ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಿ.ವಿ.ಸಿಂಧು ಮತ್ತು ಕನ್ನಡಿಗ ಆಯುಷ್‌ ಶೆಟ್ಟಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು, ಲಕ್ಷ್ಯ ಸೇನ್‌ ಆಘಾತಕಾರಿ ಸೋಲು ಕಂಡಿದ್ದಾರೆ. ಇನ್ನೊಂದೆಡೆ, ರಾಷ್ಟ್ರೀಯ ಜೂನಿಯರ್‌ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವು ಎರಡನೇ ದಿನವೂ 9 ಚಿನ್ನದ ಪದಕಗಳನ್ನು ಗೆದ್ದು ತನ್ನ ಪ್ರಾಬಲ್ಯ ಮೆರೆದಿದೆ.

ನವದೆಹಲಿ: ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು, ಕನ್ನಡಿಗ ಆಯುಷ್‌ ಶೆಟ್ಟಿ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ.

ಲಕ್ಷ್ಯ ಸೇನ್‌ಗೆ ಶಾಕ್

ಬುಧವಾರ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಸಿಂಧು, ಕೆನಡಾದ ವೆನ್‌ ಯು ಝಾಂಗ್‌ ವಿರುದ್ಧ 21-16, 21-17ರಲ್ಲಿ ಗೆದ್ದರು. ಆದರೆ ಯುವ ತಾರೆ ಉನ್ನತಿ ಹೂಡಾ ಕೆನಡಾದ ಮಿಚೆಲ್‌ ಲಿ ವಿರುದ್ಧ 21-11, 9-21, 21-23ರಲ್ಲಿ ಪರಾಭವಗೊಂಡರು. ಕಾರ್ಕಳದ ಆಯುಷ್‌ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ದುಮಿಂಡು ಅಭಯ್‌ವಿಕ್ರಮ ವಿರುದ್ಧ 21-8, 21-10ರಲ್ಲಿ ಸುಲಭ ಗೆಲುವು ದಾಖಲಿಸಿದರು. ಆದರೆ ಪದಕ ನಿರೀಕ್ಷೆಯಲ್ಲಿದ್ದ ಲಕ್ಷ್ಯ ಸೇನ್‌ಗೆ ಅಮೆರಿಕದ ಗ್ಯಾರೆಟ್‌ ಟಾನ್‌ ವಿರುದ್ಧ 21-19, 19-21, 17-21 ಗೇಮ್‌ಗಳಲ್ಲಿ ಆಘಾತಕಾರಿ ಸೋಲು ಎದುರಾಯಿತು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್ ರಂಕಿರೆಡ್ಡಿ - ಚಿರಾಗ್‌ ಶೆಟ್ಟಿ ವಾಕ್‌ಓವರ್‌ ಪಡೆದು ಮುಂದಿನ ಸುತ್ತಿಗೇರಿದರು. ಆದರೆ ಹರಿಹರಣ್‌-ಅರ್ಜುನ್‌ ಜೋಡಿ ಸೋತುಹೊರಬಿತ್ತು. ಮಿಶ್ರ ಡಬಲ್ಸ್‌ನಲ್ಲಿ ತನಿಶಾ-ಧ್ರುವ್‌ ಕಪಿಲಾ ಜೋಡಿ ಕೂಡಾ ಪ್ರಿ ಕ್ವಾರ್ಟರ್‌ಗೇರಿತು.

ಈಜು: ರಾಜ್ಯಕ್ಕೆ ಮತ್ತೆ 9 ಚಿನ್ನ ಸೇರಿ 16 ಪದಕ

ಭುವನೇಶ್ವರ್: 52ನೇ ರಾಷ್ಟ್ರೀಯ ಜೂನಿಯರ್‌ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 2ನೇ ದಿನ ಮತ್ತೆ 9 ಚಿನ್ನ, 5 ಬೆಳ್ಳಿ, 2 ಕಂಚು ಸೇರಿ 16 ಪದಕ ಗೆದ್ದಿದೆ. ಇದರೊಂದಿಗೆ ಪದಕ ಗಳಿಕೆ 16 ಚಿನ್ನ ಸೇರಿ 32ಕ್ಕೆ ಏರಿಕೆಯಾಗಿದೆ.

ಬುಧವಾರ 100 ಮೀ. ಬ್ಯಾಕ್‌ಸ್ಟ್ರೋಕ್‌ ಬಾಲಕರ ವಿಭಾಗದಲ್ಲಿ ಸಮರ್ಥ್‌ ಗೌಡ, ಬಾಲಕಿಯರ ವಿಭಾಗ-1ರಲ್ಲಿ ವಿಹಿತಾ, ವಿಭಾಗ-2ರಲ್ಲಿ ತನಿಶಿ ಗುಪ್ತಾ, ಬಾಲಕರ 50 ಮೀ. ಫ್ರೀಸ್ಟೈಲ್‌ನಲ್ಲಿ ವೇದಾಂತ್‌, 50 ಮೀ. ಫ್ರೀಸ್ಟೈಲ್‌ ಬಾಲಕಿಯರ ವಿಭಾಗ-1ರಲ್ಲಿ ರುಜುಲಾ, ವಿಭಾಗ-2ರಲ್ಲಿ ಚರಿತಾ, ಬಾಲಕಿಯರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ ತಾನ್ಯಾ ಚಿನ್ನ ಗೆದ್ದರು. ಬಾಲಕಿಯರ 4*100 ಮೆಡ್ಲೆ ಸ್ಪರ್ಧೆಯಲ್ಲಿ ರಾಜ್ಯ ತಂಡ ಚಾಂಪಿಯನ್‌ ಆಯಿತು.