ಒಡಿಶಾದ 75 ವರ್ಷದ ವೃದ್ಧರೊಬ್ಬರು, ತಮ್ಮ ಪಾರ್ಶ್ವವಾಯು ಪೀಡಿತ ಪತ್ನಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದ ಕಾರಣ, ತಮ್ಮ ಮೂರು ಗಾಲಿಯ ಸೈಕಲ್‌ನಲ್ಲಿ 300 ಕಿಲೋ ಮೀಟರ್ ದೂರ ಪ್ರಯಾಣಿಸಿದ್ದಾರೆ. ಸಂಬಲ್‌ಪುರದಿಂದ ಕಟಕ್‌ಗೆ 9 ದಿನಗಳ ಕಾಲ ಸೈಕಲ್ ತುಳಿದು, ಚಿಕಿತ್ಸೆ ಕೊಡಿಸಿದ್ದಾರೆ.
ಒಡಿಶಾ: ತನ್ನ ಪ್ರೀತಿಯ ಮುಂದೆ ಗಂಡಿಗೆ ಎಲ್ಲವೂ ತೃಣ ಸಮಾನ. ನಿಜವಾಗಿ ಪ್ರೀತಿ ಮಾಡಿದ್ದಲ್ಲಿ ಆತ ಪ್ರೀತಿಗಾಗಿ ಏನು ಬೇಕಾದರೂ ಮಾಡಬಲ್ಲ, ತನ್ನ ಪತ್ನಿ ಮೇಲಿನ ಪ್ರೀತಿಗಾಗಿ ಗುಡ್ಡವನ್ನೇ ಅಗೆದ ದಶರಥ್ ಮಾಂಜಿ ಕತೆ ಯಾರಿಗೆ ಗೊತ್ತಿಲ್ಲ ಹೇಳಿ. ಹೀಗಿರುವಾಗ ಇಲ್ಲೊಬ್ಬರು ಅವರಂತೆಯೇ ತನ್ನ ಪ್ರೀತಿಯ ಪತ್ನಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವ ಸಲುವಾಗಿ 300 ಕಿಲೋ ಮೀಟರ್ ದೂರ ಸೈಕಲ್ ತುಳಿದಿದ್ದಾರೆ. ಹೌದು ಒಡಿಶಾದ 75 ವರ್ಷದ ವೃದ್ಧರೊಬ್ಬರು ತಮ್ಮ ಪಾರ್ಶ್ವವಾಯು ಪೀಡಿತ ಪತ್ನಿಯನ್ನು ತಮ್ಮ ಮೂರು ಗಾಲಿಯ ಸೈಕಲ್ ಮೇಲೆ ಕೂರಿಸಿಕೊಂಡು ಸುಮಾರು 300 ಕಿಲೋ ಮೀಟರ್ ಸೈಕಲ್ ತುಳಿದಿದ್ದಾರೆ. ತಮ್ಮ ಪತ್ನಿಯ ಜೀವ ಉಳಿಸುವ ಈ ಮಹತ್ವದ ಚಿಕಿತ್ಸೆಗಾಗಿ ಅವರು ಸಂಬಲ್‌ಪುರದಿಂದ ಕಟಕ್‌ಗೆ 300 ಕಿಲೋ ಮೀಟರ್ ದೂರ ಸೈಕಲ್ ಮೂಲಕ ಬಂದಿದ್ದಾರೆ. ಸಂಬಲ್ಪುರದ ಮೋದಿಪದ ನಿವಾಸಿ ಬಾಬು ಲೋಹರ್ ಎಂಬುವವರೇ ತಮ್ಮ 70 ವರ್ಷದ ಪತ್ನಿ ಜ್ಯೋತಿ ಅವರ ಚಿಕಿತ್ಸೆಗಾಗಿ ವೃದ್ಧಾಪ್ಯದಲ್ಲೂ ಸೈಕಲ್ ತುಳಿದು ಪ್ರೀತಿ ಎಂಬುದೇನು ಎಂಬುದನ್ನು ಇಂದಿನ ಯುವ ಸಮೂಹಕ್ಕೆ ತೋರಿಸಿದವರು.
