ಜಾಗತಿಕ ಆಹಾರ ದೈತ್ಯ ಕಂಪನಿಗಳಾದ ಕೊಕಾ-ಕೋಲಾ, ನೆಸ್ಲೆ ಭಾರತದಲ್ಲಿ ಪ್ಯಾಕ್ ಮಾಡಿದ ಆಹಾರಗಳ ಮೇಲೆ ಆರೋಗ್ಯ ಮುನ್ನೆಚ್ಚರಿಕೆ ಲೇಬಲ್‌ಗಳನ್ನು ವಿರೋಧಿಸುತ್ತಿವೆ. ಯುರೋಪ್‌ಗೆ ಹೋಲಿಸಿದರೆ ಭಾರತದಲ್ಲಿ ಮಾರಾಟವಾಗುವ ಇಂಥ ಪ್ರಾಡಕ್ಟ್‌ಗಳಲ್ಲಿ ಮುನ್ನೆಚ್ಚರಿಕೆಗಳೂ ಇರೋದಿಲ್ಲ.
ನವದೆಹಲಿ (ಆ.25): ಲಂಡನ್‌ನಲ್ಲಿ ಮಾರಾಟವಾಗುವ ಕ್ಯಾನ್ ಒಂದರ ಫ್ಯಾಂಟಾ (Fanta) ಸಾಫ್ಟ್‌ಡ್ರಿಂಕ್‌ನಲ್ಲಿ ಕೇವಲ 63 ಕ್ಯಾಲೊರಿಗಳಿದ್ದರೆ, ಅದೇ ಬ್ರ್ಯಾಂಡ್‌ನ ಫ್ಯಾಂಟಾ ಭಾರತದಲ್ಲಿ ಮೂರು ಪಟ್ಟು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತದೆ! ಯುರೋಪ್‌ನಲ್ಲಿ ಕೃತಕ ಬಣ್ಣ ಬಳಸಿದರೆ ಪ್ಯಾಕೆಟ್‌ನ ಮುಂಭಾಗದಲ್ಲೇ ದೊಡ್ಡದಾಗಿ ಆರೋಗ್ಯ ಮುನ್ನೆಚ್ಚರಿಕೆ (Health Warning) ಪ್ರಕಟಿಸುವುದು ಕಡ್ಡಾಯ. ಆದರೆ ಭಾರತದಲ್ಲಿ ಅದೇ ಎಚ್ಚರಿಕೆಯನ್ನು ಕ್ಯಾನ್‌ನ ಹಿಂಭಾಗದಲ್ಲಿ, ಕಣ್ಣಿಗೆ ಕಾಣಿಸದಷ್ಟು ಸಣ್ಣ ಅಕ್ಷರಗಳಲ್ಲಿ ಮುದ್ರಿಸಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಲಾಗುತ್ತಿದೆ.
ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳ ಮುಂಭಾಗದಲ್ಲೇ ಪೋಷಕಾಂಶಗಳ ಕುರಿತು ಪ್ರಮುಖ ಆರೋಗ್ಯ ಮುನ್ನೆಚ್ಚರಿಕೆ ಫಲಕಗಳನ್ನು (Front-of-pack warning labels) ಕಡ್ಡಾಯಗೊಳಿಸುವ ಭಾರತ ಸರ್ಕಾರದ ಪ್ರಸ್ತಾಪಕ್ಕೆ ಜಾಗತಿಕ ಆಹಾರ ದೈತ್ಯ ಕಂಪನಿಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಕೊಕಾ-ಕೋಲಾ (Coca-Cola), ನೆಸ್ಲೆ (Nestle) ಹಾಗೂ ಪೆಪ್ಸಿಕೋದಂತಹ (PepsiCo) ದೈತ್ಯ ಕಂಪನಿಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದು, ಭಾರತದ ಆಹಾರ ಸುರಕ್ಷತೆ ಮತ್ತು ಸೌಲಭ್ಯ ಪ್ರಾಧಿಕಾರ (FSSAI) ಕೂಡ ಈ ಕಂಪನಿಗಳ ಜಾಗತಿಕ ಲಾಬಿಗೆ ಮಣಿದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮಾರ್ಚ್‌ನಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಪ್ರಮುಖ ಆಹಾರ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿ, ಮುನ್ನೆಚ್ಚರಿಕೆ ಲೇಬಲ್‌ಗಳು ಗ್ರಾಹಕರಲ್ಲಿ ಗೊಂದಲ ಮೂಡಿಸುತ್ತವೆ ಹಾಗೂ ಅವು ನಿಷ್ಪ್ರಯೋಜಕ ಎಂದು ವಾದಿಸಿದ್ದರು. FSSAI ಸಂಸ್ಥೆಯು ಆಹಾರ ಉತ್ಪನ್ನಗಳ ಮುಂಭಾಗದಲ್ಲಿ ಕೆಂಪು ಮತ್ತು ಹಸಿರು ಬಣ್ಣದ ಮುನ್ನೆಚ್ಚರಿಕೆ ಲೇಬಲ್‌ಗಳನ್ನು ಹಾಕುವ ಪ್ರಸ್ತಾಪದಿಂದ ಆಗಸ್ಟ್‌ನಲ್ಲಿ ಹಿಂದೆ ಸರಿದಿದೆ. ಭಾರತೀಯ ಆಹಾರವು ಪಾಶ್ಚಿಮಾತ್ಯ ಆಹಾರಕ್ಕಿಂತ ಭಿನ್ನವಾದ ಹಾಗೂ ತೀವ್ರವಾದ ರುಚಿಯನ್ನು ಹೊಂದಿದೆ. ಹೀಗಾಗಿ ಅಂತಾರಾಷ್ಟ್ರೀಯ ಲೇಬಲ್ ಮಾನದಂಡಗಳನ್ನು ಜಾರಿಗೊಳಿಸುವುದು ಕಷ್ಟ ಎಂದು FSSAI ಸರ್ಕಾರಿ ಸಮಜಾಯಿಷಿ ನೀಡಿದೆ.
