ಕೋಲ್ಕತಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಸುಮಾರು 10 ಟನ್ ಶಂಕಾಸ್ಪದ ಸಿಂಥೆಟಿಕ್ ಅಡಕೆಯನ್ನು ಕೋಲಾರದ ಮುಳಬಾಗಿಲು ಬಳಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕ್ಯಾನ್ಸರ್‌ನಂತಹ ಗಂಭೀರ ರೋಗಗಳಿಗೆ ಕಾರಣವಾಗುವ ಈ ನಕಲಿ ಅಡಕೆಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಚಿವ ಖಾದರ್ ಹೇಳಿದ್ದೇನು?
ಮುಳಬಾಗಿಲು/ಮಂಗಳೂರು: ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಕಾ ನಿಷೇಧ ಸುದ್ದಿಯ ನಡುವೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಕೋಲ್ಕತಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 1 ಕಂಟೇನರ್‌ನಲ್ಲಿದ್ದ 96 ಮೂಟೆಯಲ್ಲಿ ಸುಮಾರು 10 ಟನ್ ಶಂಕಾಸ್ಪದ ಸಿಂಥೆಟಿಕ್ ಅಡಕೆಯನ್ನು ಆರೋಗ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಾಗಣೆ ಮಾಡುತ್ತಿದ್ದ ಚಾಲಕ, ಕ್ಲೀನರ್‌ನನ್ನು ಬಂಧಿಸಿದ್ದಾರೆ.
ಸಿಂಥೆಟಿಕ್ ಅಡಕೆ ಸಾಗಿಸುತ್ತಿದ್ದ ಟ್ರಕ್ ವಶಕ್ಕೆ
ಈ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ‘ಕೋಲಾರದಲ್ಲಿ ಸಿಂಥಟಿಕ್ ಅಡಕೆ ಸಾಗಿಸುತ್ತಿದ್ದ ಟ್ರಕ್‌ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿದ ಅಡಕೆ ಸಿಂಥೆಟಿಕ್ ಹೌದೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಅಡಕೆಯ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎರಡು ವಾರದೊಳಗೆ ಫಲಿತಾಂಶ ಬಂದ ಬಳಿಕ ಕಳಪೆ ಗುಣಮಟ್ಟದ ಅಡಕೆಯ ಕುರಿತಂತೆ ನಿಖರವಾಗಿ ಹೇಳಬಹುದಾಗಿದೆ’ ಎಂದರು.
ಕಳಪೆ ಆಮದು ಅಡಕೆ ಪೂರೈಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ
’ರಾಜ್ಯದಲ್ಲೇ ಹೇರಳವಾಗಿ ಅಡಕೆ ಬೆಳೆಯುವಾಗ ಹೊರಗಿನ ಅಡಕೆ ಏಕೆ ಇಲ್ಲಿಗೆ ಬರಬೇಕು. ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಆಹಾರ ಇಲಾಖೆಯ ಅಧಿಕಾರಿಗಳ ತಂಡಕ್ಕೆ ಸೂಚನೆ ನೀಡಲಾಗಿದೆ. ಕಳಪೆ ಆಮದು ಅಡಕೆ ಪೂರೈಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಇಂತಹ ಕಳಪೆ ವಸ್ತುಗಳ ಪರಿಶೀಲನೆಗೆ ಶೀಘ್ರವೇ ಅತ್ಯಾಧುನಿಕ ಪ್ರಯೋಗಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು, ಇಲ್ಲವೇ ಅತ್ಯಾಧುನಿಕ ಇತರೆ ಲ್ಯಾಬ್‌ಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು’ ಎಂದು ನುಡಿದರು.
‘ಬಾಂಗ್ಲಾದೇಶ, ನೇಪಾಳ ಸೇರಿದಂತೆ ವಿವಿಧೆಡೆಯಿಂದ ಅಡಕೆ ಬರುತ್ತಿದೆ. ಗುಟ್ಕಾ ನಿಷೇಧಿಸಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆದರೆ ಅಡಕೆಯನ್ನು ನಿಷೇಧಿಸಿದರೆ ಅಡಕೆ ಬೆಳೆಗಾರರಿಗೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಎಲ್ಲೆಲ್ಲಿಂದಲೋ ಇಂಥ ಅಡಕೆ ಬರುತ್ತಿರುವುದನ್ನು ಗಮನಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿಯೇ ಗುಟ್ಕಾ ನಿಷೇಧಕ್ಕೆ ಒತ್ತು ನೀಡಲಾಗಿತ್ತು’ ಎಂದರು.
ಮುಳಬಾಗಿಲು ಬಳಿ ಆಗಿದ್ದೇನು?:
ಕೋಲ್ಕತಾದಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಬಣ್ಣ ಮಿಶ್ರಿತ ಅಥವಾ ಚೀನಾ ಅಡಕೆಯನ್ನು ಕೋಲಾರ ಜಿಲ್ಲೆಯ ಗಡಿ ಮುಳಬಾಗಿಲು ತಾಲೂಕಿನ ನಂಗಲಿ ಬಳಿ ವಶಕ್ಕೆ ಪಡೆಯಲಾಗಿದೆ.
ಮುಳಬಾಗಿಲು ವೈದ್ಯಾಧಿಕಾರಿ ಡಾ.ಸುಗುಣಾ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ವಶಕ್ಕೆ ಪಡೆದ ಅಡಕೆ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಡಾ. ಸುಗುಣಾ, ಖಚಿತ ಮಾಹಿತಿ ಹಿನ್ನೆಲೆ ಕಂಟೈನರ್ ಸೀಜ್ ಮಾಡಿ ಹಾಗೂ ನೀಲಿ, ಕೆಂಪು, ನಾರ್ಮಲ್ ಮೂರು ರೀತಿಯ ಅಡಿಕೆ ಲೀಗಲ್ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಕ್ಯಾಂಟರ್‌ನಿಂದ ನೀಲಿ, ಕೆಂಪು ಮತ್ತು ಸಾಮಾನ್ಯ ಬಣ್ಣದ ಅಡಿಕೆ ಮಾದರಿ ಪಡೆದಿದ್ದೇವೆ. ಮೇಲ್ನೋಟಕ್ಕೆ ತಿಳಿ ಕೆಂಪು ಬಣ್ಣದ ಅಡಕೆಯಲ್ಲಿ ಕಲಬೆರಕೆ ಕಂಡುಬಂದಿದೆ. 3 ಬಣ್ಣದ ಮಾದರಿಯ ಅಡಿಕೆಯನ್ನು ಪರೀಕ್ಷೆಗೆ ರವಾನಿಸುತ್ತೇವೆ. ನಂಗಲಿ ಪೊಲೀಸರು ಚಾಲಕ ಹಾಗೂ ಕ್ಲೀನರ್‌ನನ್ನು ಬಂಧಿಸಿದ್ದಾರೆ. 7 ದಿನದೊಳಗೆ ಲ್ಯಾಬ್ ರಿಪೋರ್ಟ್ ಬರಲಿದೆ. ಬಂದ ನಂತರ ಕ್ರಮ ಆಗಲಿದೆ ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕವಾಗಿ ಅಡಕೆಯನ್ನು ಸಂಗ್ರಹಿಸಿ, ಹಂಡೆಯಲ್ಲಿ ಕುದಿಸಿ, ಬೆಂದ ಅಡಕೆಯು ಸಾಮಾನ್ಯವಾಗಿ ಕಡುಗೆಂಪು ಬಣ್ಣಕ್ಕೆ ಬದಲಾಗುತ್ತದೆ. ಆದರೆ ಸಿಂಥೆಟಿಕ್ ಅಡಕೆಯನ್ನು ವಿವಿಧ ಅಂಶಗಳನ್ನು ಬೆರೆಸಿ, ಕೃತಕ ಬಣ್ಣಗಳನ್ನು ಬಳಸಿ ತಯಾರಿಸಲಾಗುತ್ತದೆ. ತಾಳೆ ಬೀಜ, ಮರದ ರೆಂಬೆ/ಕಾಂಡದ ತಿರುಳುಗಳು, ಕಳಪೆ ಗುಣಮಟ್ಟದ ಅಡಕೆಗಳನ್ನು ಬೆರೆಸಿ, ಅದಕ್ಕೆ ಕೆಂಪು, ಹಳದಿ, ನೀಲಿ ರೀತಿ ವಿವಿಧ ಬಣ್ಣಗಳನ್ನು ಬೆರೆಸಲಾಗುತ್ತದೆ. ಹೀಗೆ ತಯಾರಿಸಿದ ಸಿಂಥೆಟಿಕ್ ಅಡಕೆಯನ್ನು ಬಳಸುವುದರಿಂದ ಕ್ಯಾನ್ಸರ್‌ನಂಥ ವಿವಿಧ ರೋಗಗಳು ಬರಲಿದ್ದು, ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಸಿಂಥೆಟಿಕ್ ಅಡಕೆ ಎಲ್ಲಿ ಬಳಕೆ?
ಮುಖ್ಯವಾಗಿ ಕಡಿಮೆ ಬೆಲೆಯ ಮತ್ತು ಕಳಪೆ ಗುಣಮಟ್ಟದ ಪಾನ್ ಮಸಾಲಾ, ಗುಟ್ಕಾ ಮತ್ತು ಪರಿಮಳಯುಕ್ತ ಸೋಂಫು/ಸುಪಾರಿಗಳಲ್ಲಿ ನೈಜ ಅಡಿಕೆ ಬದಲು ಸಿಂಥೆಟಿಕ್ ಅಡಿಕೆಯನ್ನು ಕಲಬೆರಕೆ ಮಾಡಲಾಗುತ್ತದೆ.
- ಕೋಲ್ಕತಾದಿಂದ ಬೆಂಗಳೂರಿಗೆ ಬರುತ್ತಿದ್ದ ಕ್ಯಾಂಟರ್ ಜಪ್ತಿ
- ಕೋಲಾರ ಜಿಲ್ಲೆಯ ಮುಳಬಾಗಿಲಿನ ಗಡಿ ಭಾಗದಲ್ಲಿ ದಾಳಿ
- ದಾಳಿ ವೇಳೆ ಚಾಲಕ, ಕ್ಲೀನರ್ ಬಂಧಿಸಿದ ಪೊಲೀಸರು
- ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಆರೋಗ್ಯ ಇಲಾಖೆ
- ಇಂದು ಸಿಂಥೆಟಿಕ್ ಅಡಕೆ, ತನಿಖೆ ನಡೆಸುತ್ತೇವೆ: ಖಾದರ್


