ಚೀನಾ ದೇಶವು 'ಅರಾಪೈಮಾ' ತಳಿಯ ನೈಜ ಮೀನಿನಂತೆಯೇ ಕಾಣುವ ಅತ್ಯಾಧುನಿಕ ಎಐ ರೋಬೋಟಿಕ್ ಡ್ರೋನ್ ಮೀನನ್ನು ಅಭಿವೃದ್ಧಿಪಡಿಸಿದೆ. 'BG-5 ಗೋಲ್ಡನ್ ಡ್ರಾಗನ್ ಫಿಶ್' ಎಂದು ಕರೆಯಲ್ಪಡುವ ಇದು ಆಳಸಮುದ್ರದ ಕಣ್ಣಾವಲು ಮತ್ತು ಗೂಢಚಾರಿಕೆಗೆ ಬಳಕೆಯಾಗಲಿದೆ. ಇದು ಶತ್ರು ದೇಶಗಳ ಕರಾವಳಿ ಭದ್ರತೆಗೆ ಆತಂಕ ತಂದೊಡ್ಡಿದೆ.
ಬೀಜಿಂಗ್ (ಸೆ.16): ನೋಡಲು ಬೃಹತ್ ಗಾತ್ರದ ‘ಅರಾಪೈಮಾ’ (Arapaima) ತಳಿಯ ನೈಜ ಮೀನಿನಂತೆಯೇ ಕಾಣುತ್ತದೆ. ನೀರಿನಲ್ಲಿ ಸಾಮಾನ್ಯ ಮೀನಿನಂತೆ ಸರಾಗವಾಗಿ ಈಜುತ್ತದೆ. ದಂಡೆಗೆ ತಂದಿಟ್ಟರೆ ಜೀವಂತ ಮೀನಿನಂತೆ ನಡುಗುತ್ತದೆ. ಆದರೆ, ಇದನ್ನು ಹಿಡಿದು ಸಾರು ಮಾಡಲು ಸಾಧ್ಯವಿಲ್ಲ. ಏಕೆಂದರೆ ಇದು ಚೀನಾ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ರೋಬೋಟಿಕ್ 'ಡ್ರೋನ್ ಮೀನು'! ಆಳಸಮುದ್ರದ ಸುದೀರ್ಘ ಕಣ್ಣಾವಲು, ಗೂಢಚಾರಿಕೆ ಹಾಗೂ ಸಾಗರ ಸಂಶೋಧನೆಗಾಗಿ ಚೀನಾದ ಎಂಜಿನಿಯರ್‌ಗಳು ಈ ಕ್ರಾಂತಿಕಾರಿ ರೋಬೋಟ್ ಮೀನನ್ನು ವಿನ್ಯಾಸಗೊಳಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಆಧಾರಿತವಾಗಿ ಕಾರ್ಯನಿರ್ವಹಿಸುವ ಈ ರೋಬೋಟ್ ಮೀನು, ನೀರಿನಡಿಯಲ್ಲಿ ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.
'BG-5 ಗೋಲ್ಡನ್ ಡ್ರಾಗನ್ ಫಿಶ್' ಅನಾವರಣ
ಚೀನಾದ ಪ್ರಸಿದ್ಧ 'ಬೋಯಾಗೊಂಗ್ಡಾವೊ ಮರೀನ್ ಟೆಕ್ನಾಲಜಿ ಗ್ರೂಪ್' (Boyagongdao Marine Technology Group) ಈ ಯಾಂತ್ರಿಕ ಮೀನನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ "BG-5 ಗೋಲ್ಡನ್ ಡ್ರಾಗನ್ ಫಿಶ್" ಎಂದು ಹೆಸರಿಡಲಾಗಿದೆ. ಬೀಜಿಂಗ್‌ನಲ್ಲಿ ನಡೆದ ಪ್ರತಿಷ್ಠಿತ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ (Beijing International Trade Fair) ಈ ಎಐ ರೋಬೋಟಿಕ್ ಮೀನನ್ನು ಪ್ರಥಮ ಬಾರಿಗೆ ಜಗತ್ತಿಗೆ ಪ್ರದರ್ಶಿಸಲಾಯಿತು.
ಈ ರೋಬೋಟ್ ಮೀನಿನಲ್ಲಿ ವಿಶೇಷ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಇವುಗಳ ನೆರವಿನಿಂದ ನೀರಿನೊಳಗಿನ ಅಡೆತಡೆಗಳು, ಬಂಡೆಗಳು ಅಥವಾ ಇತರ ವಸ್ತುಗಳನ್ನು ಸ್ವಯಂ ಗುರುತಿಸಿ, ಸುರಕ್ಷಿತವಾಗಿ ದಾರಿ ಬದಲಾಯಿಸಿಕೊಂಡು ಮುನ್ನಡೆಯುವ ಚಾಣಾಕ್ಷತೆ ಇದಕ್ಕಿದೆ. ಇದಕ್ಕಾಗಿ ಮುಂಚಿತವಾಗಿ ಪ್ರೋಗ್ರಾಂ ಮಾಡಿದ ಹಾದಿಗಳನ್ನೇ ನೆಚ್ಚಿಕೊಳ್ಳಬೇಕಾದ ಅಗತ್ಯವಿಲ್ಲ.
