ದುನಿಯಾ ವಿಜಯ್ ನಿರ್ದೇಶನದ ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ನಟನೆಯ ‘ಸಿಟಿ ಲೈಟ್ಸ್‌’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ ಕುರಿತು ಮಾತನಾಡಿದ ಶಿವಣ್ಣ, ವಿನಯ್ ರಾಜ್‌ಕುಮಾರ್ ಅವರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ.

‘ಭೂಗತ ಕತೆಯನ್ನು ಆಧರಿಸಿದ ಸಿನಿಮಾಗಳೆಂದರೆ ಎಲ್ಲರಿಗೂ ನಾನು ನೆನಪಾಗುತ್ತೇನೆ. ಆದರೆ, ಇನ್ನು ಮುಂದೆ ವಿನಯ್‌ ಕೂಡ ನೆನಪಾಗುತ್ತಾರೆ. ನನ್ನ ತಮ್ಮನ ಮಗ ಅಂತ ಈ ಮಾತು ಹೇಳ‍ುತ್ತಿಲ್ಲ. ಅವನಲ್ಲಿ ಅಷ್ಟು ಪ್ರತಿಭೆ ಇದೆ ಎಂಬುದಕ್ಕೆ ಸಿಟಿ ಲೈಟ್ಸ್‌ ಚಿತ್ರವೇ ಸಾಕ್ಷಿ’.

- ಹೀಗೆ ಹೇಳಿದ್ದು ಶಿವರಾಜ್‌ಕುಮಾರ್‌. ದುನಿಯಾ ವಿಜಯ್‌ ನಿರ್ದೇಶಿಸಿ, ಮೋನಿಷಾ ಹಾಗೂ ವಿನಯ್‌ ರಾಜ್‌ಕುಮಾರ್‌ ನಟನೆಯ ‘ಸಿಟಿ ಲೈಟ್ಸ್‌’ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ‘ಟ್ರೇಲರ್‌ ಚೆನ್ನಾಗಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿರುತ್ತದೆಂಬ ಭರವಸೆ ಇದೆ. ವಿಜಯ್‌ ತಾಂತ್ರಿಕವಾಗಿ ತುಂಬಾ ಚೆನ್ನಾಗಿ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಹೊಸಬರಿಗೆ ಅವಕಾಶ ಕೊಡುತ್ತಿರುವುದು ನನಗೆ ಹೆಚ್ಚು ಖುಷಿ ನೀಡುತ್ತಿದೆ’ ಎಂದರು.

ವಿನಯ್‌ ರಾಜ್​ಕುಮಾರ್‌, ‘ಈ ಸಿನಿಮಾ ಮಾಡಿದ ಮೇಲೆ ಬೆಂಗಳೂರಿನಲ್ಲಿ ಕಷ್ಟಪಟ್ಟು ಜೀವನ ಮಾಡುತ್ತಿರುವ ಪ್ರತಿಯೊಬ್ಬರ ಮೇಲೂ ನನಗೆ ಗೌರವ ಹೆಚ್ಚಾಗಿದೆ’ ಎಂದು ಹೇಳಿದರು. ಮೋನಿಷಾ, ‘ನನ್ನನ್ನು ನಂಬಿ ಇಷ್ಟು ದೊಡ್ಡ ಪಾತ್ರ ಕೊಟ್ಟಿದ್ದಕ್ಕೆ ತಂದೆಗೆ ಧನ್ಯವಾದ’ ಎಂದರು.

ಆಯ್ಕೆ ಶೈಲಿ ಚೆನ್ನಾಗಿದೆ

ಮುಖ್ಯ ಪಾತ್ರಧಾರಿ ಉಮಾಶ್ರೀ, ‘ದುನಿಯಾ ವಿಜಯ್‌ ಅವರಿಗೆ ನಾನೇ ಈ ಪಾತ್ರ ಮಾಡಬೇಕು ಎನ್ನುವ ಆಸೆ. ಹಾಗಾಗಿ ನಟಿಸಿದ್ದೇನೆ. ವಿಜಯ್‌ನ ಕಥೆಗಳ ಆಯ್ಕೆ ಶೈಲಿ ಚೆನ್ನಾಗಿದೆ. ಮಾಯಾನಗರಿ ಬೆಂಗಳೂರಿಗೆ ಬದುಕನ್ನು ಅರಸಿ ಬಂದ ಮಕ್ಕಳ ಸ್ಥಿತಿ ಹೇಗಿರುತ್ತೆ ಎನ್ನುವುದನ್ನು ಈ ಸಿನಿಮಾದಲ್ಲಿ ಕಟ್ಟಿ ಕೊಟ್ಟಿದ್ದಾರೆ’ ಎಂದು ಹೇಳಿದರು. ಗೀತಾ ಶಿವರಾಜ್‌ಕುಮಾರ್‌ ಇದ್ದರು. ಸೆ.18ಕ್ಕೆ ಸಿನಿಮಾ ತೆರೆಗೆ ಬರಲಿದೆ.