ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ: ಎಚ್.ಡಿ.ಕುಮಾರಸ್ವಾಮಿ
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.
ಮೈಸೂರು (ಮೇ.17): ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಗೋವಿಂದರಾವ್ ಸ್ಮಾರಕ ಭವನದಲ್ಲಿ ನಡೆದ ಜೆಡಿಎಸ್- ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಂತೆ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಬೇಕು. ಜೆಡಿಎಸ್ ಭದ್ರಕೋಟೆಯಾದ ಕ್ಷೇತ್ರ ಉಳಿಸಬೇಕಿದೆ. ಯಾವುದೇ ವ್ಯತ್ಯಾಸ, ಗೊಂದಲ ಇದ್ದರೆ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಕೆಲಸ ಮಾಡಬೇಕು. ಪಕ್ಷದ ಅಸ್ತಿತ್ವದ ಬಗ್ಗೆ ಮಾತನಾಡುವವರಿಗೆ ಶಕ್ತಿ ತೋರಿಸಬೇಕು ಎಂದು ಕಿವಿಮಾತು ಹೇಳಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಭ್ರಷ್ಟ ಸರ್ಕಾರಕ್ಕೆ ಪಾಠ ಕಲಿಸಲು ಪರಿಷತ್ ಚುನಾವಣೆ ಬಹಳ ಮುಖ್ಯ. ಪರಿಷತ್ ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬಹುಮತ ಹೊಂದಿದೆ. ಮನೆ ಹಾಳ ಕಾಂಗ್ರೆಸ್ ಸರ್ಕಾರ ಒಂದು ಒಳ್ಳೆಯ ಕೆಲಸವನ್ನೂ ಮಾಡಿಲ್ಲ. ಮನೆ ಹಾಳು ಕೆಲಸವನ್ನೇ ಸರ್ಕಾರ ಮಾಡಿದೆ. ಈ ಸರ್ಕಾರದ ಅವಧಿಯಲ್ಲಿ ನೇಹಾ ಹಾಗೂ ಅಂಜಲಿ ಹತ್ಯೆ ನಡೆದಿದೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸತ್ತಿದೆಯಾ? ಬದುಕಿದೆಯಾ ಎಂಬ ಗೊಂದಲವಿದೆ ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಅಧಿಕಾರ ನಡೆಸಿದಾಗಲೆಲ್ಲ ಬರಗಾಲ ಬಂದಿದೆ. ಬರಗಾಲ ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಇದೀಗ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ತನ್ನ ಪಾಲಿನ ಹಣವನ್ನು ಏಕೆ ನೀಡಿಲ್ಲ.
ಚುನಾವಣೆ ಘೋಷಣೆಯಾದಾಗಿನಿಂದ ಚಾಮರಾಜನಗರಕ್ಕೆ ಬಾರದ ಉಸ್ತುವಾರಿ ಸಚಿವ ವೆಂಕಟೇಶ್!
ಒಂದು ನಯಾ ಪೈಸೆಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿಲ್ಲ. ಹಾಲು ಉತ್ಪಾದಕರಿಗೆ 750 ಕೋಟಿ ರು. ಎಂಟು ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ ಎಂದರು. ಇನ್ನು ನೆರೆಯ ಕೇರಳ ಪಾಪರ್ ಆಗಿದೆ. ಅದೇ ಸ್ಥಿತಿ ರಾಜ್ಯದಲ್ಲಿ ನಿರ್ವಾಣ ಆಗುತ್ತಿದೆ. ಬಿಜೆಪಿ ಅಭ್ಯರ್ಥಿ ನಾಮಪತ್ರ ನಾಳೆಯೇ ಹಿಂಪಡೆಯುತ್ತಾರೆ. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಎಲ್ಲರು ಶ್ರಮಿಸಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ಕೆ. ಅನ್ನದಾನಿ ಮಾತನಾಡಿ, ದೇವೇಗೌಡರ ಗರಡಿಯಲ್ಲಿ ಪಳಗಿದ ಮರಿತಿಬ್ಬೇಗೌಡ ಅವರು ದೇವೇಗೌಡರ ಕುಟುಂಬದ ಬಗ್ಗೆ ಏಕ ವವಚನದಲ್ಲಿ ಮಾತನಾಡುತ್ತಿದ್ದಾರೆ. ಇಂತಹವರು ನಮಗೆ ಬೇಕೇ ಎನ್ನುವುದನ್ನು ಯೋಚಿಸಬೇಕು. ಈ ಬಾರಿ ವಿವೇಕಾನಂದ ಅವರನ್ನು ಗೆಲ್ಲಿಸಬೇಕು ಎಂದರು.
ರಾಜವಂಶಸ್ಥ ಯದುವೀರ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್.ಡಿಎ ಮೈತ್ರಿಕೂಟ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ಅದೇ ರೀತಿ ವಿಧಾನ ಪರಿಷತ್ ಚುನಾವಣೆಯಲ್ಲೂ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು. ಮಾಜಿ ಶಾಸಕ ಎಸ್. ಬಾಲರಾಜ್ ಮಾತನಾಡಿ, ಈ ಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಲೇ ಬೇಕು. ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಎಲ್ಲರು ಪ್ರಯತ್ನಿಸಬೇಕು. ಈ ಕ್ಷೇತ್ರವು ಜೆಡಿಎಸ್ ಭದ್ರಕೋಟೆಯಾಗಿದೆ. ಇದನ್ನು ಉಳಿಸಿಕೊಳ್ಳಬೇಕು. ಶಿಕ್ಷಕರು ರಜೆಯಲ್ಲಿರುತ್ತಾರೆ. ಅವರನ್ನು ಗುರುತಿಸಿ ಸಂಪರ್ಕಿಸಿ ಮತ ಸೆಳೆಯುವ ಕಾರ್ಯ ಮಾಡಬೇಕು ಎಂದರು.
ಕೆನಾಲ್ ಕಾಮಗಾರಿಯಿಂದ ಮುಂದಿನ ಪೀಳಿಗೆಗೆ ನೀರು ಸಿಗಲ್ಲ: ಶಾಸಕ ಎಂ.ಟಿ.ಕೃಷ್ಣಪ್ಪ
ಚನ್ನರಾಯಪಟ್ಟಣ ಕ್ಷೇತ್ರದ ಶಾಸಕ ಸಿ.ಎಸ್. ಬಾಲಕೃಷ್ಣ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಪಕ್ಷ ಬದಲಾಯಿಸುವ ಮೂಲಕ ಮರಿತಿಬ್ಬೇಗೌಡ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತಂದವರು. ಅವರನ್ನು ಸೋಲಿಸುವ ಮೂಲಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು. ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಲು ಎಲ್ಲರು ಶ್ರಮಿಸಬೇಕು. ಪ್ರತಿ ಮತದಾರರನ್ನು ತಲುಪುವ ಕಾರ್ಯ ಆಗಬೇಕು ಎಂದರು. ಅಭ್ಯರ್ಥಿ ಕೆ. ವಿವೇಕಾನಂದ, ಶಾಸಕರಾದ ಜಿ.ಟಿ. ದೇವೇಗೌಡ, ಎ. ಮಂಜು, ಮಾಜಿ ಸಚಿವರಾದ ಸಾ.ರಾ. ಮಹೇಶ್, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ಎಲ್. ನಾಗೇಂದ್ರ, ಕೆ. ಮಹದೇವ್, ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಮೊದಲಾದವರು ಇದ್ದರು.