ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ 19 ವರ್ಷದ ವಿದ್ಯಾರ್ಥಿ ಸ್ಯಾಮ್ ನೆಲ್ಸನ್ ಚಾಟ್‌ಜಿಪಿಟಿ ನೀಡಿದ ಸಲಹೆಯಂತೆ ಡ್ರಗ್ಸ್ ಮಿಶ್ರಣ ಸೇವಿಸಿ ಸಾವನ್ನಪ್ಪಿದ್ದಾನೆ. ಕ್ರಾಟಮ್, ಕ್ಸಾನಾಕ್ಸ್ ಮತ್ತು ಆಲ್ಕೋಹಾಲ್ ಮಿಶ್ರಣ ಸುರಕ್ಷಿತ ಎಂದು ಚಾಟ್‌ಜಿಪಿಟಿ ಹೇಳಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಗೆ ಈ ಘಟನೆ ಸಾಕ್ಷಿಯಾಗಿದೆ.

ಈಗಿನ ಬಹುತೇಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಚಾಟ್​ಜಿಪಿ ಎನ್ನೋದು ದಿನನಿತ್ಯದ ಗೀಳಾಗಿಬಿಟ್ಟಿದೆ. ಏನು ಸಮಸ್ಯೆಗೆ ಪರಿಹಾರ ಬೇಕಿದ್ದರೂ ಚಾಟ್​ಜಿಪಿಟಿ ಬಳಸುತ್ತಿದ್ದಾರೆ. ಚಿಕ್ಕಪುಟ್ಟ ವಿಷಯಗಳಿಂದ ಹಿಡಿದು ದೊಡ್ಡ ದೊಡ್ಡ ಸಮಸ್ಯೆಗಳ ಪರಿಹಾರಕ್ಕೂ ಹಿರಿಯರ ಮಾತನ್ನೂ ಕೇಳದೇ ಎಲ್ಲದ್ದಕ್ಕೂ ಚಾಟ್​ಜಿಪಿಟಿ ಬಳಸುವುದು ಎಷ್ಟೋ ಮನೆಗಳಲ್ಲಿ ಕಾಮನ್​ ಆಗಿಬಿಟ್ಟಿದೆ. ಇದೀಗ 19 ವರ್ಷದ ಯುವಕನೊಬ್ಬ ಸಮಸ್ಯೆಯೊಂದಕ್ಕೆ ಪರಿಹಾರ ಕೇಳಿ, ಅದರಂತೆ ನಡೆದುಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಸ್ಯಾಮ್ ನೆಲ್ಸನ್, ಮರ್ಸಿಡ್ ಪಾಪ್ ಸಂಸ್ಕೃತಿಯಿಂದ ಹಿಡಿದು ಮನೆಕೆಲಸದವರೆಗೆ ಎಲ್ಲದಕ್ಕೂ ChatGPT ಅನ್ನು ಬಳಸುತ್ತಿದ್ದ. ಕೊನೆಗೆ ಇದೇ ಆತನಿಗೆ ಮುಳುವಾಗಿದೆ. ಅದರ ಮಾತನ್ನು ನಂಬಿ ರಾಸಾಯನಿಕ ಮಿಶ್ರಣವನ್ನು ಸೇವಿಸಿ ಸಾವನ್ನಪ್ಪಿದ್ದಾನೆ. ಈ ಕುರಿತು ಆತನ ತಾಯಿಯೇ ಮಾಹಿತಿ ನೀಡಿದ್ದಾರೆ. ChatGPT ತನ್ನ 19 ವರ್ಷದ ಮಗನಿಗೆ ಡ್ರಗ್ಸ್ ನ ಡೋಸೇಜ್ ವಿಪರೀತವಾಗುವಂತೆ ಮಾಡಿದೆ ಕೆಲವು ಗಂಟೆಗಳ ನಂತರ ಅವನು ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಈ ವಿಷಯ ಅಮೆರಿಕದ ಸಂಸತ್ತಿನಲ್ಲಿಯೂ ಚರ್ಚೆಗೆ ಬಂದಿದೆ.