ಅವರ ಬಳಿ ಚಿಕಿತ್ಸೆಗೆ ಅಷ್ಟೊಂದು ಹಣವಿರಲಿಲ್ಲ, ಸ್ವಲ್ಪ ಹಣವಷ್ಟೇ ಅವರ ಬಳಿ ಇತ್ತು. ಹೀಗಾಗಿ ಅವರು ಅದನ್ನುಆಂಬುಲೆನ್ಸ್‌ಗೆ ನೀಡಿದರೆ ಇಲ್ಲಿ ಚಿಕಿತ್ಸೆಗೆ ಹಣ ಇರುವುದಿಲ್ಲ ಎಂಬ ಉದ್ದೇಶದಿಂದ ಆಂಬ್ಯುಲೆನ್ಸ್ ಬಾಡಿಗೆಗೆ ಪಡೆಯುವ ಬದಲು, ತಮ್ಮ ಇ-ರಿಕ್ಷಾವನ್ನೇ ತಾತ್ಕಾಲಿಕ ಸ್ಟ್ರೆಚರ್ ಆಗಿ ಬದಲಿಸಿದ್ದಾರೆ. ತಮ್ಮ ಪತ್ನಿ ಅದರಲ್ಲಿ ಮಲಗಿ ಪಯಣಿಸುವಂತೆ ಆಗಲು ಅವರು ಹಳೆಯ ಹಾಸಿಗೆ ದಿಂಬುಗಳಿಂದ ಸುತ್ತಿ ಅದರ ಮೇಲೆ ಮೆತ್ತನೆಯ ಬೆಡ್ ನಿರ್ಮಿಸಿದರು. ಬಾಬು ಲೋಹರ್ ಅವರಿಗೆ ಹೀಗೆ ಸಂಬಲ್‌ಪುರದಿಂದ ಕಟಕ್‌ಗೆ ತಲುಪುವುದಕ್ಕೆ ಸುಮಾರು 9 ದಿನಗಳನ್ನು ತೆಗೆದುಕೊಂಡಿದ್ದಾರೆ. ಪ್ರತಿದಿನವೂ ಸುಮಾರು 30 ಕಿಲೋ ಮೀಟರ್‌ನಷ್ಟು ಸೈಕಲ್ ತುಳಿಯುತ್ತಿದ್ದ ಅವರು ರಾತ್ರಿಯ ಸಮಯದಲ್ಲಿ ರಸ್ತೆ ಬದಿಯ ಅಂಗಡಿಗಳ ಸಮೀಪ ವಿಶ್ರಾಂತಿ ಪಡೆಯುತ್ತಿದ್ದರು. ಹೀಗೆ ದಾರಿಯಲ್ಲಿ ಸಾಗುವಾಗ ಭಗವಂತನ ನಾಮ ಸ್ಮರಣೆ ಮಾಡುತ್ತಿದ್ದೆವು ಎಂದು ಹೇಳಿದ್ದಾರೆ. ಈ ದಂಪತಿ ಚಿಕಿತ್ಸೆಗಾಗಿ 2 ತಿಂಗಳನ್ನು ಕಳೆದಿದ್ದಾರೆ ಎಂದು ತಿಳಿದು ಬಂದಿದೆ.
ಯಾವುದೇ ವಾಹನವನ್ನು ಬಾಡಿಗೆಗೆ ಪಡೆಯಲು ನನ್ನ ಬಳಿ ಹಣವಿರಲಿಲ್ಲ, ಆದ್ದರಿಂದ ನಾನು ನನ್ನ ಸೈಕಲ್ಲನ್ನೇ ತೆಗೆದುಕೊಂಡೆ. ನಾವು ಸಂಬಲ್ಪುರಕ್ಕೆ ಹಿಂತಿರುಗುತ್ತೇವೆ ಎಂದು ಆ ವೃದ್ಧ ಹೇಳಿದ್ದಾರೆ. ಇದೇ ವೇಳೆ ಆಸ್ಪತ್ರೆಯ ಸಿಬ್ಬಂದಿಯಿಂದ ಪಡೆದ ಸಹಾಯವನ್ನು ಅವರು ಶ್ಲಾಘಿಸಿದ್ದಾರೆ. ಆರೋಗ್ಯ ಸೌಲಭ್ಯದ ಐಸಿಯುನಲ್ಲಿ ಕರ್ತವ್ಯ ನಿರತ ವೈದ್ಯರಾದ ಬಿಕಾಸ್ ಸರ್ ನಮಗೆ ತುಂಬಾ ಸಹಾಯ ಮಾಡಿದರು. ಅದನ್ನು ನಾನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನನ್ನ ಬಳಿ ಇದ್ದ ಸ್ವಲ್ಪ ಹಣಕ್ಕೆ ಅವರು ಹಣ ಸೇರಿಸಿದರು. ಭಗವಾನ್ ಜಗನ್ನಾಥನು ಅವರ ಮೇಲೆ (ವೈದ್ಯರು) ತನ್ನ ಆಶೀರ್ವಾದವನ್ನು ಸುರಿಸಲಿ ಎಂದು ಅವರು ಹೇಳಿದರು.
ಚಿಕಿತ್ಸೆಯ ನಂತರ ಅವರು ಮತ್ತೆ ತಮ್ಮ ಊರಾದ ಸಂಬಲ್‌ಪುರಕ್ಕೆ ಹೊರಟಿದ್ದು, ಇದಕ್ಕಾಗಿ ಬಾಬು ಲೋಹರ್ ತಮ್ಮ ಸೈಕಲ್‌ನ್ನು ಮತ್ತೆ ಸಿದ್ದಪಡಿಸಿದ್ದಾರೆ. ಜನವರಿ 19 ರಂದು, ಅವರು ಕೊರೆಯುವ ಚಳಿಗಾಲದ ಚಳಿಯನ್ನು ಸಹಿಸಿಕೊಂಡು ತಮ್ಮ ಊರಿಗೆ ಹಿಂದಿರುಗಲು ಪ್ರಯಾಣವನ್ನು ಪ್ರಾರಂಭಿಸಿದರು.
