ಭಾರತದ ತಾರಾ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ, ಚೀನಾ ಮಾಸ್ಟರ್ಸ್‌ ಸೂಪರ್‌ 750 ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಫೈನಲ್‌ನಲ್ಲಿ ಚೀನಾದ ಜೋಡಿಯನ್ನು ಮೂರು ಗೇಮ್‌ಗಳ ರೋಚಕ ಹೋರಾಟದಲ್ಲಿ ಮಣಿಸಿದ ಇವರು, ಈ ಋತುವಿನಲ್ಲಿ ತಮ್ಮ ಎರಡನೇ ಹಾಗೂ ಒಟ್ಟಾರೆ 11ನೇ ಬಿಡಬ್ಲ್ಯುಎಫ್‌ ಕಿರೀಟವನ್ನು ಮುಡಿಗೇರಿಸಿಕೊಂಡರು.

ಶೆನ್ಜೆನ್‌(ಚೀನಾ): ಚೀನಾ ಮಾಸ್ಟರ್ಸ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಪುರುಷ ಡಬಲ್ಸ್‌ ಜೋಡಿ ಸಾತ್ವಿಕ್‌ ಮತ್ತು ಚಿರಾಗ್‌ ಶೆಟ್ಟಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಭಾನುವಾರ ನಡೆದ ಫೈನಲ್‌ನಲ್ಲಿ ಭಾರತೀಯ ಜೋಡಿಯು ಚೀನಾದ ಹೆ ಜಿ ಟಿಂಗ್ ಮತ್ತು ರೆನ್ ಕ್ಸಿಯಾಂಗ್ ಯು ಅವರನ್ನು 11-21, 21-13, 21-17 ಅಂಕಗಳ ಅಂತರದಲ್ಲಿ ಸೋಲಿಸಿದರು. ಮೊದಲೆರಡು ಗೇಮ್‌ನಲ್ಲಿ ಸಮಬಲಗೊಂಡ ಬಳಿಕ ಕೊನೆ ಗೇಮ್‌ನಲ್ಲಿ ಉಭಯ ಜೋಡಿಗಳಿಂದ ಭಾರೀ ಪೈಪೋಟಿ ಕಂಡುಬಂತು. ಆದರೆ ಕೊನೆ ಕ್ಷಣದ ರೋಚಕತೆಯಲ್ಲಿ ಭಾರತೀಯ ಜೋಡಿಗೆ ಗೆಲುವು ಲಭಿಸಿತು. ಇದು ಮೂರನೇ ಪ್ರಯತ್ನದಲ್ಲಿ ಸಾತ್ವಿಕ್‌-ಚಿರಾಗ್‌ಗೆ ಲಭಿಸಿದ ಮೊದಲ ಚೀನಾ ಮಾಸ್ಟರ್ಸ್‌ ಕಿರೀಟ. ಈ ಹಿಂದೆ 2023, 2025ರಲ್ಲಿ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

2ನೇ ಪ್ರಶಸ್ತಿ:

ಮಾಜಿ ವಿಶ್ವ ನಂ.1 ಜೋಡಿಯಾಗಿರುವ ಸಾತ್ವಿಕ್‌-ಚಿರಾಗ್‌ ಈ ಆವೃತ್ತಿಯಲ್ಲಿ 2ನೇ ಬಿಡಬ್ಲ್ಯುಎಫ್‌ ಕಿರೀಟ ತನ್ನದಾಗಿಸಿಕೊಂಡಿದೆ. ಇತ್ತೀಚೆಗಷ್ಟೇ ಸಿಂಗಾಪುರ ಓಪನ್‌ ಸೂಪರ್‌ 750 ಟೂರ್ನಿಯಲ್ಲಿ ಚಾಂಪಿಯನ್‌ ಆಗಿತ್ತು. ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಟೂರ್ನಿಯಲ್ಲಿ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

11ನೇ ಬಿಡಬ್ಲ್ಯುಎಫ್‌ ಕಿರೀಟ

ಸಾತ್ವಿಕ್‌-ಚಿರಾಗ್‌ಗೆ ಇದು 11ನೇ ಬಿಡಬ್ಲ್ಯುಎಫ್‌ ಕಿರೀಟ. 2018ರಲ್ಲಿ ಈ ಜೋಡಿ ಮೊದಲ ಬಾರಿ ಹೈದರಾಬಾದ್‌ ಓಪನ್‌ ಗೆದ್ದಿತ್ತು. 2019ರಲ್ಲಿ ಥಾಯ್ಲೆಂಡ್‌ ಓಪನ್‌, 2022ರಲ್ಲಿ ಇಂಡಿಯಾ ಓಪನ್‌, ಫ್ರೆಂಚ್‌ ಓಪನ್‌, 2023ರಲ್ಲಿ ಸ್ವಿಸ್‌, ಇಂಡೋನೇಷ್ಯಾ, ಕೊರಿಯಾ ಓಪನ್‌, 2024ರಲ್ಲಿ ಫ್ರೆಂಚ್‌, ಥಾಯ್ಲೆಂಡ್‌ ಓಪನ್‌, 2026ರಲ್ಲಿ ಇಂಡೋನೇಷ್ಯಾ, ಚೀನಾ ಮಾಸ್ಟರ್ಸ್‌ ಗೆದ್ದಿದ್ದಾರೆ.

ಇಂಡೋನೇಷ್ಯಾ ಮಾಸ್ಟರ್ಸ್‌: ಗೆದ್ದ ಬೆಳ್ಳಿ ಭಾರತದ ಮಾನ್ಸಿ

ಜಕಾರ್ತ: ಇಲ್ಲಿ ನಡೆದ ಇಂಡೋನೇಷ್ಯಾ ಮಾಸ್ಟರ್ಸ್‌ ಸೂಪರ್ 100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಯುವ ಆಟಗಾರ್ತಿ ಮಾನ್ಸಿ ಸಿಂಗ್‌ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡರು. ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ 21 ವರ್ಷದ ಮಾನ್ಸಿ, ಚೀನಾದ ವಿಶ್ವ ನಂ.81 ಆಟಗಾರ್ತಿ ಕ್ಸು ವೆನ್ ಜಿಂಗ್ ಅವರ ವಿರುದ್ಧ 16-21, 8-21 ಅಂಕಗಳ ಅಂತರದಲ್ಲಿ ಸೋತು ರಜತ ಪದಕ ಗೆದ್ದರು. ಸೆಮಿಫೈನಲ್‌ನಲ್ಲಿ ವಿಶ್ವ ನಂ.76 ಮಾನ್ಸಿ ಸಿಂಗ್‌, ಕೆನಡಾದ ರಾಚೆಲ್‌ ಚಾನ್‌ ವಿರುದ್ಧ ಗೆದ್ದಿದ್ದರು. ಫೆಬ್ರವರಿಯಲ್ಲಿ ಅವರು ಉಗಾಂಡ ಇಂಟರ್‌ನ್ಯಾಷನಲ್‌ ಚಾಲೆಂಜ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು.