ಶಿಕ್ಷಣ ಸಾಲವನ್ನು ಅವಧಿಗಿಂತ ಮುಂಚೆ ತೀರಿಸುವ ಮುನ್ನ ಆರ್‌ಬಿಐನ ಪೆನಾಲ್ಟಿ ರಹಿತ ನಿಯಮಗಳು, ಆದಾಯ ತೆರಿಗೆ ವಿನಾಯಿತಿ ಮತ್ತು ತುರ್ತು ನಿಧಿಯ ಪ್ರಾಮುಖ್ಯತೆಯನ್ನು ಗಮನಿಸುವುದು ಉತ್ತಮ. ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು: ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿದ ತಕ್ಷಣ ಅನೇಕರ ಮೊದಲ ಗುರಿ ಎಜುಕೇಶನ್ ಲೋನ್ ಬೇಗ ತೀರಿಸುವುದು. ಸಾಲ ಮುಕ್ತರಾಗುವುದು ನೆಮ್ಮದಿಯ ವಿಷಯವೇ ಆದರೂ ಸಾಲ ಮುಚ್ಚುವ ಮುನ್ನ ಕೆಲವು ಆರ್ಥಿಕ ಲೆಕ್ಕಾಚಾರಗಳನ್ನು ಮಾಡುವುದು ಬಹಳ ಮುಖ್ಯ.

ಆರ್‌ಬಿಐ ಹೊಸ ನಿಯಮವೇನು?

ಸಾಮಾನ್ಯವಾಗಿ ಸಾಲವನ್ನು ಅವಧಿಗಿಂತ ಮುಂಚಿತವಾಗಿ ಮುಚ್ಚಿದರೆ (Foreclosure) ಬ್ಯಾಂಕುಗಳು ದಂಡ ಅಥವಾ ಪೆನಾಲ್ಟಿ ವಿಧಿಸುತ್ತಿದ್ದವು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗ ಗ್ರಾಹಕ ಸ್ನೇಹಿ ನಿಯಮವನ್ನು ಜಾರಿಗೆ ತಂದಿದೆ. 2014ರ ನಿಯಮದ ಪ್ರಕಾರ, ಫ್ಲೋಟಿಂಗ್ ಇಂಟರೆಸ್ಟ್ ರೇಟ್ (ಬದಲಾಗುವ ಬಡ್ಡಿ ದರ) ಹೊಂದಿರುವ ಶಿಕ್ಷಣ ಸಾಲಗಳಿಗೆ ಯಾವುದೇ ಪೆನಾಲ್ಟಿ ವಿಧಿಸುವಂತಿಲ್ಲ. ಜನವರಿ 1, 2026 ರಿಂದ ಜಾರಿಗೆ ಬಂದಿರುವ ನಿಯಮದಂತೆ ಖಾಸಗಿ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳು (NBFC) ಕೂಡ ಸಾಲವನ್ನು ಮುಂಚಿತವಾಗಿ ತೀರಿಸುವಾಗ ಯಾವುದೇ ಹೆಚ್ಚುವರಿ ಶುಲ್ಕ ಅಥವಾ ಪೆನಾಲ್ಟಿ ವಿಧಿಸುವಂತಿಲ್ಲ.

