ಇಂಟರ್‌ನೆಟ್‌ನಲ್ಲಿ ಪ್ರೀತಿ ಹುಡುಕುವ ಇಂದಿನ ಕಾಲಘಟದಲ್ಲಿ ಇಲ್ಲೊಂದು ವೃದ್ಧ ಜೋಡಿಯ ಮಾಗಿದ ಪ್ರೀತಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ

ಇಂಟರ್‌ನೆಟ್‌ನಲ್ಲಿ ಪ್ರೀತಿ ಹುಡುಕುವ ಇಂದಿನ ಕಾಲಘಟದಲ್ಲಿ ಇಲ್ಲೊಂದು ವೃದ್ಧ ಜೋಡಿಯ ಮಾಗಿದ ಪ್ರೀತಿಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಈ ವೀಡಿಯೋವನ್ನು Little Letters Linked ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ವೃದ್ಧರೊಬ್ಬರು ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಕೇಕ್ ಜೊತೆ ಮೇಕಪ್ ಸೆಟ್‌ ಅನ್ನು ಉಡುಗೊರೆಯಾಗಿ ಅವರಿಗೆ ನೀಡಿ ಸರ್‌ಫ್ರೈಸ್ ನೀಡಿದ್ದಾರೆ. ಅದೇನು ತುಂಬಾ ದುಬಾರಿ ಉಡುಗೊರೆ ಏನು ಅಲ್ಲ, ಆದರೆ ಅವರ ಪತ್ನಿ ಖುಷಿ ಪಡೋದಕ್ಕೆ ಅಷ್ಟು ಸಾಕಾಗಿತ್ತು. ಪ್ರೀತಿ ಕಾಳಜಿ ಹಾಗೂ ಭಾವನೆಗಳೇ ತುಂಬಿದ್ದ ಈ ಭಾವುಕ ಕ್ಷಣವನ್ನು ಯಾರೋ ಸೆರೆ ಹಿಡಿದಿದ್ದು, ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ವೃದ್ಧರೊಬ್ಬರು ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ನೀಡಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ಅವರು ನಿಧಾನವಾಗಿ ಪುಟ್ಟದಾದ ಕೇಕ್ ಮೇಲೆ ಕ್ಯಾಂಡಲ್ ಇಟ್ಟುಕೊಂಡು ಬಂದು ಪತ್ನಿಯ ಮುಂದೆ ಇರಿಸಿ ಅವರಿಗೆ ತಾವು ತಂದೆ ಮೇಕಪ್ ಸೆಟ್ ಅನ್ನು ಉಡುಗೊರೆಯಾಗಿ ನೀಡುತ್ತಾರೆ. ಇದನ್ನು ನೋಡಿ ಪತ್ನಿ ಖುಷಿಯಾಗಿದ್ದು, ಕೈ ಮುಗಿದು ಕ್ಯಾಂಡಲ್ ಆರಿಸಿ ಕೇಕ್ ಕತ್ತರಿಸುವ ಅವರು, ತಮ್ಮ ಪತಿಗೂ ಕೇಕ್ ತಿನ್ನಿಸುತ್ತಾರೆ. ನಂತರ ಪತಿ ತಾವು ರಹಸ್ಯವಾಗಿ ತಂದಿದ್ದ ಉಡುಗೊರೆಯನ್ನು ಅವರಿಗೆ ನೀಡಿದ್ದಾರೆ. ಅವರು ಕೂಡ ನವವಧುವಿನಂತೆ ಅದನ್ನು ಸ್ವೀಕರಿಸಿ ಬಾಕ್ಸ್ ತೆರೆದು ನೋಡಿ ಖುಷಿ ಪಡುತ್ತಾರೆ.

ಪ್ರಸ್ತುತ ವೃದ್ಧಾಪ್ಯದಲ್ಲಿರುವ ಬಹುತೇಕರಿಗೆ ವೃದ್ಧಾಪ್ಯದ ಸಮಯದಲ್ಲಿ ಕಾಳಜಿ ತೋರುವುದಕ್ಕೆ ಕನಿಷ್ಠ ಮಾತನಾಡುವುದಕ್ಕೆ ಯಾರೂ ಇರುವುದಿಲ್ಲ, ಮಕ್ಕಳೆಲ್ಲಾ ವಿಧ್ಯಾಭ್ಯಾಸದ ನಂತರ ವಿದೇಶಗಳಲ್ಲೋ ತಮ್ಮ ಕುಟುಂಬದ ಜೊತೆಗೋ ಬೇರೆ ಪಟ್ಟಣದಲ್ಲೋ ನೆಲೆಸಿರುತ್ತಾರೆ. ತಮ್ಮ ತಮ್ಮ ಕುಟುಂಬದೊಂದಿಗೆ ಬ್ಯುಸಿಯಾಗಿರುವ ಅವರು ಬಹುತೇಕರು ವರ್ಷಕ್ಕೊಮ್ಮೆಯೋ ಕೆಲ ತಿಂಗಳಿಗೊಮ್ಮೆಯೋ ಬಂದು ಪೋಷಕರನ್ನು ನೋಡಿ ಹೋಗುತ್ತಾರೆ. ಈ ಸಮಯದಲ್ಲಿ ಬಹುತೇಕ ವೃದ್ಧ ಜೋಡಿಗಳಿಗೆ ಒಂಟಿತನ ಕಾಡುತ್ತದೆ. ಬಹುತೇಕ ಪೊಷಕರು ಮಕ್ಕಳ ಕಾರಣಕ್ಕೆ ಹೊಡೆದಾಡಿಕೊಂಡು ಜಗಳವಾಡಿಕೊಂಡಿರುತ್ತಾರೆ.

 ಹೀಗೆ ಎಷ್ಟೋ ವರ್ಷಗಳನ್ನು ಸವೆಸಿದ ಅವರಿಗೆ ಈಗ ತಮ್ಮನ್ನು ತಾವು ಅರ್ಥ ಮಾಡಿಕೊಳ್ಳುವ ಸಮಯ. ನಿನಗೆ ನಾನು ನನಗೆ ನೀನು ಎಂಬುದು ಅವರಿಗೂ ಅರ್ಥವಾಗಿರುತ್ತದೆ. ಹಾಗೆಯೇ ಇಲ್ಲಿ ಎಷ್ಟೊ ಕಷ್ಟಸುಖಗಳನ್ನು ಒಟ್ಟಾಗಿ ಸವೆಸಿದ ಈ ಜೋಡಿಗೆ ಈಗ ಸುಂದರ ಕ್ಷಣವನ್ನು ಅನುಭವಿಸುವ ಸಮಯ. ಅದು ಆ ಪತಿಗೂ ಅರ್ಥವಾಗಿದೆ. ಹಾಗೆಯೇ ಇಲ್ಲಿ ಈ ವೃದ್ಧ ಪತಿ ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಯೌವ್ವನದ ದಿನಗಳಂತೆ ಬಹಳ ಮುದ್ದಾಗಿ ಸಂಭ್ರಮಿಸಿದ್ದು ಅನೇಕರನ್ನು ಈ ವೀಡಿಯೋ ಭಾವುಕರಾಗಿಸಿದೆ.

ಇದನ್ನೂ ಓದಿ: ಸುಂಟರಗಾಳಿಗೆ ಸಿಲುಕಿದ ವಿಮಾನ: ಸ್ವಲ್ಪದರಲ್ಲಿ ತಪ್ಪಿದ ಅನಾಹುತ: ಭಯಾನಕ ವೀಡಿಯೋ ವೈರಲ್

ವೀಡಿಯೋ ನೋಡಿದ ಅನೇಕರು ಈ ವೃದ್ಧ ಜೋಡಿಯ ಸಾಮರಸ್ಯಕ್ಕೆ ಬೆರಗಾಗಿದ್ದಾರೆ. ಬಹುತೇಕರ ಪತಿಯರಿಗೆ ಪತ್ನಿಯ ಹುಟ್ಟುಹಬ್ಬ ಯಾವಾಗ ಎಂಬುದೇ ನೆನಪಿರುವುದಿಲ್ಲ, ಪತ್ನಿ ಮಾಡಿದ ತ್ಯಾಗಗಳನ್ನು ಅದೆಲ್ಲಾ ಸಹಜ ಎಂಬಂತೆ ಸ್ವಲ್ಪವೂ ಕೃತಜ್ಞತೆ ತೋರಿಸದೇ ಬದುಕುವವರಿದ್ದಾರೆ. ಹೀಗಿರುವಾಗ ಈ ಇವರು ನಿಜವಾಗಿಯೂ ಗ್ರೇಟ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ವೀಡಿಯೋ ಬಗ್ಗೆ ನಿಮಗೇನನಿಸುತ್ತದೆ. ಕಾಮೆಂಟ್ ಮಾಡಿ.

ಇದನ್ನೂ ಓದಿ: ಸ್ಯಾನಿಟರಿ ಪ್ಯಾಡ್ ಜೊತೆಗೆ ಉಚಿತ ಕಪ್ ನೀಡುವುದಕ್ಕೆ ರಾಜ್ಯ ಸರ್ಕಾರ ನಿರ್ಧಾರ

View post on Instagram