15 ವರ್ಷದ ವೈಭವ್ ಸೂರ್ಯವಂಶಿ, ದುಲೀಪ್ ಟ್ರೋಫಿಯಲ್ಲಿ 57 ವರ್ಷಗಳ ಹಳೆಯ ದಾಖಲೆ ಮುರಿದು ಅರ್ಧಶತಕ ಗಳಿಸಿದ ಅತೀ ಕಿರಿಯ ಆಟಗಾರನಾಗಿದ್ದಾರೆ. ತಮ್ಮ ನಿರ್ಭೀತ ಆಟದಿಂದ ಮೊಹಮ್ಮದ್ ಸಿರಾಜ್‌ರಂತಹ ಬೌಲರ್‌ಗಳನ್ನು ಎದುರಿಸಿದ ಅವರು, ನಾಯಕತ್ವದ ಜವಾಬ್ದಾರಿಯನ್ನೂ ನಿಭಾಯಿಸಿ ಭರವಸೆ ಮೂಡಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

2026ರ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ದೊಡ್ಡ ಮಟ್ಟದ ಶತಕಗಳನ್ನು ಗಳಿಸದಿದ್ದರೂ, ೧೫ ವರ್ಷದ ಹುಡುಗ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಪಂದ್ಯಾವಳಿಯ ನಂತರ ಈ ಪ್ರಥಮ ದರ್ಜೆ ಟೂರ್ನಿಯು ವೈಭವ್‌ಗೆ ಲಾಭ ತಂದಿದೆಯೇ ಅಥವಾ ನಷ್ಟವನ್ನುಂಟುಮಾಡಿದೆಯೇ ಎಂಬ ಚರ್ಚೆ ಶುರುವಾಗಿತ್ತು. ಆದರೆ, ವೈಭವ್ ಅವರ ನಿರ್ಭೀತ ಆಟ ಮತ್ತು ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನು ಎದುರಿಸಿದ ರೀತಿ, ಈ ಟೂರ್ನಿಯು ಅವರ ಭವಿಷ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂಬುದನ್ನು ಸಾಬೀತುಪಡಿಸಿದೆ.

57 ವರ್ಷಗಳ ಹಳೆಯ ದಾಖಲೆ ಧ್ವಂಸ!

15 ನೇ ವಯಸ್ಸಿನಲ್ಲಿಯೇ ದುಲೀಪ್ ಟ್ರೋಫಿಯಂತಹ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ 57 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ವೈಭವ್ ಇತಿಹಾಸ ನಿರ್ಮಿಸಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ವೈಭವ್ ಮೂರು ಪಂದ್ಯಗಳ ೫ ಇನ್ನಿಂಗ್ಸ್‌ಗಳಲ್ಲಿ 104.91 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 14 ಸಿಕ್ಸರ್ ಸಹಿತ 192 ರನ್ ಕಲೆಹಾಕಿದರು. ರೆಡ್-ಬಾಲ್ (ಟೆಸ್ಟ್) ಕ್ರಿಕೆಟ್‌ನಲ್ಲೂ ಟಿ20 ಮಾದರಿಯಂತೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಇವರ ವಿಶೇಷತೆಯಾಗಿತ್ತು.

ದೌರ್ಬಲ್ಯವೇನು? ಆತುರದ ನಿರ್ಧಾರ ಮತ್ತು ಅಪ್ರಬುದ್ಧತೆ!

ಎದುರಾಳಿ ಬೌಲರ್‌ಗಳು ತಮ್ಮ ಲೈನ್ ಮತ್ತು ಲೆಂತ್‌ನಿಂದ ವೈಭವ್‌ರನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಆದರೆ, ಸ್ವಂತ ತಪ್ಪುಗಳಿಂದಲೇ ವೈಭವ್ ವಿಕೆಟ್ ಒಪ್ಪಿಸಿದರು. ಸೆಂಟ್ರಲ್ ಝೋನ್ ವಿರುದ್ಧದ ಸೆಮಿಫೈನಲ್‌ನಲ್ಲಿ ೯೨ ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಶತಕದ ಹೊಸ್ತಿಲಲ್ಲಿ ಸಿಕ್ಸರ್‌ಗೆ ಯತ್ನಿಸಿ ಕ್ಯಾಚ್ ಔಟ್ ಆದರು. ದಕ್ಷಿಣ ವಲಯದ ವಿರುದ್ಧದ ಫೈನಲ್‌ನಲ್ಲಿ ಸ್ಪಿನ್ನರ್ ವಿರುದ್ಧ ದೊಡ್ಡ ಹೊಡೆತಕ್ಕೆ ಹೋಗಿ ಸ್ಟಂಪ್ಡ್ ಆದರು. ಇದು ಬೌಲರ್‌ಗಳ ಶ್ರೇಷ್ಠತೆಯಿಂದಾದ ಔಟ್ ಅಲ್ಲ, ಬದಲಿಗೆ ವೈಭವ್ ಅವರ ಅತಿಯಾದ ಆಕ್ರಮಣಶೀಲತೆ ಮತ್ತು ಶಾಟ್ ಆಯ್ಕೆಯಲ್ಲಾದ ಅಪ್ರಬುದ್ಧತೆ ಎಂದು ಸ್ಪಷ್ಟವಾಗುತ್ತದೆ.

