ಕೆಲವು ದಿಗ್ಗಜ ಕ್ರಿಕೆಟ್ ನಾಯಕರು ತವರಿನಲ್ಲೇ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಸೋತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಈ ಸ್ಟೋರಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಸೇರಿದಂತೆ, ಈ ಪಟ್ಟಿಯಲ್ಲಿರುವ ಟಾಪ್ 5 ನಾಯಕರ ಸೋಲಿನ ಕಥೆ ಹೇಳುತ್ತದೆ.

ಕ್ರಿಕೆಟ್ ಮೈದಾನದಲ್ಲಿ ಗೆಲುವು ಮತ್ತು ಸೋಲು ಸಹಜ. ಕಪ್ ಹಿಡಿದು ಸಂಭ್ರಮಿಸುವ ನಾಯಕರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ಆದರೆ, ನಾಯಕನಾಗಿ ತಾಯ್ನಾಡಿನಲ್ಲೇ (ಹೋಮ್ ಗ್ರೌಂಡ್) ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಸೋತ ಅಪ್ರಿಯ ವಿಶ್ವ ದಾಖಲೆಯನ್ನು ಕೆಲವು ದಿಗ್ಗಜ ನಾಯಕರು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. 12 ವರ್ಷಗಳಿಂದ ಮುರಿಯದ ಈ ಅಚ್ಚರಿಯ ವಿಶ್ವ ದಾಖಲೆ ಮತ್ತು ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ಸೋಲುಂಡ ಟಾಪ್ 5 ನಾಯಕರ ವಿವರ ಇಲ್ಲಿದೆ.

1. ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ); 15 ಸೋಲು!

ದಕ್ಷಿಣ ಆಫ್ರಿಕಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಗ್ರೇಮ್ ಸ್ಮಿತ್, ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ಸೋತ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 2004 ರಿಂದ 2014ರ ನಡುವೆ ಇವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತವರಿನಲ್ಲೇ ಬರೋಬ್ಬರಿ 15 ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿತು. ಈ ಸೋತ ಪಂದ್ಯಗಳಲ್ಲಿ ಸ್ಮಿತ್ ಅವರ ಬ್ಯಾಟಿಂಗ್ ಪ್ರದರ್ಶನವೂ ಕಳಪೆಯಾಗಿತ್ತು. 29 ಇನ್ನಿಂಗ್ಸ್‌ಗಳಲ್ಲಿ ಕೇವಲ 23.77 ಸರಾಸರಿಯಲ್ಲಿ 642 ರನ್ ಗಳಿಸಿದ ಇವರು, ಒಂದೂ ಶತಕ ಬಾರಿಸಲಿಲ್ಲ. ೪ ಅರ್ಧಶತಕ ಗಳಿಸಿದರೂ, 3 ಬಾರಿ ಶೂನ್ಯಕ್ಕೆ (ಡಕ್ ಔಟ್) ನಿರ್ಗಮಿಸಿದ್ದರು.

2. ಡೇವಿಡ್ ಗೋವರ್ (ಇಂಗ್ಲೆಂಡ್); 12 ಸೋಲು!

ಇಂಗ್ಲೆಂಡ್‌ನ ಸೊಗಸಾದ ಬ್ಯಾಟರ್ ಡೇವಿಡ್ ಗೋವರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 1982 ರಿಂದ 1989 ರ ಅವಧಿಯಲ್ಲಿ ಗೋವರ್ ನಾಯಕತ್ವದಲ್ಲಿ ಇಂಗ್ಲೆಂಡ್ ತವರಿನಲ್ಲಿ ೧೨ ಟೆಸ್ಟ್ ಪಂದ್ಯಗಳನ್ನು ಸೋತಿತು. ಈ ಸೋತ ಪಂದ್ಯಗಳ 24 ಇನ್ನಿಂಗ್ಸ್‌ಗಳಲ್ಲಿ ಗೋವರ್ 27.08 ಸರಾಸರಿಯಲ್ಲಿ 623 ರನ್ ಕಲೆಹಾಕಿದ್ದರು. ತಂಡ ಸೋತರೂ ಇವರು ಒಮ್ಮೆ 106 ರನ್‌ಗಳ ರೋಚಕ ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿ ಹೋರಾಟ ನಡೆಸಿದ್ದರು.

3. ಮೈಕೆಲ್ ಅಥರ್ಟನ್ (ಇಂಗ್ಲೆಂಡ್); 11 ಸೋಲು!

