ರಾಜ್ಯ ಸರ್ಕಾರವು ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಭಾಲ್ಕಿ, ಔರಾದ್ ಸೇರಿದಂತೆ ಇತರೆ ನಾಲ್ಕು ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಇದು ಬೆಳೆ ಒಣಗುತ್ತಿರುವುದರಿಂದ ಪರಿಹಾರ ವಂಚಿತರಾಗುವ ಭೀತಿಯಲ್ಲಿರುವ ಸ್ಥಳೀಯ ರೈತರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ಬೀದರ್ (ಆ.28): ರಾಜ್ಯ ಸರ್ಕಾರವು 2026ರ ಮುಂಗಾರು ಹಂಗಾಮಿಗೆ (ಜೂನ್ 1ರಿಂದ ಆಗಸ್ಟ್ 12) ಸಂಬಂಧಿಸಿದಂತೆ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಆದೇಶ ಹೊರಡಿಸಿದ್ದು, ಜಿಲ್ಲೆಯ ರೈತ ಸಮುದಾಯದಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.
ಸರ್ಕಾರದ ಅಧಿಕೃತ ಆದೇಶದ ಪ್ರಕಾರ ಬೀದರ್ ಜಿಲ್ಲೆಯ ಬೀದರ್, ಬಸವಕಲ್ಯಾಣ, ಹುಮನಾಬಾದ್ ಮತ್ತು ಚಿಟಗುಪ್ಪ ತಾಲೂಕುಗಳನ್ನು ಮಾತ್ರ ‘ತೀವ್ರತರನಾದ ಬರಪೀಡಿತ’ ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸ್ವಕ್ಷೇತ್ರವಾಗಿರುವ ಭಾಲ್ಕಿ ತಾಲೂಕು ಸೇರಿದಂತೆ, ಮಳೆ ಅಭಾವದಿಂದ ತೀವ್ರ ಬರ ಎದುರಿಸುತ್ತಿರುವ ಔರಾದ್, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ಸರ್ಕಾರದ ಬರ ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.
ಶೇ.42ರಷ್ಟು ಮಳೆ ಕೊರತೆ
ಈಗಾಗಲೇ ಜಿಲ್ಲೆಯಲ್ಲಿ ಶೇ. 93ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೂ ಮುಂಗಾರು ಮಳೆಯ ತೀವ್ರ ಅಭಾವದಿಂದಾಗಿ ಶೇಕಡಾ 31ರಷ್ಟು ಮಳೆ ಕೊರತೆ ದಾಖಲಾಗಿದ್ದು, ಜೂನ್ ತಿಂಗಳಿನಲ್ಲಿ ಶೇ. 42ರಷ್ಟು ಮಳೆ ಕಡಿಮೆಯಾಗಿ ಕಳೆದ 50 ವರ್ಷಗಳಲ್ಲೇ 4ನೇ ಅತ್ಯಂತ ಕಡಿಮೆ ಮಳೆ ಕಂಡ ಜೂನ್ ಎಂಬಂತಾಗಿದೆ. ಇದರಿಂದಾಗಿ ಹೊಲಗದ್ದೆಗಳಲ್ಲಿ ನಿಂತಿರುವ ಬೆಳೆಗಳು ನೀರಿನ ಅಭಾವದಿಂದ ಒಣಗುವುದು, ಹಳದಿ ಬಣ್ಣಕ್ಕೆ ತಿರುಗುವುದು ಹಾಗೂ ಬೆಳವಣಿಗೆ ಕುಂಠಿತಗೊಳ್ಳುವಂತಹ ತೀವ್ರ ಹಾನಿಯನ್ನು ಅನುಭವಿಸುತ್ತಿವೆ.
