ಸೆಮಿ ಕಂಡಕ್ಟರ್‌ ವಲಯದ ಉದ್ಯಮಗಳು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ದೃಷ್ಟಿಕೋನದಲ್ಲಿ ಚಿಪ್‌ ವಿನ್ಯಾಸ, ಉತ್ಪಾದನೆಯಲ್ಲಿ ತೊಡಗಬೇಕಿದೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಕರೆಕೊಟ್ಟರು. 

ಬೆಂಗಳೂರು (ಫೆ.25): ಸೆಮಿ ಕಂಡಕ್ಟರ್‌ ವಲಯದ ಉದ್ಯಮಗಳು ಭಾರತಕ್ಕೆ ಮಾತ್ರವಲ್ಲದೆ ಜಾಗತಿಕ ದೃಷ್ಟಿಕೋನದಲ್ಲಿ ಚಿಪ್‌ ವಿನ್ಯಾಸ, ಉತ್ಪಾದನೆಯಲ್ಲಿ ತೊಡಗಬೇಕಿದೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಕರೆಕೊಟ್ಟರು. ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ಸೆಮಿಕಾನ್‌ ಇಂಡಿಯಾ; ಫ್ಯೂಚರ್‌ ಡಿಸೈನ್‌ ರೋಡ್‌ಶೋ ಎರಡನೇ ಆವೃತ್ತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್‌ ಬಳಿಕ ಜಗತ್ತು ಡಿಜಿಟಲ್‌, ಎಲೆಕ್ಟ್ರಾನಿಕ್‌, ಸೆಮಿ ಕಂಡಕ್ಟರ್‌ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ. ಇಂಥ ಸಂದರ್ಭದಲ್ಲಿ ಭಾರತ ಕೂಡ ಗಣನೀಯವಾಗಿ ಮುಂದಡಿ ಇಡುತ್ತಿದೆ. ವಿಶ್ವ ರಾಜಕೀಯದ ದೃಷ್ಟಿಕೂಡ ಸೆಮಿ ಕಂಡಕ್ಟರ್‌ ಉತ್ಪಾದನೆ ಮೇಲಿದೆ. ಅದನ್ನು ಹೊರತುಪಡಿಸಿದರೂ ಈ ಕ್ಷೇತ್ರದಲ್ಲಿ ಸ್ವಾವಲಂಬನೆ, ವಿಶ್ವ ಮಟ್ಟದ ಉತ್ಪಾದಕನಾಗಿ ಭಾರತ ಬೆಳೆಯುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಕೂಡ ಜಾಗತಿಕ ದೃಷ್ಟಿಕೋನದಿಂದ ಸೆಮಿ ಕಂಡಕ್ಟರ್‌ ಉತ್ಪಾದನೆ, ವಿನ್ಯಾಸದಲ್ಲಿ ತೊಡಗಲು ಅನುವಾಗುವಂತೆ ನಮ್ಮ ಉದ್ಯಮಿಗಳು, ಸ್ಟಾರ್ಚ್‌ಅಪ್‌ಗಳಿಗೆ ಹೆಚ್ಚಿನ ಒತ್ತು ನೀಡಿ ಯೋಜನೆ ರೂಪಿಸಿದ್ದಾರೆ ಎಂದರು.

IAS vs IPS: ಡಿ.ರೂಪಾ, ರೋಹಿಣಿ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ

ಡಿಜಿಟಲೀಕರಣ ಹಿಂದೆಂದಿಗಿಂತಲೂ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಭಾರತದಲ್ಲಿ ಆವಿಷ್ಕಾರ ಸ್ನೇಹಿ ವಾತಾವರಣವಿದೆ. ಜಗತ್ತಿನ ಉದ್ಯಮ ವಲಯ ಭಾರತವನ್ನು ನಂಬಿಕಾರ್ಹ ಜೊತೆಗಾರನಾಗಿ ಕಾಣುತ್ತಿದೆ. ಉತ್ತರ ಅಮೇರಿಕಾ , ಚೀನಾ ಬಳಿಕ ಭಾರತ ಸೆಮಿಕಂಡಕ್ಟರ್‌ ಬಳಕೆಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಸರ್ಕಾರ ಸೆಮಿ ಕಂಡಕ್ಟರ್‌ ವಿನ್ಯಾಸದ ಸ್ಟಾರ್ಚ್‌ಅಪ್‌ಗಳಿಗೆ 1ಸಾವಿರ ಕೋಟಿ, ಸೆಮಿ ಕಂಡಕ್ಟರ್‌ ವಲಯದ ಸಂಶೋಧನೆ, ಅಭಿವೃದ್ಧಿಗೆ . 2 ಸಾವಿರ ಕೋಟಿಯನ್ನು ಮೀಸಲಾಗಿರಿಸಿದೆ ಎಂದರು.

ಉದ್ಯಮಿಗಳು ಮುಂದಿನ ತಲೆಮಾರಿಗೆ ಅನುಗುಣವಾಗಿ ಸೆಮಿ ಕಂಡಕ್ಟರ್‌, ಐಪಿ ಸೆಟ್‌, ಚಿಪ್‌ಗಳನ್ನು ರೂಪಿಸಲು ಮುಂದಾಗಬೇಕಿದೆ. ಆಟೋಮೇಟಿವ್‌ ಇಂಡಸ್ಟ್ರಿ, ಕೃತಕ ಬುದ್ಧಿಮತ್ತೆ, ಕ್ಲೌಡ್‌ ಸ್ಟೋರೇಜ್‌ ಕ್ಷೇತ್ರಗಳತ್ತ ನಮ್ಮ ಸ್ಟಾರ್ಚ್‌ಅಪ್‌ಗಳು ಹೆಚ್ಚು ಒತ್ತು ನೀಡಬೇಕು. ಸಿ-ಡ್ಯಾಕ್‌, ಚಿಪ್‌ ಇನ್‌ ಯೋಜನೆಗಳ ಮೂಲಕ ಸರ್ಕಾರ ಅಗತ್ಯ ಸಹಕಾರ ನೀಡುತ್ತಿದೆ. ಇದಕ್ಕಾಗಿ ಶೀಘ್ರವೇ ಇಂಡಿಯಾ ಸೆಮಿಕಂಡಕ್ಟರ್‌ ರಿಸಚ್‌ರ್‍ ಸೆಂಟರ್‌, ಸೆಮಿಕಂಡಕ್ಟರ್‌ ಲ್ಯಾಬೋರೆಟರಿ ಹಾಗೂ ಕೌಶಲ್ಯ ಕೇಂದ್ರವನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈ ವೇಳೆ ಎಎಂಡಿ ವತಿಯಿಂದ ಜಯಜಗದೀಶ್‌, ಇಂಟೆಲ್‌ನಿಂದ ಚಿತ್ರ ಹರಿಹರನ್‌, ಮೈಕ್ರೋನ್‌ ಭಾವನಾ ಸೇಟಿ ಉಪಸ್ಥಿತರಿದ್ದರು.

ಮಾರ್ಚ್‌ನಲ್ಲಿ ಇಂಡಿಯಾ ಎಐ: ದೇಶದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆವಿಷ್ಕಾರಕ್ಕೆ ವೇಗ ಕೊಡಲು ‘ಇಂಡಿಯಾ ಎಐ’ ಯೋಜನೆಯನ್ನು ಸರ್ಕಾರ ಮುಂದಿನ ಮಾಚ್‌ರ್‍ ವೇಳೆಗೆ ಜಾರಿಗೊಳಿಸುತ್ತಿದೆ. ಇದು ವಿಶ್ವದಲ್ಲೆ ದೊಡ್ಡದಾದ ಡೆಟಾ ಸೈನ್ಸ್‌ ಸೆಂಟರ್‌ ಎಂದು ಕರೆಸಿಕೊಳ್ಳಲಿದೆ. ಚಾಟ್‌ ಜಿಪಿಟಿಯಂತ ತಂತ್ರಜ್ಞಾನಗಳ ಅಧ್ಯಯನ, ಡೆಟಾ ಸೈನ್ಸ್‌ ಕುರಿತ ಯೋಜನೆ, ಕೃತಕ ಬುದ್ಧಿಮತ್ತೆಯ ಕಂಪ್ಯೂಟರ್‌, ಉಪಕರಣಗಳ ಉತ್ಪಾದನೆಗೆ ಈ ಕೇಂದ್ರ ವೇಗವರ್ಧಕವಾಗಿ ಕಾರ್ಯ ನಿರ್ವಹಿಸಲಿದೆ.

