ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲೆ ಅಕ್ರಮ ಆಸ್ತಿ ಮತ್ತು ಹವಾಲಾ ಆರೋಪದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ನಡೆದ ಶೋಧಕಾರ್ಯದಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್‌ಗಳು ಪತ್ತೆಯಾಗಿದ್ದು, ಅಧಿಕಾರಿ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು ರಾಜ್ಯ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹಗರಣವನ್ನು ಬಯಲುಮಾಡಿದೆ.
ಬೆಂಗಳೂರು / ಬೆಳಗಾವಿ: ರಾಜ್ಯ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಹಗರಣವೊಂದು ಬೆಳಕಿಗೆ ಬಂದಿದ್ದು, ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ (Additional Commissioner) ವೈ. ಮಂಜುನಾಥ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿ ಪತಿ ಹಾಗೂ ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ. ಮಂಜುನಾಥ್ ಅವರನ್ನು ಕೊನೆಗೂ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿದೇಶಿ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ಲಿಂಕ್ ಹಾಗೂ ಅಕ್ರಮ ಆಸ್ತಿ ಸಂಪಾದನೆ (Disproportionate Assets) ಆರೋಪದ ಹಿನ್ನೆಲೆಯಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದೆ. ಕರ್ನಾಟಕ, ಗೋವಾ ಮತ್ತು ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಭಾಗಗಳ ಇಡಿ ಅಧಿಕಾರಿಗಳನ್ನೊಳಗೊಂಡ ಜಂಟಿ ಪಡೆಗಳು, 10ಕ್ಕೂ ಹೆಚ್ಚು ಅರೆಸೇನಾ ಪಡೆ (CRPF) ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ಈ ದಾಳಿ ನಡೆಸಿವೆ.
ರಾಜ್ಯದ 6 ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ಇಡಿ ರೇಡ್!
ಬೆಳ್ಳಂಬೆಳಗ್ಗೆ 5:30ರ ಸುಮಾರಿಗೆ ಇಡಿ ಅಧಿಕಾರಿಗಳು ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿ ವೈ. ಮಂಜುನಾಥ್ ಹಾಗೂ ಅವರ ಆಪ್ತ ಜಾಲವನ್ನು ಗುರಿಯಾಗಿಸಿಕೊಂಡು ಬೆಂಗಳೂರು, ಬೆಳಗಾವಿ, ಮೈಸೂರು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಮತ್ತು ಅಥಣಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಬೆಂಗಳೂರು: ರೇಸ್‌ಕೋರ್ಸ್ ರಸ್ತೆಯ (ಸ್ಯಾಂಕಿ ರಸ್ತೆ) ಪ್ರತಿಷ್ಠಿತ 'ದಿ ಸಮ್ಮಿಟ್' ಅಪಾರ್ಟ್‌ಮೆಂಟ್‌ನಲ್ಲಿರುವ ಮಂಜುನಾಥ್ ಅವರ ಐಷಾರಾಮಿ ಫ್ಲಾಟ್ ಮೇಲೆ ಮಹಿಳಾ ಇಡಿ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ, ಅಲ್ಲಿಯೇ ಇದ್ದ ಮಂಜುನಾಥ್ ಅವರನ್ನು ಸುದೀರ್ಘ ವಿಚಾರಣೆಯ ಬಳಿಕ ವಶಕ್ಕೆ ಪಡೆದಿದೆ.
ಬೆಳಗಾವಿ: ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ಮಂಜುನಾಥ್ ಅವರ ಮುಖ್ಯ ನಿವಾಸದ ಮೇಲೆ ದಾಳಿ ನಡೆದಿದೆ. ಮಹತ್ವದ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಡಿ ಡಿವೈಎಸ್‌ಪಿ (DySP) ದರ್ಜೆಯ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ವಿಜಯನಗರ (ಅರಸೀಕೆರೆ): ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಮಂಜುನಾಥ್ ಅವರಿಗೆ ಸೇರಿದ ಎರಡು ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಮೈಸೂರು: ದಟ್ಟಗಳ್ಳಿ 3ನೇ ಹಂತದ 5ನೇ ಕ್ರಾಸ್‌ನಲ್ಲಿರುವ #3638 'ಸ್ವಯಂಭು' ನಿವಾಸದ ಮೇಲೆ ದಾಳಿ ನಡೆದಿದೆ. ಇದು ಕೂಡ ಮಂಜುನಾಥ್ ಅವರ ಆಸ್ತಿಯಾಗಿದ್ದು, ಇಲ್ಲಿ ಅವರ ಆತ್ಮೀಯ ಸ್ನೇಹಿತೆ ಹಾಗೂ ಪ್ರಸ್ತುತ ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ಆಗಿರುವ ಯಮುನಾ ಮತ್ತು ಅವರ ತಾಯಿ ಸುಲೋಚನಾ ವಾಸವಾಗಿದ್ದರು. ಇಡಿ ಅಧಿಕಾರಿಗಳು ತೀವ್ರ ದಾಖಲೆ ಪರಿಶೀಲನೆ ನಡೆಸಿ, ಹೆಚ್ಚಿನ ವಿಚಾರಣೆಗಾಗಿ ಯಮುನಾ ಅವರನ್ನು ಮುಖ ಮುಚ್ಚಿಕೊಂಡು ವಾಹನದಲ್ಲಿ ಕರೆದೊಯ್ದಿದ್ದಾರೆ.
ಮಂಜುನಾಥ್ ಆಪ್ತ ಅಧಿಕಾರಿಗಳಿಗೂ ಇಡಿ ಶಾಕ್!
