ಹೊತ್ತ ಹೆತ್ತ ಪಾಲಕರಿಗೆ ಮಕ್ಕಳು ದೊಡ್ಡವರಾಗ್ತಿದ್ದಂತೆ ಸಹಾಯ ಮಾಡ್ಬೇಕು. ಆದ್ರೆ ಇತ್ತೀಚಿಗೆ ಈ ಮೌಲ್ಯ, ಸಂಬಂಧಕ್ಕೆ ಮಕ್ಕಳು ಬೆಲೆ ನೀಡ್ತಿಲ್ಲ. ಪಾಲಕರ ತ್ಯಾಗ, ಶ್ರಮವನ್ನು ಕಡೆಗಣಿಸ್ತಿದ್ದಾರೆ.
ಸರಿಯಾಗಿ ಊಟಕ್ಕಿಲ್ದೆ ಇದ್ರೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡ್ಬೇಕು ಅಂತ ಪಾಲಕರು ಬಯಸ್ತಾರೆ. ತಮ್ಮ ಹೊಟ್ಟೆ ಬಟ್ಟೆ ಕಟ್ಟಿ, ಮಕ್ಕಳಿಗೆ ಶಿಕ್ಷಣ ನೀಡಿ, ಅವರು ಒಳ್ಳೆ ಕೆಲ್ಸಕ್ಕೆ ಸೇರಿದಾಗ ನಿಟ್ಟುಸಿರು ಬಿಡ್ತಾರೆ. ತಮ್ಮ ನಿವೃತ್ತಿ ಜೀವನದಲ್ಲಿ ಮಕ್ಕಳಿಂದ ಹಣದ ಸಹಾಯ ಆಗ್ಬಹುದು ಎನ್ನುವ ಸಣ್ಣ ಆಸೆಯೊಂದು ಎಲ್ಲ ಪಾಲಕರಲ್ಲಿರುತ್ತೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ನಿರೀಕ್ಷೆ ಸುಳ್ಳಾಗ್ತಿದೆ. ಮಕ್ಕಳನ್ನು ಹುಟ್ಟಿಸಿದ್ದೇ ತಪ್ಪು ಎನ್ನುವ ಮಕ್ಕಳ ಜೊತೆ ತಮ್ಮ ದುಡಿಮೆ, ತಮ್ಮ ಹಕ್ಕು ಎನ್ನುವ ಮಕ್ಕಳ ಸಂಖ್ಯೆ ಹೆಚ್ಚಾಗ್ತಿದೆ.
ತಂದೆಗೆ ಹಣ ನೀಡಲು ನಿರಾಕರಿಸಿದ ಯುವತಿ
ಸೋಶಿಯಲ್ ಮೀಡಿಯಾದಲ್ಲಿ ಯುವತಿಯೊಬ್ಬಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾಳೆ. ಆಕೆ ನೀಡಿದ ಮಾಹಿತಿ ಪ್ರಕಾರ ಆಕೆಗೆ 24 ವರ್ಷ ವಯಸ್ಸು. ಹರಿಯಾಣದ ಹಿಸಾರ್ ನಲ್ಲಿ ವಾಸಿಸುವ ಯುವತಿ, ಡಿಯುನಲ್ಲಿ ಬಿಬಿಎ ಮತ್ತು ನಂತರ ಖಾಸಗಿ ಕಾಲೇಜಿನಿಂದ ಎಂಬಿಎ ಮಾಡಿದ್ದಾರೆ. ಅವರ ತಂದೆ ಅವರ ಶಿಕ್ಷಣದುದ್ದಕ್ಕೂ ಸಹಾಯ ಮಾಡಿದ್ದಾರೆ. ಬೆಂಬಲವಾಗಿ ನಿಲ್ಲುವ ಜೊತೆಗೆ ಆರ್ಥಿಕ ಸಹಾಯ ಮಾಡಿದ್ದಾರೆ. ತಂದೆ ಇತ್ತೀಚೆಗೆ ನಿವೃತ್ತರಾಗಿದ್ದು, ಅವರಿಗೆ ಎರಡು ಅಂಗಡಿಯಿಂದ ಬಾಡಿಗೆ ರೂಪದಲ್ಲಿ 35 ಸಾವಿರ ರೂಪಾಯಿ ಬರ್ತಿದೆ.
ಈಗ ಕೆಲ್ಸ ಸಿಕ್ಕಿದ್ದು, ತಿಂಗಳಿಗೆ 65 ಸಾವಿರ ಸಂಪಾದನೆ ಮಾಡ್ತಿದ್ದಾರೆ ಯುವತಿ. ಮಗಳು ದುಡಿಮೆ ಶುರು ಮಾಡಿದ್ಮೇಲೆ, ತಂದೆ ಮನೆ ಸಹಾಯಕ್ಕೆ ಹಣ ಕೇಳ್ತಿದ್ದಾರೆ. ಆದ್ರೆ ಯುವತಿಗೆ ಹಣ ನೀಡಲು ಮನಸ್ಸಿಲ್ಲ. ನಾನಿನ್ನೂ ನನ್ನ ಪಾಲಕರ ಜೊತೆ ವಾಸ ಆಗಿರೋದ್ರಿಂದ ನನ್ನ ಸಂಬಳದಲ್ಲಿ ಪಾಲು ಕೇಳುವ ಹಕ್ಕು ಅವರಿಗಿದೆ. ಆದ್ರೆ ನಾನು ಸಂಬಳವನ್ನು ಕಷ್ಟಪಟ್ಟು ಸಂಪಾದಿಸಿದ್ದೇನೆ ಎಂಬುದು ನನ್ನ ಭಾವನೆ ಎನ್ನುತ್ತಾರೆ ಯುವತಿ. ನನ್ನ ತಂದೆ ನನಗಾಗಿ ಮಾಡಿದ ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ. ಆದರೆ ಪೋಷಕರು ತಮ್ಮ ಮಕ್ಕಳಿಗೆ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡಬೇಕು ಎಂದು ನಾನು ನಂಬುತ್ತೇನೆ. ನಾನು ಚಿಕ್ಕವಳಿದ್ದಾಗಲೇ ಪ್ರವಾಸ ಮಾಡಲು, ಜಗತ್ತನ್ನು ಅನ್ವೇಷಿಸಲು ಮತ್ತು ಜೀವನವನ್ನು ಅನುಭವಿಸಲು ನನ್ನ ಸಂಬಳವನ್ನು ಬಳಸಲು ಬಯಸುತ್ತೇನೆ. ನಾನು ಗಳಿಸುವ ಪ್ರತಿ ರೂಪಾಯಿಯನ್ನು ಕುಟುಂಬಕ್ಕೆ ನೀಡಲು ನಾನು ಬಯಸುವುದಿಲ್ಲ ಎಂದು ಬರೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತೀವ್ರ ಚರ್ಚೆಯಾಗ್ತಿದೆ. ಬಳಕೆದಾರರು ಮಹಿಳೆ ನಿರ್ಧಾರವನ್ನು ಖಂಡಿಸಿದ್ದಾರೆ. ಹೆಣ್ಮಕ್ಕಳು ಹಾಗೂ ಗಂಡ್ಮಕ್ಕಳಿಗೆ ಓದಿಸುವ ವ್ಯತ್ಯಾಸದ ಬಗ್ಗೆಯೂ ಚರ್ಚೆಯಾಗ್ತಿದೆ.