ಇದರ ಬದಲಿಗೆ ಸಕ್ಕರೆ, ಕೊಬ್ಬು ಮತ್ತು ಉಪ್ಪಿನ ಪ್ರಮಾಣವನ್ನು ಸೂಚಿಸುವ ಕಪ್ಪು-ಬಿಳಿ ಬಣ್ಣದ ಸಾಮಾನ್ಯ ಪಟ್ಟಿಯನ್ನು ಪ್ರದರ್ಶಿಸಲು ಕಂಪನಿಗಳಿಗೆ ಸೂಚಿಸಿದೆ. ಆದರೆ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರ ಅರ್ಜಿಯನ್ನು ಪುರಸ್ಕರಿಸಿರುವ ಭಾರತದ ಸುಪ್ರೀಂ ಕೋರ್ಟ್, FSSAI ನಿರ್ಧಾರವನ್ನು ತೀವ್ರ ತನಿಖೆಗೆ ಒಳಪಡಿಸಿದೆ. ಭಾರತವು ತನ್ನ ನಾಗರಿಕರ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ಹೊಂದಿದೆ ಎಂಬುದು ಇಡೀ ವಿಶ್ವಕ್ಕೆ ತಿಳಿಯಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು FSSAIಗೆ ಖಾರವಾಗಿ ತಿರುಗೇಟು ನೀಡಿದ್ದಾರೆ.
ಕಂಪನಿಗಳ ದ್ವಿಮುಖ ನೀತಿ - ಯುರೋಪ್‌ನಲ್ಲಿ ಒಂದು, ಭಾರತದಲ್ಲಿ ಇನ್ನೊಂದು!
ಜಾಗತಿಕ ಕಂಪನಿಗಳ ದ್ವಿಮುಖ ನೀತಿಯನ್ನು ರಾಯಿಟರ್ಸ್ (Reuters) ತನಿಖಾ ವರದಿ ಬಿಚ್ಚಿಟ್ಟಿದೆ. ಯುರೋಪ್‌ನ ಎರಡು ಡಜನ್‌ಗೂ ಹೆಚ್ಚು ದೇಶಗಳಲ್ಲಿ ಕೊಕಾ-ಕೋಲಾ ಕಂಪನಿಯು ಸ್ವಯಂಪ್ರೇರಿತವಾಗಿ ಸಿಗ್ನಲ್ ಮಾದರಿಯ (Traffic-light style) ಬಣ್ಣದ ಮುನ್ನೆಚ್ಚರಿಕೆ ಲೇಬಲ್‌ಗಳನ್ನು ಬಳಸುತ್ತದೆ. ಇದರಿಂದ ಗ್ರಾಹಕರಿಗೆ ಸ್ಪಷ್ಟ ಮಾಹಿತಿ ಸಿಗುತ್ತದೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಳ್ಳುವ ಕಂಪನಿ, ಭಾರತದಲ್ಲಿ ಮಾತ್ರ ಈ ಲೇಬಲ್‌ಗಳು ನಿಷ್ಪ್ರಯೋಜಕ ಎಂದು ವಾದಿಸುತ್ತಿದೆ!
ನೆಸ್ಲೆ ಕಿಟ್‌ಕ್ಯಾಟ್ (KitKat): ಆಸ್ಟ್ರೇಲಿಯಾದಲ್ಲಿ ಮಾರಾಟವಾಗುವ ಕಿಟ್‌ಕ್ಯಾಟ್‌ನಲ್ಲಿ ಶೇ.22 ರಷ್ಟು ಕೋಕೋ (Cocoa) ಇದ್ದರೆ, ಭಾರತದಲ್ಲಿ ಮಾರಾಟವಾಗುವ ಕಿಟ್‌ಕ್ಯಾಟ್‌ನಲ್ಲಿ ಕೇವಲ ಶೇ.4.5 ರಷ್ಟು ಮಾತ್ರ ಕೋಕೋ ಇರುತ್ತದೆ.
