ದುಬಾರಿ ಮೊಬೈಲ್ ರೀಚಾರ್ಜ್‌ಗಳಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ರಿಲೀಫ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಟೆಲಿಕಾಂ ಕಂಪನಿಗಳ ಮೇಲಿನ ತೆರಿಗೆ ಮತ್ತು ಇತರ ಶುಲ್ಕಗಳನ್ನು ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಜಿಯೋ, ಏರ್‌ಟೆಲ್ ಮತ್ತು ವಿಐ ಗ್ರಾಹಕರ ಮಾಸಿಕ ರೀಚಾರ್ಜ್ ದರಗಳು ಶೇ. 10 ರಿಂದ 15 ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.

ನವದೆಹಲಿ: ದುಬಾರಿ ಮೊಬೈಲ್‌ ರೀಚಾರ್ಜ್‌ ಮಾಡಿ ಸುಸ್ತಾದವರಿಗೆ ಕೇಂದ್ರ ಸರ್ಕಾರ ಸಮಾಧಾನಕರ ಸುದ್ದಿ ನೀಡಲು ಪ್ಲಾನ್‌ ಮಾಡಿದೆ. ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ವಿಶೇಷ ಯೋಜನೆ ಸಿದ್ಧಪಡಿಸಿದ್ದು, ಮುಂಬರುವ ದಿನಗಳಲ್ಲಿ ಜಿಯೋ (Jio), ಏರ್‌ಟೆಲ್ (Airtel) ಹಾಗೂ ವೊಡಾಫೋನ್-ಐಡಿಯಾ (Vi) ಗ್ರಾಹಕರಿಗೆ ಮಾಸಿಕ ರೀಚಾರ್ಜ್ ಪ್ಲಾನ್‌ಗಳು ಬಜೆಟ್ ಸ್ನೇಹಿಯಾಗಲಿವೆ. ಅಂದರೆ ಟೆಲಿಕಾಂ ವಲಯದ ಮೇಲಿನ ತೆರಿಗೆ ಮತ್ತು ಇತರ ಶುಲ್ಕಗಳನ್ನು ಕಡಿತಗೊಳಿಸಲು ಸರ್ಕಾರ ಚಿಂತಿಸುತ್ತಿದ್ದು, ಇದರ ನೇರ ಲಾಭ ಗ್ರಾಹಕರಿಗೆ ಸಿಗಲಿದೆ.

ಟೆಲಿಕಾಂ ಸಚಿವಾಲಯ ಮತ್ತು ನೀತಿ ಆಯೋಗದ ಪ್ರಕಾರ.. ಮೊಬೈಲ್ ಸೇವೆಗಳನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡಲು ಸರ್ಕಾರ ಎರಡು ಪ್ರಮುಖ ಹಂತಗಳಲ್ಲಿ ಕೆಲಸ ಮಾಡಲಿದೆ. ಮೊದಲನೇಯದಾಗಿ.. ಪ್ರಸ್ತುತ ಟೆಲಿಕಾಂ ಕಂಪನಿಗಳು ತಮ್ಮ ಒಟ್ಟು ಆದಾಯದಲ್ಲಿ ಶೇ. 8 ರಷ್ಟು ಮೊತ್ತವನ್ನು ಲೈಸೆನ್ಸ್ ಫೀಸ್ ಮತ್ತು ಸ್ಪೆಕ್ಟ್ರಮ್ ಬಳಕೆ ಶುಲ್ಕವಾಗಿ ಸರ್ಕಾರಕ್ಕೆ ಪಾವತಿಸುತ್ತಿವೆ. ಈ ಶೇ. 8 ರಷ್ಟು ಶುಲ್ಕವನ್ನು ಶೇ. 3 ರಿಂದ 4 ಕ್ಕೆ ಇಳಿಸಲು ಸರ್ಕಾರ ಯೋಜಿಸಿದೆ.

