ಸದನದಿಂದ ಬಿಎಸ್‌ವೈಗೆ ಪಕ್ಷಾತೀತ ಭಾವುಕ ವಿದಾಯ: ಗುಡ್‌ಬೈ ಬಿಎಸ್‌ವೈ

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶುಕ್ರವಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಅನೇಕ ಸದಸ್ಯರು ಪಕ್ಷಾತೀತವಾಗಿ ಹಾಡಿ ಹೊಗಳಿದರು. 

Former CM BS Yediyurappa Farewell Speech At Karnataka Assembly Session gvd

ವಿಧಾನಸಭೆ (ಫೆ.25): ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶುಕ್ರವಾರ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಅನೇಕ ಸದಸ್ಯರು ಪಕ್ಷಾತೀತವಾಗಿ ಹಾಡಿ ಹೊಗಳಿದರು. ಅವರ ಹೋರಾಟ, ಜನಪರ ಆಡಳಿತ, ಸ್ನೇಹ, ಸಹಕಾರ ಮನೋಭಾವಗಳನ್ನು ಗುಣಗಾನ ಮಾಡಿದರು. ಜತೆಗೆ ಅವರು ಈಗಲೇ ಚುನಾವಣಾ ನಿವೃತ್ತಿ ತೆಗೆದುಕೊಳ್ಳಬಾರದು, ಇನ್ನೂ ಕೆಲ ವರ್ಷಗಳ ಕಾಲ ವಿಧಾನಸಭೆಗೆ ಆರಿಸಿ ಬಂದು ನಮಗೆ ಮಾರ್ಗದರ್ಶನ ನೀಡಬೇಕೆಂದು ಭಾವುಕರಾಗಿ ಮನವಿ ಮಾಡಿದ ಪ್ರಸಂಗವೂ ನಡೆಯಿತು.

ಪ್ರಸಕ್ತ 15ನೇ ವಿಧಾನಸಭೆಯ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸ್ಪೀಕರ್‌ ಎಲ್ಲ ಶಾಸಕರಿಗೂ ತಮ್ಮ ಮನದಾಳದ ಮಾತುಗಳನ್ನು ಸದನದಲ್ಲಿ ಹಂಚಿಕೊಳ್ಳಲು ಅವಕಾಶ ಕೊಟ್ಟರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್‌, ಈಶ್ವರ್‌ ಖಂಡ್ರೆ, ಜೆಡಿಎಸ್‌ ಉಪ ನಾಯಕ ಬಂಡೆಪ್ಪ ಕಾಶಂಪುರ, ಬಸನಗೌಡ ಪಾಟೀಲ್‌ ಯತ್ನಾಳ್‌ ಸೇರಿದಂತೆ ಮಾತನಾಡಿದ ಬಹುತೇಕ ಸದಸ್ಯರು ಯಡಿಯೂರಪ್ಪ ಅವರೊಂದಿಗಿನ ಒಡನಾಟ, ಅವರ ನಡೆ, ನುಡಿ, ಆಡಳಿತ ಮತ್ತಿತರ ವಿಚಾರಗಳ ಬಗ್ಗೆ ಕೊಂಡಾಡಿದರು. ಕೊನೆಯಲ್ಲಿ ಜೋರು ಕರತಾಡನದ ಮೂಲಕ ಸದನದ ಎಲ್ಲ ಸದಸ್ಯರು ಅವರಿಗೆ ಅಭಿನಂದನೆ ಸಲ್ಲಿಸಿದರು.

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ: ಬಿ.ಎಸ್‌.ಯಡಿಯೂರಪ್ಪ

ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ಯಡಿಯೂರಪ್ಪ ಅವರ 50 ವರ್ಷಗಳಿಗೂ ಹೆಚ್ಚಿನ ರಾಜಕೀಯ ಜೀವನದ ಅಪಾರ ಅನುಭವ, ನಡೆ, ನುಡಿ, ಜನಪರ ಆಡಳಿತ ನಮ್ಮೆಲ್ಲರಿಗೂ ಪಕ್ಷಾತೀತವಾಗಿ ಮಾದರಿ. ನಮಗೆ ವಯಸ್ಸಾಗಿರುವಷ್ಟುಅವರಿಗೆ ಅನುಭವ ಆಗಿದೆ. ಅವರು ಮುಖ್ಯಮಂತ್ರಿಯಾದ ಮೊದಲ ದಿನವೇ ರೈತರ 10 ಎಚ್‌ಪಿ ಬೋರ್‌ವೆಲ್‌ ಮೋಟಾರ್‌ಗಳಿಗೆ ಉಚಿತ ವಿದ್ಯುತ್‌ ಜಾರಿ, ನಂತರ ರೈತ ಬಜೆಟ್‌ ಮಂಡನೆ, ಭಾಗ್ಯಲಕ್ಷ್ಮಿ ಯೋಜನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಪ್ರಧಾನಿ ಅವರ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯ ಸರ್ಕಾರದಿಂದಲೂ 4 ಸಾವಿರ ರು. ಪ್ರೋತ್ಸಾಹಧನ ಘೋಷಣೆ ಹೀಗೆ ಆಡಳಿತಾವಧಿಯುದ್ದಕ್ಕೂ ಅನೇಕ ಜನರಪರ ಯೋಜನೆಗಳನ್ನು ನೀಡಿದವರು. ಅವರ ಪೇರಣೆಯಿಂದ ನಾನು ಕೂಡ ಜನಪರವಾದ ಒಂದಷ್ಟುಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಯಿತು ಎಂದರು.

ಪ್ರತಿಪಕ್ಷ ಕಾಂಗ್ರೆಸ್‌ನ ಉಪನಾಯಕ ಖಾದರ್‌ ಮಾತನಾಡಿ, ಯಡಿಯೂರಪ್ಪ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಸಹಕಾರ ನೀಡಿದ್ದಾರೆ. ಪಕ್ಷಾತೀತವಾಗಿ ಶಾಸಕರುಗಳಿಗೆ ನ್ಯಾಯ ಒದಗಿಸಿದ್ದಾರೆ. ನಾನು ಸಚಿವನಾಗಿದ್ದಾಗಲೂ ಅವರ ಅನುಭವ, ಸಲಹೆಯನ್ನು ನೀಡಿ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಹಕರಿಸಿದ್ದಾರೆ ಎಂದು ಸ್ಮರಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಾತನಾಡಿ, ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ಇತಿಹಾಸದಲ್ಲೇ ನೋಡದ ದೊಡ್ಡ ಪ್ರವಾಹ ಎದುರಿಸಬೇಕಾಯಿತು. ಏಕಾಂಗಿಯಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ನಂತರ ಕೋವಿಡ್‌ ಸಾಂಕ್ರಾಮಿಕ ಎದುರಾಯಿತು. ಅದನ್ನೂ ಸಮರ್ಥವಾಗಿ ನಿಭಾಯಿಸಿದರು. ಎಂಹತ ಸಂದರ್ಭದಲ್ಲೂ ವಿಚಲಿತರಾಗದೆ, ಎದೆಗುಂದದೆ ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ಸೇರಿದಂತೆ ಇಂತಹ ಅನೇಕ ಅಂಶಗಳು ಅವರಿಂದ ಕಲಿಯುವಂತದ್ದು ಇದೆ. ಅವರ ಆಡಳಿತ ನಮಗೆ ಪ್ರೇರಣೆ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಯಡಿಯೂರಪ್ಪ ಅವರು ನನ್ನನ್ನು ರಾಜಕೀಯದಲ್ಲಿ ಬೆಳೆಸಿದವರು. ನಾನು ಮತ್ತು ಅವರು ಒಂದೇ ಸಮಯದಲ್ಲಿ ವಿಧಾನಸಭೆಗೆ ಸ್ಪರ್ಧಿಸಿದರೂ ನಾನು ಸೋತೆ, ಅವರು ಗೆದ್ದು ಬಂದರು. ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವುದಕ್ಕೆ ನನಗೂ ಬೇಸರವಿದೆ. ಅವರ ಅನುಭವ, ಮಾರ್ಗದರ್ಶನ ಈ ಸದನಕ್ಕೆ ಇನ್ನೂ ಹಲವಾರು ವರ್ಷ ಬೇಕಿದೆ. ಹಾಗಾಗಿ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಬರಬೇಕೆಂದು ಕೋರುತ್ತೇನೆ ಎಂದರು.

ಜೆಡಿಎಸ್‌ ಸದಸ್ಯ ಸಾ.ರಾ.ಮಹೇಶ್‌, ಯಡಿಯೂರಪ್ಪ ಅವರು ನನಗೆ ಚುನಾವಣೆಗೆ ಸ್ಪರ್ಧಿಸಲು ಹಿಂದೆ ಟಿಕೆಟ್‌ ಕೊಟ್ಟಾಗ ನಾನೊಂದು ಷರತ್ತು ಹಾಕಿದ್ದೆ. ಅದಕ್ಕೆ ಅವರು, ಟಿಕೆಟ್‌ ಸಿಗೋದೆ ಕಷ್ಟ. ನನಗೇ ಕಂಡೀಷನ್‌ ಹಾಕುತ್ತೀಯ ಹೋಗಿ ನಾಮಪತ್ರ ಸಲ್ಲಿಸು ಎಂದು ಹೇಳಿದ್ದರು. ಅಂದು ಅವರು ಅವಕಾಶ ನೀಡದೆ ಹೋಗಿದ್ದರೆ ಇಲ್ಲಿಯವರೆಗೆ ನಾನು ಬರುತ್ತಿರಲಿಲ್ಲ ಎಂದರು.

