ಸಲಗ ಚಿತ್ರ ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ ಹಾಗೂ ವೆಂಕಟಾಚಲ (ಚಲ) ನಿರ್ದೇಶನದಲ್ಲಿ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಚಿತ್ರೀಕರಣಗೊಳ್ಳುತ್ತಿರುವ ಕನ್ನಡ-ತೆಲುಗು ದ್ವಿಭಾಷಾ ಆಕ್ಷನ್ ಹಾಸ್ಯಚಿತ್ರ ‘ಹಲ್ಕಾ ಡಾನ್’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ.
ಸಲಗ ಚಿತ್ರ ಖ್ಯಾತಿಯ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ ಹಾಗೂ ವೆಂಕಟಾಚಲ (ಚಲ) ನಿರ್ದೇಶನದಲ್ಲಿ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಚಿತ್ರೀಕರಣಗೊಳ್ಳುತ್ತಿರುವ ಕನ್ನಡ-ತೆಲುಗು ದ್ವಿಭಾಷಾ ಆಕ್ಷನ್ ಹಾಸ್ಯಚಿತ್ರ ‘ಹಲ್ಕಾ ಡಾನ್’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸೋಮವಾರ ಕುತ್ತಾರು ದೆಕ್ಕಾಡು ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದಿತು. ಬಳಿಕ ಅಲ್ಲಿಯೇ ಸುದ್ದಿಗೋಷ್ಠಿ ನಡೆಸಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿತು.
ಚಿತ್ರದಲ್ಲಿ ಪ್ರಮೋದ್ ಪಂಜು ಹಾಗೂ ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ತುಳು ಹಾಗೂ ಕನ್ನಡ ಚಿತ್ರರಂಗದ ಕಲಾವಿದರಾದ ರೂಪೇಶ್ ಶೆಟ್ಟಿ, ಅರವಿಂದ್ ಬೋಳಾರ್ ಸೇರಿದಂತೆ ಸಾಯಿ ಕುಮಾರ್, ಜ್ಯೋತಿ ಪೂರ್ವಜ್ ಹಾಗೂ ರಮೇಶ್ ಇಂದಿರಾ ಪ್ರಮುಖ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಹಾಗೂ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ನಾಯಕ ನಟ ಪ್ರಮೋದ್ ಪಂಜು ಮಾತನಾಡಿದರು. ನಟ ರೂಪೇಶ್ ಶೆಟ್ಟಿ ಮಾತನಾಡಿ, ತುಳು ಹಾಗೂ ಕನ್ನಡ ಚಿತ್ರಗಳಲ್ಲಿ ಈ ಹಿಂದೆ ಅಭಿನಯಿಸಿದ್ದರೂ ಉತ್ತಮ ಬ್ಯಾನರ್‌ನೊಂದಿಗೆ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಇದೀಗ ‘ಹಲ್ಕಾ ಡಾನ್’ ಮೂಲಕ ಆ ಅವಕಾಶ ದೊರೆತಿರುವುದು ಸಂತಸ ತಂದಿದೆ ಎಂದರು. ನಿರ್ದೇಶಕ ವೆಂಕಟಾಚಲ (ಚಲಂ), ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮಾತನಾಡಿದರು.
ಉತ್ತಮ ಚಿತ್ರ ನಿರ್ಮಾಣ
ಹಾಸ್ಯ ನಟ ಅರವಿಂದ್ ಬೋಳಾರ್ ಮಾತನಾಡಿ, ಕೆ.ಪಿ. ಶ್ರೀಕಾಂತ್ ಹಾಗೂ ನಾಗೇಂದ್ರ ಪ್ರಸಾದ್ ಅವರ ಸಹಯೋಗದಲ್ಲಿ ಉತ್ತಮ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಚಿತ್ರತಂಡದೊಂದಿಗೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಹಾಗೂ ನಟ ಸುಜಯ್ ಶಾಸ್ತ್ರಿ, ಮ್ಯಾನೇಜರ್ ಸುಧೀರ್, ನಿರ್ದೇಶಕ ಚಲ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟಿ ಮಹಾಬಲ ಹೆಗ್ಡೆ ದೆಪ್ಪೆಲಿಮಾರ್, ನಟ ರೂಪೇಶ್ ಶೆಟ್ಟಿ, ಗೌತಂ ಉಪಸ್ಥಿತರಿದ್ದರು.