ಬೆಳೆ ಕಣ್ಣೆದುರೇ ಕಾಸಿಗೆ ಗತಿಯಿಲ್ಲದೇ ಕಮರಿ ಹೋಗುತ್ತಿರುವ ಈ ಸಮಯದಲ್ಲಿ ಸರ್ಕಾರ ಈ ತಾಲೂಕುಗಳನ್ನು ಕೈಬಿಟ್ಟಿರುವುದರಿಂದ ರೈತರು ಸರ್ಕಾರದ ಬರ ಪರಿಹಾರದಿಂದ ವಂಚಿತವಾಗುವ ಭೀತಿಗೆ ಸಿಲುಕಿದ್ದಾರೆ. ಶೀಘ್ರದಲ್ಲಿಯೇ ಕಂದಾಯ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಜಂಟಿಯಾಗಿ ಬರಪೀಡಿತ ಪ್ರದೇಶಗಳ ಸರ್ವೆ ನಡೆಸಲಿವೆ.
ಮಾಸಾಂತ್ಯದ ಮಳೆ ಪ್ರಮಾಣ ಪರಾಮರ್ಶಿಸುವ ಭರವಸೆ: ಆದರೆ, ಸರ್ಕಾರವು ತನ್ನ ಆದೇಶದಲ್ಲಿ ತಿಳಿಸಿರುವಂತೆ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್‌ನಲ್ಲಿ ಬರುವ ಮಳೆಯ ಪರಿಸ್ಥಿತಿಯನ್ನು ವಾರಕ್ಕೊಮ್ಮೆ ವೈಜ್ಞಾನಿಕವಾಗಿ ಪರಾಮರ್ಶಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಗ್ರೌಂಡ್ ಟ್ರೂಥಿಂಗ್ (Ground Truthing) ಪ್ರಕ್ರಿಯೆ ಹಾಗೂ ಮಳೆ ಕೊರತೆ ಆಧಾರದ ಮೇಲೆ ಅರ್ಹತೆ ಪಡೆಯುವ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಹೊಸ ಆದೇಶ ಹೊರಡಿಸಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ.
ನಾಲ್ಕು ತಾಲೂಕುಗಳ ಸೇರ್ಪಡೆಗೆ ಆಗ್ರಹ
ಹೀಗಾಗಿ, ಪಟ್ಟಿಯಲ್ಲಿ ಬಿಟ್ಟುಹೋಗಿರುವ ಭಾಲ್ಕಿ, ಔರಾದ್, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ತಕ್ಷಣವೇ ಜಂಟಿ ಸಮೀಕ್ಷೆಗೆ ಒಳಪಡಿಸಿ ಬರಪೀಡಿತ ಎಂದು ಘೋಷಿಸಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಶೇ. 93ರಷ್ಟು ಬಿತ್ತನೆ ಪ್ರಕ್ರಿಯೆ ಮುಗಿದಿದ್ದು, ಕರ್ನಾಟಕ ರಾಜ್ಯ ಬರ ನಿರ್ವಹಣಾ ಕೋಶದ ಮಾಹಿತಿಯಾಧರಿಸಿ ಸರ್ಕಾರ ಈಗಾಗಲೇ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ. ಜಿಲ್ಲೆಯಿಂದ ಬರ ಘೋಷಣೆ ಕುರಿತು ಯಾವುದೇ ವರದಿ ಸಲ್ಲಿಕೆಗೆ ಅವಕಾಶ ಇರೋಲ್ಲ. ಇದೀಗ ಬರ ಘೋಷಿತ ಆಯಾ ಪ್ರದೇಶಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಾಗುತ್ತದೆ. ಅಲ್ಲದೆ ಆಗಸ್ಟ್ ಮಾಸಾಂತ್ಯ ಹಾಗೂ ಸೆಪ್ಟೆಂಬರ್ ವರಗಿನ ಮುಂಗಾರು ಮಳೆಯನ್ನಾಧರಿಸಿ ಸರ್ಕಾರ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆಯಿದೆ.
- ಆರ್. ದೇವಿಕಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ


