ಪ್ರಮುಖ ಎಐ ಸಂಸ್ಥೆ 'ಆಂಥ್ರೋಪಿಕ್'ನ ಮಾಜಿ ಸಂಶೋಧಕ ಜೇಕಬ್ ಕಾಕ್ಸನ್, ಕೃತಕ ಬುದ್ಧಿಮತ್ತೆಯು 2030ರ ವೇಳೆಗೆ ಮಾನವಕುಲದ ವಿನಾಶಕ್ಕೆ ಕಾರಣವಾಗಬಹುದು ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಸೆ.10): ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ತೀವ್ರಗತಿಯ ಬೆಳವಣಿಗೆಯು 2030 ರ ವೇಳೆಗೆ ಇಡೀ ಮಾನವಕುಲದ ವಿನಾಶಕ್ಕೇ ಕಾರಣವಾಗಬಹುದು ಎಂಬ ಅತ್ಯಂತ ಆತಂಕಕಾರಿ ಮತ್ತು ಗಂಭೀರ ಎಚ್ಚರಿಕೆಯನ್ನು ಪ್ರಮುಖ ಎಐ ಸಂಸ್ಥೆಯಾದ 'ಆಂಥ್ರೋಪಿಕ್'ನ (Anthropic) ಮಾಜಿ ಸಂಶೋಧಕ ಜೇಕಬ್ ಕಾಕ್ಸನ್ (Jacob Coxon) ನೀಡಿದ್ದಾರೆ. ಕಂಪನಿಯಿಂದ ತಮಗೆ ಲಭಿಸಬೇಕಿದ್ದ ದಶಲಕ್ಷಗಟ್ಟಲೆ ಡಾಲರ್ ಮೌಲ್ಯದ ಇಕ್ವಿಟಿ ಹಾಗೂ ಶೇರುಗಳನ್ನು ಸಂಪೂರ್ಣವಾಗಿ ತ್ಯಜಿಸಿರುವ 27 ವರ್ಷದ ಜೇಕಬ್ ಕಾಕ್ಸನ್ ತಮ್ಮ ಹುದ್ದೆಗೆ ತಕ್ಷಣವೇ ರಾಜೀನಾಮೆ ನೀಡಿದ್ದಾರೆ.
ತಮ್ಮ ಈ ದಿಢೀರ್ ನಿರ್ಗಮನದೊಂದಿಗೆ ಜಗತ್ತಿಗೆ ಪ್ರಮುಖ ಎಚ್ಚರಿಕೆಯೊಂದನ್ನು ನೀಡಿರುವ ಅವರು, "ವಿಶ್ವದ ದೈತ್ಯ ಎಐ ಕಂಪನಿಗಳು ಯಾವುದೇ ಕನಿಷ್ಠ ಸುರಕ್ಷತಾ ಮಾನದಂಡಗಳನ್ನೂ ಪಾಲಿಸದೆ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿವೆ. ಮಾನವನ ಮತ್ತಾವ ಕೃತ್ಯವೂ ಪ್ರಸ್ತುತ ಎಐ ತಂತ್ರಜ್ಞಾನ ತಂದೊಡ್ಡುತ್ತಿರುವಷ್ಟು ದೊಡ್ಡ ಅಪಾಯವನ್ನು ಸೃಷ್ಟಿಸಿಲ್ಲ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೂಲಸೌಕರ್ಯ, ಆಡಳಿತವನ್ನೇ ಕಬಳಿಸುವ ಸಾಮರ್ಥ್ಯ
ಕಳೆದ ಮೂರು ವರ್ಷಗಳಿಂದ ಜಾಗತಿಕ ಮುಂಚೂಣಿ ಎಐ ಸಂಸ್ಥೆಗಳಾದ 'ಓಪನ್ ಎಐ' (OpenAI) ಮತ್ತು 'ಆಂಥ್ರೋಪಿಕ್' (Anthropic) ಕಂಪನಿಗಳಲ್ಲಿ ಪ್ರೀ-ಟ್ರೇನಿಂಗ್ ಸಂಶೋಧಕನಾಗಿ (Pre-training researcher) ಜೇಕಬ್ ಕಾಕ್ಸನ್ ಕರ್ತವ್ಯ ನಿರ್ವಹಿಸಿದ್ದರು. ಆದರೆ ಈ ಎರಡೂ ಕಂಪನಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಅವರು, ಸ್ವಯಂ-ಸಾಮರ್ಥ್ಯ ಹೆಚ್ಚಿಸಿಕೊಳ್ಳುವ 'ಸೂಪರ್ ಇಂಟೆಲಿಜೆನ್ಸ್' (Self-improving Superintelligence) ನಿರ್ಮಿಸುವ ಕುರುಡು ಓಟದಲ್ಲಿ ಜನರ ಜೀವನವನ್ನು ಪಣಕ್ಕಿಡಲಾಗುತ್ತಿದೆ ಎಂದಿದ್ದಾರೆ.
