ತೆಲಂಗಾಣದ ಏಟೂರುನಾಗಾರಂ ಅರಣ್ಯದಲ್ಲಿ ಅತ್ಯಂತ ವಿಷಕಾರಿ 'ಬ್ಯಾಂಡೆಡ್ ಕ್ರೇಟ್' ಹಾವು ಕಾಣಿಸಿಕೊಂಡು ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಈ ಕಪ್ಪು-ಹಳದಿ ಪಟ್ಟೆಯ ಹಾವು, ಮಾರಕ ನರವಿಷವನ್ನು ಹೊಂದಿದ್ದು, ಇದನ್ನು ಕಂಡರೆ ಕೊಲ್ಲದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಕೋರಲಾಗಿದೆ.
ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಮುಲುಗು ಜಿಲ್ಲೆಯ ಏಟೂರುನಾಗಾರಂ ದಟ್ಟ ಅರಣ್ಯ ಪ್ರದೇಶದಲ್ಲಿ ಅತ್ಯಂತ ಅಪರೂಪದ ಹಾಗೂ ಭೀಕರ ವಿಷಪೂರಿತ 'ಬ್ಯಾಂಡೆಡ್ ಕ್ರೇಟ್' ಹಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಹಾಗೂ ಅರಣ್ಯ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕಪ್ಪು ಮತ್ತು ಹಳದಿ ಬಣ್ಣದ ದಪ್ಪನೆಯ ಪಟ್ಟೆಗಳನ್ನು ಹೊಂದಿರುವ ಈ ಹಾವು ಕಡಿದರೆ ವ್ಯಕ್ತಿ ಬದುಕುಳಿಯುವುದು ಬಹುತೇಕ ಅಸಾಧ್ಯ. ಸಾಮಾನ್ಯವಾಗಿ ಚೀನಾ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಾವು, ಈಗ ಭಾರತದ ಭಾಗದಲ್ಲೂ ಕಾಣಿಸಿಕೊಂಡಿರುವುದು ಸಾರ್ವಜನಿಕರು ಹಾಗೂ ಉರಗ ತಜ್ಞರ ಗಮನ ಸೆಳೆದಿದೆ.
ಏಟೂರುನಾಗಾರಂ ಹಾಗೂ ಪಕಾಲಾ ಅರಣ್ಯದಲ್ಲಿ ಭೀತಿ
ಏಟೂರುನಾಗಾರಂ ಹೊರವಲಯದ ರಸ್ತೆಯಲ್ಲಿ ರಾತ್ರಿ ವೇಳೆ ಈ ಹಾವೊಂದು ರಸ್ತೆ ದಾಟುತ್ತಿದ್ದಾಗ ದಾರಿಹೋಕರ ಕಣ್ಣಿಗೆ ಬಿದ್ದಿದೆ. ಆರಂಭದಲ್ಲಿ ಕಪ್ಪು-ಹಳದಿ ಪಟ್ಟೆಗಳ ಈ ವಿಚಿತ್ರ ರೂಪವನ್ನು ಕಂಡು ಜನ ಆತಂಕಗೊಂಡರು. ಈ ಹಿಂದೆ ವಾರಂಗಲ್‌ನ ಪಕಾಲಾ ಕಾಡುಗಳು ಹಾಗೂ ಖಾನಪುರಂ ಮಂಡಲದ ಅಶೋಕ್ ನಗರ ಗ್ರಾಮದ ಹೊರವಲಯದಲ್ಲೂ ಇಂತಹದ್ದೇ ಹಾವು ಕಾಣಿಸಿಕೊಂಡಿತ್ತು. ಅಶೋಕ್ ನಗರದಲ್ಲಿ ಕೃಷಿ ಭೂಮಿ ಬಳಿ ಇದನ್ನು ಮೊದಲ ಬಾರಿಗೆ ನೋಡಿದ ಸ್ಥಳೀಯರು, ಪ್ಲಾಸ್ಟಿಕ್ ಆಟಿಕೆ ಇರಬೇಕೆಂದು ಭಾವಿಸಿದ್ದರು. ಆದರೆ ಅದು ಚಲಿಸಲು ಪ್ರಾರಂಭಿಸಿದಾಗ ಭಯಭೀತರಾಗಿ ತಕ್ಷಣವೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
5 ಅಡಿ ಉದ್ದದ ಮಾರಕ ಸರೀಸೃಪ
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ಹಾಗೂ ಉರಗ ರಕ್ಷಕರು ಸುಮಾರು 5 ಅಡಿ ಉದ್ದವಿದ್ದ ಈ ಹಾವನ್ನು ಅತ್ಯಂತ ಚಾಣಾಕ್ಷತನದಿಂದ ಹಿಡಿದು ದಟ್ಟ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಉರಗ ತಜ್ಞರ ಪ್ರಕಾರ, ಈ ಹಾವು ಶೇಕಡಾ 100 ರಷ್ಟು ಪ್ರಾಣಾಪಾಯ ತರಬಲ್ಲ ತೀವ್ರ ನರವಿಷವನ್ನು (Neurotoxin) ಹೊಂದಿದೆ. ಇದು ಕಡಿದ ಕೆಲವೇ ನಿಮಿಷಗಳಲ್ಲಿ ನರಮಂಡಲದ ಮೇಲೆ ದಾಳಿ ಮಾಡುವುದರಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವು ಸಂಭವಿಸುತ್ತದೆ.
