ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರೊಂದು ಹಲವು ಬಾರಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ವೃದ್ಧ ದಂಪತಿಗಳು ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ

ಬೆಂಗಳೂರು (ಜ.23): ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ವೃದ್ಧ ದಂಪತಿಗಳು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಮೂರ್ನಾಲ್ಕು ಬಾರಿ ಪಲ್ಟಿಯಾದರೂ ಸೀಟ್ ಬೆಲ್ಟ್ ಧರಿಸಿದ್ದ ಕಾರಣ ದಂಪತಿಗಳು ಇಂದು ಬದುಕಿ ಬಂದಿದ್ದಾರೆ.

ಮದುವೆಗೆ ಹೊರಟಿದ್ದಾಗ ಸಂಭವಿಸಿದ ದುರಂತ

ಕಳೆದ ಡಿಸೆಂಬರ್ ತಿಂಗಳಲ್ಲಿ 84 ವರ್ಷದ ವೃದ್ಧ ಅಬ್ದುಲ್ ಫಜಲ್ ಅವರು ತಮ್ಮ ಪತ್ನಿಯೊಂದಿಗೆ ಮೈಸೂರಿನಲ್ಲಿ ನಡೆಯಲಿದ್ದ ಮದುವೆ ಸಮಾರಂಭಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಮನಗರದ ಸಂಗಬಸವನದೊಡ್ಡಿ ಬಳಿಯ ಎಕ್ಸಿಟ್ ಪಾಯಿಂಟ್‌ನಲ್ಲಿ ಭೀಕರ ಅಪಘಾತ ಸಂಭವಿಸಿತ್ತು.

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಪಲ್ಟಿಯಾದ ಕಾರು

ಎಕ್ಸಿಟ್ ಬಳಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಅಬ್ದುಲ್ ಫಜಲ್ ಅವರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿಯಲ್ಲಿ ಮೂರ್ನಾಲ್ಕು ಬಾರಿ ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದರೂ, ದಂಪತಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಾಣ ಉಳಿಸಿದ ಸೀಟ್ ಬೆಲ್ಟ್

ಕಾರು ಅಷ್ಟೊಂದು ಬಾರಿ ಪಲ್ಟಿಯಾದರೂ ದಂಪತಿಗಳು ಬದುಕುಳಿಯಲು ಮುಖ್ಯ ಕಾರಣ ಅವರು ಧರಿಸಿದ್ದ ಸೀಟ್ ಬೆಲ್ಟ್. ಸೀಟ್ ಬೆಲ್ಟ್ ಧರಿಸಿದ್ದರಿಂದ ಅವರು ಸೀಟಿನಿಂದ ಹೊರಕ್ಕೆ ಎಸೆಯದೇ ಸುರಕ್ಷಿತವಾಗಿದ್ದರು. ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಮುಗಿಸಿ ಗುಣಮುಖರಾಗಿರುವ ಅಬ್ದುಲ್ ಫಜಲ್, ಸೀಟ್ ಬೆಲ್ಟ್ ಧರಿಸುವುದು ಎಷ್ಟು ಮುಖ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ತಡವಾಗಿ ಬೆಳಕಿಗೆ ಬಂದ ಪ್ರಕರಣ

ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಘಟನೆಯ ವಿವರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಚರ್ಚೆಗೆ ಗ್ರಾಸವಾಗಿವೆ. ಅಪಘಾತದ ಭೀಕರತೆ ಕಂಡವರು ದಂಪತಿಗಳು ಬದುಕುಳಿದಿರುವುದು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.