ಎರಡನೇಯದು ಕಂಪನಿಗಳು ಪಾವತಿಸುವ ಶೇ. 8 ರಷ್ಟು ಶುಲ್ಕದಲ್ಲಿ ಶೇ. 5 ರಷ್ಟು ಭಾಗ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ವಿಸ್ತರಣೆ ಹೋಗಲಿದೆ. ಅಂದರೆ ಅದಕ್ಕಾಗಿ ರೂಪಿಸಿರುವ ಸರ್ಕಾರಿ ನಿಧಿಗೆ (USO Fund) ಹೋಗುತ್ತದೆ. ಈ ನಿಧಿಯಲ್ಲಿ ಭಾರೀ ಮೊತ್ತ ಸಂಗ್ರಹ ಆಗಲಿದೆ. ಕೆಲವು ವರ್ಷಗಳ ಕಾಲ ಕಂಪನಿಗಳಿಂದ ಈ ಶೇ. 5 ರಷ್ಟು ಶುಲ್ಕ ವಸೂಲಿ ತಡೆಹಿಡಿಯಲು ಚಿಂತನೆ ನಡೆಸಿದೆ.

ಯಾಕೆ ಇಂಥ ನಿರ್ಧಾರ?

ಜುಲೈನಲ್ಲಿ ಟೆಲಿಕಾಂ ಕಂಪನಿಗಳು ರೀಚಾರ್ಜ್ ದರಗಳನ್ನು ಶೇ. 15 ರಿಂದ 25 ರಷ್ಟು ಹೆಚ್ಚಿಸಿವೆ. ಇದರಿಂದ 28, 56 ಮತ್ತು 84 ದಿನಗಳ ವ್ಯಾಲಿಡಿಟಿಯ ಜನಪ್ರಿಯ ಪ್ಲಾನ್‌ಗಳು ಭಾರಿ ದುಬಾರಿ ಆಗಿವೆ. ದರ ಏರಿಕೆಯಿಂದ ಗ್ರಾಮೀಣ ಭಾಗದ ಹಾಗೂ ಬಡ ವರ್ಗದ ಬಳಕೆದಾರರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಹಲವರು ರೀಚಾರ್ಜ್ ಮಾಡಿಸುವುದನ್ನೇ ನಿಲ್ಲಿಸಿದ್ದರು ಅಥವಾ ಸಿಮ್ ಕಾರ್ಡ್‌ಗಳನ್ನು ಬಂದ್ ಮಾಡಿದ್ದರು. ಸಂಸತ್ತಿನಿಂದ ಹಿಡಿದು ಸೋಶಿಯಲ್ ಮೀಡಿಯಾದವರೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರ ಈಗ ಟ್ರಾಯ್ (TRAI) ಮತ್ತು ಟೆಲಿಕಾಂ ಕಂಪನಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡಲು ಮುಂದಾಗಿದೆ.

ಗ್ರಾಹಕರಿಗೆ ಸಿಗುವ ಲಾಭ

ಒಂದು ವೇಳೆ ಸರ್ಕಾರ ತೆರಿಗೆ ಕಡಿತಗೊಳಿಸಿದರೆ ಟೆಲಿಕಾಂ ಕಂಪನಿಗಳು ಪ್ರಸ್ತುತ ಇರುವ ಪ್ಲಾನ್‌ಗಳ ದರವನ್ನು ಶೇ. 10 ರಿಂದ 15 ರಷ್ಟು ಕಡಿಮೆ ಮಾಡುವ ಸಾಧ್ಯತೆಯಿದೆ. ಪ್ರಸ್ತುತ 299 ರೂಪಾಯಿ ಇರುವ ಮಾಸಿಕ ಪ್ಲಾನ್ ಬೆಲೆ 250 ರಿಂದ 260 ರೂಪಾಯಿಗೆ ಇಳಿಕೆಯಾಗಬಹುದು. ವಾರ್ಷಿಕ ಪ್ಲಾನ್‌ಗಳ ಮೇಲೆ ಗ್ರಾಹಕರಿಗೆ ನೇರವಾಗಿ 300 ರಿಂದ 400 ರೂಪಾಯಿಯವರೆಗೆ ಉಳಿತಾಯವಾಗಲಿದೆ. ಪ್ರಮುಖ ಟೆಲಿಕಾಂ ಕಂಪನಿಗಳಿಗೆ ತೆರಿಗೆ ವಿನಾಯಿತಿ ಸಿಕ್ಕ ತಕ್ಷಣವೇ ಈ ಹೊಸ ದರಗಳು ಜಾರಿಗೆ ಬರುವ ನಿರೀಕ್ಷೆಯಿದೆ.