ಬಹುಮುಖ ಬಳಕೆ ಹಾಗೂ ತಾಂತ್ರಿಕ ವೈಶಿಷ್ಟ್ಯಗಳು
ನೀರಿನೊಳಗಿನ ಭದ್ರತಾ ಕಣ್ಣಾವಲು, ಆಳಸಮುದ್ರದ ಪೋಷಕಾಂಶ ಹಾಗೂ ಜೀವವೈವಿಧ್ಯದ ಸಂಶೋಧನೆ ಮತ್ತು ಕರಾವಳಿ ಭದ್ರತಾ ಸಮೀಕ್ಷೆಗಾಗಿ ಈ ಯಂತ್ರವನ್ನು ಬಳಸಬಹುದು ಎಂದು ತಯಾರಿಕಾ ಸಂಸ್ಥೆ ಹಕ್ಕು ಸಾಧಿಸಿದೆ. ಅಷ್ಟೇ ಅಲ್ಲದೆ, ಒಂದಕ್ಕಿಂತ ಹೆಚ್ಚು ರೋಬೋಟ್ ಮೀನುಗಳು ಜಂಟಿಯಾಗಿ 'ಗುಂಪಿನ ರೂಪದಲ್ಲಿ' (Swarm operation) ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನೂ ಹೊಂದಿವೆ ಎಂದು ವರದಿಗಳು ತಿಳಿಸಿವೆ.
ವಿಶ್ವದ ಹಲವು ದೇಶಗಳು ಈಗಾಗಲೇ ಕೀಟಗಳು ಮತ್ತು ಕಡಲ ಜೀವಿಗಳನ್ನು ಹೋಲುವ ರೋಬೋಟ್‌ಗಳನ್ನು ಸಿದ್ಧಪಡಿಸಿವೆಯಾದರೂ, ಚೀನಾದ ಈ ರೋಬೋಟ್ ಮೀನಿನ ಪ್ರಮುಖ ವಿಶೇಷತೆಯೆಂದರೆ ಇದನ್ನು ಸಾಧಾರಣ ಕಣ್ಣುಗಳಿಂದ ನೈಜ ಮೀನಿನಿಂದ ಬೇರ್ಪಡಿಸುವುದು ಕಷ್ಟಸಾಧ್ಯ.
ಸಾಮಾನ್ಯ ಮೀನುಗಳು ಈಜುವಾಗ ಮಧ್ಯೆ ಮಧ್ಯೆ ಕ್ಷಣಕಾಲ ನಿಂತು ಸುತ್ತಮುತ್ತಲಿನ ವಾತಾವರಣವನ್ನು ವೀಕ್ಷಿಸುವ ನೈಸರ್ಗಿಕ ಶೈಲಿಯನ್ನೇ ಈ ರೋಬೋಟ್ ಮೀನು ಅತ್ಯಂತ ನಿಖರವಾಗಿ ಅನುಕರಿಸುತ್ತದೆ.
ಶತ್ರು ದೇಶಗಳಿಗೆ ಆತಂಕ
ಪ್ರಸ್ತುತ ಇದನ್ನು ಸಾಗರ ಸಂಶೋಧನೆಗೆ ಬಳಸಲಾಗುತ್ತಿದೆ ಎಂದು ಚೀನಾ ಹೇಳಿಕೊಳ್ಳುತ್ತಿದ್ದರೂ, ಭವಿಷ್ಯದಲ್ಲಿ ಇಂತಹ ಕಣ್ಣಿಗೆ ಕಾಣದ ರೋಬೋಟಿಕ್ ಮೀನುಗಳನ್ನು ಶತ್ರು ದೇಶಗಳ ಕರಾವಳಿ ಮತ್ತು ಸಾಗರ ಗಡಿಗಳನ್ನು ರಹಸ್ಯವಾಗಿ ಕಾಯಲು ಹಾಗೂ ಅಗತ್ಯಬಿದ್ದಾಗ ಜಲಾವೃತ ದಾಳಿ ನಡೆಸಲು ಚೀನಾ ಬಳಸಿಕೊಳ್ಳಬಹುದು ಎಂಬ ತೀವ್ರ ಕಳವಳ ಮತ್ತು ಆತಂಕವನ್ನು ಜಾಗತಿಕ ಭದ್ರತಾ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ.


