ಕುಂದಾಪುರ ಸರ್ಕಾರಿ ಆಸ್ಪತ್ರೆಯ ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದ 'ಕನ್ನಡಪ್ರಭ' ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಅವರ ಮೇಲೆ ಆಸ್ಪತ್ರೆಯ ಸರ್ಜನ್ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಹಲ್ಲೆ ನಡೆಸಿದ್ದಾರೆ. ಘಟನೆ ಹಿನ್ನೆಲೆ ವೈದ್ಯರ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಕುಂದಾಪುರ/ಬೆಂಗಳೂರು (ಆ.22): ಉಡುಪಿ ಜಿಲ್ಲೆ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿನ ಭ್ರಷ್ಟಾಚಾರದ ವರದಿ ಮಾಡಿದ್ದ ಕುಂದಾಪುರ ತಾಲೂಕು ‘ಕನ್ನಡಪ್ರಭ’ ವರದಿಗಾರ ಶ್ರೀಕಾಂತ್ ಹೆಮ್ಮಾಡಿ ಮೇಲೆ ಶುಕ್ರವಾರ ಬೆಳಗ್ಗೆ ಆ ಆಸ್ಪತ್ರೆಯ ಸರ್ಜನ್ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಏಕಾಏಕಿ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಹಲ್ಲೆಗೈದ ಡಾ। ಶೆಟ್ಟಿಯವರನ್ನು ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

2 ವಾರಗಳ ಹಿಂದೆ ‘ಕನ್ನಡಪ್ರಭ’ದಲ್ಲಿ ‘ಕುಂದಾಪುರ ಸರ್ಕಾರಿ ಆಸ್ಪತ್ರೆಯ ಮೇಲೆ ಭ್ರಷ್ಟಾಚಾರದ ಕರಿನೆರಳು’ ಶೀರ್ಷಿಕೆಯಡಿ ಶ್ರೀಕಾಂತ್ ಅವರು, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಯಲಿಗೆಳೆದಿದ್ದರು. ಹೀಗಾಗಿ ಅವರ ಮೇಲೆ ಹಲ್ಲೆ ಮಾಡಲಾಗಿದೆ.

ಕೃತ್ಯವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಖಂಡಿಸಿದ್ದಾರೆ ಹಾಗೂ ಡಾ। ಶೆಟ್ಟಿ ಅವರನ್ನು ಸರ್ಕಾರ ಅಮಾನತು ಮಾಡಿದೆ ಹಾಗೂ ಅವರ ವಿರುದ್ಧ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯಿಂದ ಕೈ ಮತ್ತು ಎದೆ ನೋವಿಗೊಳಗಾದ ಶ್ರೀಕಾಂತ್ ಹೆಮ್ಮಾಡಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಏಕಾಏಕಿ ಹಲ್ಲೆ:

ಶುಕ್ರವಾರ ಬೆಳಗ್ಗೆ ಪಟ್ಟಣದ ಹೋಟೆಲ್‌ವೊಂದರಲ್ಲಿ ಶ್ರೀಕಾಂತ್‌ ಅವರು ತಮ್ಮ ಪತ್ನಿಯೊಂದಿಗೆ ತಿಂಡಿ ತಿನ್ನುತ್ತಿದ್ದರು. ಈ ವೇಳೆ, ಶ್ರೀಕಾಂತ್ ಬಳಿ ಬಂದ ಡಾ.ಮಹೇಂದ್ರ ಕುಮಾರ್ ಶೆಟ್ಟಿ, ‘ನಿನ್ನ ಜೊತೆ ಸ್ವಲ್ಪ ಮಾತನಾಡುವುದಿದೆ’ ಎಂದು ಕೈಹಿಡಿದು ಪಕ್ಕಕ್ಕೆ ಕರೆದುಕೊಂಡು ಹೋಗಿ, ಕಾಲರ್‌ಗೆ ಕೈ ಹಾಕಿ, ಕೆನ್ನೆಗೆ ಹೊಡೆದಿದ್ದಾರೆ. ವರದಿ ಬರೆದ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ತಕ್ಷಣ ಶ್ರೀಕಾಂತ್ ಅವರ ಪತ್ನಿ ಮತ್ತು ಪತ್ರಕರ್ತ ಯೋಗೀಶ್ ಅವರು ವೈದ್ಯರನ್ನು ತಡೆದಿದ್ದಾರೆ.

ಶ್ರೀಕಾಂತ್ ತಮ್ಮ ವರದಿಯ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದರೂ ಅದನ್ನು ಕೇಳದೆ ಮತ್ತೆ, ಮತ್ತೆ ಶ್ರೀಕಾಂತ್‌ ಅವರ ಮೇಲೆ ಹಲ್ಲೆಗೆ ಯತ್ನಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂದರ್ಭ ಈ ಸರ್ಕಾರಿ ವೈದ್ಯರ ಜೊತೆಗಿದ್ದ ಅವರ ಖಾಸಗಿ ಕ್ಲಿನಿಕ್‌ನ ಪಾಲುದಾರ ಮಹಿಳಾ ವೈದ್ಯೆಯೂ ಸಾಥ್ ನೀಡಿದ್ದಾರೆ.