"ಎಐ ಸಾಮರ್ಥ್ಯವನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಇದರ ಬೆಳವಣಿಗೆ ಕಲ್ಪಿಸಲಾಗದಷ್ಟು ವೇಗವಾಗಿದೆ. ಯಾವುದೇ ಡಿಜಿಟಲ್ ನೆಟ್‌ವರ್ಕ್ ಅನ್ನು ಹ್ಯಾಕ್ ಮಾಡುವ ಹಾಗೂ ಹಣಕಾಸು ಮತ್ತು ಸರ್ಕಾರಿ ವ್ಯವಸ್ಥೆಗಳ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯವಿರುವ 'ಸೂಪರ್ ಹ್ಯೂಮನ್' (Superhuman) ಸಿಸ್ಟಮ್‌ಗಳು ಶೀಘ್ರದಲ್ಲೇ ಅಸ್ತಿತ್ವಕ್ಕೆ ಬರಲಿವೆ" ಎಂದು ಕಾಕ್ಸನ್ ಎಚ್ಚರಿಸಿದ್ದಾರೆ.
ಮುಚ್ಚಿದ ಬಾಗಿಲ ಮರೆಯಲ್ಲಿ ಮಾನವ ವಿನಾಶದ ಭೀತಿ
ಸಾಮಾಜಿಕ ಜಾಲತಾಣ 'ಎಕ್ಸ್' (X) ಮೂಲಕ ತಮ್ಮ ಕಳವಳ ಹಾಗೂ ರಾಜೀನಾಮೆ ನಿರ್ಧಾರವನ್ನು ಹಂಚಿಕೊಂಡಿರುವ ಕಾಕ್ಸನ್, "ಈ ದಶಕದ ಅಂತ್ಯದ ವೇಳೆಗೆ (2030) ಇದು ಮಾನವಕುಲದ ಸಂಪೂರ್ಣ ವಿನಾಶಕ್ಕೆ ಕಾರಣವಾಗಬಹುದು ಎಂಬ ಸತ್ಯ ಎಐ ರೂಪಿಸುತ್ತಿರುವ ತಜ್ಞರಿಗೆ ಮತ್ತು ಸಂಶೋಧಕರಿಗೆ ಚೆನ್ನಾಗಿ ತಿಳಿದಿದೆ. ಇದೇನೂ ಮಾರ್ಕೆಟಿಂಗ್ ತಂತ್ರವಲ್ಲ, ಮುಚ್ಚಿದ ಬಾಗಿಲುಗಳ ಮರೆಯಲ್ಲಿ ಅವರು ಈ ಭಯವನ್ನು ಹಂಚಿಕೊಳ್ಳುವುದನ್ನು ನಾನು ಸ್ವತಃ ಕೇಳಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
"ಎಐ ತಯಾರಕರಿಗೇ ಈ ಭಯವಿದ್ದ ಮೇಲೆ ಅವರು ಅದನ್ನು ಏಕೆ ಮುಂದುವರಿಸುತ್ತಿದ್ದಾರೆ? ಎಂಬ ಪ್ರಶ್ನೆ ಮೂಡುವುದು ಸಹಜ. ಓಪನ್ ಎಐನಲ್ಲಿರುವ ಹಲವರು ಇದರ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಆದರೆ ಆಂಥ್ರೋಪಿಕ್ ಸಂಸ್ಥೆಗೆ ಈ ಅಪಾಯಗಳ ಅರಿವಿದೆ. ಆದಾಗ್ಯೂ, ಸ್ಪರ್ಧೆಯಲ್ಲಿ ಮೊದಲಿಗರಾಗುವ ಆತುರದಲ್ಲಿದ್ದಾರೆ. ಬೇರಾರೂ ಜವಾಬ್ದಾರಿಯಿಂದ ನಡೆದುಕೊಳ್ಳುವುದಿಲ್ಲ, ಹೀಗಾಗಿ ಅಪಾಯಗಳಿದ್ದರೂ ನಾವೇ ಇದನ್ನು ಮೊದಲು ಮಾಡಬೇಕು ಎಂಬುದು ಅವರ ನಂಬಿಕೆಯಾಗಿದೆ" ಎಂದು ಜೇಕಬ್ ಕಾಕ್ಸನ್ ಬಹಿರಂಗಪಡಿಸಿದ್ದಾರೆ .
ಶೇ. 10 ಕ್ಕಿಂತ ಹೆಚ್ಚು ವಂಶನಾಶದ ಭೀತಿ: ವಿಜ್ಞಾನಿಗಳ ಸಹಮತ
ಜೇಕಬ್ ಕಾಕ್ಸನ್ ಅವರ ಈ ವಾರ್ನಿಂಗ್ ಬೆನ್ನಲ್ಲೇ, ಆಂಥ್ರೋಪಿಕ್ ಸಂಸ್ಥೆಯ 'ಅಲೈನ್‌ಮೆಂಟ್' (Alignment) ವಿಭಾಗದ ಮುಖ್ಯಸ್ಥ ಇವಾನ್ ಹುಬಿಂಗರ್ (Evan Hubinger) ಕೂಡ ಇದೇ ರೀತಿಯ ಆತಂಕವನ್ನು ಹಂಚಿಕೊಂಡಿದ್ದಾರೆ. ಮುಂಬರುವ ಒಂದು ದಶಕದಲ್ಲಿ ಕೃತಕ ಬುದ್ಧಿಮತ್ತೆಯಿಂದಾಗಿ ಮಾನವಕುಲದ ವಂಶನಾಶ ಹೊಂದುವ ಸಾಧ್ಯತೆ ಶೇಕಡಾ 10 ಕ್ಕಿಂತ ಹೆಚ್ಚಿದೆ ಎಂದು ಇವಾನ್ ಹುಬಿಂಗರ್ ಸ್ಪಷ್ಟಪಡಿಸಿದ್ದಾರೆ. ಮಾನವೀಯತೆಗೆ ಅಪಾಯವಾಗದಂತೆ 'ಸೂಪರ್ ಇಂಟೆಲಿಜೆನ್ಸ್' ಅನ್ನು ನಿಯಂತ್ರಿಸಲು ಪ್ರಸ್ತುತ ತಮ್ಮ ಬಳಿ ಯಾವುದೇ ಮಾರ್ಗವಿಲ್ಲ ಎಂಬ ಕಹಿ ಸತ್ಯವನ್ನೂ ಅವರು ಒಪ್ಪಿಕೊಂಡಿದ್ದಾರೆ.
ಎಐ ತಂತ್ರಜ್ಞಾನದ ಪಿತಾಮಹರಲ್ಲಿ ಒಬ್ಬರೆಂದು ಪರಿಗಣಿತರಾಗಿರುವ ನೋಬೆಲ್ ಪುರಸ್ಕೃತ ವಿಜ್ಞಾನಿ ಜಿಯಾಫ್ರಿ ಹಿಂಟನ್ (Geoffrey Hinton) ಕೂಡ ಈ ಆತಂಕಕಾರಿ ಮುನ್ಸೂಚನೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.


