ಇತ್ತೀಚಿಗೆ, ಮದುವೆಯಾದ ದಂಪತಿ ವರ್ಷ ಒಟ್ಟಿಗಿರೋದೇ ಕಷ್ಟ. ಆದ್ರೆ ಈ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮದುವೆಯಾಗಿ 35 ವರ್ಷವಾದ್ರೂ ಇಬ್ಬರ ಮಧ್ಯೆ ಪ್ರೀತಿ ಕಡಿಮೆಯಾಗಿಲ್ಲ. ಪತ್ನಿ ಆಸೆ ಈಡೇರಿಸಲು ಪತಿ ತನ್ನ ಮನೆಯನ್ನೇ ಮಾರಿದ್ದಾನೆ. ಅಷ್ಟಕ್ಕೂ ಪತ್ನಿಗಿದ್ದ ಆಸೆ ಏನು ಗೊತ್ತಾ?
ಪ್ರೀತಿ ನಿಜವಾಗಿದ್ದರೆ ಅಸಾಧ್ಯವೆನಿಸುವ ಕೆಲಸವನ್ನೂ ಸಾಧ್ಯವಾಗಿಸಬಹುದು ಎನ್ನುವುದಕ್ಕೆ ಚೀನಾದ ಈ ದಂಪತಿ ಉತ್ತಮ ಉದಾಹರಣೆ. ಚೀನಾದ ಸಿಚುವಾನ್ ಪ್ರಾಂತ್ಯದ ಝೋವ್ ಶಾವೋಲಿನ್ ಎಂಬ ವ್ಯಕ್ತಿ ತಮ್ಮ ಪತ್ನಿ ಯಿನ್ ಜೀ ಅವರ ಬಾಲ್ಯದ ಆಸೆಯನ್ನು ನನಸಾಗಿಸಲು ಬರೋಬ್ಬರಿ 80 ಹೆಕ್ಟೇರ್ ಬಂಜರು ಭೂಮಿಯನ್ನು ಸುಂದರ ಹೂವಿನ ತೋಟವನ್ನಾಗಿ ಪರಿವರ್ತಿಸಿದ್ದಾರೆ.
ಪತ್ನಿ ಕನಸು ಈಡೇರಿಸಿದ ಪತಿ
2013ರಲ್ಲಿ ಯಿನ್ ಜೀ ಅವರು ತಮ್ಮ ಬಾಲ್ಯದ ನೆಚ್ಚಿನ ಹಾಲಿಹಾಕ್ ಹೂಗಳ ಬಗ್ಗೆ ಪತಿಯ ಬಳಿ ಸಾಮಾನ್ಯವಾಗಿ ಮಾತನಾಡಿದ್ದರು. ಆದರೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಝೋವ್, ಒಂದು ದಿನ ಪತ್ನಿಗಾಗಿ ಸಂಪೂರ್ಣ ಹೂವಿನ ತೋಟ ನಿರ್ಮಿಸುವುದಾಗಿ ಭರವಸೆ ನೀಡಿದರು. ತೋಟಗಾರಿಕೆಯ ಯಾವುದೇ ಅನುಭವವಿಲ್ಲದಿದ್ದರೂ ಝೋವ್ ತಮ್ಮ ಮನೆಯನ್ನೇ ಮಾರಾಟ ಮಾಡಿ ಟ್ರುವಾನ್ಲಾಂಗ್ ಪಟ್ಟಣದಲ್ಲಿ ಭೂಮಿ ಖರೀದಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಕಷ್ಟಪಟ್ಟು ದುಡಿದು, ದೇಶ-ವಿದೇಶಗಳಿಂದ ವಿವಿಧ ಹೂಗಳ ಬೀಜಗಳನ್ನು ಸಂಗ್ರಹಿಸಿ, ಬಂಜರು ಕಣಿವೆಯನ್ನು ಅದ್ಭುತ ಹೂವಿನ ಲೋಕವನ್ನಾಗಿ ಮಾಡಿದರು.
