ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಶೂಟಿಂಗ್ ವಿಭಾಗದಲ್ಲಿ 2 ಬೆಳ್ಳಿ ಗೆಲ್ಲುವ ಮೂಲಕ ಪದಕದ ಖಾತೆ ತೆರೆದಿದೆ. ಇಳವೆನಿಲ್‌ ವಲರಿವನ್‌ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಜೊತೆಗೆ ಮಹಿಳಾ ಕ್ರಿಕೆಟ್, ಬ್ಯಾಡ್ಮಿಂಟನ್ ಮತ್ತು ಹಾಕಿಯಲ್ಲೂ ಭಾರತ ಉತ್ತಮ ಪ್ರದರ್ಶನ ನೀಡಿದೆ.

ನಗೋಯಾ: 20ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಪದಕ ಖಾತೆ ತೆರೆದಿದೆ. ಭಾನುವಾರ ಶೂಟಿಂಗ್‌ನಲ್ಲಿ 2 ಬೆಳ್ಳಿ ಪದಕ ಗೆದ್ದಿದ್ದು, ಮಿಶ್ರ ಮಾರ್ಷಲ್‌ ಆರ್ಟ್ಸ್‌ನಲ್ಲಿ ಐತಿಹಾಸಿಕ ಪದಕ ಖಚಿತಪಡಿಸಿಕೊಂಂಡಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಭಾರತ ಸತತ 2ನೇ ಚಿನ್ನದ ಸನಿಹ ತಲುಪಿದ್ದು, ಹಾಕಿ ತಂಡಗಳು ಅಬ್ಬರದ ಆರಂಭ ಪಡೆದಿವೆ. ಆದರೆ ಟೆಕ್‌ಬಾಲ್‌ನಲ್ಲಿ ಐತಿಹಾಸಿಕ ಪದಕ ಗೆಲ್ಲುವ ಕನಸು ಭಗ್ನಗೊಂಡಿತು.

ಏಷ್ಯಾಡ್‌ ಇತಿಹಾಸದಲ್ಲಿ ಭಾರತ ಅಥ್ಲೆಟಿಕ್ಸ್‌ ಬಳಿಕ ಗರಿಷ್ಠ ಪದಕ ಗೆದ್ದಿದ್ದು ಶೂಟಿಂಗ್‌ನಲ್ಲಿ. ಈ ಕ್ರೀಡೆಯಲ್ಲೇ ಭಾರತ ಈ ಬಾರಿ ಪದಕ ಖಾತೆ ತೆರೆಯಿತು. ತಮಿಳುನಾಡಿನ ಇಳವೆನಿಲ್‌ ವಲರಿವನ್‌ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಬೆಳ್ಳಿ ಸಾಧನೆ ಮಾಡಿದರು. ಮೊದಲು 10 ಮೀ. ಏರ್‌ ರೈಫಲ್‌ ತಂಡ ವಿಭಾಗದಲ್ಲಿ ಸೋನಮ್‌ ಮಸ್ಕರ್‌ ಹಾಗೂ ವಿದರ್ಶ ವಿನೋದ್‌ ಜೊತೆಗೂಡಿ ಬೆಳ್ಳಿ ಗೆದ್ದರು. ಈ ತಂಡ 1898.0 ಅಂಕ ಸಂಪಾದಿಸಿ 2ನೇ ಸ್ಥಾನಿಯಾಯಿತು.

ಚೀನಾ ತಂಡ 1904.2 ಅಂಕಗಳೊಂದಿಗೆ ವಿಶ್ವದಾಖಲೆ ಬರೆದು ಚಾಂಪಿಯನ್‌ ಆಯಿತು. 1897.1 ಅಂಕ ಗಳಿಸಿದ ಜಪಾನ್‌, ಭಾರತಕ್ಕಿಂತ ಕೇವಲ 0.9 ಅಂಕಗಳ ಹಿನ್ನಡೆ ಅನುಭವಿಸಿ 2ನೇ ಸ್ಥಾನ ಪಡೆದುಕೊಂಡಿತು. ತಂಡ ವಿಭಾಗದಲ್ಲಿ ಮೂವರು ಶೂಟರ್‌ಗಳು ಅರ್ಹತಾ ಸುತ್ತಿನಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದಲ್ಲಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಸೋನಮ್‌ 634.1, ಇಳವೆನಿಲ್‌ 633.5 ಹಾಗೂ ವಿದರ್ಶ 630.4 ಅಂಕ ಗಳಿಸಿ ತಮ್ಮ ತಂಡಕ್ಕೆ ಬೆಳ್ಳಿ ತಂದುಕೊಟ್ಟರು.