ಮ್ಯಾಗಿ ನೂಡಲ್ಸ್ (Maggi): ಬ್ರಿಟನ್‌ನಲ್ಲಿ ಮಾರಾಟವಾಗುವ ಮ್ಯಾಗಿಗೆ ಬೆಲೆಬಾಳುವ ಸೂರ್ಯಕಾಂತಿ ಎಣ್ಣೆ (Sunflower oil) ಬಳಸಿದರೆ, ಭಾರತದಲ್ಲಿ ತಯಾರಾಗುವ ಮತ್ತು ಮಾರಾಟವಾಗುವ ಮ್ಯಾಗಿಯಲ್ಲಿ ಅಗ್ಗದ ಪಾಮ್ ಆಯಿಲ್ (Palm oil) ಬಳಸಲಾಗುತ್ತದೆ.
ಸಾಮಾಜಿಕ ಜಾಲತಾಣದ ಕ್ರಾಂತಿ & ಕಾನೂನು ಸಮರ
ಲ್ಯಾನ್ಸೆಟ್ (Lancet) ಅಧ್ಯಯನದ ಪ್ರಕಾರ, 2050 ರ ವೇಳೆಗೆ ಭಾರತದಲ್ಲಿ ಸುಮಾರು 45 ಕೋಟಿ ಜನರು ಅತಿಯಾದ ತೂಕ ಅಥವಾ ಬೊಜ್ಜಿನ ಸಮಸ್ಯೆಗೆ ಈಡಾಗಲಿದ್ದಾರೆ. ಭಾರತದ 100 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಪ್ಯಾಕೇಜ್ಡ್ ಆಹಾರ ಮಾರುಕಟ್ಟೆಯಲ್ಲಿ ಲಭ್ಯವಿರುವ ಶೇ.80 ರಷ್ಟು ಉತ್ಪನ್ನಗಳು ಅತಿಯಾದ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಂಶದಿಂದ ಕೂಡಿದ್ದು, ಕೆಂಪು ಬಣ್ಣದ ಲೇಬಲ್ ಪಡೆದುಕೊಳ್ಳುವ ಅರ್ಹತೆ ಹೊಂದಿವೆ!
ಈ ನಡುವೆ, 'ಫುಡ್ ಫಾರ್ಮರ್' (Food Pharmer) ಎಂದೇ ಖ್ಯಾತರಾಗಿರುವ ರೇವಂತ್ ಹಿಮತ್‌ಸಿಂಗ್ಕಾ (Revant Himatsingka) ಅವರಂತಹ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಈ ಪ್ರಕ್ರಿಯೆಯ ವಿರುದ್ಧ ಭಾರಿ ಜಾಗೃತಿ ಮೂಡಿಸುತ್ತಿದ್ದಾರೆ. 50 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ರೇವಂತ್, ಪೆಪ್ಸಿಕೋದ 'ಸ್ಟಿಂಗ್' (Sting) ಕೆಫೀನ್ ಪಾನೀಯದಲ್ಲಿರುವ ಅತಿಯಾದ ಸಕ್ಕರೆ ಹಾಗೂ ಕೃತಕ ಸಿಹಿಕಾರಕಗಳನ್ನು ವಿರೋಧಿಸಿ ವಿಡಿಯೋ ಮಾಡಿದ್ದರು. ಇದರ ವಿರುದ್ಧ ಪೆಪ್ಸಿಕೋ ದೆಹಲಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿತ್ತಾದರೂ, ಜುಲೈನಲ್ಲಿ ಕೇಂದ್ರ ಸರ್ಕಾರವು 'ಎನರ್ಜಿ ಡ್ರಿಂಕ್' ಲೇಬಲ್ ತೆರವುಗೊಳಿಸುವಂತೆ ಪೆಪ್ಸಿಕೋಗೆ ಆದೇಶಿಸಿತ್ತು.
ತೀವ್ರ ಪ್ರತಿಭಟನೆ ಹಾಗೂ ಜಾಗೃತಿಯ ಫಲವಾಗಿ ನೆಸ್ಲೆ ಸಂಸ್ಥೆಯು ಭಾರತದಲ್ಲಿ ಬರೋಬ್ಬರಿ 50 ವರ್ಷಗಳ ನಂತರ ಸಕ್ಕರೆ ರಹಿತ 'ಸೆರೆಲ್ಯಾಕ್' (Cerelac) ಶಿಸು ಆಹಾರವನ್ನು ಪರಿಚಯಿಸಲು ಒಪ್ಪಿಕೊಂಡಿದೆ.


