ಕೋಟಿ ಕೋಟಿ ಕೊಟ್ರೂ ಬಾರ್ ಲೈಸೆನ್ಸ್ ಸಿಗೊಲ್ಲ, ಅಂಥದ್ರಲ್ಲಿ ದಿನಸಿ ಅಂಗಡೀಲಿ ಮದ್ಯ ಮಾರಾಟಕ್ಕೆ ಪರವಾನಗಿ ಕೇಳ್ತಾನೆ!
ಸಾಮಾನ್ಯವಾಗಿ ಕೋಟಿ ಕೋಟಿ ರೂಪಾಯಿ ಹಣವನ್ನು ಕೊಟ್ಟರೂ ಅಬಕಾರಿ ಇಲಾಖೆಯಿಂದ ಬಾರ್ ಲೈಸೆನ್ಸ್ ಸಿಗೊಲ್ಲ. ಅಂಥದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಕೊಡಿ ಎಂದು ಮನವಿ ಸಲ್ಲಿಸಿದ್ದಾನೆ.
ಚಿತ್ರದುರ್ಗ (ಫೆ.24): ಕೋಟಿ ಕೋಟಿ ರೂ. ಹಣವನ್ನು ಕೊಟ್ಟರೂ ಅಬಕಾರಿ ಇಲಾಖೆಯಿಂದ ಮದ್ಯ ಮಾರಾಟಕ್ಕೆ ಲೈಸೆನ್ಸ್ ಸಿಗುವುದಿಲ್ಲ. ಆದರೆ, ಇಲ್ಲೊಬ್ಬ ಗ್ರಾಮೀಣ ವ್ಯಕ್ತಿ ನನಗೆ ಕಿರಾಣಿ ಅಂಗಡಿಯಲ್ಲಿ (ದಿನಸಿ ಅಂಗಡಿ) ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಅಬಕಾರಿ ಇಲಾಖೆಗೆ ಪತ್ರ ಬರೆದು ಶಾಕ್ ನೀಡಿದ್ದಾನೆ.
ರಾಜ್ಯದಲ್ಲಿ ಮದ್ಯ ಮಾರಾಟವನ್ನು ಬಾರ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಸೇರಿ ಇತರೆ ಕೆಲವು ಸ್ಟಾರ್ ಹೋಟೆಲ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ಮದ್ಯ ಮಾರಾಟಕ್ಕೆ ಕಡ್ಡಾಯವಾಗಿ ಲೈಸೆನ್ಸ್ ಇರಲೇಬೇಕು. ಇನ್ನು ಲೈಸೆನ್ಸ್ ಪಡೆಯಬೇಕೆಂದರೆ ಹಲವು ಕಠಿಣ ನಿಯಮಗಳನ್ನು ಪಾಲಿಸಲೇಬೇಕು. ಮುಖ್ಯವಾಗಿ ಕೋಟಿ ಕೋಟಿ ರೂ. ಹಣ ಕೊಟ್ಟರೂ ಮದ್ಯ ಮಾರಾಟದ ಲೈಸೆನ್ಸ್ ಸಿಗುವುದೇ ಕಷ್ಟವಾಗಿದೆ. ಅಂಥದ್ದರಲ್ಲಿ ಇಲ್ಲಿ ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಪತ್ರ ಬರೆದಿರುವುದನ್ನು ನೋಡಿ ಅಬಕಾರಿ ಇಲಾಖೆ ಅಧಿಕಾರಿಗಳು ನಗಾಡಿದ್ದಾರೆ.
ಕೊಡಗು ಜುಮ್ಮಾ ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಗೆ 25 ವರ್ಷ ಬಹಿಷ್ಕಾರ; ಗಂಡನ ಅಂತ್ಯಕ್ರಿಯೆಗೂ ಅವಕಾಶವಿಲ್ಲ
ಸಾಮಾನ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಕಿರಾಣಿ ಅಂಗಡಿಗಳಲ್ಲಿ (ಜನರಲ್ ಸ್ಟೋರ್ಸ್) ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಂಡುಬರುತ್ತಿದೆ. ಅದೇ ರೀತಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸನಾಯಕರಹಟ್ಟಿ ಗ್ರಾಮದಲ್ಲಿಯೂ ಕೆಲವರು ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ಆರಂಭಿಸಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇದೇ ಗ್ರಾಮದ ಚಂದ್ರಶೇಖರ್ ಎನ್ನುವವರು ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ, ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿಗೆ ಬಂದಂತೆ ಮಾಡಿ ಅಕ್ರಮ ಮದ್ಯ ಮಾರಾಟ ಮಾಡುವವರ ಬಳಿಯೇ ಹಣವನ್ನು ಪಡೆದು ಸುಮ್ಮನಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರಿ ಇಲಾಖೆಗಳೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದಾದರೆ ತಾನೂ ಕೂಡ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ತೀರ್ಮಾನಿಸಿದ್ದಾನೆ.