ಇಂದು ಈ ತೋಟ ವಿಶ್ವದ ಅತಿ ದೊಡ್ಡ ಹಾಲಿಹಾಕ್ ತೋಟಗಳಲ್ಲಿ ಒಂದಾಗಿದೆ. ಇಲ್ಲಿ 700ಕ್ಕೂ ಹೆಚ್ಚು ಬಗೆಯ ಹಾಲಿಹಾಕ್ ಹೂಗಳು, ಸುಮಾರು 1.5 ಲಕ್ಷ ಲಿಲ್ಲಿ ಗಿಡಗಳು ಮತ್ತು ಒಂದು ಲಕ್ಷ ಹಿಬಿಸ್ಕಸ್ ಗಿಡಗಳಿವೆ. ಒಮ್ಮೆ ಬಂಜರಾಗಿದ್ದ ಈ ಪ್ರದೇಶ ಇಂದು ಬಣ್ಣಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ.
ಗುಹೆಯಲ್ಲಿ ಕಳೆದಿದ್ದ ಜೋಡಿ
ಈ ದಂಪತಿಯ ಪ್ರೀತಿಯ ಕಥೆ ಇನ್ನೂ ವಿಶೇಷವಾಗಿದೆ. 1985ರಲ್ಲಿ ಝೋವ್ ಟ್ರೇನಿ ಟೂರ್ ಗೈಡ್ ಆಗಿದ್ದಾಗ ಇಬ್ಬರೂ ಮೊದಲ ಬಾರಿ ಭೇಟಿಯಾದರು. ಐದು ವರ್ಷಗಳ ಕಾಲ ಪತ್ರಗಳ ಮೂಲಕ ತಮ್ಮ ಪ್ರೀತಿಯನ್ನು ಹಂಚಿಕೊಂಡ ನಂತರ ವಿವಾಹವಾದರು. ಒಮ್ಮೆ ಟಿಬೆಟ್ ಪ್ರವಾಸದ ವೇಳೆ ಭಾರೀ ಹಿಮಪಾತದಲ್ಲಿ ಸಿಲುಕಿದ್ದಾಗ, ಝೋವ್ ತಮ್ಮ ಪತ್ನಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಸುರಕ್ಷಿತವಾದ ಗುಹೆಯೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರು ಮೂರು ದಿನಗಳನ್ನು ಕಳೆದಿದ್ದರು.
ಮದುವೆಯಾಗಿ 35 ವರ್ಷಗಳಾದರೂ ಅವರ ಪ್ರೀತಿ ಇಂದಿಗೂ ಅದೇ ರೀತಿಯಲ್ಲಿದೆ. ಮಕ್ಕಳಿಲ್ಲದ ಈ ದಂಪತಿ ತಮ್ಮ ತೋಟದಲ್ಲಿ ಸಾಕು ನಾಯಿಗಳು ಮತ್ತು ಬೆಕ್ಕುಗಳೊಂದಿಗೆ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಪ್ರತಿಯೊಂದು ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದಂದು ಅವರು ಪರಸ್ಪರ ಕೈಬರಹದ ಪತ್ರಗಳನ್ನು ನೀಡುತ್ತಾರೆ.
ಚೀನಾದ CCTVಯಲ್ಲಿ ಇವರ ಕಥೆ ಪ್ರಸಾರವಾದ ನಂತರ ಈ ದಂಪತಿ ದೇಶಾದ್ಯಂತ ‘ಡ್ರೀಮ್ ಕಪಲ್’ ಎಂದು ಪ್ರಸಿದ್ಧರಾದರು. ಪತ್ನಿಯ ಬಾಲ್ಯದ ಒಂದು ಸಣ್ಣ ಆಸೆಯನ್ನು ಜೀವನದ ದೊಡ್ಡ ಕನಸಾಗಿ ಪರಿವರ್ತಿಸಿದ ಝೋವ್ ಅವರ ಪ್ರೀತಿ ನಿಜಕ್ಕೂ ಅಪರೂಪದ್ದು.