ಲೋಕ್ ಕ್ಲೋಸ್ ಮಾಡುವ ಮುನ್ನ

  • ನಿಮ್ಮ ಸಾಲದ ಬಡ್ಡಿ ದರ ಹೆಚ್ಚಾಗಿದ್ದು, ಇನ್ನು ಬಹಳ ವರ್ಷಗಳ ಕಾಲ ಸಾಲ ಬಾಕಿ ಇದ್ದರೆ, ಅದನ್ನು ಬೇಗ ತೀರಿಸುವುದು ಲಾಭದಾಯಕ. ಒಂದು ವೇಳೆ ಸಾಲ ಮುಗಿಯಲು ಕೆಲವೇ ತಿಂಗಳುಗಳಿದ್ದರೆ ಮುಂಚಿತವಾಗಿ ತೀರಿಸುವುದರಿಂದ ದೊಡ್ಡ ಲಾಭವೇನೂ ಆಗದು.
  • ಸಾಲ ತೀರಿಸುವ ಆತುರದಲ್ಲಿ ನಿಮ್ಮ ಬಳಿ ಇರುವ ಎಲ್ಲಾ ಉಳಿತಾಯವನ್ನು ಖಾಲಿ ಮಾಡಬೇಡಿ. ಕೆಲಸ ಕಳೆದುಕೊಂಡಾಗ ಅಥವಾ ಅನಾರೋಗ್ಯದಂತಹ ತುರ್ತು ಸಂದರ್ಭಗಳಿಗಾಗಿ ಕನಿಷ್ಠ 6 ತಿಂಗಳ ಸಂಬಳದಷ್ಟು ಹಣವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು, ಉಳಿದ ಹಣದಲ್ಲಿ ಸಾಲ ತೀರಿಸಿ.
  • ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80E ಅಡಿಯಲ್ಲಿ ಶಿಕ್ಷಣ ಸಾಲದ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಸಿಗುತ್ತದೆ. ನೀವು ಹೆಚ್ಚಿನ ತೆರಿಗೆ ಪಾವತಿಸುವವರಾಗಿದ್ದರೆ ಈ ವಿನಾಯಿತಿಯ ಲಾಭವನ್ನು ಲೆಕ್ಕ ಹಾಕಿ ಸಾಲ ಮುಚ್ಚುವ ಬಗ್ಗೆ ನಿರ್ಧರಿಸಿ.
  • ಸಾಲ ಮುಚ್ಚುವ ಮುನ್ನ ಬ್ಯಾಂಕ್‌ಗೆ ಹೋಗಿ 'ಫೋರ್‌ಕ್ಲೋಸರ್ ಸ್ಟೇಟ್‌ಮೆಂಟ್' (Foreclosure Statement) ಪಡೆಯಿರಿ. ಅದರಲ್ಲಿ ನೀವು ಪಾವತಿಸಬೇಕಾದ ಅಂತಿಮ ಮೊತ್ತ ಎಷ್ಟು ಎಂಬುದು ನಿಖರವಾಗಿ ತಿಳಿಯುತ್ತದೆ.
  • ಪೂರ್ಣ ಹಣ ಪಾವತಿಸಿದ ನಂತರ ಬ್ಯಾಂಕ್‌ನಿಂದ 'ನೋ ಡ್ಯೂಸ್ ಸರ್ಟಿಫಿಕೇಟ್' (No Dues Certificate) ಅಥವಾ ಸಾಲ ಮುಚ್ಚಿದ ಅಧಿಕೃತ ಪತ್ರವನ್ನು ತಪ್ಪದೇ ಪಡೆಯಿರಿ. ಇದನ್ನು ಮುಂದೆ ಎಂದಾದರೂ ದಾಖಲೆಯಾಗಿ ಬಳಸಬೇಕಾಗಬಹುದು.
  • ನೀವು ಸಾಲಕ್ಕಾಗಿ ಆಸ್ತಿ ಪತ್ರ ಅಥವಾ ಇನ್ನಾವುದೇ ದಾಖಲೆಗಳನ್ನು ಅಡವಿಟ್ಟಿದ್ದರೆ (Collateral), ಸಾಲ ತೀರಿಸಿದ ತಕ್ಷಣ ಅವುಗಳನ್ನು ಬ್ಯಾಂಕ್‌ನಿಂದ ಸುರಕ್ಷಿತವಾಗಿ ಮರಳಿ ಪಡೆಯಿರಿ.
  • ನಿಮ್ಮ ಹಣವನ್ನು ಸಾಲ ತೀರಿಸಲು ಬಳಸುವ ಬದಲು ಯಾವುದಾದರೂ ವ್ಯವಹಾರ ಅಥವಾ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ, ಸಾಲದ ಬಡ್ಡಿಗಿಂತ ಹೆಚ್ಚಿನ ಲಾಭ ಸಿಗುತ್ತದೆಯೇ ಎಂದು ಯೋಚಿಸಿ. ಲಾಭ ಜಾಸ್ತಿ ಬರುವುದಾದರೆ ಹೂಡಿಕೆ ಮಾಡುವುದು ಉತ್ತಮ ಆಯ್ಕೆ.

ಸಾಲ ಮುಕ್ತರಾಗುವುದು ಮಾನಸಿಕ ನೆಮ್ಮದಿ ನೀಡುತ್ತದೆ. ಆದರೆ ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಂಡರೆ ನಿಮ್ಮ ಹಣಕಾಸಿನ ಭವಿಷ್ಯ ಭದ್ರವಾಗಿರುತ್ತದೆ.