ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಬೃಂದಾವಿಹಾರಿ’ ಸಿನಿಮಾ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಶ್ರೀನಿವಾಸ ರಾಜು ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್ ‘ಮಾಧವ’ ಎಂಬ ಮುಗ್ಧ ಹಾಗೂ ಭಾವನಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಪ್ರೇಕ್ಷಕರು ನನ್ನಿಂದ ಏನು ನಿರೀಕ್ಷಿಸುತ್ತಾರೋ ಅದೆಲ್ಲವೂ ‘ಬೃಂದಾವಿಹಾರಿ’ ಚಿತ್ರದಲ್ಲಿದೆ. ಮುಗ್ಧತೆ ಹಾಗೂ ಭಾವನೆಗಳಿಗೆ ಬೆಲೆ ಕೊಡುವ ‘ಮಾಧವ’ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಇದು ನಿಮ್ಮ ಗಣೇಶನ ಅಪ್ಪಟ ಕನ್ನಡ ಸಿನಿಮಾ. ದಸರಾ ವೇಳೆ ಕುಟುಂಬ ಸಮೇತ ನೋಡಬಹುದಾದ ಚಿತ್ರ’. ಹೀಗೆ ಹೇಳಿದ್ದು ಗೋಲ್ಡನ್ ಮೆಗಾ ಸ್ಟಾರ್ ಗಣೇಶ್.

‘ಬೃಂದಾವಿಹಾರಿ’ ಚಿತ್ರದ ಪ್ರಚಾರ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಿನಿಮಾದಿಂದ ಅವರ ಬಿರುದು ಬದಲಾಗಿದೆ, ಈಗ ಅವರು ಬರೀ ಗೋಲ್ಡನ್ ಸ್ಟಾರ್ ಅಲ್ಲ, ಗೋಲ್ಡನ್ ಮೆಗಾ ಸ್ಟಾರ್. ಅ.16ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಶ್ರೀನಿವಾಸ ರಾಜು ನಿರ್ದೇಶನ ಮಾಡಿದ್ದಾರೆ. ಮುಳಬಾಗಿಲಿನ ಶಾಸಕ ಸಮೃದ್ಧಿ ವಿ. ಮಂಜುನಾಥ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ.

ಚಿತ್ರದ ಕುರಿತು ಗಣೇಶ್, ‘ನಿರ್ದೇಶಕರು ಆರಂಭದಲ್ಲಿ ಚಿತ್ರದಲ್ಲಿ ಏನೋ ವಿಶೇಷವಿದೆ ಎನ್ನುತ್ತಿದ್ದರು. ಆದರೆ ಮೊದಲಾರ್ಧ ಆರಾಮಾಗಿ ಮುಗಿದಿತ್ತು. ಏನು ವಿಶೇಷ ಅಂದುಕೊಳ್ಳುತ್ತಿದ್ದೆ. ದ್ವಿತೀಯಾರ್ಧದ ಸ್ಕ್ರಿಪ್ಟ್ ಓದಿದಾಗ ಮೌನವಾಗಿ ಕುಳಿತಿದ್ದೆ. ಎಮೋಷನ್, ಹಾಸ್ಯ ಮತ್ತು ಸಂಬಂಧಗಳ ಸಂಕೀರ್ಣತೆಯನ್ನು ದಾಟಿಸುವುದು ನಿಜಕ್ಕೂ ಸವಾಲಾಗಿತ್ತು’ ಎಂದರು.

ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ್ ಮಾತನಾಡಿ, ‘ಅ.16ರಂದು ಜಗತ್ತಿನಾದ್ಯಂತ 1300 ಪರದೆಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಹಲವರು ‘ಜೈಲರ್ 2’ ಬರುತ್ತಿದೆ, ನೀವು ಏಕೆ ಇದೇ ಸಮಯದಲ್ಲಿ ರಿಲೀಸ್ ಮಾಡುತ್ತಿದ್ದೀರಿ ಎಂದು ಕೇಳಿದ್ದಾರೆ. ಅದಕ್ಕೆ ನಾನು, ‘ಇದು ಅಪ್ಪಟ ಕನ್ನಡ ಸಿನಿಮಾ, ಗೆದ್ದೇ ಗೆಲ್ಲುತ್ತದೆ’ ಎಂದಿದ್ದೇನೆ’ ಎಂದರು.

ಅದ್ಭುತವಾಗಿ ನಟಿಸಿದ್ದಾರೆ ಗಣೇಶ್

ನಿರ್ದೇಶಕ ಶ್ರೀನಿವಾಸ ರಾಜು, ‘ಈ ಸಿನಿಮಾ ನನಗೆ ಅಪಾರ ತೃಪ್ತಿ ತಂದಿದೆ. ಇದರ ನಂತರ ನಾನು ಗಣೇಶ್ ಅವರೊಂದಿಗೆ ಮತ್ತೆ ಸಿನಿಮಾ ಮಾಡದಿದ್ದರೂ ಪರವಾಗಿಲ್ಲ, ಅಷ್ಟು ಅದ್ಭುತವಾಗಿ ಅವರು ನಟಿಸಿದ್ದಾರೆ’ ಎಂದರು. ರಂಗಾಯಣ ರಘು, ಚಿತ್ರದ ನಾಯಕಿಯರಾದ ಮಾಳವಿಕಾ ಶರ್ಮಾ ಮತ್ತು ದೇವಿಕಾ ಭಟ್, ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್, ಗೀತರಚನೆಕಾರ ಡಾ. ವಿ. ನಾಗೇಂದ್ರ ಪ್ರಸಾದ್, ಕುರಿ ಪ್ರತಾಪ್, ಮಂಜು ಪಾವಗಡ, ಗಿರೀಶ್ ಶಿವಣ್ಣ, ಜಗ್ಗಪ್ಪ, ನೀನಾಸಂ ಅಶ್ವಥ್ ಉಪಸ್ಥಿತರಿದ್ದರು.