ಡಬಲ್‌ ಧಮಾಕಾ:

ತಂಡ ವಿಭಾಗದಲ್ಲಿ ಪದಕ ಸಾಧನೆ ಬಳಿಕ ಇಳವೆನಿಲ್‌ ವೈಯಕ್ತಿಕ ವಿಭಾಗದಲ್ಲೂ ಪೋಡಿಯಂ ಫಿನಿಶ್‌ ಮಾಡಿದರು. 2025ರ ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ಇಳವೆನಿಲ್‌ ಅವರು 10 ಮೀ. ಏರ್‌ ರೈಫಲ್‌ನಲ್ಲಿ 252.4 ಅಂಕಗಳೊಂದಿಗೆ ಬೆಳ್ಳಿ ಪಡೆದರು. ಜಪಾನ್‌ನ ಹಿನಟಾ ತೈಚಿ 253.0 ಅಂಕದೊಂದಿಗೆ ಚಿನ್ನ ಸಂಪಾದಿಸಿದರು. ದ.ಕೊರಿಯಾದ ಬಾನ್‌ ಹ್ಯೊ-ಜಿನ್‌(230.4 ಅಂಕ) ಕಂಚಿಗೆ ತೃಪ್ತಿಪಟ್ಟುಕೊಂಡರು. 17 ಶಾಟ್‌ಗಳ ಬಳಿಕ ಇಳವೆನಿಲ್‌ 1.4 ಅಂಕದಿಂದ ಮುನ್ನಡೆಯಲ್ಲಿದ್ದರೂ, ಕೊನೆಯಲ್ಲಿ ತೈಚಿ ಅಮೋಘ ಆಟವಾಡಿ ಚಿನ್ನ ಪಡೆದರು. ಕೊನೆ 2 ಶಾಟ್‌ಗಳಿರುವಾಗ ಇಳವೆನಿಲ್‌ 0.3 ಅಂಕದ ಹಿನ್ನಡೆಯಲ್ಲಿದ್ದರು. ಆ ಬಳಿಕ ಜಪಾನಿ ಶೂಟರನ್ನು ಮಣಿಸಲು ಇಳವೆನಿಲ್‌ಗೆ ಸಾಧ್ಯವಾಗಲಿಲ್ಲ.

--

ಪದಕ ಪಟ್ಟಿ

ಸ್ಥಾನ ದೇಶ ಚಿನ್ನ ಬೆಳ್ಳಿ ಕಂಚು ಒಟ್ಟು

1 ಚೀನಾ 11 6 3 20

2 ಜಪಾನ್‌ 6 7 7 20

3 ದ.ಕೊರಿಯಾ 4 3 7 14

4 ಕಜಕಸ್ತಾನ 4 0 2 6

5 ಥಾಯ್ಲೆಂಡ್‌ 3 1 0 4

10 ಭಾರತ 0 2 0 2

ಬ್ಯಾಡ್ಮಿಂಟನ್‌: ಭಾರತಕ್ಕೆ 3-0 ಜಯ

ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಭಾರತ ಮಹಿಳಾ ತಂಡ ಕಜಕಸ್ತಾನ ವಿರುದ್ಧ 3-0 ಗೆಲುವು ಸಾಧಿಸಿದ್ದು, ಇನ್ನು ಜಪಾನ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಾಡಲಿದೆ. ಪಿ.ವಿ.ಸಿಂಧು, ಉನ್ನತಿ ಹೂಡಾ ಹಾಗೂ ತಾನ್ವಿ ಶರ್ಮಾ ತಮ್ಮ ಪಂದ್ಯಗಳಲ್ಲಿ ಒಂದೂ ಗೇಮ್‌ ಬಿಟ್ಟುಕೊಡದೆ ಸುಲಭದಲ್ಲಿ ಜಯಗಳಿಸಿದರು. ಈ ಪೈಕಿ ಸಿಂಧು ಕೇವಲ 24 ನಿಮಿಷಗಳಲ್ಲೇ ಪಂದ್ಯ ಗೆದ್ದರು.