ಇದು ನೋಡಡಲು ಅತ್ಯಂತ ಆಕರ್ಷಕವಾಗಿ ಕಂಡರೂ, ಅಷ್ಟೇ ಮಾರಕವಾದ ವಿಷವನ್ನು ಹೊಂದಿದೆ. ರಾತ್ರಿ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಈ ಹಾವು, ಅತ್ಯಂತ ಶಾಂತ ಸ್ವಭಾವದ್ದಾಗಿದ್ದರೂ ಕಿರಿಕಿರಿ ಉಂಟುಮಾಡಿದರೆ ತಕ್ಷಣವೇ ದಾಳಿ ಮಾಡುತ್ತದೆ.
ವಿದೇಶದಿಂದ ಸರಕು ಲಾರಿಗಳ ಮೂಲಕ ಭಾರತಕ್ಕೆ ಎಂಟ್ರಿ?
ಸಾಮಾನ್ಯವಾಗಿ ಈ 'ಬ್ಯಾಂಡೆಡ್ ಕ್ರೇಟ್' ಹಾವುಗಳು ಚೀನಾ, ನೇಪಾಳ, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಭಾರತದಲ್ಲಿ ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಕೆಲವೇ ಭಾಗಗಳಲ್ಲಿ ಇವು ವಿರಳವಾಗಿ ಗೋಚರಿಸುತ್ತವೆ. ತೆಲಂಗಾಣದ ಕಾಡುಗಳಲ್ಲಿ ಇವು ಕಾಣ ಸಿಗುವುದು ಅತ್ಯಂತ ಆಶ್ಚರ್ಯಕರ ವಿಷಯವಾಗಿದೆ. ಬೇರೆ ರಾಜ್ಯಗಳಿಂದ ಅಥವಾ ವಿದೇಶಗಳಿಂದ ಬರುವ ಸರಕು ಸಾಗಣೆ ಲಾರಿಗಳಲ್ಲಿ ದಾರಿ ತಪ್ಪಿ ಇವು ಈ ಪ್ರದೇಶವನ್ನು ತಲುಪಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.
ಅರಣ್ಯ ಇಲಾಖೆಯ ಮುಖ್ಯ ಮನವಿ
ಈ ಹಾವುಗಳು ಸಾಮಾನ್ಯವಾಗಿ ಶಾಂತ ಸ್ವಭಾವದವು ಹಾಗೂ ರಾತ್ರಿ ವೇಳೆಯಲ್ಲಿ ಮಾತ್ರ ಆಹಾರ ಅರಸಿ ಹೊರಬರುತ್ತವೆ. ಸಾರ್ವಜನಿಕರು ಅಥವಾ ರೈತರು ಕಪ್ಪು ಮತ್ತು ಹಳದಿ ಪಟ್ಟೆಗಳಿರುವ ಇಂತಹ ಹಾವುಗಳನ್ನು ಕಂಡಾಗ ಭಯಪಟ್ಟು ಕೊಲ್ಲಬಾರದು. ಹಾವುಗಳನ್ನು ಕೊಲ್ಲುವುದು ಅಪರಾಧವಾಗಿದ್ದು, ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಥವಾ ನುರಿತ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.

