ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ 25 ವರ್ಷದ ಯುವಕನನ್ನು ಆಕೆಯ ಕುಟುಂಬಸ್ಥರು ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಯುವಕ ಮೃತಪಟ್ಟಿದ್ದಾನೆ. ಘಟನೆ ವೀಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮೂರು ಮಕ್ಕಳ ತಾಯಿಯ ಸಹವಾಸಕ್ಕೆ ಬಿದ್ದಿದ್ದ ಯುವಕನ ಕೊಲೆ

ಚಂಡಿಗಢ: ವಿವಾಹಿತ ಮಹಿಳೆಯ ಸಹವಾಸಕ್ಕೆ ಬಿದ್ದಿದ್ದ 25ರ ಹರೆಯದ ತರುಣನನ್ನು ಆ ಮಹಿಳೆಯ ಕಡೆಯವರು ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಆಘಾತಕಾರಿ ಘಟನೆ ಪಂಜಾಬ್‌ನ ಮಾನ್ಸಾದಲ್ಲಿ ನಡೆದಿದೆ. ಮೃತ ಯುವಕನ್ನು ಖೊಖರ್ ರಸ್ತೆಯ 25 ವರ್ಷದ ಜಶ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಯುವಕನಿಗೆ ಈ ಹಿಂದೆಯೂ ಮಹಿಳೆಯ ಕಡೆಯವರು ಥಳಿಸಿದ್ದಾರೆ ಎಂದು ಯುವಕನ ಕಡೆಯವರು ದೂರಿದ್ದಾರೆ. ಯುವಕನನ್ನು ಮರಕ್ಕೆ ಕಟ್ಟಿ ಥಳಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

25ರ ತರುಣನನ್ನು ಮರಕ್ಕೆ ಕಟ್ಟಿ ಬಡಿದು ಕೊಂದ ಮಹಿಳೆಯ ಕಡೆಯವರು

ಈತನ ಜೊತೆ ಸಂಬಂಧ ಹೊಂದಿದ್ದ ಮಹಿಳೆ ಮೂರು ಮಕ್ಕಳ ತಾಯಿಯಾಗಿದ್ದು, ಆತನ ನೆರೆಮನೆಯಲ್ಲಿ ವಾಸ ಮಾಡುತ್ತಿದ್ದಳು. ಜಶ್‌ದೀಪ್ ಕುಟುಂಬದವರ ಪ್ರಕಾರ ಆತನನ್ನು ಮಹಿಳೆಯ ಕುಟುಂಬದವರು ಟಾರ್ಗೆಟ್ ಮಾಡುತ್ತಿದ್ದಿದ್ದು ಇದೇ ಮೊದಲಲ್ಲ, ಇದೇ ವಿಚಾರಕ್ಕೆ ಅವರು ಈ ಹಿಂದೆಯೂ ಆತನ ಮೇಲೆ ಹಲ್ಲೆ ಮಾಡಿದ್ದರು ಎಂದು ಅವರು ಆರೋಪಿಸಿದ್ದಾರೆ.

ಬೊಲೆರೋವೊಂದರಲ್ಲಿ 4 ರಿಂದ 5 ಜನ ಪುರುಷರು ಹಾಗೂ ಇಬ್ಬರು ಮಹಿಳೆಯರು ಆಗಮಿಸಿ ತಮ್ಮ ಮಗನನ್ನು ಬೀದಿಯಲ್ಲಿದ್ದ ಮರಕ್ಕೆ ಕಟ್ಟಿ ಹಾಕಿ ಭೀಕರವಾಗಿ ಥಳಿಸಿದ್ದಾರೆ ಎಂದು ಜಶ್‌ದೀಪ್ ತಂದೆ ಗುರುಸೇವಕ್ ಎಂಬುವವರು ಹೇಳಿದ್ದಾರೆ. ಜಶ್‌ದೀಪ್‌ನ ತಾಯಿ ಹೇಳುವ ಪ್ರಕಾರ, ಜಶ್‌ದೀಪ್ ಜೊತೆ ಹೊಂದಿರುವ ಸಂಬಂಧವನ್ನು ನಿಲ್ಲಿಸುವಂತೆ ಆ ಮಹಿಳೆಗೆ ಪದೇ ಪದೇ ಮನವಿ ಮಾಡಿದ್ದರು ಆಕೆ ಮತ್ತೆ ಮತ್ತೆ ಆತನನ್ನು ಕರೆಯುತ್ತಿದ್ದಳು ಎಂದು ದೂರಿದ್ದಾರೆ.

ಇದನ್ನೂ ಓದಿ: ಬಿಸಿಲ ಧಗೆಯ ನಡುವೆ ರಾಯಚೂರಲ್ಲೂ ಮಾಂಸದಂಧೆ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಮೂವರು ಪಿಂಪ್‌ಗಳು ಅಂದರ್

ಮಹಿಳೆಯ ಕರೆಗೆ ಕರಗಿ ಬಂದವನನ್ನು ಆಕೆಯ ಕುಟುಂಬಸ್ಥರು ಜನ ಮಾಡಿ ಥಳಿಸಿದ್ದು, ಮರಕ್ಕೆ ಕಟ್ಟಿ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಆತ ಗಂಭೀರ ಗಾಯಗೊಂಡಿದ್ದು, ಆತನ ಕಾಲುಗಳು ಹಾಗೂ ದೇಹದಲ್ಲಿ ಹಲವು ಮುರಿತಗಳು ಉಂಟಾಗಿದ್ದವು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ.

ಜಶ್‌ದೀಪ್ ಸಾವಿನ ಹಿನ್ನೆಲೆ ಆ ಮಹಿಳೆಯ ಮನೆಯವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆತನ ಕುಟುಂಬದವರು ಆಗ್ರಹಿಸಿದ್ದಾರೆ. ಅತನನ್ನು ಅಸಹಾಯಕ ಸ್ಥಿತಿಯಲ್ಲಿ ಅವರು ಬಿಟ್ಟು ಹೋಗಿದ್ದರು. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಜಶ್‌ದೀಪ್ ಸೋದರ ಹರ್‌ದೀಪ್ ಸಿಂಗ್ ಆಗ್ರಹಿಸಿದ್ದಾರೆ. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಅಯಾಜ್‌ನಿಂದ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಸಂತ್ರಸ್ತರಿಗೆ ಬುದ್ಧಿಮಾತು ಹೇಳಿದ ಕೈ ನಾಯಕಿ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