ಹಲ್ಲೆಯಿಂದ ಕೈ ಮತ್ತು ಎದೆ ನೋವಿಗೊಳಗಾದ ಶ್ರೀಕಾಂತ್ ಹೆಮ್ಮಾಡಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೀಗ ದೂರಿನ ಮೇರೆಗೆ ಹಲ್ಲೆಯ ದೃಶ್ಯಾವಳಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಶ್ರೀಕಾಂತ್ ಹೇಳಿಕೆ ಪಡೆದು, ಘಟನಾ ಸ್ಥಳದಲ್ಲಿ ಸಾಕ್ಷಿಗಳ ಜೊತೆಗೆ ಹೋಟೆಲ್‌ನ ಸ್ಥಳ ಮಹಜರು ನಡೆಸಿದ್ದಾರೆ. ಪತ್ರಕರ್ತನ ಮೇಲಿನ ಹಲ್ಲೆಯನ್ನು ವಿವಿಧ ಸಂಘಟನೆಗಳು ಖಂಡಿಸಿವೆ.

ಶೆಟ್ಟಿ ಅಮಾನತು:

ಹಲ್ಲೆ ಬೆನ್ನಲ್ಲೇ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಸರ್ಜನ್ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಸ್ತು ಪ್ರಾಧಿಕಾರಿ ಮತ್ತು ಆಯುಕ್ತ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

ಹಲ್ಲೆಯ ದೃಶ್ಯಗಳು ಸುದ್ದಿವಾಹಿನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ರಾಜ್ಯ ಆಯುಕ್ತರಿಗೆ ಘಟನೆ ಬಗ್ಗೆ ವರದಿ ನೀಡಿದ್ದಾರೆ. ಈ ವರದಿಯಂತೆ, ಘಟನೆ ಬಗ್ಗೆ ಇಲಾಖಾ ವಿಚಾರಣೆಗೆ ಆದೇಶಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಶೆಟ್ಟಿಯವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಅಲ್ಲದೆ, ತಕ್ಷಣವೇ ಶೆಟ್ಟಿಯವರನ್ನು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ಶಸ್ತ್ರಚಿಕಿತ್ಸಕರ ಹುದ್ದೆಗೆ ಸ್ಥಳಾಂತರಿಸಲಾಗಿದೆ. ಆದರೆ, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.

ಶಾಸಕರ ಹೇಳಿಕೆಗೆ ಅನುಸಾರ ವರದಿ:

ವಿಶೇಷ ಎಂದರೆ ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ವರದಿಯಲ್ಲಿ ಯಾವುದೇ ವೈದ್ಯರ ಹೆಸರು ಉಲ್ಲೇಖವಾಗಿಲ್ಲ. ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಶಾಸಕರ ಹೇಳಿಕೆಹೆ ಅನುಗುಣವಾಗಿ ವರದಿ ಪ್ರಕಟಿಸಲಾಗಿತ್ತು. ಆದರೂ, ಡಾ.ಮಹೇಂದ್ರ ಕುಮಾರ್ ಶೆಟ್ಟಿ ಅವರು ಶುಕ್ರವಾರ ಹಲ್ಲೆ ನಡೆಸುವ ಮೂಲಕ ಭ್ರಷ್ಟಾಚಾರದ ಆರೋಪವನ್ನು ತಾವಾಗಿಯೇ ಮೈಮೇಲೆ ಎಳೆದುಕೊಂಡಿದ್ದಾರೆ.

‘ಕನ್ನಡಪ್ರಭ’ ವರದಿಯಲ್ಲೇನಿತ್ತು?:

ಆಗಸ್ಟ್‌ 1ರಂದು ‘ಕನ್ನಡಪ್ರಭ’ದಲ್ಲಿ ‘ಕುಂದಾಪುರ ಸರ್ಕಾರಿ ಆಸ್ಪತ್ರೆಯ ಮೇಲೆ ಭ್ರಷ್ಟಾಚಾರದ ಕರಿನೆರಳು’ ಹೆಸರಿನಲ್ಲಿ ಶ್ರೀಕಾಂತ್ ಹೆಮ್ಮಾಡಿ ಬರೆದ ವರದಿ ಪ್ರಕಟವಾಗಿತ್ತು. ಸ್ವತಃ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ‘ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗುವ ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ ಅಲ್ಲಿನ ವೈದ್ಯರು ಬಲವಂತವಾಗಿ ಹಣ ಪಡೆಯುತ್ತಾರೆ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ’ ಎಂದು ಜಿಲ್ಲಾಧಿಕಾರಿಗೆ ನೀಡಿದ ಸೂಚನೆ ಆಧರಿಸಿ ಶ್ರೀಕಾಂತ್ ಅವರು ಈ ತನಿಖಾ ವರದಿ ಸಿದ್ಧಪಡಿಸಿದ್ದರು.