ಆದರೆ ಕಷ್ಟಗಳೆಲ್ಲವೂ ಬಂದರೆ ಜೊತೆಯಾಗೇ ಬರುತ್ತದೆ ಎಂಬ ಮಾತಿನಂತೆ ಚೌದ್ವಾರ ಬಳಿ ಆಕಸ್ಮಿಕವಾಗಿ ವಾಹನವೊಂದು ಸೈಕಲ್‌ಗೆ ಡಿಕ್ಕಿ ಹೊಡೆದು ಜ್ಯೋತಿ ಅವರು ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ಅವರಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಯ್ತು. ಬಾಬು ಲೋಹರ್ ತಕ್ಷಣ ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿ ಸಿಬ್ಬಂದಿ ಅವರ ಗಾಯಗಳಿಗೆ ಚಿಕಿತ್ಸೆ ನೀಡಿದರು. ಚಳಿಯಿಂದ ಚೇತರಿಸಿಕೊಳ್ಳಲು ರಾತ್ರಿಯಿಡೀ ಅಲ್ಲಿಯೇ ಉಳಿದ ದಂಪತಿ ಮರುದಿನ ಜನವರಿ 20 ರಂದು ಬೆಳಗ್ಗೆ ಸಂಭಾಪುರಕ್ಕೆ ಪ್ರಯಾಣ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬಂಬಲ್ ಟಿಂಡರ್ ಅಲ್ಲಿ ಸಿಕ್ಕ ಹುಡುಗಿರ ಕರ್ಕೊಂಡು ಹೋಟೆಲ್‌ಗೆ ಹೋದ್ರೆ ಗೋವಿಂದ
ಇತ್ತ ಟ್ಯಾಂಗಿ ಪೊಲೀಸ್ ಠಾಣಾಧಿಕಾರಿ ಬಿಕಾಶ್ ಸೇಥಿ ಹೆದ್ದಾರಿಯಲ್ಲಿಈ ದಂಪತಿಯನ್ನು ಗಮನಿಸಿ ಸಹಾಯಹಸ್ತ ಚಾಚಿದ್ದಾರೆ. ಆದರೆ ಬಾಬು ಆ ಪ್ರಸ್ತಾಪವನ್ನು ನಯವಾಗಿ ತಿರಸ್ಕರಿಸಿದರು. ಮಹಿಳೆಯ ಆರೋಗ್ಯ ಮತ್ತು ಪುರುಷನ ವಯಸ್ಸನ್ನು ಪರಿಗಣಿಸಿ ನಾನು ಅವರಿಗೆ ವಾಹನವನ್ನು ವ್ಯವಸ್ಥೆ ಮಾಡುವುದಾಗಿ ಹೇಳಿದೆ, ಆದರೆ ಅವರು ನಯವಾಗಿ ನಿರಾಕರಿಸಿದರು ಎಂದು ಸೇಥಿ ಹೇಳಿದ್ದಾರೆ. ಅವರ ದೃಢನಿಶ್ಚಯ ಮತ್ತು ಭಾವನಾತ್ಮಕ ಬಾಂಧವ್ಯವು ಹೃದಯ ತಟ್ಟುತ್ತಿದೆ. ನಾನು ಈ ರೀತಿಯದ್ದನ್ನು ಎಂದಿಗೂ ನೋಡಿಲ್ಲ ಎಂದು ಸೇಥಿ ಶನಿವಾರ ಹೇಳಿದರು.
ಇದನ್ನೂ ಓದಿ: ದೈಹಿಕ ಸಂಬಂಧಕ್ಕೆ ಗಂಡನ ಬಳಿಯೇ ಹಣ ಕೇಳಿದ ಹೆಂಡ್ತಿ ಕಾಸು ಕೊಟ್ಟು ಕೊಟ್ಟು ಸುಸ್ತಾಗಿ ಡಿವೋರ್ಸ್‌ಗೆ ಗಂಡನ ಅರ್ಜಿ
ತನ್ನ ಹೆಂಡತಿ ಮತ್ತು ರಿಕ್ಷಾ ಹೊರತುಪಡಿಸಿ ತನಗೆ ಬೇರೆ ಕುಟುಂಬ ಸದಸ್ಯರು ಯಾರು ಇಲ್ಲ ಎಂದು ಬಾಬು ಲೋಹರ್ ಹೇಳಿದರು. ನಮ್ಮ ಪದೇ ಪದೇ ವಿನಂತಿಯ ನಂತರ, ಸಂಬಲ್ಪುರಕ್ಕೆ ಹೋಗುವ ದಾರಿಯಲ್ಲಿ ಊಟ ಮಾಡಲು ಅವನು ನಮ್ಮಿಂದ ಸ್ವಲ್ಪ ಹಣವನ್ನು ಸ್ವೀಕರಿಸಿದರು ಎಂದು ಬಿಕಾಶ್ ಸೇಥಿ ಹೇಳಿದರು.


