾಟ್ವಿಕ್ ವಿಮಾನ ನಿಲ್ದಾಣದಿಂದ ಭಾರತದ ಅಮೃತ್‌ಸರ್‌ಗೆ ಹೊರಟ ಏರ್ ಇಂಡಿಯಾದ AI169 ವಿಮಾನದಲ್ಲಿ ಈ ಘಟನೆ ನಡೆದಿದ್ದು ನಿಜ ಎಂಬುದನ್ನು ಏರ್ ಇಂಡಿಯಾ ಏರ್‌ಲೈನ್ಸ್ ಖಚಿತಪಡಿಸಿದೆ. ವಿಮಾನವು ಕ್ಯಾಬಿನ್‌ನೊಳಗೆ ಘನೀಕರಣಗೊಂಡ ನೀರಿನಿಂದ ಈ ಅಪರೂಪದ ಘಟನೆ ನಡೆದಿದೆ ಎಂದು ಏರ್‌ಲೈನ್ಸ್ ಹೇಳಿದೆ.
ಹೃದಯಾಘಾತ: ದೆಹಲಿ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾದ ಯುವ ಪೈಲಟ್ ಸಾವು
ಈ ನೀರು ಬೀಳುವ ಜಾಗದಲ್ಲಿ ಕುಳಿತಿದ್ದ ನಮ್ಮ ಕೆಲವು ಅತಿಥಿಗಳನ್ನು ಕೂಡಲೇ ಖಾಲಿ ಇದ್ದ ಬೇರೆ ಸೀಟುಗಳಿಗೆ ಕಳುಹಿಸಿಕೊಡಲಾಯಿತು. ವಿಮಾನದ ಕ್ಯಾಬಿನ್ ಸಿಬ್ಬಂದಿ ಬಾಧಿತ ಅತಿಥಿಗಳನ್ನು(ಪ್ರಯಾಣಿಕರನ್ನು) ಆರಾಮವಾಗಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದರು. ವಿಮಾನದಲ್ಲಿರುವ ಅತಿಥಿಗಳ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಏರ್ ಇಂಡಿಯಾ ಬದ್ಧವಾಗಿದೆ ಮತ್ತು ಈ ಅನಿರೀಕ್ಷಿತ ಘಟನೆಗೆ ನಾವು ವಿಷಾದಿಸುತ್ತೇವೆ ಎಂದು ಏರ್ ಇಂಡಿಯಾ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಇನ್ನು ಈ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಏರ್ ಇಂಡಿಯಾದ ಈ ಅವಾಂತರವನ್ನು 45 ಸೆಕೆಂಡ್‌ಗಳ ವೀಡಿಯೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಳೆದ ಸೋಮವಾರ ಪೋಸ್ಟ್ ಮಾಡಿದ್ದರು. ಈ ವೀಡಿಯೋದಲ್ಲಿ ಕಾಣಿಸುವಂತೆ ವಿಮಾನದ ಪ್ರಯಾಣಿಕರು ವಿಮಾನದಿಂದ ತರತರನೇ ಸುರಿಯುತ್ತಿರುವ ನೀರಿನಿಂದಾಗಿ ಸಮೀಪದಲ್ಲಿದ್ದ ಪ್ರಯಾಣಿಕರು ತಮ್ಮ ಮೇಲೆ ನೀರು ಬೀಳದಂತೆ ದೂರ ಸರಿದು ಕುಳಿತಿರುವುದನ್ನು ನೋಡಬಹುದು. ವೀಡಿಯೋದ ಕೊನೆಯಲ್ಲಿ ವಿಮಾನದ ಪೈಲಟ್ ಈ ಅವ್ಯವಸ್ಥೆಯ ಬಗ್ಗೆ ಪ್ರಯಾಣಿಕರಿಗೆ ವಿವರಿಸುವುದನ್ನು ಕೇಳಬಹುದಾಗಿದೆ.