ಮೊಹಮ್ಮದ್ ಸಿರಾಜ್‌ಗೆ ಡೋಂಟ್ ಕೇರ್, ತಿಲಕ್ ವರ್ಮಾ ಜೊತೆ ವಾಗ್ವಾದ!

ಈ ದುಲೀಪ್ ಟ್ರೋಫಿ ವೈಭವ್‌ಗೆ ಕೇವಲ ರನ್ ಗಳಿಸಲು ಮಾತ್ರವಲ್ಲ, ಮಾನಸಿಕವಾಗಿ ಗಟ್ಟಿಯಾಗಲು ಸಹಾಯ ಮಾಡಿತು. ದಕ್ಷಿಣ ವಲಯದ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ಸತತ ಬೌಂಡರಿ ಬಾರಿಸಿದಾಗ, ಸಿರಾಜ್ ಮತ್ತು ವೈಭವ್ ನಡುವೆ ಬಿಸಿಬಿಸಿ ಮಾತಿನ ಚಕಮಕಿ ನಡೆಯಿತು. ಆದರೆ, ೧೫ ವರ್ಷದ ವೈಭವ್ ಅಂತರರಾಷ್ಟ್ರೀಯ ಬೌಲರ್‌ನ ಕಣ್ಣಲ್ಲಿ ಕಣ್ಣಿಟ್ಟು ಸೂಕ್ತ ಪ್ರತ್ಯುತ್ತರ ನೀಡಿದರು. ಅಷ್ಟೇ ಅಲ್ಲದೆ, ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ಜೊತೆಯೂ ವಾಗ್ವಾದ ನಡೆಸಿ, ತಾನು ಹಿರಿಯ ಆಟಗಾರರ ಹೆಸರಿಗೆ ಹೆದರುವುದಿಲ್ಲ ಎಂಬುದನ್ನು ತೋರಿಸಿಕೊಟ್ಟರು.

ಇಶಾನ್ ಕಿಶನ್ ಗಾಯ: ನಾಯಕತ್ವ ಮತ್ತು ಡಿಆರ್‌ಎಸ್‌ನಲ್ಲಿ ಮಿಂಚು!

ಪೂರ್ವ ವಲಯದ ನಾಯಕ ಇಶಾನ್ ಕಿಶನ್ ಗಾಯಗೊಂಡಾಗ, ವೈಭವ್ ಸ್ಟ್ಯಾಂಡ್-ಇನ್ ನಾಯಕನಾಗಿ ತಂಡದ ಜವಾಬ್ದಾರಿ ವಹಿಸಿಕೊಂಡರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಮೈದಾನದಲ್ಲಿ ಫೀಲ್ಡಿಂಗ್ ಹೊಂದಿಸುವುದು ಮತ್ತು ಅಂಪೈರ್ ತೀರ್ಪುಗಳನ್ನು ಸವಾಲು ಮಾಡಿ ರದ್ದುಗೊಳಿಸುವ ನಿಖರ DRS ನಿರ್ಧಾರಗಳನ್ನು ತೆಗೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಭವಿಷ್ಯದ ಸೂಪರ್‌ ಸ್ಟಾರ್!

ಶತಕದ ಕೊರತೆ ಇದ್ದರೂ, ವಿಶ್ವಮಟ್ಟದ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡುವ ಸಾಮರ್ಥ್ಯ ತಮ್ಮಲ್ಲಿದೆ ಎಂಬುದನ್ನು ವೈಭವ್ ಸೂರ್ಯವಂಶಿ ಸಾಬೀತುಪಡಿಸಿದ್ದಾರೆ. ಶಾಟ್ ಆಯ್ಕೆ ಮತ್ತು ಮಾನಸಿಕ ಹಿಡಿತವನ್ನು ಸರಿಪಡಿಸಿಕೊಂಡರೆ, ಭಾರತೀಯ ಕ್ರಿಕೆಟ್‌ನ ಭವಿಷ್ಯದ ದೊಡ್ಡ ಸೂಪರ್‌ಸ್ಟಾರ್ ಆಗುವುದರಲ್ಲಿ ಅನುಮಾನವಿಲ್ಲ.