ಡ್ರಗ್ಸ್​ ಕುರಿತು ಪ್ರಶ್ನೆ

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ, ಸ್ಯಾಮ್ ನೆಲ್ಸನ್, ಉತ್ತಮ ಡ್ರಗ್ಸ್​ ಯಾವುದು ಎನ್ನುವ ಪ್ರಶ್ನೆ ಕೇಳಿದ್ದಾನೆ. ಮೊದ ಮೊದಲು ಡ್ರಗ್ಸ್ ಬಗ್ಗೆ ಯುವಕ ಕೇಳಿದ್ದಕ್ಕೆ ಉತ್ತರಿಸಲು ನಿರಾಕರಿಸುತ್ತಿದ್ದ ಚಾಟ್ ಬಾಟ್, ಆ ನಂತರದಲ್ಲಿ ಆತನೊಂದಿಗೆ ಎಲ್ಲದಕ್ಕೂ ಪ್ರೋತ್ಸಾಹಿಸುವ ಸ್ನೇಹಿತನಂತೆ ವರ್ತಿಸಲು ಪ್ರಾರಂಭಿಸಿತು. ಆರಂಭದಲ್ಲಿ, ಡ್ರಗ್ಸ್​ ಕುರಿತು ಪ್ರಶ್ನೆ ಕೇಳಿದಾಗ, 'ನಾನು ಈ ವಿಷಯವನ್ನು ನಿಮ್ಮೊಂದಿಗೆ ಚರ್ಚಿಸಲು ಸಾಧ್ಯವಿಲ್ಲ' ಎಂದು ಹೇಳಿತ್ತು. ಬಳಿಕ ಇದೇ ಪ್ರಶ್ನೆ ಪುನರಾವರ್ತಿತವಾದಾಗ ಒಂದು ಹೆಸರು ಹೇಳಿದೆ. ಕ್ರಾಟಮ್, ಕ್ಸಾನಾಕ್ಸ್ ಮತ್ತು ಆಲ್ಕೋಹಾಲ್‌ನ ಮಾರಕ ಸಂಯೋಜನೆಯನ್ನು ಸೇವಿಸಲು ಅದು ಹೇಳಿದ್ದು, ಅದರಂತೆ ಯುವಕ ಸೇವಿಸಿದ್ದಾನೆ. ನಂತರ ಉಸಿರಾಟದ ವೈಫಲ್ಯದಿಂದ ನಿಧನರಾಗಿರುವುದಾಗಿ ತಾಯಿ ತಿಳಿಸಿದ್ದಾರೆ. "ಸ್ಯಾಮ್ ಸಾಯುವ ಕೆಲವೇ ಗಂಟೆಗಳ ಮೊದಲು, ಕ್ರಾಟಮ್ ಮತ್ತು ಕ್ಸಾನಾಕ್ಸ್ ನ್ನು ಮಿಶ್ರಣ ಮಾಡುವುದು ಸುರಕ್ಷಿತ ಎಂದು ಚಾಟ್‌ಜಿಪಿಟಿ ಅವನಿಗೆ ಸಲಹೆ ನೀಡಿತ್ತು. ಅದನ್ನೇ ಆತ ನಂದಿದ್ದ!

ಉಲ್ಟಾ ಹೊಡೆದ ಚಾಟ್​ಜಿಪಿಟಿ

ಈ ಘಟನೆ ನಡೆದ ಬಳಿಕ ಚಾಟ್​ಜಿಪಿಟಿ ಉಲ್ಟಾ ಹೊಡೆದಿದೆ. ಈಗ ಈ ಮಿಶ್ರಣ ಸುರಕ್ಷಿತವಲ್ಲ, ಅದನ್ನು ಸೇವಿಸಬೇಡಿ ಎನ್ನುತ್ತಿದೆ. ಆದರೆ ಅದಾಗಲೇ ಒಂದು ಜೀವವನ್ನು ಚಾಟ್​ಜಿಪಿಟಿ ಬಲಿ ಪಡೆದಿದೆ. ಇದು ಒಂದು ಉದಾಹರಣೆ ಮಾತ್ರ. ಹೀಗೆ ಎಲ್ಲದ್ದಕ್ಕೂ ತಂತ್ರಜ್ಞಾನದ ಮೇಲೆ ಅವಲಂಬಿತವಾದರೆ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ಎನ್ನುವುದನ್ನು ಈ ಪ್ರಕರಣ ಸಾಕ್ಷಿಯಾಗಿದೆ.