ಇಂಗ್ಲೆಂಡ್‌ನ ಕ್ರೂರಿ ನಾಯಕ ಎಂದೇ ಹೆಸರಾಗಿದ್ದ ಮೈಕೆಲ್ ಅಥರ್ಟನ್ 1993ರಿಂದ 2001ರವರೆಗೆ ತಂಡವನ್ನು ಮುನ್ನಡೆಸಿದರು. ಈ ಅವಧಿಯಲ್ಲಿ ಇಂಗ್ಲೆಂಡ್ ತವರಿನಲ್ಲಿ 11 ಟೆಸ್ಟ್ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿತು. ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಅಥರ್ಟನ್, ಸೋತ ಪಂದ್ಯಗಳ 22 ಇನ್ನಿಂಗ್ಸ್‌ಗಳಲ್ಲಿ 26.90 ಸರಾಸರಿಯಲ್ಲಿ 592 ರನ್ ಗಳಿಸಿದರು. ಇವರ ಗರಿಷ್ಠ ಸ್ಕೋರ್ 81 ರನ್ ಆಗಿದ್ದು, 4 ಅರ್ಧಶತಕಗಳನ್ನು ಬಾರಿಸಿದ್ದರು.

4. ಅಲನ್ ಬಾರ್ಡರ್ (ಆಸ್ಟ್ರೇಲಿಯಾ); 11 ಸೋಲು!

ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿದ ಆಕ್ರಮಣಕಾರಿ ನಾಯಕ ಅಲನ್ ಬಾರ್ಡರ್ ಕೂಡ ಈ ಪಟ್ಟಿಯಲ್ಲಿದ್ದಾರೆ. 1984 ರಿಂದ 1994 ರವರೆಗೆ ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತವರಿನಲ್ಲಿ 11 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಈ ಸೋತ ಪಂದ್ಯಗಳ 22 ಇನ್ನಿಂಗ್ಸ್‌ಗಳಲ್ಲಿ ಇವರು 25.66 ಸರಾಸರಿಯಲ್ಲಿ 539 ರನ್ ಗಳಿಸಿದರು. ತಂಡ ಸೋತರೂ ಸಹ ಬಾರ್ಡರ್ 152 ರನ್‌ಗಳ ಅಜೇಯ ಶತಕ ಬಾರಿಸಿ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದರು.

5. ಸ್ಟೀಫನ್ ಫ್ಲೆಮಿಂಗ್ (ನ್ಯೂಜಿಲೆಂಡ್); 11 ಸೋಲು!

ನ್ಯೂಜಿಲೆಂಡ್‌ನ ಚಾಣಾಕ್ಷ ನಾಯಕ ಸ್ಟೀಫನ್ ಫ್ಲೆಮಿಂಗ್ ಐದನೇ ಸ್ಥಾನದಲ್ಲಿದ್ದಾರೆ. 1997ರಿಂದ 2006ರ ನಡುವೆ ಫ್ಲೆಮಿಂಗ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತವರಿನಲ್ಲೇ 11 ಟೆಸ್ಟ್‌ಗಳಲ್ಲಿ ಸೋಲು ಕಂಡಿತು. ಸೋತ ಪಂದ್ಯಗಳ 22 ಇನ್ನಿಂಗ್ಸ್‌ಗಳಲ್ಲಿ ಫ್ಲೆಮಿಂಗ್ 25.18 ಸರಾಸರಿಯಲ್ಲಿ 554 ರನ್ ಬಾರಿಸಿದರು. ಇದರಲ್ಲಿ 86 ರನ್ ಇವರ ಗರಿಷ್ಠ ಸ್ಕೋರ್ ಆಗಿದ್ದು, ಒಟ್ಟು 4 ಅರ್ಧಶತಕಗಳನ್ನು ಗಳಿಸಿದ್ದರು. ಯಷ್ಟೇ ದೊಡ್ಡ ನಾಯಕರಾಗಿದ್ದರೂ, ಸುದೀರ್ಘ ಆಟದ ಸ್ವರೂಪವಾದ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ವದೇಶದ ಮೈದಾನದಲ್ಲೇ ಸೋಲಿನ ಕಹಿ ಉಣ್ಣುವುದು ತಪ್ಪಿದ್ದಲ್ಲ ಎಂಬುದಕ್ಕೆ ಈ ಗ್ರೇಮ್ ಸ್ಮಿತ್ ನೇತೃತ್ವದ ದಿಗ್ಗಜರ ಪಟ್ಟಿಯೇ ಸಾಕ್ಷಿ.