ಸೌರವ್ಯೂಹದ ಹೊರಗಡೆ ಎರಡು ಹೊಸ ಗ್ರಹಗಳು ಪತ್ತೆಯಾಗಿದೆ. ಇದರಲ್ಲಿ ಒಂದು ವಾಸಯೋಗ್ಯ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮಾನವ ಹೊಸ ಗ್ರಹದಲ್ಲಿ ಬದುಕು ಆರಂಭಿಸಲು ಸಾಧ್ಯವಿದೆಯಾ?
ಗ್ರಹ, ನಕ್ಷತ್ರ, ಸೂರ್ಯ, ಚಂದ್ರ ಸೇರಿದಂತೆ ಆಕಾಶಗಳ ಕುರಿತು ಸತತವಾಗಿ ಅಧ್ಯಯನ, ಸಂಶೋಧನೆ ನಡೆಯುತ್ತಿದೆ. ಇದರ ನಡುವೆ ಸ್ಪಾನಿಷ್ ವಿಜ್ಞಾನಿಗಳ ಸಂಶೋಧನೆ ಇದೀಗ ವಿಶ್ವದ ಗಮನಸೆಳೆದಿದೆ. ಭೂಮಿಯ ಹತ್ತಿರದ ಕೆಂಪು ಕುಬ್ಜ ನಕ್ಷತ್ರವೊಂದರ ಸುತ್ತ ಸುತ್ತುತ್ತಿರುವ ಎರಡು ಹೊಸ ಎಕ್ಸೋಪ್ಲಾನೆಟ್‌ಗಳನ್ನು ಪತ್ತೆಹಚ್ಚಿದ್ದಾರೆ. ಇದರಲ್ಲಿ ಒಂದು ಗ್ರಹ ವಾಸ ಯೋಗ್ಯವಾಗಿರುವ ಸೂಪರ್ ಅರ್ಥ್ ಆಗಿದೆ. ದ್ರವ ರೂಪದ ನೀರಿಗೆ ಅನುಕೂಲಕರ ವಾತಾವರಣ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಆ್ಯಂಡಲೂಸಿಯಾದ ಖಗೋಳಶಾಸ್ತ್ರ ಸಂಸ್ಥೆ ಹಾಗೂ ಗ್ರಾನಡಾದ ಸ್ಪೇನ್‌ನ ನ್ಯಾಷನಲ್ ರಿಸರ್ಚ್ ಕೌನ್ಸಿಲ್‌ನ ಆಲ್ಬರ್ಟೋ ಪೆಲಾಜ್ ಟೋರಸ್ ವಿಜ್ಞಾನಿಗಳು ಸಂಶೋಧನೆಯಲ್ಲಿ ಎರಡು ಗ್ರಹಗಳು ಪತ್ತೆಯಾಗಿದೆ. ಎರಡು ಗ್ರಹಗಳಿಗೆ TOI-1752 b ಮತ್ತು TOI-1752 c ಎಂದು ಹೆಸರಿಡಲಾಗಿದೆ. ಈ ಪೈಕಿ TOI-1752 b ಭೂಮಿಗಿಂತ ದೊಡ್ಡದಾದ ಸುಡುವ ಲಾವಾ ಪ್ರಪಂಚವಾಗಿದೆ. ಇದರ ಅಂದಾಜು ದ್ರವ್ಯರಾಶಿ ಭೂಮಿಯ ದ್ರವ್ಯರಾಶಿಯ ಸುಮಾರು 4.35 ಪಟ್ಟು ಇದೆ. ಈ ಗ್ರಹವು ತನ್ನ ನಕ್ಷತ್ರಕ್ಕೆ ಅತ್ಯಂತ ಹತ್ತಿರದಲ್ಲಿದೆ, ಆದ್ದರಿಂದ ಇದು ಅತ್ಯಂತ ಹೆಚ್ಚು ತಾಪಮಾನವನ್ನು ಹೊಂದಿದೆ
TOI-1752 c ಗ್ರಹ ವಾಸಕ್ಕೆ ಯೋಗ್ಯ
TOI-1752 c ಗ್ರಹ ವಾಸಯೋಗ್ಯ ಸಾಧ್ಯತೆ ಇರುವ ಗ್ರಹ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸಂಭಾವ್ಯವಾಗಿ ವಾಸಯೋಗ್ಯವಾದ ಸೂಪರ್ ಅರ್ಥ್ ಆಗಿರಬಹುದು ಎಂದಿದ್ದಾರೆ. ಈ ಗ್ರಹ ಅಂದಾಜು 5.20 ಭೂಮಿ ದ್ರವ್ಯರಾಶಿಯನ್ನು ಹೊಂದಿದೆ. ವಿಜ್ಞಾನಿಗಳ ಪ್ರಕಾರ, ಇದು ಸಂಭಾವ್ಯವಾಗಿ ದ್ರವ ರೂಪದ ನೀರನ್ನು ಹೊಂದಿರಬಹುದು, ಆದರೆ ಇದು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.
ನಕ್ಷತ್ರ ಸುತ್ತು ಸುತ್ತುತ್ತಿದೆ ಈ ಗ್ರಹಗಳು
ಎರಡೂ ಗ್ರಹಗಳು TOI-1752 ಎಂಬ ಕೆಂಪು ಕುಬ್ಜ ನಕ್ಷತ್ರದ ಸುತ್ತ ಸುತ್ತುತ್ತವೆ. ಈ ನಕ್ಷತ್ರವು ಭೂಮಿಯಿಂದ ಸುಮಾರು 337 ಬೆಳಕಿನ ವರ್ಷಗಳ ದೂರದಲ್ಲಿದೆ ಮತ್ತು ಡ್ರಾಕೋ ನಕ್ಷತ್ರಪುಂಜದ ದಿಕ್ಕಿನಲ್ಲಿದೆ. ಈ ನಕ್ಷತ್ರವು ಸೂರ್ಯನ ದ್ರವ್ಯರಾಶಿಯ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ದ್ರವ್ಯರಾಶಿಯನ್ನು ಹೊಂದಿದೆ ಎಂದಿದ್ದಾರೆ.
ವಾಸಯೋಗ್ಯ ಗ್ರಹಗಳ ಕುರಿತು ಅಧ್ಯಯನ ಆರಂಭ
ವಾಸಯೋಗ್ಯ ಸಾಧ್ಯತೆ ಗ್ರಹದ ಕುರಿತು ಅಧ್ಯಯನ ಆರಂಭಗೊಂಡಿದೆ. ಈ ಗ್ರಹಗಳ ಮೇಲೆ ನೀರಿನ ಅಂಶ ಸೇರಿದಂತೆ ಹಲವು ವಿಚಾರಗಳ ಕುರಿತು ತಿಳಿದುಕೊಳ್ಳಲು ಅಧ್ಯಯನ ನಡೆಯುತ್ತಿದೆ.


