Kodagu: ರೈತರ ಖಾಸಗಿ ಭೂಮಿಯಲ್ಲಿರುವ ಮರಗಳ ಸರ್ವೆ ವಿರುದ್ಧ ಬಿಜೆಪಿ ಆಕ್ರೋಶ!
ಕೊಡಗಿನ ಜಮ್ಮಭೂಮಿ ಹಾಗೂ ಇತರೆ ಖಾಸಗಿ ಜಮೀನುಗಳಲ್ಲಿ ಇರುವ ಮರಗಳನ್ನು ಸರ್ವೆ ಮಾಡುತ್ತಿರುವುದಕ್ಕೆ ಕೊಡಗು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.17): ಕೊಡಗಿನ ಜಮ್ಮಭೂಮಿ ಹಾಗೂ ಇತರೆ ಖಾಸಗಿ ಜಮೀನುಗಳಲ್ಲಿ ಇರುವ ಮರಗಳನ್ನು ಸರ್ವೆ ಮಾಡುತ್ತಿರುವುದಕ್ಕೆ ಕೊಡಗು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮರಗಳ ಸರ್ವೆಯನ್ನು ಕೂಡಲೇ ನಿಲ್ಲಿಸಬೇಕು, ಮತ್ತು ಸರ್ಕಾರ ಹೊರಡಿಸಿರುವ ಈ ಸುತ್ತೋಲೆಯನ್ನು ಕೈಬಿಡುವಂತೆ ಆಗ್ರಹಿಸಿ ಮಡಿಕೇರಿಯಲ್ಲಿ ಇರುವ ಅರಣ್ಯ ಭವನದ ಎದುರೆ ತೀವ್ರ ಪ್ರತಿಭಟನೆ ನಡೆಸಿತು. ಅರಣ್ಯ ಭವನದ ಗೇಟ್ ಎದುರು ಜಮಾಯಿಸಿದ ಬಿಜೆಪಿಯ ನೂರಾರು ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲಿಂದಲೂ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿವರೆಗೂ ನುಗ್ಗಿದ ಕಾರ್ಯಕರ್ತರು ಅರಣ್ಯ ಇಲಾಖೆ ಕಚೇರಿ ಭಾಗಿಲಲ್ಲೇ ಅಡ್ಡ ಕುಳಿತು ಒಂದು ಗಂಟೆಗೂ ಹೆಚ್ಚು ಸಮಯ ಧರಣಿ ನಡೆಸಿದರು. ಸರ್ಕಾರ, ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಸಿಸಿಎಫ್ ಸ್ಥಳಕ್ಕೆ ಬಂದು ಕೂಡಲೇ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮಡಿಕೇರಿಯ ಮಾಜಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಬಿಜೆಪಿ ಹಿರಿಯ ಮುಖಂಡರು ಸೇರಿದಂತೆ ಬಿಜೆಪಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕರಿಂದಲೇ ಸರ್ಕಾರ ಬೀಳುತ್ತೆ: ಜಗದೀಶ್ ಶೆಟ್ಟರ್ ಭವಿಷ್ಯ
ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅರಣ್ಯ ಇಲಾಖೆ ನಮ್ಮ ಭೂಮಿಗಳಲ್ಲಿ ಇರುವ ಮರಗಳನ್ನು ಸರ್ವೆ ಮಾಡಿ ಅವುಗಳನ್ನು ರಕ್ಷಣೆ ಮಾಡುವ ನಾಟಕ ಶುರು ಮಾಡಿರುವುದು ಖಂಡನೀಯ. ಆದರೆ ಅರಣ್ಯದಲ್ಲಿ ಇರುವ ಸಾವಿರಾರು ಮರಗಳನ್ನು ಕಡಿದು ಕಾಡಿಗೂ ಬೆಂಕಿ ಇಟ್ಟಿದ್ದಾರೆ. ಹೀಗಿರುವಾಗ ರೈತರ ಖಾಸಗಿ ಭೂಮಿಗಳಲ್ಲಿ ಇರುವ ಮರಗಳನ್ನು ಸರ್ವೆ ಮಾಡಿ ಅವುಗಳನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಿರುವುದರ ಉದ್ದೇಶವೇನು ಎಂದು ಪ್ರಶ್ನಿದರು. ಸರ್ಕಾರ ಮಾಡಿರುವ ಇಂತಹ ಕಾನೂನುಗಳಿಂದ ರೈತರಿಗೆ ಸಂಕಷ್ಟ ತಂದೊಡ್ಡು ಸಾಧ್ಯತೆ ಇದೆ. ಕೂಡಲೇ ಮರಗಳ ಸರ್ವೆ ಕಾರ್ಯವನ್ನು ಕೈಬಿಡಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರತರವಾದ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರಾದ ಅಜಿತ್ ನಾಣಯ್ಯ ಅವರು ಮಾತನಾಡಿ, ಸರ್ಕಾರ ಜನರಿಗೆ ನೀಡುತ್ತಿರುವ ಬಿಟ್ಟಿ ಭಾಗ್ಯಗಳಿಗೆ ಹಣದ ಕೊರತೆ ಎದುರಾಗಿದೆ. ಆ ಹಣದ ಕೊರತೆಗಾಗಿ ರೈತರ ಖಾಸಗಿ ಜಮೀನುಗಳಲ್ಲಿ ಇರುವ ಮರಗಳನ್ನು ಮುಂದೆ ಕಡಿದು ಅವುಗಳಿಂದ ಹಣ ಸಂಪಾದಿಸಿ ಜನರಿಗೆ ಬಿಟ್ಟಿ ಭಾಗ್ಯ ಕೊಡಲು ಮುಂದಾಗಿರಬಹುದು. ಅದಕ್ಕಾಗಿ ಈಗ ಮರಗಳನ್ನು ಸರ್ವೆ ಮಾಡಿಸುತ್ತಿದ್ದಾರೆ. ಕೊಡಗಿನ ಯಾವ ರೈತರು ತಮ್ಮ ತೋಟಗಳಲ್ಲಿ ಮರಗಳನ್ನು ಕಡಿಯುವುದಿಲ್ಲ. ಬದಲಾಗಿ ಕಾಫಿಗೆ ನೆರಳು ಬೇಕಾಗಿರುವುದರಿಂದ ಅದನ್ನು ಸಂರಕ್ಷಿಸಲಾಗುತ್ತದೆ.
ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ: ಎಚ್.ಡಿ.ಕುಮಾರಸ್ವಾಮಿ
ಆದರೂ ರೈತರ ಭೂಮಿಗಳಲ್ಲಿ ಇರುವ ಮರಗಳನ್ನು ಸರ್ಕಾರದ ಮರಗಳೆಂದು ಸರ್ವೆ ಮಾಡುತ್ತಿರುವುದು ರೈತರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ರೈತರ ಮನವಿಯನ್ನು ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ರೈತರ ಈ ಮನವಿಯನ್ನು ಸರ್ಕಾರಕ್ಕೆ ಹಾಗೂ ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ಬಿಜೆಪಿ ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಿತು. ಕೂಡಲೇ ನಮ್ಮ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಬಿಜೆಪಿ ಜಿಲ್ಲಾಕ್ಷ ರವಿ ಕಾಳಪ್ಪ ಎಚ್ಚರಿಸಿದರು.