ಅಮೆಜಾನ್‌, ಫ್ಲಿಪ್‌ಕಾರ್ಟ್‌ ಸೇರಿದಂತೆ ಇ-ಕಾಮರ್ಸ್‌ ತಾಣಗಳಲ್ಲಿ ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಮಾರಾಟ ಮಾಡದಂತೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ನೋಟಿಸ್ ನೀಡಿದೆ. ಈ ಹಣ್ಣುಗಳು ಮಾನವನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಮಾರಾಟ ಮಾಡಿದ್ರೆ ಲೈಸೆನ್ಸ್ ರದ್ದು ಎಚ್ಚರಿಕೆ.

ಬೆಂಗಳೂರು (ಆ.25): ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮಿನಿಟ್ಸ್‌ ಸೇರಿದಂತೆ ಇ-ಕಾಮರ್ಸ್‌ ತಾಣಗಳಲ್ಲಿ ವಿಷಕಾರಿ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಮಾರಾಟ ಮಾಡದಂತೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ನೋಟಿಸ್‌ ನೀಡಿರುವುದಾಗಿ ತಿಳಿದು ಬಂದಿದೆ.

ದತ್ತೂರಿ ಹಣ್ಣು ವಿಷಕಾರಿ ಹಾಗೂ ಮಾನವನ ಆರೋಗ್ಯಕ್ಕೆ ಅಪಾಯಕಾರಿ. ಇಂತಹ ಹಣ್ಣುಗಳು ಆನ್ಲೈನ್‌ನಲ್ಲಿ ಮಾರಾಟವಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ದತ್ತೂರಿ ಹಣ್ಣು ಮಾರಾಟ ಮಾಡದಂತೆ ಇ ಕಾಮರ್ಸ್‌ ಫ್ಲಾಟ್‌ಫಾರಂಗಳಿಗೆ ನಿರ್ಬಂಧ ವಿಧಿಸಿದೆ. ಒಂದು ವೇಳೆ ಸೂಚನೆ ಉಲ್ಲಂಘಿಸಿದರೆ ಆಹಾರ ಪರವಾನಗಿ ರದ್ದುಪಡಿಸುವುದಾಗಿ ಎಚ್ಚರಿಸಿದೆ ಎಂದು ಮೂಲಗಳು ತಿಳಿಸಿವೆ.

ಅತ್ಯಂತ ವಿಷಕಾರಿ ಹಣ್ಣು:

ದತ್ತೂರಿ ಗಿಡಗಳು ಸಾಮಾನ್ಯವಾಗಿ ಎಲ್ಲೆಂದರೆ ಬೆಳೆಯುತ್ತವೆ. ಗಿಡದ ಮೇಲೆ ಬಿಳಿ ಹೂ ಸುಂದರವಾಗಿ ಕಂಡರೂ ಅದರದ್ದು ಕೆಟ್ಟ ವಾಸನೆ. ಕೈಕಾಲಿಗೆ ಸೋಕಿದರೂ ವಾಸನೆ. ಇಂಥ ವಿಷಯುಕ್ತ ಸಸ್ಯದ ಹಣ್ಣು ಬೀಜಗಳು ಇತ್ತೀಚೆಗೆ ಇ-ಕಾಮರ್ಸ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಹಣ್ಣು ಎಷ್ಟು ವಿಷಯುಕ್ತ ಎಂದರೆ ಅಪ್ಪಿತಪ್ಪಿ ತಿಂದರೆ ಮನುಷ್ಯನ ಸಾವು ಸಂಭವಿಸಬಹುದು. ಹೀಗಾಗಿ ಇದರ ಬೀಜ ಹಣ್ಣು ಮಾರಾಟಕ್ಕೆ ಆಹಾರ ಸುರಕ್ಷತಾ ಇಲಾಖೆ ನಿಷೇಧ ಹೇರಿದೆ. ಯಾವುದೇ ಅಧಿಕೃತ ಅನುಮತಿ ಇಲ್ಲದೆ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಇವುಗಳ ಮಾರಾಟ ಹೆಚ್ಚಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಈ ಕ್ರಮ ಕೈಗೊಂಡಿದೆ. ಹೀಗಾಗಿ ಸಾರ್ವಜನಿಕರು ಇಂತಹ ಅಪಾಯಕಾರಿ ಹಣ್ಣು ಅಥವಾ ಬೀಜಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಾರದು, ಸೇವಿಸಬಾರದು.