ವೈ. ಮಂಜುನಾಥ್ ಅವರ ಅಕ್ರಮ ಜಾಲದಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಅವರ ಆಪ್ತ ವಲಯದ ಇತರ ಅಧಿಕಾರಿಗಳ ಮೇಲೂ ಇಡಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ:
ಸತೀಶ್ ಶಿವಶಂಕರ ಕಾಗಲೆ (ಎಸ್ಪಿ, ತುಮಕೂರು ಅಬಕಾರಿ ಇಲಾಖೆ): ಮಂಜುನಾಥ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ಬೆಳಗಾವಿಯ ಶ್ರೀನಗರದಲ್ಲಿರುವ ಅಪಾರ್ಟ್‌ಮೆಂಟ್ ಹಾಗೂ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಐದಾರು ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.
ವಿಶ್ವನಾಥ್ ಗಾಣಿಗೇರ (ಡಿವೈಎಸ್ಪಿ, ಚಿಕ್ಕೋಡಿ ಅಬಕಾರಿ ಇಲಾಖೆ): ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿರುವ ಇವರ ನಿವಾಸದ ಮೇಲೂ ದಾಳಿ ನಡೆದಿದ್ದು, ಇವರೂ ಸಹ ಅಕ್ರಮ ವ್ಯವಹಾರಕ್ಕೆ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ.
ದಾಳಿ ವೇಳೆ ಪತ್ತೆಯಾದವು ನೂರಾರು 'ಬೇನಾಮಿ ಬಾರ್ ಲೈಸೆನ್ಸ್'ಗಳು!
ಇಡಿ ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ ಮಂಜುನಾಥ್ ಅವರ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ನಿವಾಸಗಳಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್‌ಗಳು ಹಾಗೂ ಅವುಗಳ ಅಗ್ರಿಮೆಂಟ್ ಬಾಂಡ್‌ಗಳು ಪತ್ತೆಯಾಗಿವೆ.
ಅಕ್ರಮದ ನೆಟ್‌ವರ್ಕ್: ಮಂಜುನಾಥ್ ಅವರು ಬೆಳಗಾವಿ, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ದೊಡ್ಡ ಪ್ರಮಾಣದ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಿದ್ದರು. ಈ ಬೇನಾಮಿ ಬಾರ್‌ಗಳಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಇವರು ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ (ಹವಾಲಾ ದಂಧೆ) ಮಾಡಿ, ಅಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
2013ರ ಲೋಕಾಯುಕ್ತ ಕೇಸ್; ಪ್ರಭಾವ ಬಳಸಿ ಹುದ್ದೆ ಸೃಷ್ಟಿ!
ವೈ. ಮಂಜುನಾಥ್ ಅವರ ಅಕ್ರಮಗಳ ಇತಿಹಾಸ ಇಂದಿನದ್ದಲ್ಲ. ಈ ಹಿಂದೆ 2013ರಲ್ಲಿ ಮೈಸೂರು ಅಬಕಾರಿ ಡಿಸಿ (DC) ಆಗಿದ್ದಾಗ ಇವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಬಾರ್ ಲೈಸೆನ್ಸ್ ನವೀಕರಣದಲ್ಲಿ (Renewal) ಕೋಟ್ಯಂತರ ರೂಪಾಯಿ ಲಂಚ ಹಾಗೂ ಸಂಬಳಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ (Disproportionate Assets) ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಲಾಖಾ ತನಿಖೆ (DE) ನಡೆದು ಪ್ರಸ್ತುತ ಅದು ಮುಚ್ಚಲ್ಪಟ್ಟಿತ್ತಾದರೂ, ಲೋಕಾಯುಕ್ತದ ಅದೇ ಅಕ್ರಮ ಆಸ್ತಿ ಗಳಿಕೆಯ ಮೂಲ ಕೇಸ್ ಅನ್ನು ಆಧರಿಸಿ ಈಗ ಇಡಿ ಅಖಾಡಕ್ಕಿಳಿದಿದೆ.
ರಾಜಕೀಯ ಪ್ರಭಾವದ ಆರೋಪ:
ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಕೇವಲ ಬೆಂಗಳೂರು ರೇಂಜ್ ಮಾತ್ರ ಇತ್ತು. ಆದರೆ ಮಂಜುನಾಥ್ ಅವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ವಿಶೇಷವಾಗಿ 'ಬೆಳಗಾವಿ ಅಬಕಾರಿ ರೇಂಜ್' ಅನ್ನು ಸೃಷ್ಟಿಸಿಕೊಂಡಿದ್ದರು. ಇದರ ಮೂಲಕ ರಾಜ್ಯದ ಅರ್ಧದಷ್ಟು ಜಿಲ್ಲೆಗಳ ಅಬಕಾರಿ ನಿಯಂತ್ರಣದ ಸರ್ವಾಧಿಕಾರವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡು, ಕರಾವಳಿ ಮತ್ತು ಗಡಿ ಭಾಗದಲ್ಲಿ ವ್ಯಾಪಕ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಸದ್ಯ ಇಡಿ ಅಧಿಕಾರಿಗಳ ವಶದಲ್ಲಿರುವ ವೈ. ಮಂಜುನಾಥ್ ಹಾಗೂ ವಶಪಡಿಸಿಕೊಳ್ಳಲಾದ ಲೈಸೆನ್ಸ್ ದಾಖಲೆಗಳಿಂದ ಇಲಾಖೆಯ ಇನ್ನೂ ಹಲವು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ.