ಟಾಪ್‌ ಟೆನ್‌ನಲ್ಲಿ ಭಾರತ: ಪ್ರಸ್ತುತ ಭಾರತ 90 ಸಾವಿರ ಕೋಟಿ ರು. ಮೌಲ್ಯದ ಮೊಬೈಲ್‌ಗಳನ್ನು ರಫ್ತು ಮಾಡುತ್ತಿದ್ದೇವೆ. ಮುಂದಿನ ವರ್ಷ ಭಾರತ ವಿಶ್ವದ ಟಾಪ್‌ ಟೆನ್‌ನಲ್ಲಿ ಸ್ಥಾನ ಪಡೆಯಲಿದ್ದು, 1ಲಕ್ಷ ಕೋಟಿ ಮೌಲ್ಯದ ಮೊಬೈಲ್‌ ಉಪಕರಣಗಳನ್ನು ರಫ್ತು ಮಾಡಲಿದ್ದೇವೆ. ಐಫೋನ್‌, ಸ್ಯಾಮ್‌ಸಂಗ್‌ನಂತ ಜಾಗತಿಕ ಬ್ರ್ಯಾಂಡ್‌ಗಳು ನಮ್ಮಲ್ಲೇ ರೂಪುಗೊಳ್ಳಲಿವೆ ಎಂದು ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು.

ಸದನದಿಂದ ಬಿಎಸ್‌ವೈಗೆ ಪಕ್ಷಾತೀತ ಭಾವುಕ ವಿದಾಯ: ಗುಡ್‌ಬೈ ಬಿಎಸ್‌ವೈ

ಪ್ರಧಾನಿ ಮೋದಿ ಸಂದೇಶ: ಮುಂದಿನ ದಿನಮಾನಗಳಲ್ಲಿ ಭಾರತವು ಸೆಮಿ ಕಂಡಕ್ಟರ್‌ ವಲಯದ ಜಾಗತಿಕ ಕೇಂದ್ರವಾಗಿ ಬೆಳೆಯುವಂತಾಗಲು ಉದ್ಯಮಿಗಳಿಗೆ ಸರ್ಕಾರ ಪೂರಕ ವಾತಾವರಣ ಕಲ್ಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯರು ಸೆಮಿಕಾನ್‌ನಲ್ಲಿ ವಿಡಿಯೋ ಸಂದೇಶದ ಮೂಲಕ ತಿಳಿಸಿದರು. ಜಾಗತಿಕ ಸೆಮಿಕಂಡಕ್ಟರ್‌ ಪೂರೈಕೆ ಚೈನ್‌ನಲ್ಲಿ ಭಾರತ ಕೂಡ ತನ್ನ ಛಾಪನ್ನು ಮೂಡಿಸಬೇಕಿದೆ. 2026ರವೇಳೆಗೆ ಭಾರತ 80ಬಿಲಿಯನ್‌, 2030ಕ್ಕೆ 110 ಬಿ. ಡಾಲರ್‌ಗೂ ಹೆಚ್ಚಿನ ಮೌಲ್ಯದ ಸೆಮಿಕಂಡಕ್ಟರ್‌ನ್ನು ಬಳಸುವ ರಾಷ್ಟ್ರವಾಗಲಿವೆ. ಸೆಮಿಕಾನ್‌ ಇಂಡಿಯಾ ಯೋಜನೆ ಮೂಲಕ 10 ಬಿಲಿಯನ್‌ ಡಾಲರ್‌ಗಳನ್ನು ಸೆಮಿಕಂಡಕ್ಟರ್‌ ವಲಯದ ಪ್ರೋತ್ಸಾಹಕ್ಕಾಗಿ ಇಡಲಾಗಿದೆ. ಆರ್ಥಿಕ ನೆರವು, ಬಂಡವಾಳ ಹೂಡಿಕೆ, ಉದ್ಯಮಸ್ನೇಹಿ ವಾತಾವರಣಕ್ಕಾಗಿ ಸರ್ಕಾರ ಸಹಕಾರ ನೀಡಲಿದೆ. ಸರ್ಕಾರ ಉದ್ಯಮಿಗಳ ಬೆಳವಣಿಗೆಗೆ ಪೂರಕ ವಾತಾವರಣ ರೂಪಿಸಿಕೊಡಲು ಸಿದ್ಧವಿದೆ ಎಂದರು.