ದೀಪಾವಳಿಗೆ ಏರ್ ಇಂಡಿಯಾ ಗಿಫ್ಟ್, ಬೆಂಗಳೂರು-ಮಂಗಳೂರಿಗೆ 2 ಹೊಸ ವಿಮಾನ ಸೇವೆ ಘೋಷಣೆ!
ಈ ವೀಡಿಯೋ ಪೋಸ್ಟ್ ಮಾಡಿದ ವ್ಯಕ್ತಿ, 'ಏರ್ ಇಂಡಿಯಾ, ಫ್ಲೈ ನಮ್ಮೊಂದಿಗೆ ಪ್ರಯಾಣಿಸಿ ಇದು ಕೇವಲ ಪ್ರಯಾಣ ಅಲ್ಲ, ಇದೊಂದು ಅದ್ಭುತ ಅನುಭವ' ಎಂದು ಬರೆದು ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ವೀಡಿಯೋ ಪೋಸ್ಟ್ ಆದ ಸಂದರ್ಭದಲ್ಲಿ ಅನೇಕರು ಇದು ಯಾವಾಗಿನದ್ದೋ ವೀಡಿಯೋ ಇದು ಏರ್ ಇಂಡಿಯಾದ ವೀಡಿಯೋ ಅಲ್ಲ, ಏರ್ ಇಂಡಿಯಾದ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದರು. ಆದರೆ ಈಗ ಏರ್ ಇಂಡಿಯಾವೇ ಖಚಿತಪಡಿಸಿರುವುದರಿಂದ ಎಲ್ಲರಿಗೂ ಸ್ಪಷ್ಟತೆ ಸಿಕ್ಕಂತಾಗಿದೆ.
ಕೆಲ ದಿನಗಳ ಹಿಂದಷ್ಟೇ ಏರ್ ಇಂಡಿಯಾಗೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ನೀಡದ ಕಾರಣಕ್ಕೆ ಡಿಜಿಸಿಎ 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು. . ನ.3ರಂದು ಪ್ರಾಧಿಕಾರವು (DGCA) ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿತ್ತು. ಅದರ ಸ್ಪಂದನೆಯಲ್ಲಿ ತನ್ನ ನಿಯಮಕ್ಕೆ ತಕ್ಕಂತೆ ನಾಗರಿಕ ವಿಮಾನಯಾನ ಅವಶ್ಯಕತೆ ಪೂರೈಸದ ವಿವರಣೆ ನೀಡಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಗೆ ದಂಡ ವಿಧಿಸಿ ಡಿಜಿಸಿಎ ಆದೇಶಿಸಿತ್ತು.
ಏರ್ ಇಂಡಿಯಾ ಸಂಸ್ಥೆಯ ಸೇವೆಗಳನ್ನು ದೆಹಲಿ, ಕೊಚ್ಚಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಸಿದ ನಿಯಂತ್ರಣಾ ಪ್ರಾಧಿಕಾರ, ತನ್ನ ಪ್ರಯಾಣಿಕರಿಗೆ ವಿಳಂಬದ ಸಮಯದಲ್ಲಿ ಹೋಟೆಲ್ ವಾಸ್ತವ್ಯ ಒದಗಿಸಿರುವುದಿಲ್ಲ, ತಮ್ಮ ಕೆಲವು ಸಿಬ್ಬಂದಿಗೆ ತರಬೇತಿ ನೀಡಿರುವುದಿಲ್ಲ ಮತ್ತು ಬಿಜಿ಼ನೆಸ್ ಕ್ಲಾಸ್ ಪ್ರಯಾಣಿಕರಿಗೆ ಕಾರಣಾಂತರಗಳಿಂದ ಎಕಾನಮಿ ಕ್ಲಾಸ್ ಸೀಟುಗಳನ್ನು ನೀಡಿದ ಸಂದರ್ಭದಲ್ಲಿ ಸೂಕ್ತ ಪರಿಹಾರವನ್ನು ನೀಡಿಲ್ಲ ಎಂಬ ಅಂಶಗಳನ್ನು ಪರಿಗಣಿಸಿ ನೋಟಿಸ್ ನೀಡಿತ್ತು.