ನಂತರ, ಹೊಸನಾಯಕರಹಟ್ಟಿ ಗ್ರಾಮದ ಚಂದ್ರಶೇಖರ್ ಅವರು ತಾನು ಆರಂಭಿಸುತ್ತಿರುವ ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೊಡಬೇಕು ಎಂದು ಅಬಕಾರಿ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಕೆ ಮಾಡಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸನಾಯಕರಹಟ್ಟಿ ಗ್ರಾಮದ ವಾಸವಾಗಿರುವ ನಾನು ನಮ್ಮ ಮನೆಯಲ್ಲಿ ಚಿಲ್ಲರೆ (ಕಿರಾಣಿ) ಅಂಗಡಿ ತೆರೆಯುತ್ತಿದ್ದೇನೆ. ಈ ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಉತ್ಸುಕನಾಗಿದ್ದೇನೆ. ತಾವುಗಳು ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಈ ಪತ್ರವನ್ನು ಬರೆದವನ ಹೆಸರು ಮತ್ತು ವಿಳಾಸವನ್ನು ನೋಡಿ ಅಬಕಾರಿ ಇಲಾಖೆ ಅಧಿಕಾರಿಗಳು ಶಾಕ್ ಆಗಿದ್ದಾರೆ.
ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಕೋರಿದ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದ್ರಶೇಖರ್, 'ನಾನು 2021ರಲ್ಲಿ ಮದ್ಯ ಮಾರಾಟ ನಿಲ್ಲಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೆನು. ಅಬಕಾರಿ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಅಕ್ರಮ ಮದ್ಯ ಮಾರಾಟ ಮಾಡಿದವರ ವಿರುದ್ದ ಕೇಸ್ ದಾಖಲಿಸಿದ್ದೇವೆ ಎಂದು ಉತ್ತರ ನೀಡಿತ್ತು. ಇದರಿಂದ ಬೇಸರಗೊಂಡು ನಾನು ಕಿರಾಣಿ ಅಂಗಡಿ ತೆರೆದಿದ್ದೀನಿ. ಅದರಲ್ಲಿಯೇ ಮದ್ಯ ಮಾರಾಟ ಮಾಡಲು ಪರವಾನಗಿ ಕೊಡಿ ಎಂದು ಮನವಿ ಸಲ್ಲಿಸಿದ್ದೀನಿ' ಎಂದರು.
ಚಿತ್ರದುರ್ಗ: ಮಳೆಯಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಅನ್ನದಾತರ ಮೊಗದಲ್ಲಿ ಸಂತಸ, ಜಿಲ್ಲಾಡಳಿತಕ್ಕೆ ರೈತರ ಧನ್ಯವಾದ
'ಒಂದು ವೇಳೆ ಪರವಾನಗಿ ಕೊಡಲಾಗದಿದ್ದರೆ, ನಮ್ಮೂರಿನ ಎಲ್ಲಾ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಲ್ಲಿಸಿ. ಸರ್ಕಾರ ಸೂಕ್ತ ಉತ್ತರ ನೀಡದಿದ್ದರೆ ಪಂಚಾಯ್ತಿ, ಅಬಕಾರಿ ಇಲಾಖೆ ಮುಂದೆ ಬುಟ್ಟಿಯಲ್ಲಿ ಮದ್ಯ ಇಟ್ಟು ಮಾರುತ್ತೀನಿ. ಕಿರಾಣಿ ಅಂಗಡಿಗಳಿಗಂತೂ ಪರ್ಮಿಷನ್ ಕೊಡಲ್ಲ, ಬುಟ್ಟಿಯಲ್ಲಿ ಮದ್ಯ ಇಟ್ಟುಕೊಂಡು ಮಾರುವುದಕ್ಕಾದರೂ ಅನುಮತಿ ಕೊಡಬೇಕಲ್ಲ ಎಂದು ಕಿಡಿಕಾರಿದ್ದಾರೆ. ಒಂದು ವೇಳೆ ನನ್ನ ಮೇಲೆ ಕೇಸ್ ದಾಖಲಿಸಿದರೂ, ಮದ್ಯ ಮಾರಾಟ ಮಾಡೋದು ಬಿಡಲ್ಲ' ಎಂದು ಚಂದ್ರಶೇಖರ್ ಹೇಳಿದ್ದಾರೆ.