ಕಾಂಗ್ರೆಸ್‌ನ ಈಶ್ವರ್‌ ಖಂಡ್ರೆ, ವಿರುಪಾಕ್ಷಪ್ಪ ಮಾಡಾಳ್‌, ಯಡಿಯೂರಪ್ಪ ಅವರ ಚುನಾವಣಾ ನಿವೃತ್ತಿ ಘೋಷಣೆಯಿಂದ ನನಗೆ ನೋವಾಗಿದೆ. ಈ ಸದನದಲ್ಲಿ 80 ವರ್ಷ ಮೀರಿದ ಕೆಲ ಸದಸ್ಯರಿದ್ದಾರೆ. ಅದೇ ರೀತಿ ನಮ್ಮ ಸಮುದಾಯದ ನಾಯಕರಾದ ಯಡಿಯೂರಪ್ಪ ಅವರೂ ಇನ್ನು ಹಲವು ವರ್ಷಗಳ ಕಾಲ ಈ ಸದನದಲ್ಲಿ ಇದ್ದು ಸರ್ಕಾರ, ಸದನಕ್ಕೆ ಮಾರ್ಗದರ್ಶನ ನೀಡಬೇಕು. ಹಾಗಾಗಿ ಅವರ ರಾಜಕೀಯ ನಿವೃತ್ತಿ ನಿರ್ಧಾರವನ್ನು ಅವರ ಪಕ್ಷ ಪುನರ್‌ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ನನ್ನನ್ನು ಮಂತ್ರಿ ಮಾಡಿದ್ದು ಬಿಎಸ್‌ವೈ: ಸದಾ ಯಡಿಯೂರಪ್ಪ ಅವರೊಂದಿಗೆ ವೈಮನಸ್ಯದೊಂದಿಗೇ ಇರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ, ನನ್ನನ್ನು ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವನನ್ನಾಗಿ ಮಾಡಿದ್ದು ಯಡಿಯೂರಪ್ಪ ಮತ್ತು ಅನಂತ್‌ ಕುಮಾರ್‌ ಅವರು ಎಂದು ಇದೇ ವೇಳೆ ಸ್ಮರಿಸಿದರು.

ನನ್ನ ಸ್ಪರ್ಧೆ ತೀರ್ಮಾನಿಸಲು ಬಿಎಸ್‌ವೈ ಯಾರು?: ಸಿದ್ದರಾಮಯ್ಯ

ನನ್ನ ಮತ್ತು ಯಡಿಯೂರಪ್ಪ ನಡುವೆ ವೈಮನಸ್ಯ ಇರಬಹುದು. ಆದರೆ, ಅವರು ನಮ್ಮ ನಾಯಕರು. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿದವರು. ಪಕ್ಷ ಕಟ್ಟಿದ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್‌ ಕೃಷ್ಣ-ಅರ್ಜುನರಿದ್ದಂತೆ. ಉತ್ತರ ಕರ್ನಾಟಕ ಭಾಗದ ಪ್ರಾತಿನಿಧ್ಯದ ಮೂಲಕ ನನಗೆ ವಾಜಪೇಯಿ ಅವರ ಸರ್ಕಾರದಲ್ಲಿ ರೈಲ್ವೆ ಸಚಿವನಾಗಿ ಸೇವೆ ಮಾಡಲು ಈ ನಾಯಕರು ಅವಕಾಶ ಮಾಡಿಕೊಟ್ಟರು ಎಂದು ಹೊಗಳಿದರು. ಇದೇ ವೇಳೆ ಯತ್ನಾಳ್‌ ಎಲ್ಲಿ ಮುಂದೆ ಮುಖ್ಯಮಂತ್ರಿ ಆಗುತ್ತಾನೋ ಎಂದು ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಿಲ್ಲ ಎಂದು ಚಟಾಕಿಯನ್ನೂ ಹಾರಿಸಿದರು.

ಯಡಿಯೂರಪ್ಪ ಅವರ 50 ವರ್ಷಗಳಿಗೂ ಹೆಚ್ಚಿನ ರಾಜಕೀಯ ಜೀವನದ ಅಪಾರ ಅನುಭವ, ನಡೆ, ನುಡಿ, ಜನಪರ ಆಡಳಿತ ನಮ್ಮೆಲ್ಲರಿಗೂ ಪಕ್ಷಾತೀತವಾಗಿ ಮಾದರಿ. ನಮಗೆ ವಯಸ್ಸಾಗಿರುವಷ್ಟುಅವರಿಗೆ ಅನುಭವ ಆಗಿದೆ.
- ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Latest Videos
Follow Us:
Download App:
  • android
  • ios